More

    ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ‘ಯೋಗ’ ಹೆಚ್ಚಳ

    ಅವಿನಾಶ್ ಜೈನಹಳ್ಳಿ ಮೈಸೂರು
    ಒಂಬತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಬಳಿಕ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯೋಗ ಕ್ಷೇತ್ರ ಮತ್ತಷ್ಟು ಪ್ರಜ್ವಲಿಸುತ್ತಿದೆ. ಯೋಗ ಕಲಿಯುವವರ ಸಂಖ್ಯೆ ಯೋಗ ದಿನದ ಬಳಿಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.


    ಯೋಗ ಕಲಿಯಬೇಕು, ಮಕ್ಕಳಿಗೂ ಯೋಗ ಕಲಿಸಬೇಕು ಎಂದು ಪಾಲಕರು ಚಡಪಡಿಸುತ್ತಿದ್ದರೆ, ಯುವಜನರು ದೈಹಿಕ ಮತ್ತು ಮಾನಸಿಕ ಫಿಟ್ನೆಸ್‌ಗಾಗಿ ಯೋಗದತ್ತ ವಾಲಲು ಶುರು ಮಾಡಿದ್ದಾರೆ. ಒಟ್ಟಾರೆ ಸಾರ್ವಜನಿಕರಲ್ಲಿ ಯೋಗದ ಬಗೆಗಿನ ಭಾವನೆ ಬದಲಾಗುತ್ತಿದೆ, ಯೋಗವನ್ನು ಪೂಜ್ಯ ಭಾವನೆಯಲ್ಲಿ ನೋಡಲು ಆರಂಭಿಸಿದ್ದಾರೆ.

    ಮೈಸೂರು ನಗರ ವಿವಿಧ ಸಂಸ್ಕೃತಿ, ಆಚಾರ ವಿಚಾರಗಳನ್ನು ತನ್ನೊಳಗೆ ಹುದುಗಿಸಿಕೊಂಡಿದೆ. ಅನೇಕ ವರ್ಷಗಳಿಂದ ಪ್ರಪಂಚದಾದ್ಯಂತ ‘ಯೋಗ’ದ ಕಂಪನ್ನು ಪಸರಿಸುತ್ತ ಬಂದಿದೆ. ವಿಶ್ವದಾದ್ಯಂತ ಮೈಸೂರು ‘ಯೋಗ ನಗರಿ’ ಎಂದೇ ಪ್ರಖ್ಯಾತಿ ಪಡೆದಿದೆ.

    ಕಳೆದ ವರ್ಷ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅರಮನೆ ಅಂಗಳದಲ್ಲಿ ಯೋಗ ಮಾಡಿದ ಬಳಿಕ ಮೈಸೂರಿನ ಯೋಗ ಪರಂಪರೆ ಪ್ರಪಂಚದಲ್ಲಿ ಮತ್ತಷ್ಟು ಪ್ರಜ್ವಲಿಸಲು ಶುರು ಮಾಡಿತ್ತು. ಕರೊನಾ ಕಾರಣದಿಂದ ಎರಡು ವರ್ಷಗಳ ಕಾಲ ಮನೆಯಲ್ಲೇ ಅಭ್ಯಾಸ ಮುಂದುವರಿಸಿದ್ದ ಯೋಗಪಟುಗಳು ಹಾಗೂ ಆಸಕ್ತರು 2022ರ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾದ ಬಳಿಕ ಮತ್ತೆ ತರಬೇತಿ ಕೇಂದ್ರಗಳ ಮೊರೆ ಹೋಗಲು ಆರಂಭಿಸಿದ್ದರು. ಆಗ ನಿತ್ಯ ಯೋಗ ಕೇಂದ್ರಗಳಿಗೆ ಬರುವವರ ಸಂಖ್ಯೆ ಮೊದಲಿಗಿಂತಲೂ ಶೇ.15ರಷ್ಟು ಹೆಚ್ಚಾಗಿತ್ತು. ಅಷ್ಟೇ ಅಲ್ಲದೆ, ವಿದೇಶಿಗರು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯೋಗ ಗುರುಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಬರಲು ಶುರು ಮಾಡಿದ್ದರು.

    ಇದೀಗ ವಿಶೇಷವಾಗಿ ವಿದೇಶಿಯರ ಜತೆಗೆ ಸ್ಥಳೀಯರೂ ಯೋಗದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ವಿದೇಶಿಗರ ಜತೆಗೆ ಸ್ಥಳೀಯರಿಗೂ ಯೋಗದ ಬಗ್ಗೆ ಆಸಕ್ತಿ ಹೆಚ್ಚುವಂತೆ ಮಾಡಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಯೋಗ ಕೇಂದ್ರಗಳಿಗೆ ಬರುವವರ ಸಂಖ್ಯೆಯೂ ಹೆಚ್ಚುತ್ತಲೇ ಇದೆ.


    ನಿತ್ಯ ಯೋಗವನ್ನು ಎಷ್ಟು ಗಂಟೆ ಮಾಡಬೇಕು? ಏನೆಲ್ಲ ಪ್ರಯೋಜನಗಳಿವೆ? ನಮ್ಮ ಬಡಾವಣೆಯಲ್ಲಿ ಕೇಂದ್ರ ಇದೆಯಾ? ಇತ್ಯಾದಿ ಮಾಹಿತಿಗಳನ್ನು ಆಸಕ್ತರು ವಿಚಾರಿಸುತ್ತಿದ್ದಾರೆ. ಇದೀಗ ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚಾಗಿದೆ. ಯೋಗದಿಂದ ದೈಹಿಕ, ಮಾನಸಿಕ ಸದೃಢತೆ ಸಿಗುತ್ತದೆ ಎಂಬ ಅಭಿಲಾಷೆಯೊಂದಿಗೆ ಹಲವರು ಯೋಗ ಶಿಕ್ಷಕರನ್ನು ಭೇಟಿ ಮಾಡಿ ಅಗತ್ಯ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

    ನಿತ್ಯ 30 ಸಾವಿರ ಜನರಿಂದ ಯೋಗ

    ಮೈಸೂರಿನಲ್ಲಿ ನಿತ್ಯ ಸುಮಾರು 30 ಸಾವಿರ ಜನರು ಯೋಗಾಭ್ಯಾಸ ಮಾಡುತ್ತಿದ್ದಾರೆ. ಕೆಲವು ಬಡಾವಣೆಗಳು ಯೋಗ ಟೌನ್‌ಶಿಪ್‌ಗಳಾಗಿ ಪರಿವರ್ತನೆಯಾಗಿವೆ. ಸದ್ಯ ಕೇಶವಮೂರ್ತಿ, ಶಂಕರನಾರಾಯಣ ಜೋಯಿಸ್, ಬಿಎನ್‌ಎಸ್ ಅಯ್ಯಂಗಾರ್ ಮೈಸೂರಿನಲ್ಲಿರುವ ಹಿರಿಯ ಯೋಗ ಗುರುಗಳಾಗಿದ್ದಾರೆ. ಜತೆಗೆ ರಾಘವೇಂದ್ರ ಪೈ, ಡಾ.ಗಣೇಶ್‌ಕುಮಾರ್, ಶ್ರೀಹರಿ, ಅನಂತು, ಶಶಿಕುಮಾರ್, ಎಂ.ಎಸ್.ರಮೇಶ್‌ಕುಮಾರ್, ಎಚ್.ಟಿ.ಭಾಸ್ಕರ್, ಗೀತಾ ಕುಮಾರ್ ಸೇರಿದಂತೆ ಅನೇಕ ಹಿರಿಯರು ಯೋಗ ಪಸರಿಸುವ ಕೆಲಸ ಮಾಡುತ್ತಿದ್ದಾರೆ. ವಿವೇಕಾನಂದ ಯೋಗ ಎಜುಕೇಷನ್ ಮತ್ತು ರಿಸರ್ಚ್ ಸಂಸ್ಥೆ, ಅಷ್ಟಾಂಗ ಯೋಗ ವಿದ್ಯಾಲಯ, ಹಿಮಾಲಯ ಯೋಗ ಫೌಂಡೇಷನ್, ಮೈಸೂರು ಯೋಗ ಶಿಕ್ಷಣ, ಮಾರುತಿ ಯುವ ಕೇಂದ್ರ, ಜಿಎಸ್‌ಎಸ್ ಯೋಗ ಫೌಂಡೇಷನ್, ಭಾರತ್ ಸ್ವಾಭಿಮಾನಿ ಟ್ರಸ್ಟ್, ಬಾಬಾ ರಾಮದೇವ್ ಯೋಗ, ಪತಂಜಲಿ ಸೇರಿದಂತೆ ನೂರಾರು ಯೋಗ ಕೇಂದ್ರಗಳಿದ್ದು, ಯೋಗ ಪ್ರಚಾರ ಮಾಡುತ್ತಿವೆ.


    ವರ್ಚುವಲ್ ಯೋಗಕ್ಕೆ ಡಿಮಾಂಡ್

    ಮೈಸೂರಿನಲ್ಲಿ ವಿದೇಶಿಗರು ಸಾಕಷ್ಟು ಸಂಖ್ಯೆಯಲ್ಲಿ ಯೋಗ ಕಲಿಯಲು ಬರುತ್ತಾರೆ. ಯುಎಸ್, ಕತಾರ್, ದುಬೈ, ಚೀನಾ, ಬ್ರಿಟನ್‌ನಿಂದಲೂ ಸಾಕಷ್ಟು ಜನ ಯೋಗ ಕಲಿತು ತಮ್ಮ ದೇಶಕ್ಕೆ ಹಿಂದಿರುಗಿದ್ದಾರೆ. ಇಂದಿಗೂ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ವಿದೇಶಿಗರು ಮೈಸೂರಿನಲ್ಲಿ ಯೋಗ ಕಲಿಕೆಯಲ್ಲಿ ತೊಡಗಿದ್ದಾರೆ. ಇದೀಗ ಕೆಲವು ದೇಶದ ನಾಗರಿಕರು ಆನ್‌ಲೈನ್ ಮೂಲಕ ನಿತ್ಯ ಯೋಗ ಕಲಿಯುತ್ತಿದ್ದಾರೆ. ಲಿಂಕ್ ಮೂಲಕ ಕುಳಿತ ಜಾಗದಿಂದಲೇ ಯೋಗಾಭ್ಯಾಸ ಮಾಡುತ್ತಿರುವುದು ವಿಶೇಷ.


    8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅರಮನೆ ಅಂಗಳದಲ್ಲಿ ಯೋಗ ಮಾಡಿದ ಬಳಿಕ ಮೈಸೂರಿನ ಯೋಗ ಪರಂಪರೆ ಪ್ರಪಂಚದಲ್ಲಿ ಮತ್ತಷ್ಟು ಪ್ರಜ್ವಲಿಸಲು ಶುರು ಮಾಡಿತ್ತು. ಇದೀಗ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಬಳಿಕವೂ ಯೋಗ ಕಲಿಯುವವರು ಹಾಗೂ ಅಭ್ಯಾಸ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕರಿಗೆ ಯೋಗದ ಬಗೆಗಿನ ಭಾವನೆ ಬದಲಾಗುತ್ತಿದ್ದು, ಯೋಗವನ್ನು ಪೂಜ್ಯ ಭಾವನೆಯಲ್ಲಿ ನೋಡಲು ಆರಂಭಿಸಿದ್ದಾರೆ. ವಿದೇಶಿಗರಿಂದ ವರ್ಚುವಲ್ ಯೋಗಕ್ಕೂ ಡಿಮಾಂಡ್ ಬಂದಿದೆ. ಯೋಗ ದಿನ ಕಾರ್ಯಕ್ರಮಕ್ಕೆ ಸರ್ಕಾರ, ಜಿಲ್ಲಾಡಳಿತ, ಅಧಿಕಾರಿಗಳು ಹೆಚ್ಚಿನ ಸಹಕಾರ ನೀಡಿದ್ದಾರೆ.
    ಡಾ.ಪಿ.ಎನ್.ಗಣೇಶ್ ಕುಮಾರ್
    ಕಾರ್ಯದರ್ಶಿ, ಯೋಗ ಫೆಡರೇಷನ್ ಆಫ್ ಮೈಸೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts