More

    ಬತ್ತಿ ಬರಡಾಗಿವೆ ನದಿ ತೊರೆಗಳು

    ನರಸಿಂಹ ನಾಯಕ್ ಬೈಂದೂರು

    ಬೇಸಿಗೆ ಆರಂಭವಾಗಿದೆ. ಇಷ್ಟು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಮುಂಗಾರು ಮಳೆ ವಾಡಿಕೆಗಿಂತ ಸ್ವಲ್ಪ ಜಾಸ್ತಿಯಾಗಿದ್ದು ಬೇಸಿಗೆಯಲ್ಲಿ ನೀರಿನ ಬವಣೆ ಕಡಿಮೆಯಾಗಬಹುದು ಎಂಬ ಜನರ ನಿರೀಕ್ಷೆ ಮಾತ್ರ ಹುಸಿಯಾಗುವ ಲಕ್ಷಣಗಳು ಕಾಣಿಸುತ್ತಿವೆ. ಮಾರ್ಚ್ ಆರಂಭದಲ್ಲೇ ಬಾವಿಗಳ ತಳ ದರ್ಶನವಾಗುತ್ತಿದ್ದು ನದಿ ತೊರೆಗಳು ಬತ್ತಿ ಹೋಗಿ ಬರಡಾಗಿದೆ. ಬೈಂದೂರು ತಾಲೂಕಿನ ಯಡ್ತರೆ, ಪಡುವರಿ ಗ್ರಾಮಗಳಲ್ಲಿ ಈ ವರ್ಷವೂ ಕೂಡ ನೀರಿನ ಗೋಳು ಮುಂದುವರಿದಿದೆ.

    ಎರಡು ದಶಕಗಳಿಂದ ಬೈಂದೂರು ಭಾಗದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬ ಜನರ ಕೂಗು ಅರಣ್ಯರೋದನವಾಗಿಯೇ ಉಳಿದಿದೆ. 25 ವರ್ಷಗಳಿಂದ ಭೌಗೋಳಿಕ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಅನುದಾನ ಹರಿದು ಬಂದಿದೆ. ಆದರೆ ಆಡಳಿತ ವ್ಯವಸ್ಥೆ ಕುಡಿಯುವ ನೀರಿನ ಯೋಜನೆ ಅನುಷ್ಠಾನದಲ್ಲಿ ಮಾತ್ರ ಸಂಪೂರ್ಣ ವಿಫಲವಾಗಿದೆ. ಆರೇಳು ವರ್ಷಗಳಿಂದ ಶಿರೂರು, ಬೈಂದೂರು, ಯಡ್ತರೆ, ಪಡುವರಿ, ತಗ್ಗರ್ಸೆ ಮೊದಲಾದ ಗ್ರಾಮಗಳ ಜನರಿಗೆ ಅನುಕೂಲವಾಗಿಸುವ ಉದ್ದೇಶದಿಂದ ಕೊಸಳ್ಳಿ ಜಲಪಾತದಿಂದ ನೀರು ತರುವ ಬಹುಗ್ರಾಮ ಯೋಜನೆ ಗಗನ ಕುಸುಮವಾಗಿಯೇ ಉಳಿದಿದೆ. ಎಲ್ಲ ಅವಧಿಯಲ್ಲೂ ಪ್ರಕ್ರಿಯೆ ಮುಗಿದು ಟೆಂಡರ್ ಬಾಕಿ ಇದೆ ಎನ್ನುವ ಉತ್ತರ ಬಂದರೂ ಸಹ ತಾಂತ್ರಿಕ ಕಾರಣಗಳು, ವನ್ಯಜೀವಿ, ಅರಣ್ಯ ವಿಭಾಗದ ಅನುಮತಿ ದೊರೆಯದಿರುವುದರಿಂದ ಬಹುಗ್ರಾಮ ಯೋಜನೆ ಸಾಕಾರಗೊಂಡಿಲ್ಲ. ಸುಮನಾವತಿ ನದಿಗೆ ಸುಬ್ಬಾರಡಿ ಸೇತುವೆ ನಿರ್ಮಿಸಿದ ಬಳಿಕ ಸಿಹಿ ನೀರು ದೊರೆಯುವ ನಿರೀಕ್ಷೆ ಇದೆ. ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ವಾರಾಹಿ ನೀರನ್ನು ಬೈಂದೂರಿಗೆ ತರುವ ಕುರಿತು ಚಿಂತನೆ ನಡೆಸಿದ್ದು, ಇವೆರಡು ಯೋಜನೆಗಳು ಒಂದಿಷ್ಟು ನಿರೀಕ್ಷೆ ಹಸಿರಾಗಿಸಿವೆ.

    ಟ್ಯಾಂಕರ್ ಮೂಲಕ ನೀರು: ಯಡ್ತರೆ ಗ್ರಾಪಂ ವ್ಯಾಪ್ತಿಯ ಗರ್ಜಿನಹಿತ್ಲು, ಹೊಳ್ಳರಹಿತ್ಲು, ಯಡ್ತರೆ, ಯೋಜನಾನಗರ, ಆಲಂದೂರು, ಕಲ್ಲಣ್ಕಿ ಮುಂತಾದ ಕಡೆ ಪ್ರತಿವರ್ಷ ನೀರಿನ ಸಮಸ್ಯೆ ಕಾಡುತ್ತಿದೆ. ಕಳೆದ ವರ್ಷ ಜಿಪಂ 10 ಲಕ್ಷ ರೂ. ಅನುದಾನ ನೀಡಿದೆ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಈ ವರ್ಷ ಮಾರ್ಚ್ ತಿಂಗಳಿಂದ ನೀರಿನ ಬೇಡಿಕೆ ಆರಂಭವಾಗಿದ್ದು ಕಂದಾಯ ಇಲಾಖೆ ಇದರ ಜವಾಬ್ದಾರಿ ಹೊತ್ತಿದೆ. ಯಡ್ತರೆ ಗ್ರಾಮದಲ್ಲಿ ಒಟ್ಟು ಮೂರು ಬಾವಿಗಳು ಹಾಗೂ ಐದು ಬೋರ್‌ವೆಲ್‌ಗಳಿವೆ.

    ಪಡುವರಿ ಗ್ರಾಮದ ಬಿಲ್ ಬಾಕಿ: ಕುಡಿಯುವ ನೀರಿನ ಸರಬರಾಜು ಪ್ರತಿ ಗ್ರಾಮ ಪಂಚಾಯಿತಿಗೂ ದೊಡ್ಡ ಸವಾಲು. ಬೇಸಿಗೆ ಅಂತ್ಯದಲ್ಲಿ ಟ್ಯಾಂಕರ್ ಬಳಸಿದರೂ ಸಹ ನೀರಿನ ಮೂಲ ಹುಡುಕಿ ಸರಬರಾಜು ಮಾಡಬೇಕಾಗಿರುವುದು ಗ್ರಾಮ ಪಂಚಾಯಿತಿಗಳ ಜವಬ್ದಾರಿ. ಪಡುವರಿ ಗ್ರಾಮ ಪಂಚಾಯಿತಿಯಲ್ಲಿ ಕಳೆದ ವರ್ಷ 11 ಲಕ್ಷ ರೂ. ವೆಚ್ಚವಾಗಿದೆ. ಆದರೆ 4 ಲಕ್ಷ ರೂ. ನೀರಿನ ಬಿಲ್ ಜಿಲ್ಲಾಡಳಿತ ಕೊಡಲು ಬಾಕಿಯಿದ್ದು ನೀರು ಸರಬರಾಜು ಮಾಡುವವರು ಪಂಚಾಯಿತಿ ಅಧ್ಯಕ್ಷರ ಮನೆ ಎದುರು ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದಾರೆ. ಹೀಗಾಗಿ ನೀರು ಕೊಟ್ಟು ಅಡಕತ್ತರಿಯಲ್ಲಿ ಸಿಕ್ಕಿದ ಪರಿಸ್ಥಿತಿ ಉಂಟಾಗಿದೆ. ಒಟ್ಟು 23 ಗ್ರಾಮ ಪಂಚಾಯಿತಿಗಳಿಗೆ ಇದೇ ರೀತಿ ನೀರಿನ ಬಿಲ್ ಕೊಡಲು ಬಾಕಿ ಇದೆ. ಬೈಂದೂರಿನಲ್ಲಿ ನಡೆದ ಸಂಸದರ ಜನಸಂಪರ್ಕ ಸಭೆಯಲ್ಲಿ ಕೂಡ ಈ ವಿಷಯ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆದಿದ್ದು ಇದುವರೆಗೂ ಹಣ ಪಾವತಿಯಾಗಿಲ್ಲ. ಹೀಗಾಗಿ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಮತ್ತು ಆಡಳಿತ ಮಂಡಳಿಗೆ ಜಿಲ್ಲಾಡಳಿತ ನೀರು ಕುಡಿಸಿದಂತಾಗಿದೆ. ಪಡುವರಿ ಗ್ರಾಮದ ತಾರಾಪತಿ, ಚರ್ಚ್ ರೋಡ್, ದೊಂಬೆ, ಕರಾವಳಿ ಮುಂತಾದ ಕಡೆ ಪ್ರತಿವರ್ಷ ನೀರಿನ ಗೋಳು ಅಂತ್ಯ ಕಂಡಿಲ್ಲ.

    ಯಸ್ತರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ವರ್ಷ ಯಶಸ್ವಿಯಾಗಿ ನೀರು ಪೂರೈಸಲಾಗಿದೆ. ನೀರಿನ ಮೂಲ ಇಲ್ಲದಿರುವುದರಿಂದ ಹೆಚ್ಚಿನ ಸಮಸ್ಯೆ ಉಂಟಾಗುತ್ತದೆ. ಈ ವರ್ಷ ತಹಸೀಲ್ದಾರ್ ನೇತೃತ್ವದಲ್ಲಿ ನೀರು ಸರಬರಾಜು ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ಕೂಡ ನೀರಿನ ಸಮಸ್ಯೆ ಇದೆ.

    ರುಕ್ಕನ ಗೌಡ
    ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಡ್ತರೆ

    ಪಡುವರಿ ಗ್ರಾಮದಲ್ಲಿ ಕಳೆದ ವರ್ಷದ ರೂ. 4 ಲಕ್ಷ ಹಣ ಇದುವರೆಗೆ ಜಿಲ್ಲಾಡಳಿತ ನೀಡಿಲ್ಲ. ಟೆಂಡರ್‌ದಾರರಿಗೆ ಸೂಕ್ತ ಸಮುದಾಯದಲ್ಲಿ ಹಣ ಪಾವತಿಸಬೇಕಾದ ಜವಬ್ದಾರಿ ಗ್ರಾಮ ಪಂಚಾಯಿತಿಗಳದ್ದು. ಈ ರೀತಿಯಾದರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಕಷ್ಟ. ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ಹಾಗೂ ಈ ವರ್ಷ ಸಮರ್ಪಕವಾಗಿ ನೀರು ಪೂರೈಸಬೇಕು.

    ಸದಾಶಿವ ಡಿ.ಪಡುವರಿ
    ಉಪಾಧ್ಯಕ್ಷರು ಗ್ರಾಪಂ ಪಡುವರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts