More

    ಬ್ಯಾರಿಕೇಡ್ ಮಧ್ಯೆಯೇ ರಹದಾರಿ

    ಹುಬ್ಬಳ್ಳಿ: ಒಂದೆಡೆ ಬಿಆರ್​ಟಿಎಸ್, ಇನ್ನೊಂದೆಡೆ ಸರ್ಕಾರಿ ಬಸ್​ಗಳ ಓಡಾಟ. ಇದರ ಮಧ್ಯೆ ಖಾಸಗಿ ವಾಹನಗಳ ಕಾಟ. ಈ ಬದಿಯಿಂದ ಇನ್ನೊಂದು ಬದಿ ತಲುಪಲು ಜನರು ಆಯ್ದುಕೊಂಡದ್ದು ಬ್ಯಾರಿಕೇಡ್ ನಡುವಿನ ಹಾದಿ.

    ಇಲ್ಲಿನ ಹಳೆಯ ಬಸ್ ನಿಲ್ದಾಣ ಬಳಿ ವಾಹನ ಹಾಗೂ ಜನ ದಟ್ಟಣೆ ಹೆಚ್ಚಿದೆ. ಹಾಗಾಗಿಯೇ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡೇ ಬ್ಯಾರಿಕೇಡ್ ಮಧ್ಯೆ ಮತ್ತೊಂದು ಬದಿ ತಲುಪುತ್ತಿದ್ದಾರೆ.

    ಬಿಆರ್​ಟಿಎಸ್ ಕಾರಿಡಾರ್​ನಲ್ಲಿ ಖಾಸಗಿ ವಾಹನಗಳು ಓಡಾಡುತ್ತಿವೆ. ಇತರೆ ರಸ್ತೆಗಳ ಮೇಲೂ ಸರ್ಕಾರಿ ಬಸ್ ಹಾಗೂ ಖಾಸಗಿ ವಾಹನಗಳು ಸಂಚರಿಸುತ್ತಿವೆ. ಪ್ರತ್ಯೇಕವಾಗಿ ಜನರು ಸಂಚರಿಸಲು ರಸ್ತೆಗಳು ಇಲ್ಲ. ವಾಹನ ಹಾಗೂ ಜನರ ಸುಗಮ ಸಂಚಾರಕ್ಕೆ ದಾರಿಗುಂಟ ಬ್ಯಾರಿಕೇಡ್ ಅಳವಡಿಸಲಾಗಿದೆ. ಮೇಲ್ಸೇತುವೆ ಅಥವಾ ಫ್ಲೈ ಓವರ್ ನಿರ್ವಣವಾಗಿಲ್ಲ.

    ಎಲ್ಲೆಂದರಲ್ಲಿ ಆಟೋಗಳನ್ನು ನಿಲ್ಲಿಸುತ್ತಿದ್ದಾರೆ. ಖಾಸಗಿ ವಾಹನ ಮಾಲೀಕರು, ಬೇರೆ ಊರಿನಿಂದ ಬರುವ ತಮ್ಮ ಸಂಬಂಧಿಕರನ್ನು ಕರೆದುಕೊಂಡು ಹೋಗಲು ವಾಹನ ತಂದು ನಿಲ್ಲಿಸುತ್ತಿದ್ದಾರೆ. ಸರ್ಕಾರಿ ಬಸ್​ಗಳ ಓಡಾಟಕ್ಕೂ ಜಾಗ ಬಿಡದಂಥ ದುಸ್ಥಿತಿ ಇದೆ. ಇದರ ಮಧ್ಯೆ ಸಾರ್ವಜನಿಕರು, ಬ್ಯಾರಿಕೇಡ್ ಮಧ್ಯೆ ಕಾಣುವ ದಾರಿ ಹುಡುಕಿ ನುಗ್ಗುತ್ತಿರುತ್ತಾರೆ. ಪ್ರಾಣ ಹೋದೀತೆಂಬ ಭಯ ಅವರಲ್ಲಿ ಲವಲೇಶವೂ ಇಲ್ಲ.

    ಪೊಲೀಸ್ ಸಿಬ್ಬಂದಿಯೂ ಅಲ್ಲಿಯೇ ಇರುತ್ತಾರೆ. ಆದರೆ, ಬ್ಯಾರಿಕೇಡ್ ದಾಟಿ ಬರುವ ಜನರಿಗೆ ತಿಳಿವಳಿಕೆ ಮೂಡಿಸುತ್ತಿಲ್ಲ. ಕೆಲ ವಾಹನಗಳು ಸಂಚಾರ ನಿಯಮ ಉಲ್ಲಂಘಿಸಿ ಬ್ಯಾರಿಕೇಡ್ ದಾಟಿ ಹೋಗುತ್ತಿವೆ. ಇವೆಲ್ಲ ಹಳೆಯ ಕಾಲದ ಬ್ಯಾರಿಕೇಡ್ ಆಗಿರುವುದರಿಂದ ಸಾರ್ವಜನಿಕರು ಹಾಗೂ ವಾಹನಗಳು ಓಡಾಡಲು ಅವುಗಳೇ ದಾರಿ ಮಾಡಿಕೊಟ್ಟಿವೆ ಎಂಬ ಆರೋಪವಿದೆ.

    ಬ್ಯಾರಿಕೇಡ್ ದಾಟಿ ಜನರು ಹೋಗುತ್ತಿದ್ದಾರೆ. ಅವರಿಗೆ ತಿಳಿವಳಿಕೆ ಮೂಡಿಸಲಾಗುತ್ತಿದೆ. ಆದರೂ ಜನರು ಹೆದರುತ್ತಿಲ್ಲ. ಹಾಗಾಗಿ ಶೀಘ್ರವೇ ಸಿಮೆಂಟ್ ಇಟ್ಟಗಿ ಹಾಕಿ ಡಿವೈಡರ್ ನಿರ್ವಿುಸಲು ಉದ್ದೇಶಿಸಲಾಗಿದೆ. ಅಲ್ಲಿಯವರೆಗೆ ನಮ್ಮ ಸಿಬ್ಬಂದಿಯನ್ನು ನಿಯೋಜಿಸಿ ಸಂಚಾರ ದಟ್ಟಣೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ.

    | ಶ್ರೀಕಾಂತ ತೊಟಗಿ ಉತ್ತರ ಸಂಚಾರ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts