More

    ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಅನನ್ಯ

    ಬಾಗಲಕೋಟೆ: ಬಿವಿವಿ ಸಂಘದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ ಅಗತ್ಯವಾದ ಎಲ್ಲ ಅನುಕೂಲಗಳನ್ನು ಒದಗಿಸಲಾಗಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ಓದಿಗೆ ಅಗತ್ಯವಾದ ನೆರವು ಒದಗಿಸಿ ಪ್ರತಿಭೆಯನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಸಿ. ಚರಂತಿಮಠ ಹೇಳಿದರು.

    ನಗರದ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಬೀಳೂರು ಗುರುಬಸವ ಉತ್ಸವ ಸಮಿತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳ ಕಿಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು.

    ಪ್ರತಿಭೆಯನ್ನು ಗುರುತಿಸಿ, ಬೆಳೆಸಲು ಅಗತ್ಯವಾದ ಪೂರಕವಾದ ವಾತಾವರಣವನ್ನು ಬಿವಿವಿ ಸಂಘದ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ನಿರ್ಮಾಣ ಮಾಡಲಾಗಿದೆ. ಇಂದಿನ ವಿದ್ಯಾರ್ಥಿಗಳೇ ಭವಿಷ್ಯದಲ್ಲಿ ಸಮೃದ್ಧವಾದ ನಾಡನ್ನು ಕಟ್ಟಬಲ್ಲವರು. ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕವಾಗಿ ಅಭಿವೃದ್ಧಿಗೊಂಡ ರಾಷ್ಟ್ರದ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮುಖ್ಯವಾಗಿದೆ. ಈ ದಿಸೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಗತ್ಯದ ಶೈಕ್ಷಣಿಕ ಸಾಮಗ್ರಿಗಳನ್ನು ಅವರ ಅಭ್ಯಾಸಕ್ಕೆ ಅನುಕೂಲವಾಗಲೆಂದು ವಿತರಿಸಲಾಗಿದೆ. ಈ ಪ್ರತಿಭಾ ಪ್ರೋತ್ಸಾಹದ ಕೆಲಸ ಬಿ.ವಿ.ವಿ. ಸಂಘದಲ್ಲಿ ನಿರಂತರವಾಗಿ ನಡೆಯಲಿದೆ ಎಂದರು.

    ಎಸ್. ನಿಜಲಿಂಗಪ್ಪ ವೈದ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್. ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ 10 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬೀಳೂರು ಗುರುಬಸವ ಉತ್ಸವ ಸಮಿತಿಯಿಂದ ಶೈಕ್ಷಣಿಕ ಪರಿಕರಗಳ ಕಿಟ್‌ಗಳನ್ನು ವಿತರಿಸಲಾಯಿತು. ಪ್ರತಿ ಕಿಟ್ ಮೌಲ್ಯ 22 ಸಾವಿರ ರೂ. ಹತ್ತು ಕಿಟ್‌ಗಳನ್ನು ವಿತರಿಸಲು ಒಟ್ಟು 2.20 ಲಕ್ಷ ರೂಪಾಯಿಗಳನ್ನು ವಿದ್ಯಾರ್ಥಿ ವೇತನವಾಗಿ ಬೀಳೂರು ಗುರುಬಸವ ಉತ್ಸವ ಸಮಿತಿಯು ವೈದ್ಯಕೀಯ ಮಹಾವಿದ್ಯಾಲಯಕ್ಕೆ ನೀಡಿದೆ. ಶೈಕ್ಷಣಿಕ ಸಾಮಗ್ರಿಗಳನ್ನು ವಿದ್ಯಾರ್ಥಿ ವೇತನವಾಗಿ ಸ್ವೀಕರಿಸಿದ ಎಲ್ಲ ಹತ್ತು ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದರು.

    ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಂ. ಸಜ್ಜನ (ಬೇವೂರ), ಮೆಡಿಕಲ್ ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಡಾ. ಶಿವಕುಮಾರ ಸೊಲಬನ್ನವರ್, ವೈದ್ಯಕೀಯ ಅಧೀಕ್ಷಕಿ ಡಾ. ಭುವನೇಶ್ವರಿ ಯಳಮಲಿ, ಬಿವಿವಿ ಸಂಘದ ಆಡಳಿತಾಧಿಕಾರಿ ಪ್ರೊ. ವಿ.ಆರ್. ಶಿರೋಳ, ಬೀಳೂರು ಗುರುಬಸವ ಉತ್ಸವ ಸಮಿತಿ ಅಧ್ಯಕ್ಷ ಬಿ.ಆರ್. ಬೋಳಿಶೆಟ್ಟಿ, ಖಜಾಂಚಿ ಎಸ್.ಎಸ್. ಮಠ ಮತ್ತು ಕಾಲೇಜಿನ ಬೋಧಕ ವೃಂದ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts