More

    ಅಧಿಕಾರಿಗಳ ಭರವಸೆ ಒಪ್ಪದ ಧರಣಿನಿರತರು

    ಹನೂರು: ತಾಲೂಕಿನ ಡಿ.ಎಂ.ಸಮುದ್ರ ಗ್ರಾಮ ಘಟಕ ವ್ಯಾಪ್ತಿಯ ಗ್ರಾಮಗಳಲ್ಲಿ ವಿವಿಧ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಲೋಕಸಭೆ ಚುನಾವಣೆ ಮತದಾನ ಬಹಿಷ್ಕರಿಸುವುದಾಗಿ ರೈತ ಸಂಘದ ಪದಾಧಿಕಾರಿಗಳು ಧರಣಿ ನಡೆಸುತ್ತಿರುವ ಸ್ಥಳಕ್ಕೆ ಶನಿವಾರ ಅಧಿಕಾರಿಗಳ ತಂಡ ಭೇಟಿ ನೀಡಿದ್ದು, ಮನವೊಲಿಸುವ ಪ್ರಯತ್ನ ವಿಫಲವಾಗಿದೆ.


    ಗ್ರಾಮ ಘಟಕದ ವ್ಯಾಪ್ತಿಯ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಹದಗೆಟ್ಟಿರುವ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು, ಭೈರನತ್ತ -ಡಿ.ಎಂ.ಸಮುದ್ರ ಮಾರ್ಗದ ಹಳ್ಳಕ್ಕೆ ಸೇತುವೆ ನಿರ್ಮಿಸಬೇಕು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು, ಉಡುತೊರೆ ಜಲಾಶಯದಿಂದ ಹಳ್ಳಕ್ಕೆ ನೀರು ಹರಿಸಬೇಕು, ಆಸ್ಪತ್ರೆ ಸ್ಥಾಪಿಸಬೇಕು, ಸ್ಮಶಾನ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಇನ್ನಿತರ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು, ಈ ಸಂಬಂಧ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು. ಇಲ್ಲವಾದಲ್ಲಿ ಮುಂಬರುವ ಲೋಕಸಭೆ ಚುನಾವಣೆ ಮತದಾನವನ್ನು ಬಹಿಷ್ಕರಿಸಲು ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕದ ಪದಾಧಿಕಾರಿಗಳು ನಿರ್ಧರಿಸಿದ್ದು, ಈ ಹಿನ್ನೆಲೆ ಶನಿವಾರ ಡಿ.ಎಂ.ಸಮುದ್ರ ಗ್ರಾಮದ ಶ್ರೀಮಹದೇಶ್ವರ ದೇಗುಲ ಸಮೀಪದ ಆವರಣದಲ್ಲಿ ಧರಣಿ ಕುಳಿತ್ತಿದ್ದರು.


    ಈ ಹಿನ್ನೆಲೆ ಆರ್‌ಐ ಮಾದೇಶ್, ಪಿಡಿಒ ರಾಮು, ಕಾರ್ಯದರ್ಶಿ ನಾಗರಾಜಮೂರ್ತಿ, ಗ್ರಾಮ ಆಡಳಿತಾಧಿಕಾರಿಗಳಾದ ವಾಸುದೇವ ಹಾಗೂ ಪುನೀತ್ ಧರಣಿ ನಿರತ ಸ್ಥಳಕ್ಕೆ ಭೇಟಿ ನೀಡಿ ರೈತರಿಂದ ಸಮಸ್ಯೆಯನ್ನು ಆಲಿಸಿದರು. ಈ ಸಂಬಂಧ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಹಂತ ಹಂತವಾಗಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಆದರೆ ಇದಕ್ಕೊಪ್ಪದ ರೈತರು ಹಲವು ವರ್ಷಗಳಿಂದ ಈ ಸಮಸ್ಯೆಗಳನ್ನು ಎದುರಿಸುತ್ತಿದ್ದು, ತುಂಬಾ ತೊಂದರೆ ಅನುಭವಿಸುತ್ತಿದ್ದೇವೆ. ಆದ್ದರಿಂದ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುವವರೆಗೂ ಧರಣಿಯನ್ನು ಕೈ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಆಗಮಿಸಿದ ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಹಿಂತಿರುಗಿದರು.


    ಗ್ರಾಮ ಘಟಕದ ಅಧ್ಯಕ್ಷ ಮೈಕಲ್, ಕಾರ್ಯದರ್ಶಿ ಭೈರನತ್ತ ರಾಜು, ರೈತ ಮುಖಂಡರಾದ ಶ್ರೀನಿವಾಸ್, ಗಿರಿಮಲ್ಲಯ್ಯ, ಕುಳ್ಳಪ್ಪ, ಸೋಮಣ್ಣ, ದಯಾನಂದ ಪ್ರಭು, ಪುಟ್ಟಸ್ವಾಮಿ, ಪ್ರಸನ್ನಕುಮಾರ್, ಬಸವರಾಜಪ್ಪ, ಗುರುಸ್ವಾಮಿ, ಮಹದೇವಸ್ವಾಮಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts