More

    ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ, ರಾಜಕೀಯ ಪಕ್ಷಗಳ ನಿದ್ದೆಗೆಡಿಸಿರುವ ಪಕ್ಷೇತರರು!

    ತುಮಕೂರು: ಮಳೆ ನಿಂತರೂ, ಹನಿಗಳು ನಿಲ್ಲದು ಎಂಬಂತೆ ವಿಧಾನ ಪರಿಷತ್ ಆಗ್ನೇಯ ಪದವೀಧರ ಕ್ಷೇತ್ರದ ಮತದಾನ ಮುಗಿದರೂ ಇದರ ಕುರಿತಾದ ಚರ್ಚೆಗಳು ನಿಂತಿಲ್ಲ. ಮತದಾನದ ನಂತರ ಅಭ್ಯರ್ಥಿಗಳ ಗೆಲುವು-ಸೋಲಿನ ಲೆಕ್ಕಾಚಾರ ಭರ್ಜರಿಯಾಗಿ ನಡೆದಿದ್ದ್ದು ಎಲ್ಲರೂ ತಮಗೆ ತೋಚಿದಂತೆ ಫಲಿತಾಂಶ ಊಹಿಸಲಾರಂಭಿಸಿದ್ದಾರೆ.

    ಬಿಜೆಪಿ ಅಭ್ಯರ್ಥಿ ಎಂ.ಚಿದಾನಂದಗೌಡ, ಕಾಂಗ್ರೆಸ್ ಅಭ್ಯರ್ಥಿ ರಮೇಶ್‌ಬಾಬು, ಸ್ವತಂತ್ರ ಅಭ್ಯರ್ಥಿಗಳಾದ ಕೆ.ಎಂ.ಸುರೇಶ್, ಹಾಲನೂರು ಲೇಪಾಕ್ಷಿ ಜಿಲ್ಲೆಯಿಂದ ಸ್ಪರ್ಧಿಸಿದ್ದ ಪ್ರಮುಖ ಹುರಿಯಾಳುಗಳಾಗಿದ್ದು ಬಿಜೆಪಿ ಅಭ್ಯರ್ಥಿ ಹೊರತಾಗಿ ಜಿಲ್ಲೆಯ ಉಳಿದ ಅಭ್ಯರ್ಥಿಗಳ ಗೆಲುವಿನ ವಿಶ್ವಾಸ ಕಡಿಮೆ. ಆದರೆ, ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಫಲಿತಾಂಶವನ್ನು ನಿರ್ಧರಿಸುವ ಮಟ್ಟಿಗೆ ಪಕ್ಷೇತರರು ಮತ ಪಡೆದಿರುವುದು ನಿಶ್ಚಿತ.

    ಜಿಲ್ಲೆಯಲ್ಲಿ ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳಿಗೆ ಸರಿಸಮನಾಗಿ ಸ್ವತಂತ್ರ ಅಭ್ಯರ್ಥಿಗಳು ಪೈಪೋಟಿ ನೀಡಿರುವುದು ಫಲಿತಾಂಶವನ್ನು ನಿರೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ತನ್ನ ಅಭ್ಯರ್ಥಿ ಕಾರಣಕ್ಕೆ ಶಕ್ತಿ ವೃದ್ಧಿಸಿಕೊಂಡರಷ್ಟೇ ಅದಕ್ಕೆ ಲಾಭ ವಾಗಲಿದೆ. ಪದವೀಧರರ ಕ್ಷೇತ್ರದ ಚುನಾವಣೆಯ ಮುಂಚೂಣಿಯಲ್ಲಿದ್ದವರೆಂದರೆ ಶಿಕ್ಷಕರು ಮಾತ್ರ.

    ಪಕ್ಷೇತರ ಅಭ್ಯರ್ಥಿಗಳಾದ ಶ್ರೀನಿವಾಸ್ ಹಾಗೂ ಕೆ.ಎಂ.ಸುರೇಶ್ ನಿರೀಕ್ಷೆಗೂ ಹೆಚ್ಚಿನ ಮತ ಪಡೆಯುವ ಸಾಧ್ಯತೆ ಬಗ್ಗೆ ಕ್ಷೇತ್ರದೆಲ್ಲೆಡೆ ಮಾತುಗಳಿವೆ. ಕಾಂಗ್ರೆಸ್ ಅಭ್ಯರ್ಥಿ ರಮೇಶ್‌ಬಾಬು ಕೂಡ ಜಿಲ್ಲೆಯಲ್ಲಿ ಸ್ವಲ್ಪ ಮಟ್ಟಿಗೆ ಮತ ಪಡೆದಿರುವ ಸಾಧ್ಯತೆಯಿದೆ. ಹಾಲನೂರು ಲೇಪಾಕ್ಷಿ ಲಿಂಗಾಯತ ಸಮುದಾಯದ ಮತಗಳನ್ನು ನಂಬಿದ್ದು ಫಲಿತಾಂಶದಲ್ಲಿ ಅವರ ಶಕ್ತಿ ತಿಳಿಯಲಿದೆ.
    ಕಾಂಗ್ರೆಸ್ ಅಭ್ಯರ್ಥಿ ರಮೇಶ್‌ಬಾಬು ಚುನಾವಣೆಯನ್ನು ಸಾಂಪ್ರದಾಯಿಕ ರೀತಿಯಲ್ಲಿ ನಡೆಸಿರುವುದರ ಜತೆಗೆ ಕಾಂಗ್ರೆಸ್ ಮುಖಂಡರ ಎಂದಿನ ನಿರಾಸಕ್ತಿ ಈ ಚುನಾವಣೆಯಲ್ಲಿಯೂ ಮುಂದುವರಿದಿರುವುದರಿಂದ ಅಷ್ಟೇನು ಹೆಚ್ಚು ಮತ ಪಡೆದಿರಲಾರರು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ದಾವಣಗೆರೆ, ಚಿತ್ರದುರ್ಗ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಉತ್ತಮ ಮತದಾನವಾಗಿದ್ದು ಫಲಿತಾಂಶ ಕುತೂಹಲ ಮೂಡಿಸಿದೆ.

    ಶ್ರೀನಿವಾಸ್, ಕೆ.ಎಂ.ಸುರೇಶ್ ಮತ ಕುತೂಹಲ: ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಅವರ ಪತಿ ಶ್ರೀನಿವಾಸ ಸಕಲ ಸಂಪನ್ಮೂಲ ಬಳಸಿಕೊಂಡು ಜಿಲ್ಲೆಯಲ್ಲಿ ಚುನಾವಣೆ ನಡೆಸಿರುವುದು ಜೆಡಿಎಸ್ ಅಭ್ಯರ್ಥಿಯ ನಿದ್ದೆಗೆಡಿಸಿದೆ. ಜೆಡಿಎಸ್ ಪ್ರಬಲವಾಗಿರುವ ಚಿಕ್ಕನಾಯಕನಹಳ್ಳಿ, ಗುಬ್ಬಿ, ತುರುವೇಕೆರೆ, ತುಮಕೂರು ಗ್ರಾಮೀಣ ಕ್ಷೇತ್ರದಲ್ಲಿ ಶ್ರೀನಿವಾಸ್ ಬೆಂಬಲಿಗರು ಓಡಾಡಿದ್ದು ಯಾರಿಗೆ ಮುಳುವಾಗಲಿದೆ ಎಂಬುದು ಫಲಿತಾಂಶದವರೆಗೂ ಸಸ್ಪೆನ್ಸ್. ಮೇಲ್ನೋಟಕ್ಕೆ ಜಿಲ್ಲೆಯಲ್ಲಿ ಬಿಜೆಪಿ, ಜೆಡಿಎಸ್ ನಡುವೆ ಹೆಚ್ಚು ಮತ ಹಂಚಿಕೆಯಾಗಿರುವ ಸಾಧ್ಯತೆಯಿದ್ದರೂ ಪಕ್ಷೇತರ ಅಭ್ಯರ್ಥಿ ಶ್ರೀನಿವಾಸ್ ಹಾಗೂ ಕೆ.ಎಂ.ಸುರೇಶ್ ಎಲ್ಲರ ನಿರೀಕ್ಷೆಯನ್ನು ಹುಸಿಮಾಡಿದರೂ ಆಶ್ಚರ್ಯವಿಲ್ಲ. ಇನ್ನು ಜಿಲ್ಲೆಯವರೇ ಆದ ಲೇಪಾಕ್ಷಿ ಹಿಂದೊಮ್ಮೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪಡೆದಿದ್ದ ಮತಕ್ಕಿಂತ ಸ್ವಲ್ಪ ಹೆಚ್ಚು ಪಡೆಯಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts