More

    ಜಾತಿ ಪ್ರಮಾಣಪತ್ರ ಸಮಸ್ಯೆ ಶೀಘ್ರ ಇತ್ಯರ್ಥ

    ಕಾರವಾರ: ಕಾನೂನು ತಜ್ಞರ ಹಾಗೂ ಅಡ್ವೋಕೇಟ್ ಜನರಲ್ ಅವರ ಅಭಿಪ್ರಾಯ ಪಡೆದು ಉತ್ತರ ಕನ್ನಡ ಜಿಲ್ಲೆಯಲ್ಲಿ ಜಾತಿ ಪ್ರಮಾಣಪತ್ರ ನೀಡುವಲ್ಲಿ ಆಗಿರುವ ತೊಡಕುಗಳನ್ನು ಕೆಲವೇ ತಿಂಗಳಲ್ಲಿ ಪರಿಹರಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದರು.

    ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಸಂಬಂಧಿಸಿದ ವಿವಿಧ ಸಮುದಾಯಗಳ ಜನರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. ಜಾತಿ ಪ್ರಮಾಣಪತ್ರ ವಿತರಿಸುವಲ್ಲಿ ಹಲವು ಗೊಂದಲ ಉಂಟಾಗಿರುವುದು ವಿವಿಧ ಸಮುದಾಯಗಳ ಅಹವಾಲು ಕೇಳಿದ ನಂತರ ಅರಿವಿಗೆ ಬಂದಿದೆ. ಜತೆಗೆ ಕಾನೂನಿನ ತೊಡಕೂ ಇರುವುದು ಗೊತ್ತಾಗಿದೆ. ಇದು ಸೂಕ್ಷ್ಮ ವಿಚಾರವಾಗಿದ್ದರಿಂದ ಪರಿಹಾರ ನನಗೆ ಗೊತ್ತಿದ್ದರೂ ಬಹಿರಂಗ ಮಾಡಲು ಸಾಧ್ಯವಿಲ್ಲ. ಇದರಿಂದ ಬೆಂಗಳೂರಿಗೆ ಹೋದ ನಂತರ ಸಭೆ ನಡೆಸಿ ಶೀಘ್ರ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅನುದಾನವನ್ನು ದುರ್ಬಳಕೆ ಮಾಡಿದಲ್ಲಿ ಕಠಿಣ ಕಾನೂನು ಕ್ರಮ ವಹಿಸಲಾಗುವುದು ಎಂದರು.

    ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಶಾಸಕಿ ರೂಪಾಲಿ ನಾಯ್ಕ, ವಿಪ ಸದಸ್ಯ ಶಾಂತಾರಾಮ ಸಿದ್ದಿ, ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಸಿಇಒ ಪ್ರಿಯಾಂಗಾ ಎಂ., ಎಸ್​ಪಿ ಶಿವಪ್ರಕಾಶ ದೇವರಾಜು, ಎಸಿ ವಿದ್ಯಾಶ್ರೀ ಚಂದರಗಿ, ಡಾ. ಬಸವನಗೌಡ, ಪರಿಶಿಷ್ಟ ವರ್ಗಗಳ ಇಲಾಖೆಯ ಅಧಿಕಾರಿ ಸುರೇಶ ರೆಡ್ಡಿ ಇದ್ದರು. ಮನವಿ ಸಲ್ಲಿಸಲು ಸಾಕಷ್ಟು ಜನ ಸೇರಿದ್ದರಿಂದ ಬಿಗಿ ಪೊಲೀಸ್ ಭದ್ರತೆ ಆಯೋಜಿಸಲಾಗಿತ್ತು.

    ಪರ- ವಿರೋಧ

    ನಾವು ಪರಿಶಿಷ್ಟ ಪಂಗಡಕ್ಕೆ ಸೇರಿದ್ದೇವೆ. ಆದರೂ ಜಾತಿ ಪ್ರಮಾಣಪತ್ರ ವಿತರಣೆ ತಡೆ ಹಿಡಿಯಲಾಗಿದೆ. ಮತ್ತೆ ಜಾತಿ ಪ್ರಮಾಣಪತ್ರ ನೀಡಬೇಕು ಎಂದು ಮೊಗೇರ, ಗೊಂಡ ಜಾತಿಯ ಮುಖಂಡರು ಸಚಿವ ಶ್ರೀರಾಮುಲು ಅವರಿಗೆ ಮನವಿ ಮಾಡಿದರು. ಆದರೆ, ಅದಕ್ಕೆ ವಿರೋಧ ವ್ಯಕ್ತಪಡಿಸಿದ ದಲಿತ ಸಂಘಟನೆಗಳ ಮುಖಂಡ ದೀಪಕ ಕುಡಾಳಕರ್, ತುಳಸಿದಾಸ ಪಾವಸ್ಕರ್ ಇತರರು, ದಲಿತರಲ್ಲದವರು ಜಾತಿ ಪ್ರಮಾಣಪತ್ರ ಪಡೆದು, ನೈಜ ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಹಿಂದೆ ನೀಡಿದ ಜಾತಿ ಪ್ರಮಾಣಪತ್ರಗಳನ್ನು ರದ್ದು ಮಾಡಬೇಕು. ಡಿಜಿಟಲ್ ಮಾದರಿಯ ಪ್ರಮಾಣಪತ್ರ ನೀಡಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ಮೇತ್ರಿ, ಹಸ್ಲರ, ಅಲೆಮಾರಿ, ಸಿದ್ದಿ ಸಮುದಾಯಗಳ ಅಹವಾಲನ್ನೂ ಸಚಿವರು ಆಲಿಸಿದರು. ರಾಜ್ಯ ಆದಿ ಜಾಂಬವ ಮಾದಿಗ ಸಂಘದ ಸದಸ್ಯರ ಒತ್ತಾಯಕ್ಕೆ ಮಣಿದು ಸಭೆಯ ನಡುವೆಯೇ ಜಿಲ್ಲಾಧಿಕಾರಿ ಕಚೇರಿಯಿಂದ ಇಳಿದು ಬಂದ ಶ್ರೀರಾಮುಲು ಮನವಿ ಸ್ವೀಕರಿಸಿದರು.

    ಅಪ್ಪನಿಗೊಂದು ಜಾತಿ ಮಗನಿಗೆ ಒಂದು…

    ಮೇತ್ರಿ ಸಮಾಜದ ಮುಖಂಡರೊಬ್ಬರು ಮಾತನಾಡಿ, ತಂದೆಗೆ ಮೇತ್ರಿ ಎಂದು ಪ್ರಮಾಣಪತ್ರ ನೀಡಿದರೆ ಮಗನಿಗೆ ಮಾದಿಗ ಎಂದು ಪ್ರಮಾಣಪತ್ರ ನೀಡಲಾಗಿದೆ. ಇಂಥ ಹಲವು ಉದಾಹರಣೆಗಳು ಜಿಲ್ಲೆಯಲ್ಲಿದ್ದು, ಅವುಗಳನ್ನು ಪರಿಶೀಲಿಸಿ, ಸರಿಪಡಿಸಬೇಕು ಎಂದು ಆಗ್ರಹಿಸಿದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts