ಮನೆಗೆ ಬಂದ ಅತ್ತೆಗೆ ಚಾಕುವಿನಿಂದ ಇರಿದ ಅಳಿಯ!

The son in law stabbed the mother in law
Published on

ಕೆಂಗೇರಿ: ಮೊಮ್ಮಗಳನ್ನು ಊರಿಗೆ ಕರೆದುಕೊಂಡು ಹೋಗಲು ಅಳಿಯನ ಮನೆಗೆ ಬಂದಿದ್ದ ಅತ್ತೆ ಬರ್ಬರವಾಗಿ ಹತ್ಯೆಯಾಗಿದ್ದಾರೆ. ಅತ್ತೆಗೆ ಅಳಿಯನೇ ಚಾಕುವಿನಿಂದ ಚುಚ್ಚಿ ಕೊಂದಿರುವ ಘಟನೆ ನಾಗದೇವನಹಳ್ಳಿಯ ಬೃಂದಾವನ ಲೇಔಟ್​​ನಲ್ಲಿ ನಡೆದಿದೆ.

ಏಳಲ್ ಅರಸಿ (48) ಮೃತ ದುರ್ದೈವಿ. ಅಳಿಯ ದಿವಾಕರ್ ಕೊಲೆ‌ ಮಾಡಿರುವ ಆರೋಪಿಯಾಗಿದ್ದಾನೆ. ಕೆಂಗೇರಿ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಏಳಲ್ ಅರಸಿಗೆ ಐದು ಜನ ಮಕ್ಕಳಿದ್ದಾರೆ. ಮೊದಲನೇ ಮಗಳನ್ನ ದಿವಾಕರ್​ಗೆ ಮದುವೆ ಮಾಡಿಕೊಟ್ಟಿದ್ದರು. ಕಳೆದ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದ ಈ ಜೋಡಿಗೆ ಹೆಣ್ಣು ಮಗು ಇದೆ. ಕಾರಣಾಂತರಗಳಿಂದ ದಿವಾಕರ್ ಮತ್ತು ಪತ್ನಿ ಮದ್ಯೆ ಜಗಳವಾಗ್ತಿತ್ತು. ಹೀಗಾಗಿ ದಿವಾಕರ್​ನಿಂದ ದೂರವಾದ ಮಹಿಳೆ, ತಾಯಿ ಜೊತೆಗೆ ಕೋಲಾರದ ಕೆ.ಜಿ.ಎಫ್​​ನಲ್ಲಿ ವಾಸವಾಗಿದ್ದಾರೆ.

ಕೆಲವು ದಿನಗಳ ಹಿಂದೆ ದಿವಾಕರ್ ತಮ್ಮ ಮಗಳನ್ನ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರು. ಮೊಮ್ಮಗಳಿಗೆ ಎಕ್ಸಾಂ ಇದೆ ಎಂದು ಏಳಲ್ ಅರಸಿ ತಮ್ಮ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದರು. ಈ ವೇಳೆ ಅತ್ತೆ, ಅಳಿಯನ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಅಳಿಯ ದಿವಾಕರ್​ ಚಾಕುವಿನಿಂದ ಅತ್ತೆಗೆ ಇರಿದಿದ್ದಾನೆ. ಗಂಭೀರ ಗಾಯವಾಗಿ ಏಳಲ್ ಅರಸಿ ಸಾವನ್ನಪ್ಪಿದ್ದಾರೆ. ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಪತ್ತೆಗೆ ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net