More

    ಪರಿಸ್ಥಿತಿ ಬ್ರೈಟ್​ ಆಗಿದೆ, ಗೆಲ್ಲುವ ವಿಶ್ವಾಸ ಬಂದಿದೆ: ಡಿ.ಕೆ. ಶಿವಕುಮಾರ್ ಹೇಳಿಕೆ

    ಲವ್ ಜಿಹಾದ್ ಎಲ್ಲಿದೆ? ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದು ಬಿಜೆಪಿ ಪ್ರೊಪಗಾಂಡಾ. ಅವರಿಗೆ ಹೇಳಲು ಏನೂ ಇಲ್ಲ. ಜನರು ಅವರನ್ನು ಮನೆಯಲ್ಲಿ ಕೂರಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಅಶಾಂತಿ ವಾತಾವರಣ ಇದೆ ಎಂಬುದು ಬಿಜೆಪಿಯ ಉಪಾಪೋಹ. ನಮ್ಮ ಸರ್ಕಾರದ ವರ್ಚಸ್ಸು ಮುಚ್ಚಿಹಾಕಲು ಪ್ರಯತ್ನ ನಡೆಸಿದ್ದಾರೆ. ಆದರೆ, ಅವರು ಯಶಸ್ವಿಯಾಗಲ್ಲ ಎಂಬುದು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಿಷ್ಠುರ ಅಭಿಪ್ರಾಯ. ವಿಜಯವಾಣಿಯೊಂದಿಗೆ ಮಾತಿಗಿಳಿದ ಅವರು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

    | ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

    . ರಾಜ್ಯದಲ್ಲಿ ಲೋಕಸಭೆ ಚುನಾವಣೆ ಮೊದಲ ಹಂತದ ಮತದಾನಕ್ಕೆ ಹೆಚ್ಚು ದಿನ ಬಾಕಿ ಇಲ್ಲ. ಈ ಸಂದರ್ಭದಲ್ಲಿ ಕಾಂಗ್ರೆಸ್​ಕ್ಕೆ ಸಿಕ್ಕ ಜನರ ನಾಡಿಮಿಡಿತ ಏನು?
    ಹಿಂದಿಗಿಂತಲೂ ಈಗ ಕಾಂಗ್ರೆಸ್ ಸ್ಥಿತಿ ಬ್ರೖೆಟ್ ಆಗಿದೆ. ಜನರಿಗೆ ಕಾಂಗ್ರೆಸ್ ಸರ್ಕಾರದ ಬಗ್ಗೆ ಆತ್ಮವಿಶ್ವಾಸ ಬಂದಿದೆ, ನಾವು ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ ಎಂಬುದು ಜನರಿಗೆ ಅರ್ಥವಾಗಿದೆ. ದೇಶದಲ್ಲಿ ಬೆಲೆ ಏರಿಕೆಯಿಂದ ಸಾಮಾನ್ಯ ಬದುಕಲು ಆಗುತ್ತಿಲ್ಲ. ಈ ಸಮಸ್ಯೆಗೆ ಬಿಜೆಪಿ ಪರಿಹಾರ ಕೊಡುತ್ತಿಲ್ಲ.

    . ಕ್ಯಾಂಪೇನ್ ಕೊನೇ ಹಂತಕ್ಕೆ ಬಂದಿದೆ. ಇದು ಬ್ಯಾಟಲ್ ಆಫ್ ಕಾಂಗ್ರೆಸ್ ಮತ್ತು ಗ್ಯಾರಂಟಿ, ಮೋದಿ ಗ್ಯಾರಂಟಿ ಎಂಬಂತಿತ್ತು. ಆದರೀಗ ಕಾನೂನು ಸುವ್ಯವಸ್ಥೆ ವಿಚಾರ ದೊಡ್ಡದಾಗಿ ಕಾಣಿಸುತ್ತಿದೆಯಲ್ಲ, ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬ ಚರ್ಚೆ ಶುರುವಾಗಿದೆಯಲ್ಲ.?

    ರಾಜ್ಯದಲ್ಲಿ ಮಹಿಳೆ ಸೇಫ್ ಇಲ್ಲ ಎಂಬುದು ತಪ್ಪಾದ ವ್ಯಾಖ್ಯಾನ. ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ಕೋಮುಸೌರ್ಹಾದತೆಯಿಂದ ಸಾಗುವ ರಾಜ್ಯ. ಆದರೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಅಶಾಂತಿ ವಾತಾವರಣ ಇದೆ ಎಂಬುದು ಬಿಜೆಪಿಯ ಪ್ರೊಪಗಂಡ. ಕಾಂಗ್ರೆಸ್ ಸರ್ಕಾರ ವ್ಯವಸ್ಥೆಯನ್ನು ಉತ್ತಮಪಡಿಸಲು ಬಯಸುತ್ತದೆ. ಬಿಜೆಪಿಯವರಿಗೆ ಅವರ ಕಾಲದ ಅಂಕಿ-ಅಂಶ ಹೇಳಿದರೆ ಅವರ ಹಣೆಬರಹ ಗೊತ್ತಾಗುತ್ತದೆ. ಅದೇ ಕಾರಣಕ್ಕೆ ಜನ ಅವರನ್ನು ಮನೆಯಲ್ಲಿ ಕೂರಿಸಿದ್ದಾರೆ. ಗ್ಯಾರಂಟಿ ವಿಚಾರಕ್ಕೆ ಬಂದರೆ ಬೆಲೆ ಏರಿಕೆಯಿಂದ ಸಾಮಾನ್ಯ ಮನುಷ್ಯ ಬದುಕಲು ಆಗುತ್ತಿಲ್ಲ. ಗ್ಯಾರಂಟಿ ವೈಯಕ್ತಿಕ ಲಾಭ ತಂದುಕೊಡುತ್ತಿದೆ. ನಮ್ಮ ಗ್ಯಾರಂಟಿ ಮುಂದೆ ಮೋದಿ ಗ್ಯಾರಂಟಿ ಲೊಳಲೊಟ್ಟೆ.

    . ನೀವು ಚೊಂಬು ಜಾಹೀರಾತು ನೀಡಿ ಜನರನ್ನು ಸೆಳೆಯಲು ಪ್ರಯತ್ನಿಸಿದಿರಿ, ಈಗ ಬಿಜೆಪಿಯವರು ಕಾಂಗ್ರೆಸ್ ಡೇಂಜರ್ ಎಂದು ಪ್ರಚಾರಕ್ಕಿಳಿದಿದ್ದಾರೆ. ಇದೆಂಥಾ ಸ್ಪರ್ಧೆ?
    ಬಿಜೆಪಿಯಿಂದ ಸ್ಪರ್ಧೆ ಬೇಕು, ನಮಗೆ ಪ್ರತಿಕ್ರಿಯೆ ರೂಪದಲ್ಲಿ ಜಾಹಿರಾತು ನೀಡಿ ಒಳ್ಳೆಯ ಕೆಲಸ ಮಾಡಿದ್ದಾರೆ. ಜನ ಎರಡನ್ನೂ ಚರ್ಚೆ ಮಾಡಲಿ. ಬಿಜೆಪಿಯವರು ಕಾಂಗ್ರೆಸ್ ಡೇಂಜರ್ ಎಂದಿದ್ದಾರೆ. ಎಸ್ಸಿ,ಎಸ್ಟಿ ರಕ್ಷಣೆಗೆ ವಿಧೇಯಕ ತಂದಿದ್ದು ಕಾಂಗ್ರೆಸ್, ಬಜೆಟ್​ನಲ್ಲಿ ಹಣ ಮೀಸಲಿಟ್ಟು ಕಾನೂನು ಮಾಡಿದ್ದು ಕಾಂಗ್ರೆಸ್. ಇನ್ನು ಕಾಲೇಜು ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ ಎಂದು ಬಿಜೆಪಿಯವರು ಹೇಳಿದ್ದಾರೆ. ಲವ್ ಜಿಹಾದ್ ಎಲ್ಲಿದೆ? ಇವರೇ ಕ್ರಿಯೇಟ್ ಮಾಡುತ್ತಿದ್ದಾರೆ. ಕನ್ನಡಿಗರ ನೀರು ತಮಿಳುನಾಡಿಗೆ ಎಂದಿದ್ದಾರೆ. ಹಾಗಿದ್ದರೆ ನಿಮಗೆ ಅಧಿಕಾರ ಇತ್ತಲ್ಲ, ಡಬಲ್ ಇಂಜಿನ್ ಪವರ್ ಇತ್ತಲ್ಲ. ಆಗ ಕನ್ನಡಿಗರಿಗೆ ಅನುಕೂಲ ಮಾಡಿಕೊಡಬಹುದಿತ್ತಲ್ಲ. ಆಗ ಬೊಮ್ಮಾಯಿ, ದೇವೇಗೌಡರು ಏನು ಮಾಡಿದರು ಎಂಬುದು ನಮ್ಮ ಪ್ರಶ್ನೆ ಎಂದರು.

    . ಮೋದಿ ಅಲೆ ಬಗ್ಗೆ ಚರ್ಚೆಯಾಗುತ್ತಿದೆ. ರಾಜ್ಯ ಬಿಜೆಪಿ ನಾಯಕರು ಮೋದಿ ಅಲೆಯನ್ನೇ ನೆಚ್ಚಿಕೊಂಡು ಹೊರಟಿದ್ದಾರೆ. ನಿಮ್ಮ ವಿಶ್ಲೇಷಣೆ ಏನು?

    ಮೋದಿ ಅಲೆಯೇ, ಮೋದಿ ಅಲೆ ಇಲ್ಲವೇ ಇಲ್ಲ. ಈಗ ಇರುವುದು ಕಾಂಗ್ರೆಸ್ ಗ್ಯಾರಂಟಿ ವೇವ್. ಪಕ್ಷ, ದೇಶ ಒಟ್ಟಾಗಿದೆ. ಕರ್ನಾಟಕದ ಗ್ಯಾರಂಟಿ ಸಕ್ಸಸ್ ಸ್ಟೋರಿ ಜನರ ಮುಂದಿದೆ. ಅವರು ಸರಿಯಾದ ತೀರ್ವನವನ್ನೇ ಮಾಡುತ್ತಾರೆ ಎಂಬ ವಿಶ್ವಾಸವಿದೆ.

    ಪರಿಸ್ಥಿತಿ ಬ್ರೈಟ್​ ಆಗಿದೆ, ಗೆಲ್ಲುವ ವಿಶ್ವಾಸ ಬಂದಿದೆ: ಡಿ.ಕೆ. ಶಿವಕುಮಾರ್ ಹೇಳಿಕೆ

    . ಜೆಡಿಎಸ್ ನಾಯಕರ ಮೇಲೆ ಸಾಕಷ್ಟು ಹರಿಹಾಯುತ್ತಿದ್ದೀರಿ. ಅಷ್ಟೊಂದು ಪರಿಸ್ಥಿತಿ ಗಂಭೀರವಾಗಿದೆಯೇ? ಬೆಂಗಳೂರು ಗ್ರಾಮಾಂತರದಲ್ಲಿ ಹಿಂದೆಂದಿಗಿಂತಲೂ ನಿಮ್ಮ ಶ್ರಮ ಕಾಣಿಸುತ್ತಿದೆ. ತಾವು ತೀವ್ರ ಪೈಪೋಟಿ ಎದುರಿಸುತ್ತಿರುವಂತೆ ಭಾಸವಾಗುತ್ತಿದೆಯಲ್ಲ.

    ಈ ಹಿಂದೆ 38 ಸ್ಥಾನ ಗಳಿಸಿದವರಿಗೆ ಸರ್ಕಾರ ನಡೆಸಲು ಅವಕಾಶ ಮಾಡಿಕೊಟ್ಟೆವು. ಆದರೆ ಇಂದು ಕುಮಾರಸ್ವಾಮಿ ಅವರು ಅಧಿಕಾರದಿಂದ ಕೆಳಗೆ ಇಳಿಸಿದವರನ್ನೇ ತಬ್ಬಾಡುತ್ತಿದ್ದಾರೆ. ಅವರಿಗೆ ನೀತಿ ಇಲ್ಲ, ಸಿದ್ಧಾಂತವಿಲ್ಲ ಎಂದೇ ಹೇಳಬೇಕಾಗುತ್ತದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ವಿಚಾರಕ್ಕೆ ಬಂದರೆ, ಡಾ.ಮಂಜುನಾಥ್ ಬಗ್ಗೆ ನಾನು ಮಾತನಾಡುವುದಿಲ್ಲ. ಈ ಕ್ಷೇತ್ರ ವ್ಯಾಪ್ತಿಯ 2 ವಿಧಾನ ಸಭೆಯಲ್ಲಿ ಬಿಜೆಪಿ ಗೆದ್ದಿತ್ತು. ಹೀಗಾಗಿ ಅಂತಹ ಕಡೆ ನಾವು ಶ್ರಮ ಹಾಕಬೇಕಲ್ಲ. ಅದರಲ್ಲಿ ವಿಶೇಷತೆ ಇಲ್ಲ.

    . ಬಿಜೆಪಿ- ಜೆಡಿಎಸ್ ಮೈತ್ರಿ ದೊಡ್ಡ ಗುರಿ ಬೆನ್ನತ್ತಿದೆ. ಎರಡೂ ಪಕ್ಷದವರು ಒಟ್ಟಾಗಿ ಅಖಾಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್​ಗೆ ಸಣ್ಣ ಚಡಪಡಿಕೆ ಆದಂತಿದೆ?

    ನೋ. ಇದು ಫೇಲ್ಯೂರ್ ಡಬಲ್ ಇಂಜಿನ್. ಜೆಡಿಎಸ್ ಮೂರು ಕ್ಷೇತ್ರದಲ್ಲೂ ಸೋಲಲಿದೆ. ಮೈತ್ರಿ ಯಾವುದೇ ಕಾರಣಕ್ಕೂ ಫಲ ಕೊಡಲ್ಲ. ದೇವೇಗೌಡರು ಅಳಿಯನನ್ನು ಬಿಜೆಪಿಯಿಂದ ಕಣಕ್ಕಿಳಿಸಿದ್ದಾರೆ. ಒಂದು ಕಡೆ ಮಗ, ಮತ್ತೊಂದು ಕಡೆ ಮೊಮ್ಮಗ. ಈ ಎಲ್ಲ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲ್ಲಲಿದೆ. ಚುನಾವಣೆ ಮುಗಿದ ನಂತರ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಜಗಳ ಹಳ್ಳಿ, ಹಳ್ಳಿಗಳಲ್ಲಿ ಪ್ರಾರಂಭವಾಗಲಿದೆ. ನನ್ನ ಮಾತು ಸತ್ಯ. ಕಾದು ನೋಡಿ.

    . ಕಾಂಗ್ರೆಸ್​ನಲ್ಲಿ ಎಸ್.ಎಂ.ಕೃಷ್ಣ ಅವಧಿಯ ನಂತರ ಒಕ್ಕಲಿಗರೊಬ್ಬರಿಗೆ ಸಿಎಂ ಆಗುವ ಅವಕಾಶ ಇದೆ ಎಂಬ ಚರ್ಚೆ ಇದೆ. ಇದೇ ಅವಧಿಯಲ್ಲಿ ಅವಕಾಶ ಸಿಗಬಹುದೇ?

    ಈ ಬಗ್ಗೆ ಚರ್ಚೆ ಮಾಡಲ್ಲ. ನಾನು ಹಾಗೂ ಸಿದ್ದರಾಮಯ್ಯ ಗಟ್ಟಿಯಾಗಿ ಸರ್ಕಾರವನ್ನು ಕಟ್ಟುತ್ತಿದ್ದೇವೆ. ನಾನು ಈಗ ಡಿಸಿಎಂ ಹಾಗೂ ಪಕ್ಷದ ಅಧ್ಯಕ್ಷ ಇದ್ದೇನೆ. ಮುಂದೆ ಪಕ್ಷ ಯಾವ ಸಮಯದಲ್ಲಿ ತೀರ್ಮಾನ ಮಾಡಬೇಕೋ ಆಗ ಮಾಡಲಿದೆ. ಜಾತಿಗಿಂತ ನೀತಿ ಮುಖ್ಯ ಎಂಬುವನು ನಾನು. ಅವರವರಿಗೆ ಜಾತಿ ಇರುತ್ತದೆ, ಅದನ್ನು ತಪ್ಪೆಂದು ಹೇಳಲ್ಲ. ಕಾಂಗ್ರೆಸ್ ಸೂಕ್ತ ಸಂದರ್ಭದಲ್ಲಿ ತೀರ್ಮಾನ ಮಾಡಲಿದೆ, ಕಾದು ನೋಡಿ.

    . ಕಾಂಗ್ರೆಸ್​ಗೆ ಪ್ರಧಾನಿ ಫೇಸ್ ಇಟ್ಟುಕೊಂಡು ಚುನಾವಣೆಗೆ ಹೋಗಬೇಕಿತ್ತು, ಇದರಿಂದ ಬೂಸ್ಟ್ ಸಿಗುತ್ತಿತ್ತು ಎನಿಸಿದ್ದಿದೆಯೇ?

    ಪಕ್ಷದಲ್ಲಿ ಕಲೆಕ್ಟಿವ್ ಲೀಡರ್ ಶಿಪ್ ಇದೆ. ಖರ್ಗೆಯವರು ಅಧ್ಯಕ್ಷರು ಹಾಗೂ ಇಡೀ ಒಕ್ಕೂಟ ಮುನ್ನಡೆಸುತ್ತಿದ್ದಾರೆ. ಅವರಿಗೆ ರಾಹುಲ್ ಗಾಂಧಿ ಬೆಂಬಲವಾಗಿ ನಿಂತಿದ್ದಾರೆ. ಅವರಿಬ್ಬರೂ ನ್ಯಾಚುರಲ್ ಲೀಡರ್ಸ್. 20 ಪಕ್ಷ ಒಟ್ಟಾಗಿ ಚುನಾವಣೆ ಎದುರಿಸುತ್ತಿರುವುದರಿಂದ ಕಲೆಕ್ಟಿವ್ ಲೀಡರ್ ಶಿಪ್ ಮುಖ್ಯವಾಗುತ್ತದೆ.

    . ಹುಬ್ಬಳ್ಳಿಯ ನೇಹಾ ಹತ್ಯೆ ಕೇಸ್ ಚುನಾವಣೆ ವಿಷಯವಾಗುತ್ತಿದೆ ಎನಿಸಿಲ್ಲವೇ? ಕಾಂಗ್ರೆಸ್ ಕಾರ್ಪೆರೇಟರ್ ಮಗಳಿಗೇ ರಕ್ಷಣೆ ಕೊಡಲು ಸಾಧ್ಯವಾಗಿಲ್ಲ ಎಂದು ಬಿಜೆಪಿ ದನಿ ಎತ್ತಿದೆಯಲ್ಲ.
    ಈ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಜನರಿಗೆ ಎಲ್ಲವೂ ತಿಳಿದಿದೆ. ಸರ್ಕಾರ ನೇಹಾ ಕುಟುಂಬದ ಜತೆ ಇದೆ. ರಕ್ಷಣೆ ನೀಡುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts