More

    ಪ್ರತಿ ಹಬ್ಬಕ್ಕೂ ಇದೇ ವೈಜ್ಞಾನಿಕ ಕಾರಣ: ಸ್ವಾಮೀಜಿ

    ಶಿವಮೊಗ್ಗ: ನಾವು ಆಚರಿಸುವ ಹಬ್ಬಗಳಿಗೆ ಧಾರ್ಮಿಕ ತಳಹದಿಯ ಜತೆಗೆ ವೈಜ್ಞಾನಿಕ ಕಾರಣಗಳೂ ಇವೆ. ಪ್ರಕೃತಿಗೆ ಅನುಗುಣವಾಗಿ ನಮ್ಮ ಹಬ್ಬಗಳ ಆಚರಣೆಗಳೂ ಇವೆ. ನಮ್ಮ ಪೂರ್ವಜರು ವೃಥಾ ಆಚರಣೆಗಳನ್ನು ನಡೆಸಿಕೊಂಡು ಬರಲಿಲ್ಲ. ಆದರೆ ಇಂದಿನವರಿಗೆ ಕೆಲವು ಆಚರಣೆಗಳ ಬಗ್ಗೆ ಆಕ್ಷೇಪಗಳು ಇರುವುದು ದುರದೃಷ್ಟಕರ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹೇಳಿದರು.

    ಆದಿಚುಂಚನಗಿರಿ ಸಮುದಾಯ ಭವನದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಮಹಿಳಾ ಘಟಕದಿಂದ ಮಂಗಳವಾರ ಏರ್ಪಡಿಸಿದ್ದ ಹಬ್ಬಗಳ ಕುರಿತ ಪ್ರಾತ್ಯಕ್ಷಿಕೆ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ಸಂಕ್ರಾಂತಿ ಹಬ್ಬದಲ್ಲಿ ಕಬ್ಬು, ಎಳ್ಳು-ಬೆಲ್ಲ, ಪೊಂಗಲ್ ಉಪಯೋಗಿಸುತ್ತೇವೆ. ಇದಕ್ಕೆ ವೈಜ್ಞಾನಿಕ ಕಾರಣಗಳಿವೆ. ಚಳಿಗಾಲದಲ್ಲಿ ನಮ್ಮ ದೇಹಕ್ಕೆ ಅಗತ್ಯವಿರುವ ಅಂಶಗಳನ್ನು ಇವು ನಮಗೆ ಪೂರೈಕೆ ಮಾಡುತ್ತವೆ ಎಂದರು.
    ನಮ್ಮಲ್ಲಿ ಆಚರಿಸುವ ಪ್ರತಿ ಹಬ್ಬಗಳು ಏಕೆ ಭಿನ್ನ? ಅವುಗಳ ಆಚರಣೆಯ ಉದ್ದೇಶ, ಮೂಲ ಏನು? ಎಂಬ ಬಗ್ಗೆ ಚಿಂತನೆ ಮಾಡಬೇಕು. ಪ್ರಕೃತಿಯ ಸ್ವಭಾವಕ್ಕೆ ಅನುಗುಣವಾಗಿ ನಮ್ಮಲ್ಲಿ ಹಬ್ಬಗಳ ಆಚರಣೆಯಿದೆ. ಕಷ್ಟ ಸುಖಗಳು ಸಮಾನಾಗಿ ಹಂಚಿಕೊಳ್ಳಬೇಕು ಎಂಬ ಕಲ್ಪನೆಯಿಂದ ಯುಗಾದಿಯಲ್ಲಿ ಬೇವು-ಬೆಲ್ಲ ಸೇವಿಸುತ್ತೇವೆ ಎಂದು ಹೇಳಿದರು.
    ಶ್ರೀರಾಮ ಆದರ್ಶ ಪಾಲಿಸಬೇಕೆಂಬ ಕಾರಣದಿಂದ ರಾಮನವಮಿ ಆಚರಣೆ ಚಾಲ್ತಿಯಲ್ಲಿದೆ. ಗಣೇಶ ಚೌತಿ, ದಸರಾ, ದೀಪಾವಳಿ ಹೀಗೆ ಎಲ್ಲ ಹಬ್ಬಗಳೂ ಒಂದಕ್ಕಿಂತ ಒಂದು ಭಿನ್ನವಾಗಿವೆ. ಇಂದು ವಿದೇಶಗಳಲ್ಲೂ ನಮ್ಮ ಸಂಸ್ಕೃತಿ, ಹಬ್ಬಗಳ ಬಗ್ಗೆ ಬಹಳಷ್ಟು ಮಂದಿ ಸೋಜಿಗ ವ್ಯಕ್ತಪಡಿಸುತ್ತಿದ್ದಾರೆ. ದೀಪಾವಳಿ ಸಂದರ್ಭದ ಅಂಟಿಕೆ-ಪಿಂಟಿಕೆ ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿದೆ. ಈ ಎಲ್ಲ ಕಲ್ಪನೆಗಳನ್ನು ಮೌಢ್ಯ ಎಂದು ಹೀಗೆಳೆಯುವುದು ಸಲ್ಲದು ಎಂದು ತಿಳಿಸಿದರು.
    ವಿವಿಧ ಮಹಿಳಾ ತಂಡಗಳು ಸಂಕ್ರಾಂತಿ, ಭೂಮಿ ಹುಣ್ಣಿಮೆ, ಗುರು ಪೂರ್ಣಿಮೆ, ದಸರಾ, ಶ್ರಾವಣ ಮಾಸದ ಪೂಜೆಗಳು, ರಾಮನವಮಿ…ಹೀಗೆ ವಿವಿಧ ಹಬ್ಬಗಳ ಆಚರಣೆಯ ಪ್ರಾತ್ಯಕ್ಷಿಕೆಯನ್ನು ಸಿದ್ಧಪಡಿಸಿ ಗಮನಸೆಳೆದವು.
    ರಾಜ್ಯ ಒಕ್ಕಲಿಗರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಡಾ. ಶಾಂತಾ ಸುರೇಂದ್ರ, ಜಿಲ್ಲಾಧ್ಯಕ್ಷೆ ಪ್ರತಿಮಾ ಡಾಕಪ್ಪ ಗೌಡ, ಪ್ರಮುಖರಾದ ಆದಿಮೂರ್ತಿ, ರಮೇಶ್ ಹೆಗ್ಡೆ, ಗೋ.ರಮೇಶ್ ಗೌಡ, ಸುಷ್ಮಾ ಸಂಜಯ್, ರಚನಾ ಸಂತೋಷ್, ಚೇತನ್ ಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts