More

  ಎಲ್ಲಾ ಒಂದೇ ಅತಿರೇಕದ ಅನರ್ಥಗಳ ಬಹಿರಂಗ

  ಶಿಲ್ಪಿಗೆ ಯಾವ ಕಲ್ಲಿಂದ ಯಾವ ಮೂರ್ತಿ ಮಾಡಬೇಕೆಂಬುದು ಗೊತ್ತಿರುತ್ತದೆಯಷ್ಟೆ. ಕಲ್ಲಿನಲ್ಲಿ ಜಾತಿಯುಂಟಾದರೂ, ವಿಗ್ರಹ ತಯಾರಾದ ಮೇಲೆ ಅವನೇ ಪೂಜಾರಿಯಾಗಬೇಕೆಂಬ ಹಠ ಸರಿಯಲ್ಲ. ಆಗಮ ಓದಿದ ವಿದ್ವಾಂಸರು ವಿಗ್ರಹ ತಯಾರಿಸುವುದಿಲ್ಲ. ಅವರ ಕಸುಬಲ್ಲ ಅದು. ಅವರವರ ವೃತ್ತಿಯಲ್ಲಿ ಅವರವರು ಶ್ರೇಷ್ಠ.

  ಎಲ್ಲಾ ಒಂದೇ ಅತಿರೇಕದ ಅನರ್ಥಗಳ ಬಹಿರಂಗತಲೆಹರಟೆಗಳು ಹೊಸವೂ ಅಲ್ಲ, ವ್ಯಾಖ್ಯಾನಗಳೂ ಹೊಸವಲ್ಲ, ನಾನು ಈ ಬಗ್ಗೆ ಬರೆಯುತ್ತಿರುವುದೂ ಮೊದಲಲ್ಲ. ಸಂದರ್ಭಗಳು ಮಾತ್ರ ಹೊಸ ಹೊಸವು. ಟಿ.ಎಂ.ಕೃಷ್ಣ ಎಂಬ ಖ್ಯಾತ ಕರ್ನಾಟಕ ಸಂಗೀತ ವಿದ್ವಾಂಸರು, (ದಿ) ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರ ಶಿಷ್ಯರು, ಹಲ ಕೆಲವು ವರ್ಷಗಳಿಂದ ವಿವಾದಗಳನ್ನು ಎಬ್ಬಿಸುತ್ತ, ಕುಖ್ಯಾತಿಯ ಒಂದು ತುದಿಯಲ್ಲಿರುತ್ತ ಇವರ ವಾದ ಎಲ್ಲಿ ಹೋಗಿ ತಲುಪುತ್ತದೋ ಕಾಣೆಯಾಗಿದೆ. ಕ್ರೖೆಸ್ತರು ತ್ಯಾಗರಾಜರ ಕೀರ್ತನೆಗಳಲ್ಲಿ ಶ್ರೀರಾಮನ ಬದಲಿಗೆ ಏಸುವನ್ನು ತೂರಿಸಿ, ಕೀರ್ತನೆಗಳನ್ನೇ ಹೈಜಾಕ್ ಮಾಡಿ, ಕೆಲವು ವಿದುಷಿ, ವಿದ್ವಾಂಸರ ಕೈಲಿ ಹಾಡಿಸಿ ಛೀಮಾರಿಗೊಳಗಾದರು. ಈ ಗಾಯಕರು ಆಮೇಲೆ ಕ್ಷಮೆ ಕೇಳಿದರು. ಜನಪ್ರಿಯತೆ ಈಗ ಬದಲಾಗಿದೆ. ‘ಏಸು=ರಾಮ=ಕೃಷ್ಣ’ ಎಂಬ ಸಮೀಕರಣದಲ್ಲಿ ಮಿಷನರಿಗಳು ಮತಾಂತರಕ್ಕೆ ತೂರಿಸಿದ್ದು ಬಯಲಾದಾಗ, ಈ ಟಿ.ಎಂ. ಕೃಷ್ಣ ಅದನ್ನು ಸಮರ್ಥಿಸಿ, ತಿಂಗಳಿಗೊಂದು ಕೀರ್ತನೆಯನ್ನು ಅಲ್ಲಾಹು ಮೇಲೂ, ಕ್ರಿಸ್ತನ ಮೇಲೂ ಬರೆದು ಹಾಡುವುದಾಗಿ ಘೋಷಿಸಿ, ವಿವಾದ ಎಳೆದುಕೊಂಡರು. ಅಲ್ಲಿ ಅವರಿಗೆ ಸಂದಿದ್ದ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿ ಎಷ್ಟು ಪರಿಣಾಮಕಾರಿಯಾಗಿತ್ತೋ, ಹೇಳಲು ಸಾಧ್ಯವಿಲ್ಲ.

  ಇಸ್ಲಾಂನಲ್ಲಿ ಸಂಗೀತ ನಿಷೇಧವಿದೆ. ಕ್ರೖೆಸ್ತರಲ್ಲಿ ‘ಕ್ಯಾರಲ್ಸ್’ ಬಿಟ್ಟರೆ ಭಾರತೀಯ ಸ್ವರವಿಜ್ಞಾನ, ಸ್ವರರಾಗ ಸಮ್ಮೇಳನ, ಕೀರ್ತನೆಗಳನ್ನು ಯಾರೂ ಕೇಳಿಲ್ಲ. ನೆಹ್ರೂ ಸ್ಮರಣಾರ್ಥ ಒಂದು ಸಂಗೀತ ಕಛೇರಿಯಲ್ಲಿ ಯಮುನಾತೀರದಲ್ಲಿ ಜೇಸುದಾಸರು ಅಲ್ಲಾ, ಏಸು ಮೇಲೆ ಹಾಡಿದ್ದನ್ನು ನಾನೇ ಕೇಳಿದ್ದೇನೆ. ಇವರು (ದಿ) ವೈದ್ಯನಾಥ ಭಾಗವತರ ಶಿಷ್ಯರು. ಗುರುವಿನ ಔದಾರ್ಯಕ್ಕೆ ಇದು ಪ್ರೀಮಿಯಂ! ಗುರುವಾಯೂರು ದೇವಳದಲ್ಲಿ ಪ್ರವೇಶವಿಲ್ಲದ್ದಕ್ಕೆ ವ್ಯಥೆ, ಆಕ್ಷೇಪ! ಆದರೆ, ಇವರೇನು ಹಠವಾದಿಯೋ, ರಾಜಕಾರಣಿಯೋ ಅಲ್ಲ. ಅಪಪ್ರಚಾರದ ಅನವಶ್ಯಕತೆಯ ಸುಳಿಗೆ ಸಿಕ್ಕ ದುರ್ದೈವಿ. ಹಿಂದೂಸ್ಥಾನೀ ಸಂಗೀತ ರಾಗ ಪ್ರಧಾನ. ಕರ್ನಾಟಕ ಸಂಗೀತವೋ ಕೀರ್ತನಾ ಪ್ರಧಾನ. ಇಲ್ಲಿ ಭಕ್ತಿಗೆ ಕೇಂದ್ರ ಭಾರತೀಯ ದೇವತಾ ಮಂಡಲ. ಅಲ್ಲಿ ಮತಾಂತರಿಗಳ ನುಸುಳು ಒಂದು ರೀತಿಯ ಅರ್ಬನ್ ನಕ್ಸಲಿಸಂ ಆಗದೇ? ಯೋಚಿಸಿರಿ!

  ಟಿ.ಎಂ.ಕೃಷ್ಣ ಈಗ ಒಂದು ಪುಸ್ತಕ ಬರೆದದ್ದು, ಚೆನ್ನೈನ ಅಡ್ಯಾರ್​ನ ಕಲಾಕ್ಷೇತ್ರದಲ್ಲಿ ಲೋಕಾರ್ಪಣೆಗೆ ಸಿದ್ಧವಾದದ್ದು, ಕಾರ್ಯಕ್ರಮ ರದ್ದಾದದ್ದು ಇತ್ತೀಚಿನ ವರದಿ. ಇದು ರುಕ್ಮೀಣಿದೇವಿ ಅರುಂಡೇಲ್ ಎಂಬುವರು ಸ್ಥಾಪಿಸಿದ ಮಹಾಸಂಸ್ಥೆ. ಅಲ್ಲಿ ನಮ್ಮ ಮೈಸೂರು ವಾಸುದೇವಾಚಾರ್ಯರೂ, ಟೈಗರ್ ವರದಾಚಾರ್ಯರೂ, ಮೈಸೂರು ಆಸ್ಥಾನ ಅವನತಿಯ ಕಾಲದಲ್ಲಿ ಆಶ್ರಯ ಪಡೆದು ಸಮಗ್ರ ವಾಲ್ಮೀಕಿ ರಾಮಾಯಣವನ್ನು ಶ್ರುತಿ, ರಾಗ, ತಾಳಗಳಿಗೆ ಅಳವಡಿಸಿ, ನೃತ್ಯಕ್ಕೆ ಒದಗುವಂತೆ ಪರಿಶ್ರಮಿಸಿದ್ದು ವಿಶ್ವದಾಖಲೆ. ಅಲ್ಲಿ ಟಿ.ಎಂ.ಕೃಷ್ಣ ಮಾಡಹೊರಟದ್ದೇನು? ‘ಮೃದಂಗವಾದ್ಯವನ್ನು ಗೋವಿನ ಚಕ್ಕಳದಿಂದ ತಯಾರಿಸಲಾಗುತ್ತದೆ. ತಯಾರಕರು ಚಮ್ಮಾರರು. ಮೃದಂಗ ವಿದ್ವಾಂಸರು ಬ್ರಾಹ್ಮಣರು. ಅದನ್ನು ಮುಟ್ಟಿ ನುಡಿಸಬಹುದಾದದ್ದು ಗೌರವಾನ್ವಿತವಾದರೆ ಈ ಚಮ್ಮಾರರಿಗೂ ಅದೇ ಗೌರವ ಸಲ್ಲಬೇಕು’ ಎಂಬ ಬಗೆಯ ಸಮತಾವಾದದ ಮಂಡನೆ! ಅವರವರ ವೃತ್ತಿಗೆ ಯೋಗ್ಯವಾದ ಗೌರವ ಇದ್ದೇ ಇರುತ್ತದೆ. ಅಲ್ಲಿ ಸಮ-ವಿಷಮ ಪ್ರಶ್ನೆ ಸಲ್ಲದು, ಎಂಬುದು ನಡು ನಿಲುವು. Neither equal nor unequal ಎಂಬುದು ಭಾರತೀಯ ನಿಲುವು. ಸ್ತ್ರೀ ಸಮಾನತೆಯಾಗಲಿ, ಯಾವುದೇ ವೃತ್ತಿ ಸಮಾನತೆಯಲ್ಲಾಗಲಿ ‘ಸಮ-ವಿಷಮ’ ಪ್ರಶ್ನೆ ಏಳುವುದಿಲ್ಲ. ಏಳಬಾರದು ಎಂದು. ‘ಬೀಯಿಂಗ್ ಡಿಫರೆಂಟ್’ ಎಂಬುದು ಬೇರೆ, ‘ಬೀಯಿಂಗ್ ಅನ್​ಇಕ್ವಲ್’ ಎಂಬುದೇ ಬೇರೆ. ಒಂದೇ ಮುಖದಲ್ಲಿ ಮೂಗು, ಕಣ್ಣು, ಕಿವಿ, ನಾಲಗೆ, ಮಿದುಳು ಇರುತ್ತ, ಒಂದರ ಕಾರ್ಯ ಇನ್ನೊಂದು ಮಾಡದೇ ಇರುವುದೂ ಅನುಭವದಲ್ಲೇ ಇದೆ. ಅವುಗಳ ಸ್ಥಾನ ಅವಕ್ಕೆ. ಬೇಕಾದ್ದು ಸಹಯೋಗ, ಸಹಕಾರ. ‘ಕಿತ್ತಳೆ, ಬಾಳೆ, ನೇರಳೆ, ಸೇಬು ಯಾವುದು ಹೆಚ್ಚು ಸಿಹಿ?’ ಎಂಬುದು ಮೂಢರ ಪ್ರಶ್ನೆ. ಅವು ಬರುವ ಕಾಲಗಳೂ ಬೇರೆ ಬೇರೆ ಎಂಬುದು ಋತುಧರ್ಮದಲ್ಲಿದೆ. ‘ಕೀರ್ತನಕಾರರು ಯಾರು ಹೆಚ್ಚು?’ ಇದೂ ಮೂಢಪ್ರಶ್ನೆ. ತಮಿಳು, ತೆಲುಗು, ಕನ್ನಡ, ಹಿಂದಿ- ಯಾವ ಭಾಷೆಯೂ ಪ್ರಶಸ್ತಿ, ಉಪಯುಕ್ತ. ಹಿಂದೆ ಒಬ್ಬ ತಮಿಳು ಗಾಯಕರು, ‘ಕರ್ನಾಟಕ’ ಎನ್ನಬಾರದು’ ‘”casmatic’ ಎನ್ನಬೇಕು, ಏಕೆಂದರೆ ಕನ್ನಡ ನಾಡಿಗೆ ಈ ಸಂಗೀತ ಸೀಮಿತವಲ್ಲ ಎಂದು ಸಭೆಯಲ್ಲೇ ಆಗ್ರಹ ಮಾಡಿದರು. ನಾನೊಂದು ಉಪನ್ಯಾಸದಲ್ಲಿ ಉತ್ತರಿಸಿದೆ. ‘ಸ್ವಾಮಿ, ಕರ್ನಾಟಕ ಸಂಗೀತದಲ್ಲಿ ಎಷ್ಟೊಂದು ರಾಗಗಳೊಡನೆ ಕರ್ನಾಟಕ ಬೆಸೆದುಕೊಂಡಿದೆ? ‘ಕನ್ನಡ’ ಎಂಬ ರಾಗವೇ ಇದೆಯಲ್ಲ? ‘ಇಂತ ಕರಟೆ ಕಾವಲನಾ’ ಎಂದು ತ್ಯಾಗರಾಜರ ಕೃತಿ ಇದೆಯಲ್ಲ? ‘ಕನ್ನಡ ಗೌಳ’ ಇದೆಯಲ್ಲ? ‘ಕರ್ನಾಟಕ ಬೇಹಾಗ-‘ನವರಸ ಕನ್ನಡ’ ಇದೆಯಲ್ಲ? ಬೇರೆ ದೇಶಗಳ-ಸೌರಾಷ್ಟ್ರ, ಶುದ್ಧ ಬಂಗಾಳ ಹೆಸರುಗಳೋ? ತಮಿಳು ಹೆಸರಲ್ಲಿ ಒಂದಾದರೂ ರಾಗ ಇದೆಯೇ?’ ಅಂತ. ನನ್ನದು ಮಾತೃಭಾಷೆ ತಮಿಳು. ಆದರೆ ನಾನು ಮೊಂಡನಲ್ಲ. ಎಲ್ಲ ಭಾಷೆಗಳನ್ನೂ ಗೌರವಿಸುವವನು.

  ಈ ಟಿ.ಎಂ.ಕೃಷ್ಣ ಅವರ ವಾದದ ತರ್ಕ ಎಲ್ಲಿ ಹೋಗಿ ಮುಟ್ಟುತ್ತದೆ ತೋರಿಸುತ್ತೇನೆ. ‘ಇಟ್ಟರೇ ಸಗಣಿಯಾದೆ, ತಟ್ಟಿದರೆ ಕುರುಳಾದೆ, ಸುಟ್ಟರೇ ನೊಸಲಿಗೆ ವಿಭೂತಿಯಾದೇ…’ ಎಂಬ ಗೋವಿನ ಹಾಡು ನನಗೆ ಪ್ರೖೆಮರಿ ಓದಿನಲ್ಲಿ ಪಠ್ಯವಿತ್ತು. ಅಲ್ಲಿ ಗೋ ಚರ್ಮ ಮೃದಂಗವೂ ಆಗುತ್ತೆ, ಚಪ್ಪಲಿಯೂ ಆಗುತ್ತೆ ಎಂದು ಹೇಳಿ, ಗೋವು ಝಾಡಿಸುತ್ತದೆ. ‘ನೀ ನಾರಿಗಾದೆಯೋ ಮಾನವಾ’ ಎಂಬುದು ಕರುಳು ಹಿಂಡುವ ಪಲ್ಲವಿ. ಗೋ ಚರ್ಮದಿಂದ ಮೃದಂಗವಾಗುವುದು ಹೊಸದಾದ ಸಂಶೋಧನೆಯಲ್ಲ. ಗೋವನ್ನು ‘ಕೊಂದು’ ಮೃದಂಗ ಮಾಡಿ ಎಂದು ಶಾಸ್ತ್ರ ಹೇಳುವುದಿಲ್ಲ. ಗೋವು ಸತ್ತರೂ ಉಪಯೋಗ. ಹಾಗೆ. ತೆಂಗು-ನಾರು, ಗರಿ-ನೀರು, ಕಾಯಿ, ಕೊಬ್ಬರಿ, ಎಣ್ಣೆ, ಸೊರಿಗೆ, ರೀಪು (ಪಟ್ಟಿ) ಎಲ್ಲಕ್ಕೂ ಬರುತ್ತದೆ, ಅಡಕೆಯಂತೆ. ಇದೆಲ್ಲ ಪ್ರಶಂಸಾ ಮಾತುಗಳು. ಕೆಸರಿನಲ್ಲಿ ಕಮಲ ಹೂವು ಹುಟ್ಟುತ್ತದೆಯಾಗಿ, ಕಮಲವೂ ಒಂದೇ ಕೆಸರೂ ಒಂದೇ ಎಂಬ ಸಮತಾವಾದ ಹಾಸ್ಯಾಸ್ಪದ. ಕೆಲವು ವಿಷಯಗಳಲ್ಲಿ ಮೂಲ ನೋಡಬಾರದು ಎಂಬುವುದು ಈ ವಕ್ರವಾದ, ವಕ್ರದೃಷ್ಟಿಯ ನಿವಾರಣೆಗಾಗಿಯೇ.

  ಸ್ತ್ರೀಯರಲ್ಲಿ ಎಲ್ಲರೂ ತಾಯಿ ಆಗುವುದಿಲ್ಲ. ಎಲ್ಲರೂ ಹೆಂಡಿರೋ, ಮಕ್ಕಳೋ ಆಗಲಾರರು. ಬೇರೆ ಬೇರೆ ಸಮತೆಯ ಪ್ರಶ್ನೆ-ಕಣ್ಣಿನಲ್ಲಿ ಇರಬೇಕು. ಕಾನೂನಿನಲ್ಲಿ ಇರಬೇಕು. ಗೌರವದಲ್ಲಿ ಇರಬೇಕು. ಒಂದು ಸಂಗೀತ ಕಛೇರಿಗೆ ಮೃದಂಗವಾದಕನ ಬದಲು ಮೃದಂಗ ತಯಾರಕನನ್ನು ಇಡಲು ಸಾಧ್ಯವೇ? ಹಾಮೋನಿಯಂ ತಯಾರಕರೂ, ವೀಣೆ, ತಂಬೂರಿ, ಸರೋದ್, ಪಿಟೀಲು ತಯಾರಕರೂ ಇರುತ್ತಾರೆ. ಅಲ್ಲಿ ತಯಾರಕರ ಜಾತಿ ಮುಖ್ಯವಾಗುವುದಿಲ್ಲ. ಜಾತಿ ಪ್ರಶ್ನೆಯನ್ನು ಟಿ.ಎಂ.ಕೃಷ್ಣ ಎಳೆ ತಂದುದು ಕುಚೋದ್ಯ, ಕುಹಕ ಮತ್ತು ಪ್ರಾಯಶಃ ರಾಜಕೀಯ ಪ್ರೇರಿತವಾದದ್ದು ಎಂದು ವಿಷಾದದಿಂದ ಬರೆಯಬೇಕಾಗಿದೆ. ಕೃಷ್ಣ ಅವರ ಖುದ್ದು ಗಾಯನವನ್ನೂ, ಯು-ಟ್ಯೂಬ್​ನ ಅವತರಣಿಕೆಗಳನ್ನೂ ಕೇಳಿ ಆನಂದಿಸಿದ್ದ ನನಗೆ ‘ಇಂಥವರಿಗೆ ಈ ದುರ್ಗತಿ ಬರಬಹುದೇ?’ ಎಂಬ ಕೊರತೆ ಕಾಡುತ್ತದೆ. ಶಿಲ್ಪಿಗೆ ಯಾವ ಕಲ್ಲಿಂದ ಯಾವ ಮೂರ್ತಿ ಮಾಡಬೇಕೆಂಬುದು ಗೊತ್ತಿರುತ್ತದೆಯಷ್ಟೆ. ಕಲ್ಲಿನಲ್ಲಿ ಜಾತಿಯುಂಟಾದರೂ, ವಿಗ್ರಹ ತಯಾರಾದ ಮೇಲೆ ಅವನೇ ಪೂಜಾರಿಯಾಗಬೇಕೆಂಬ ಹಠ ಸರಿಯಲ್ಲ. ಆಗಮ ಓದಿದ ವಿದ್ವಾಂಸರು ವಿಗ್ರಹ ತಯಾರಿಸುವುದಿಲ್ಲ. ಅವರ ಕಸುಬಲ್ಲ ಅದು. ಅವರವರ ವೃತ್ತಿಯಲ್ಲಿ ಅವರವರು ಶ್ರೇಷ್ಠ. ಸಮಾಜದಲ್ಲಿ ಗೌರವ ವೃತ್ತಿ ಪರಿಣತಿಯಿಂದ ಬರುತ್ತದೆ. ನಾಟಕ, ಸಿನಿಮಾ, ಅಭಿನಯಗಳಲ್ಲಿ ಜಾತಿ ಮುಖ್ಯವಲ್ಲ. ಟ್ಯಾಲೆಂಟ್ ಎಂಬ ಪ್ರತಿಭೆಯೇ ಮುಖ್ಯ. ಈಚೆಗೆ ನಟನಟಿಯರ ಆಯ್ಕೆಯಲ್ಲೂ ‘ಜಾತಿ’ ಕಾಣಿಸಿಕೊಳ್ಳುತ್ತಿದೆ ಎಂದು ಕೇಳಿದ್ದೇನೆ. ಎಡಪಂಥೀಯಯರ, ಸಮತಾವಾದದ ಅಮಲಿನ ‘ಅಮಲ್ದಾರರು’ ಎಬ್ಬಿಸಿದ ಹುಯಿಲು ಸಮಾಜವನ್ನೇ ಸುಡುತ್ತಿದೆ, ರಾಯರೇ? ಟಿ.ಎಂ.ಕೃಷ್ಣರ ಕೊಂಕು, ಮುಳ್ಳು ಎಲ್ಲಿದೆ ಬಲ್ಲಿರಾ? ‘ಗೋವಧೆ ನಿಷೇಧ ಬೇಕೆನ್ನುತ್ತೀರಿ, ಗೋಪೂಜೆ ಬೇಕೆನ್ನುತ್ತೀರಿ, ಗೋಚರ್ಮದಿಂದ ವಾದ್ಯ ತಯಾರಿಸುವವರು ಏಕೆ ನಿಕೃಷ್ಟರು?’ ಎಂಬುದು. ‘ನಿಕೃಷ್ಟರು ಎಂದವರಾರಯ್ಯ?’

  ಎಲ್ಲ ವೃತ್ತಿಗಳಲ್ಲೂ ಪರಿಣತರು, ಒಂದೇ ಪ್ರತಿಭೆಯುಳ್ಳವರಿರಲಾರರು! ಅಲ್ಲಿ ಆಯ್ಕೆ ಜಾತಿ ಪ್ರಯುಕ್ತ ಇರುವುದಿಲ್ಲ. ಸಂಗೀತ ಪ್ರಪಂಚದಲ್ಲಿ ‘ಮನೋಧರ್ಮ’ ಎಂಬುದಿರುತ್ತದೆ. ನುಡಿಸಾಣಿಕೆಯಲ್ಲಿ ‘ಹದ’ವಿರುತ್ತದೆ. ವೀಣೆಗೆ ಮೃದಂಗ ನುಡಿಸುವವನ ಕೈ ಮೃದು, ಹದವಾಗಿರಬೇಕು. ಕರ್ಕಶ ಕಂಠದವನಿಗೆ ನಾಲ್ಕಾರು ತಾಳವಾದ್ಯಗಳು ಬೇಕಾದರೆ, ಅದು ತರ್ಕಯುಕ್ತವಲ್ಲವೇ? ದೊರೆಸ್ವಾಮಿ ಅಯ್ಯಂಗಾರರಂಥವರು ಮೃದಂಗವಾದನ ಸಹವಾದ್ಯಕ್ಕೆ ‘ಇಂಥವರೇ ಬೇಕು’ ಎನ್ನುತ್ತಿದ್ದರು. ಚೌಡಯ್ಯನವರ ಪಿಟೀಲು ನಾದವೇ ಬೇರೆ-ಏಳು ತಂತಿಯದು! ಒಂದು ಕಛೇರಿಯಲ್ಲಿ ಮಧುರೈಮಣಿ ಅಯ್ಯರ ಕೋಮಲ ಕಂಠಕ್ಕೆ, ತೀರ ಕೆಳಗಿನ ಶ್ರುತಿಗೆ, ಚೌಡಯ್ಯ ಸಾಥಿ ಹೆಚ್ಚಾದಾಗ ಮೈಸೂರಲ್ಲಿ ಒಬ್ಬರು ಶ್ರೋತೃಗಳು, ‘ಸ್ವಾಮಿ ನಿಮ್ಮ ಕೈ ಹೆಚ್ಚಾಯ್ತು’ ಎಂದಾಗ, ಚೌಡಯ್ಯ ಪಿಟೀಲು ಇಟ್ಟು ಎದ್ದು ಹೋದರು. ಅಲ್ಲಿ ‘ಜಾತಿ’ ಇರಲಿಲ್ಲ. ಟಿ.ಆರ್.ಮಹಾಲಿಂಗಂ ಕೊಳಲುವಾದನಕ್ಕೆ ಆರ್​ಆರ್ ಕೇಶವಮೂರ್ತಿಯವರ ಸಾಥಿ ಸರಿಯಾಗದೆ, ಮಹಾಲಿಂಗಂ ಅಪಮಾನಿಸಿದಾಗ, ಮೂರ್ತಿ ಎದ್ದೇ ಹೋದರು. ಸುಬ್ಬಲಕ್ಷ್ಮೀ, ವಸಂತಕುಮಾರಿಯಂತಹವರು ತಾವೇ ಆರಿಸಿದ ಸಾಥಿಗಳನ್ನು ಕರೆತರುತ್ತಿದ್ದರು. ಅಲ್ಲಿ ಹೊಂದಾಣಿಕೆ ಪ್ರಶ್ನೆ ಹೊರತು ಜಾತಿ ಇರಲಿಲ್ಲ.

  ನಾನು ಕಾಲೇಜ್ ಪ್ರಾಧ್ಯಾಪಕನಾಗಿದ್ದಾಗ ಒಮ್ಮೆ ಶೇಕ್ಸ್​ಪೀಯರಿನ “The merchant of venice’ನಾಟಕದ ಟ್ರಯಲ್ ಸೀನ್ ಎಂಬ shylock ಭಾಗವನ್ನು ಆಡಿಸಿದೆ. ವಿದ್ಯಾರ್ಥಿಗಳನ್ನು ಪೋರ್ಷಿಯಾ, ಬೆಸ್ಸಾನಿಯೋ, ಆಂಟೋನಿಯೋ, ಜೆಸ್ಸಿಕಾ ಪಾತ್ರಗಳಿಗೆ ಆಯ್ಕೆ ಮಾಡುವಾಗ ಆಂಗ್ಲ ಶುದ್ಧ ಉಚ್ಚಾರ ಮುಖ್ಯವಿತ್ತು. ಒಬ್ಬ ಧನಿಕ ವಿದ್ಯಾರ್ಥಿಗೆ ವಾಕ್ ಶುದ್ಧಿ ಸರಿಬರದೆ ನಾನು ಸೇರಿಸದಿದ್ದಾಗ ಅವನು ಕಲಹ ಮಾಡಿದ. ಅಲ್ಲಿ ಪ್ರತಿಭೆ ಬೇಕಿತ್ತು, ್ಞ್ಟ್ಟಚಠಿಜಿಟ್ಞ ಅಲ್ಲ. ಆಗ ಇಂಗ್ಲೆಂಡಿನಿಂದ ಆ ಸರ್ಕಾರ ಕಳುಹಿದ್ದ ಒಬ್ಬ ಯುವ ಬೋಧಕ ನನ್ನೊಡನೆ ಇದ್ದು-“you should be proud of your students’ ಎಂದ. ಈ ಪ್ರಶಂಸೆ ತಪು್ಪವ ಆಯ್ಕೆ ನಾನು ಮಾಡಿದ್ದರೆ? ಕಾಲೇಜ್ ದಿನಗಳಲ್ಲಿ ನನ್ನ ಜಾತಿ ಯಾರಿಗೂ ಮುಖ್ಯವಿರಲಿಲ್ಲ. ವಿದ್ಯಾರ್ಥಿಗಳು ಗಮನಿಸಲೂ ಇಲ್ಲ. ಸ್ಟೇಜಿನ ಮೇಲೆ ನಾನು ಮೇಷ್ಟ್ರು, ಶ್ರೋತೃಗಳು ವಿದ್ಯಾರ್ಥಿಗಳು ಅಷ್ಟೇ. ಹಾಗೆ ಸಂಗೀತ ಪ್ರಪಂಚದಲ್ಲೂ ಪ್ರತಿಭೆ ಮುಖ್ಯ. ‘ಬ್ರಾಹ್ಮಣರಾದ ಗಾಯಕರು ಇತರರನ್ನು ತುಳಿದರು’ ಎಂಬ ಟಿ.ಎಂ.ಕೃಷ್ಣರ ಆಕ್ಷೇಪದ ದೃಷ್ಟಿ ಸರಿಯಿಲ್ಲ.

  ಅಲ್ಲಿ ಸಾಧನೆ, ಇಂಗಿತ, ಸಹಕಾರ, ಅಹಂಕಾರಶೂನ್ಯ ಅನುಸರಣೆ ಮುಖ್ಯ. ಕೊಳಲು ಬಿದರಿನಿಂದಾದರೂ, ಸಂಗೀತದಲ್ಲಿ ಅದು ‘ಬಿದಿರು’ ಎನಿಸುವುದಿಲ್ಲ. ಶ್ರೀಕೃಷ್ಣನ ಕೊಳಲು, ಸ್ವರದೇವೀ ಸರಸ್ವತಿಯ ವೀಣೆ, ನಂಬಿಕೇಶ್ವರನ ಮೃದಂಗ, ನಾರದನ ಗಾಯನ, ಶಿವನ ಡಮರುಗ-ಇಲ್ಲೆಲ್ಲ ಜಾತಿ ಹುಡುಕುತ್ತೀರಾ? ಜಾತಿಜಗಳ ಹಚ್ಚಿದ ಎಡಪಂಥೀಯರು ಈಗ ಸಂಗೀತ ಪ್ರಪಂಚಕ್ಕೂ ಕಳಂಕ ತರುತ್ತಿದ್ದಾರೆ. ನಾವು ಎಚ್ಚರವಿರಬೇಕು. ಕರ್ನಾಟಕದಲ್ಲಿ ಕನಕರನ್ನು, ಪುರಂದರರ ವಿರುದ್ಧ ಎತ್ತಿ ಕಟ್ಟಲಾಯ್ತು. (ದಿ) ಸಂಶೋಧಕರೊಬ್ಬರು ‘ಕನಕರ ಹಾಡುಗಳನ್ನು ಪುರಂದರರು ಕದ್ದರು’ ಎಂದು ವಾದ ಮಂಡಿಸಿದರು. ಹಾಗೇ, ‘ಪಂಪನನ್ನು ಬ್ರಾಹ್ಮಣರು ಕೊಂದರು’ ಎಂದೂ ಬರೆದರು. ಎಂಥ ಮನಸ್ಸಯ್ಯ? ಈಗ ಜಾತಿಯನ್ನು ಎಳೆದು ಮುಂದು ಮಾಡಿ ದೊಡ್ಡವರಾಗುವವರು ಹೆಚ್ಚುತ್ತಿದ್ದಾರೆ. ಅದರ ಹಿಂದೆ ವ್ಯಾಪಕವಾದ ‘ತುಕ್ಡೇ ತುಕ್ಡೇ’ ಗ್ಯಾಂಗು ಇದೆ, ಕ್ರೖೆಸ್ತ ಮಿಷನರಿಗಳೂ, ಇಸ್ಲಾಮಿಯರೂ ಇದ್ದಾರೆ. ಕಮ್ಯುನಿಷ್ಟರೂ ಇದ್ದಾರೆ. ಸಂಗೀತ ನಾಶಕ್ಕೆ ಕಾಲ ಶುರುವಾಯ್ತು. ಇನ್ನು ಸ್ವಾತ್ಮಾನಂದಕ್ಕಾಗಿ ಹಾಡುವ ಮುಕ್ತ ಮನಸ್ಸಿಗರು ಬೇಕು. prejudiced ಎಂಬ ವರ್ಗದ ಪ್ರತಿಭಟಕರು ಎಲ್ಲೂ ಸಲ್ಲುವುದಿಲ್ಲ.

  ರಾಜ್ಯೋತ್ಸವ ರಸಪ್ರಶ್ನೆ - 24

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts