More

    ಮಾರುಕಟ್ಟೆಯಲ್ಲಿ ನೆಲಕಚ್ಚಿದ ಶುಂಠಿ ಬೆಲೆ

    ಹಾನಗಲ್ಲ: ವಾಣಿಜ್ಯ ಬೆಳೆ ಬೆಳೆದು ತಮ್ಮ ಆರ್ಥಿಕ ಮಟ್ಟ ಸುಸ್ಥಿರಗೊಳಿಸಿಕೊಳ್ಳುವ ಆಶಯದಿಂದ ತಾಲೂಕಿನ ರೈತರು ಲಕ್ಷಾಂತರ ರೂ. ಖರ್ಚು ಮಾಡಿ ಶುಂಠಿ ಬೆಳೆದಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಶುಂಠಿ ಬೆಲೆ ಕುಸಿತ ಕಂಡಿದ್ದು, ಬೆಳೆಗಾರರು ನಷ್ಟ ಅನುಭವಿಸಿದ್ದಾರೆ.

    ಕಳೆದ ಒಂದು ದಶಕದಿಂದ ಕೇರಳದ ರೈತರು ಹಾನಗಲ್ಲಿಗೆ ಬಂದು ಇಲ್ಲಿನ ಹೊಲಗಳನ್ನು ಗೇಣಿಗೆ ಪಡೆದು ಶುಂಠಿ ಬೆಳೆದು ನಮ್ಮ ರೈತರಿಗೆ ಹೆಚ್ಚಿನ ಗೇಣಿ ನೀಡುತ್ತಿದ್ದರು. ಇವರಿಂದ ತಾಲೂಕಿನ ರೈತರು ಶುಂಠಿ ಬೆಳೆ ಮಾಹಿತಿ ಪಡೆದು ಅಡಕೆ, ಮಾವಿನ ತೋಟಗಳಲ್ಲಿ ಮಧ್ಯಂತರ ಬೆಳೆಯಾಗಿ ಹಾಗೂ ಗದ್ದೆಗಳಲ್ಲಿ ಶುಂಠಿ ಬೆಳೆಯಲಾರಂಭಿಸಿದ್ದಾರೆ. ಆದರೆ, ಮೊದಲು ಒಳ್ಳೆಯ ಲಾಭ ತಂದ ಶುಂಠಿಗೆ ಈಗ ಉತ್ತಮ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ.

    ತಾಲೂಕಿನಲ್ಲಿ ಅಂದಾಜು 15 ಸಾವಿರ ಎಕರೆಯಲ್ಲಿ ಶುಂಠಿ ಬೆಳೆಯಲಾಗುತ್ತಿದೆ. ಮೊದಲಿಗೆ ಶುಂಠಿ ಬೆಳೆ ಇಲ್ಲಿನ ರೈತರಿಗೆ ಬಂಗಾರದ ಬೆಳೆಯಾಗಿ ಕೈ ತುಂಬ ಲಾಭ ತಂದು ಕೊಟ್ಟಿತ್ತು. ಕರೊನಾ ಪೂರ್ವದಲ್ಲಿ ಚೀನಾ, ಪಾಕಿಸ್ತಾನದೊಂದಿಗೆ ವ್ಯಾಪಾರ ವಹಿವಾಟು ನಡೆಯುತ್ತಿದ್ದ ಸಂದರ್ಭದಲ್ಲಿ ಶುಂಠಿಗೆ ಬೆಲೆ ಇತ್ತು. ಆದರೆ, ಕರೊನಾ ಸಂದರ್ಭದಲ್ಲಿ ವಿದೇಶಗಳಿಗೆ ರಫ್ತು ಆಗದಿರುವುದರಿಂದ ದೇಶಿಯ ಮಾರುಕಟ್ಟೆಯಲ್ಲಿ ಶುಂಠಿ ಬೆಲೆ ಕಳೆದುಕೊಂಡಿತು.

    ಈ ವರ್ಷ ಶುಂಠಿ ಬೆಳೆ ಕೊಳೆ ರೋಗದ ಮಧ್ಯೆಯೂ ಇಳುವರಿ ಹೆಚ್ಚಾಗಿದೆ. ಉಳಿದೆಲ್ಲ ಬೆಳೆಗಳಿಗಿಂತ ಹೆಚ್ಚು ಲಾಭ ಬರುತ್ತದೆ ಎಂಬ ವಿಶ್ವಾಸದಿಂದ ರೈತರು ಎಕರೆಗೆ 2 ಲಕ್ಷ ರೂ.ದಷ್ಟು ಖರ್ಚು ಮಾಡಿದ್ದಾರೆ. ಮಾರ್ಚ್​ನಲ್ಲಿ ಬೀಜ ನಾಟಿ ಮಾಡುವಾಗ ಕ್ವಿಂಟಾಲ್​ಗೆ 6 ರಿಂದ 8 ಸಾವಿರದಷ್ಟಿದ್ದ ಬೆಲೆ ಈಗ 2,500 ರೂ.ಗೆ ಕುಸಿದಿದೆ. ಜನವರಿಯಿಂದಲೇ ಶುಂಠಿ ಕೀಳುವ ಕಾರ್ಯ ಆರಂಭವಾಗಿದೆ. ಆದರೆ, ನಿರೀಕ್ಷಿತ ದರ ಸಿಗದಿರುವುದರಿಂದ ಬಹಳಷ್ಟು ರೈತರು ಹೊಲದಲ್ಲೇ ಬಿಟ್ಟಿದ್ದಾರೆ.

    ಶುಂಠಿಯನ್ನು ಆಹಾರ ಪದಾರ್ಥವಾಗಿ, ಔಷಧೀಯ ವಸ್ತುವಾಗಿ ಹೊರರಾಷ್ಟ್ರಗಳು ಖರೀದಿಸಲಾಗುತ್ತದೆ. ಶೀತ ಪ್ರದೇಶದ ರಾಷ್ಟ್ರಗಳಲ್ಲಿ ದೇಹದ ಉಷ್ಣತೆ ಹೆಚ್ಚಾಗಲು ಶುಂಠಿ ಬಳಸುತ್ತಾರೆ. ಶುಂಠಿ ಒಣಗಿದರೆ ತೂಕ ಕಳೆದುಕೊಳ್ಳುತ್ತದೆ. ರೈತರಿಗೂ ಆರ್ಥಿಕ ಹಾನಿಯಾಗುತ್ತದೆ. ಕೇಂದ್ರ ಸರ್ಕಾರ ರಫ್ತಿಗೆ ಅವಕಾಶ ನೀಡಬೇಕು.

    | ಶಂಕರಗೌಡ್ರು ಪಾಟೀಲ

    ಶುಂಠಿ ಬೆಳೆಗಾರ, ಚೀರನಹಳ್ಳಿ

    ಉದ್ಯೋಗ ಖಾತ್ರಿ ಯೋಜನೆಯಡಿ ಅಡಕೆ ನಾಟಿಗೆ ಅವಕಾಶ ಕಲ್ಪಿಸಲಾಗಿದೆ. ಅಡಕೆಯೊಂದಿಗೆ ಶುಂಠಿಯನ್ನೂ ಬೆಳೆದರೆ ಅಡಕೆ ಫಲವತ್ತಾಗಿ ಬೆಳೆಯುತ್ತದೆ. ಅಲ್ಲದೆ, 2 ವರ್ಷಗಳ ನಿರ್ವಹಣೆ ಕಡಿಮೆಯಾಗುತ್ತದೆ ಎಂಬುದು ರೈತರ ಅಭಿಪ್ರಾಯ. ಅದರಂತೆ ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಶುಂಠಿ ಬೆಳೆದಿದ್ದಾರೆ. ಹಾನಗಲ್ಲ ತಾಲೂಕು ಶುಂಠಿ ಕ್ಷೇತ್ರವಾಗಿ ಪರಿವರ್ತನೆಯಾಗುತ್ತಿದೆ. ಪ್ರಸಕ್ತ ವರ್ಷದಿಂದ ಹವಾಮಾನ ಆಧಾರಿತ ಬೆಳೆ ವಿಮೆಯನ್ನು ಶುಂಠಿಗೂ ಅಳವಡಿಸಲಾಗಿದೆ. ಬೆಲೆ ಕುಸಿತ ಹಾಗೂ ಹವಾಮಾನ ವೈಪರಿತ್ಯದಿಂದ ಇಳುವರಿ, ದರ ಕಡಿಮೆಯಾದಲ್ಲಿ ಬೆಳೆಗಾರರಿಗೆ ವಿಮಾ ಯೋಜನೆ ನೆರವಾಗಲಿದೆ.

    | ಮಂಜುನಾಥ ಬಣಕಾರ

    ತೋಟಗಾರಿಕೆ ಹಿರಿಯ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts