More

    ರಾಜಕೀಯದ ಅಸಲಿ ಆಟ ಇನ್ಮುಂದೆ ಶುರು! – ರಾಜ್ಯ-ರಾಷ್ಟ್ರ ನಾಯಕರ ದಾಂಗುಡಿ

    ವಿಜಯಪುರ : ರಾಜ್ಯ ವಿಧಾನಸಭೆ ಚುನಾವಣೆ ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತಿದ್ದಂತೆ ರಾಜಕೀಯದ ಅಸಲಿ ಆಟ ಜೋರಾಗುತ್ತಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ಜಿಲ್ಲೆಗೆ ದಾಂಗುಡಿ ಇಡುತ್ತಿದ್ದಾರೆ !

    ಈಗಾಗಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಮಹಾತ್ಮ ಬಸವೇಶ್ವರರ ಜಯಂತಿಯಂದೇ ಅಖಂಡ ವಿಜಯಪುರ ಜಿಲ್ಲೆಯಲ್ಲಿ ಮಿಂಚಿನ ಸಂಚಾರ ನಡೆಸಿ ಸಮಾನತೆ ಸಂದೇಶ ರವಾನಿಸಿದ ರಾಹುಲ್ ಗಾಂಧಿ ಪಕ್ಷದಲ್ಲಿ ಒಗ್ಗಟ್ಟಿನ ಮಂತ್ರ ಪಠಿಸುವಂತೆ ಮಾಡಿದ್ದಾರೆ. ಆಂತರಿಕ ಅಸಮಾಧಾನ ಅಳಿದು ಒಮ್ಮತದಿಂದ ಚುನಾವಣೆ ನಡೆಸುವಂತೆ ಅವಳಿ ಜಿಲ್ಲೆ ನಾಯಕರಿಗೆ ಕಿವಿಮಾತು ಹೇಳಿದ್ದಾರೆ. ಅಲ್ಲದೆ, ಕಾಂಗ್ರೆಸ್‌ನ ಸಿದ್ಧಾಂತ ಹಾಗೂ ಮಹಾತ್ಮ ಬಸವೇಶ್ವರರ ಸಂದೇಶ ಎರಡೂ ಒಂದೇ ಎಂಬುದನ್ನು ಮನದಟ್ಟು ಮಾಡಿದ್ದಾರೆ.

    ಬಿಜೆಪಿ ನಾಯಕರ ದಂಡು ಆಗಮನ

    ರಾಹುಲ್ ಗಾಂಧಿ ನಿರ್ಗಮಿಸುತ್ತಿದ್ದಂತೆ ಬಿಜೆಪಿ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಜಿಲ್ಲೆಗೆ ದಾಂಗುಡಿ ಇಡಲು ಸಜ್ಜಾಗಿದ್ದಾರೆ. ಏ. 29 ರಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದು, ಈಗಾಗಲೇ ಸೈನಿಕ ಶಾಲೆಯ ಆವರಣದಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಇದಕ್ಕೂ ಮುನ್ನವೇ ಏ. 25 ರಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ಆಗಮಿಸುತ್ತಿದ್ದಾರೆ. ಏ. 26 ರಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಕೂಡ ಆಗಮಿಸುತ್ತಿರುವುದು ಬಿಜೆಪಿ ಪಕ್ಷದಲ್ಲಿ ಸಂಚಲನ ಮೂಡಿಸಲಿದೆ. ಇನ್ನು ರಾಜ್ಯ ನಾಯಕರಾದ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವರ ಭೇಟಿ ಪ್ರಚಾರದ ಭರಾಟೆ ಹೆಚ್ಚಿಸಲಿದೆ.

    ಕಾಂಗ್ರೆಸ್ ನಾಯಕರಿಗೆ ಹುಮ್ಮಸ್ಸು

    ರಾಹುಲ್ ಗಾಂಧಿ ಭೇಟಿ ಅಭ್ಯರ್ಥಿಗಳಲ್ಲಿ ಹುಮ್ಮಸ್ಸು ಮೂಡಿಸಿದೆ. ಮನೆಯೊಂದು ಮೂರು ಬಾಗಿಲಿನಂತಿದ್ದ ಕಾಂಗ್ರೆಸ್ ಪಾಳಯದಲ್ಲಿ ರಾಹುಲ್ ಭೇಟಿ ಸಂಚಲನ ಮೂಡಿಸಿದ್ದು, ಹೊಂದಾಣಿಕೆ ರಾಜಕಾರಣಕ್ಕೆ ಬ್ರೇಕ್ ಹಾಕಿ ಒಮ್ಮತದಿಂದ ಚುನಾವಣೆ ನಡೆಸುವ ಮೂಲಕ ಅತಿ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುವ ಭರವಸೆ ಮೂಡಿದೆ. ಪ್ರಭಾವಿ ನಾಯಕರು ತಮ್ಮ ತಮ್ಮ ಪಕ್ಕದ ಕ್ಷೇತ್ರಗಳತ್ತ ಗಮನ ಹರಿಸುವಂತೆ ರಾಹುಲ್ ಸಲಹೆ ನೀಡಿದ್ದು, ಕಳೆದ ಬಾರಿ ಪರಾಭವಗೊಂಡಿದ್ದ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಗೆಲ್ಲಿಸುವ ಟಾಸ್ಕ್ ನೀಡಲಾಗಿದೆ. ಈ ವಿಚಾರ ಪಕ್ಷದ ಕಾರ್ಯಕರ್ತರಲ್ಲೂ ಹುಮ್ಮಸ್ಸು ಮೂಡಿಸಿದೆ. ಒಟ್ಟಾರೆ ರಾಹುಲ್ ಗಾಂಧಿ ಭೇಟಿ ‘ಕೈ’ ಪಡೆಗೆ ಬೂಸ್ಟ್ ನೀಡಿದಂತಾಗಿದೆ.

    Congress Logo

    ಇದನ್ನು ಓದಿ : ಮಿಂಚು ಹರಿಸಿದ ರಾಹುಲ್ ಗಾಂಧಿ – ವಿಭೂತಿ ಧರಿಸಿ ವಿಶೇಷ ಪೂಜೆ

    ಜೆಡಿಎಸ್‌ ನಲ್ಲಿ ಅಭ್ಯರ್ಥಿಗಳೇ ಕ್ಯಾಂಪೇನರ್

    ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅನಾರೋಗ್ಯದಿಂದಾಗಿ ಜೆಡಿಎಸ್ ಪಾಳಯದಲ್ಲಿ ಇನ್ನೂ ಯಾವುದೇ ನಾಯಕರ ಆಗಮನಕ್ಕೆ ವೇದಿಕೆ ಸಿದ್ಧಗೊಂಡಿಲ್ಲ. ಕುಮಾರಸ್ವಾಮಿ ಆಸ್ಪತ್ರೆಯಲ್ಲಿದ್ದು, ಇನ್ನುಳಿದ ನಾಯಕರು ಉತ್ತರ ಕರ್ನಾಟಕಕ್ಕಿಂತ ದಕ್ಷಿಣ ಕರ್ನಾಟಕದ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಪ್ರವಾಸಕ್ಕೂ ದಿನ ನಿಗದಿಯಾಗಿಲ್ಲ. ಹೀಗಾಗಿ ಜೆಡಿಎಸ್ ಅಭ್ಯರ್ಥಿಗಳು ಸ್ವಂತ ಬಲದ ಮೇಲೆ ಪಕ್ಷದ ಪ್ರಚಾರ ನಡೆಸುತ್ತಿದ್ದಾರೆ.

    JDS Logo

    ಸದ್ಯ ನಾಗಠಾಣ ಕ್ಷೇತ್ರ ಮಾತ್ರ ಜೆಡಿಎಸ್ ತೆಕ್ಕೆಯಲ್ಲಿದ್ದು, ಅಲ್ಲಿನ ಶಾಸಕರೇ ಸ್ವಂತ ಬಲದ ಮೇಲೆ ಅಧಿಕಾರ ಗದ್ದುಗೆ ಅಲಂಕರಿಸಲು ಸಜ್ಜಾಗಿದ್ದಾರೆ. ಇನ್ನುಳಿದಂತೆ ಬ.ಬಾಗೇವಾಡಿ, ದೇ.ಹಿಪ್ಪರಗಿ, ಬಬಲೇಶ್ವರ ಹಾಗೂ ಇಂಡಿಯಲ್ಲಿ ಜೆಡಿಎಸ್ ಪ್ರಬಲ ಪೈಪೋಟಿ ನೀಡುತ್ತಿದ್ದು, ರಾಜ್ಯ ನಾಯಕರು ಸ್ವಲ್ಪ ಗಮನ ಹರಿಸಿದರೆ ಮತ್ತಷ್ಟು ಬಲ ಸಿಗುವ ವಿಶ್ವಾಸ ವ್ಯಕ್ತವಾಗುತ್ತಿದೆ.

    ಇನ್ನುಳಿದಂತೆ ಆಮ್ ಆದ್ಮಿ, ಕೆಆರ್‌ಎಸ್ ಮತ್ತಿತರ ಪಕ್ಷಗಳು ತಕ್ಕಮಟ್ಟಿಗೆ ಪ್ರಚಾರ ನಡೆಸಿದ್ದು, ಪ್ರಭಾವ ಹೆಚ್ಚಿಸಿಕೊಳ್ಳಲು ನಾನಾ ಕಸರತ್ತು ಆರಂಭಿಸಿವೆ.

    ಬಿಜೆಪಿ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರನ್ನು ಬರಮಾಡಿಕೊಳ್ಳಲು ಈಗಾಗಲೇ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ನರೇಂದ್ರ ಮೋದಿ ಹಾಗೂ ಅಮಿತ್ ಷಾ ಮತ್ತು ಯೋಗಿ ಆದಿತ್ಯನಾಥ ಆಗಮನ ಹುಮ್ಮಸ್ಸು ಮೂಡಿಸಲಿದೆ. ಈ ಬಾರಿ ಜಿಲ್ಲೆಯ ಎಂಟು ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ರೂಪುರೇಷೆ ಸಿದ್ಧಪಡಿಸಲಾಗಿದೆ.

    ಆರ್.ಎಸ್. ಪಾಟೀಲ ಕೂಚಬಾಳ, ಬಿಜೆಪಿ ಜಿಲ್ಲಾಧ್ಯಕ್ಷ

    ಕುಮಾರಣ್ಣ ಆಸ್ಪತ್ರೆಯಲ್ಲಿರುವ ಕಾರಣ ಇನ್ನೂ ಜೆಡಿಎಸ್‌ನಿಂದ ಪ್ರವಾಸ ನಿಗದಿಯಾಗಿಲ್ಲ. ಸದ್ಯಕ್ಕೆ ನಮಗೆ ನಾವೇ ಸ್ಟಾರ್ ಕ್ಯಾಂಪೇನರ್‌ಗಳು. ಈಗಾಗಲೇ ಪಂಚರತ್ನ ಯಾತ್ರೆ ಮೂಲಕ ಜೆಡಿಎಸ್ ತತ್ವ-ಸಿದ್ಧಾಂತಗಳನ್ನು ಜನರ ಮನಮುಟ್ಟಿಸುವ ಕೆಲಸ ಮಾಡಲಾಗಿದೆ. ಪಕ್ಷದ ಪ್ರಣಾಳಿಕೆ ಅಂಶಗಳನ್ನು ಜನರ ಮನೆ ಬಾಗಿಲಿಗೆ ಮುಟ್ಟಿಸಲಾಗಿದೆ. ರಾಜ್ಯ ನಾಯಕರ ಆಗಮ ಹೊಸ ಚೈತನ್ಯ ಮೂಡಿಸಲಿದ್ದು, ಶೀಘ್ರದಲ್ಲಿಯೇ ಪ್ರವಾಸ ದಿನ ನಿಗದಿಗೊಳ್ಳಲಿದೆ.

    ಡಾ.ದೇವಾನಂದ ಚವ್ಹಾಣ್, ಜೆಡಿಎಸ್ ಅಭ್ಯರ್ಥಿ ನಾಗಠಾಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts