More

    ಕೇಸರಿಪಡೆಗೆ ದೇವಭೂಮಿಯ ಬಲ?

    | ರಾಘವ ಶರ್ಮ ನಿಡ್ಲೆ, ನವದೆಹಲಿ

    ದೇವಭೂಮಿ ಉತ್ತರಾಖಂಡದ 5 ಲೋಕಸಭೆ ಕ್ಷೇತ್ರಗಳಿಗೆ ಏಪ್ರಿಲ್ 19ರ ಮೊದಲ ಹಂತದಲ್ಲೇ ಮತದಾನ ನಡೆಯಲಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ವ್ಯಾಪಕ ಪ್ರಚಾರಭಿಯಾನಗಳನ್ನು ನಡೆಸುತ್ತಿವೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕಾನೂನು ಜಾರಿ ಮಾಡುವ ಮೂಲಕ ದೇಶದಲ್ಲೇ ಈ ಕಾನೂನು ಜಾರಿ ಮಾಡಿದ ಮೊದಲ ರಾಜ್ಯ ಎನಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಕಣದಲ್ಲಿ ಯುಸಿಸಿ ಬಗ್ಗೆ ಭಾರೀ ಪರ/ವಿರೋಧ ಚರ್ಚೆಗಳು ನಡೆಯುತ್ತಿವೆ. ಕೇಂದ್ರ ಬಿಜೆಪಿ ಕೂಡ ದೇಶಾದ್ಯಂತ ಯುಸಿಸಿ ಜಾರಿ ಬಗ್ಗೆ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.

    ಬೆಟ್ಟಗುಡ್ಡಗಳು, ರಸ್ತೆ, ಆಸ್ಪತ್ರೆ ಸೇರಿ ಮೂಲಸೌಕರ್ಯಗಳಿಲ್ಲದೆ ಸೊರಗಿರುವ ಸಣ್ಣಸಣ್ಣ ಹಳ್ಳಿಗಳಿಂದ ಕೂಡಿರುವ ಉತ್ತರಾಖಂಡ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ, ಬದರಿನಾಥ ಒಳಗೊಂಡಂತೆ ನಾಲ್ಕು ಧಾಮಗಳಿಂದಾಗಿಯೇ ಇಡೀ ದೇಶದ ಯಾತ್ರಿಕ ಮತ್ತು ಪ್ರವಾಸಿ ವರ್ಗವನ್ನು ಕೈಬೀಸಿ ಕರೆಯುತ್ತದೆ. ಜೀವನೋಪಾಯಕ್ಕೆ ಬಹುಪಾಲು ಜನರು ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿದ್ದಾರೆ. ಹೀಗಾಗಿ, ಕೇಂದ್ರ ಸರ್ಕಾರ ಪ್ರಮುಖ ಧಾರ್ವಿುಕ ಕೇಂದ್ರಗಳನ್ನು ಸಂರ್ಪಸುವ ಕಡೆಯೆಲ್ಲ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣ ಮಾಡುವತ್ತ ದೃಷ್ಟಿ ನೆಟ್ಟಿದೆ. ಹೀಗಿದ್ದರೂ, ಭೂಕುಸಿತದಂತಹ ಪ್ರಾಕೃತಿಕ ವಿಕೋಪಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿರುವುದು ರಾಜ್ಯದ ನಿವಾಸಿಗರನ್ನು ಬೆಚ್ಚಿ ಬೀಳಿಸುತ್ತಿದೆ. ಜೋಶಿಮಠದಲ್ಲಿ ಭೂಮಿ ಬಾಯ್ಬಿಡುತ್ತಿರುವುದರಿಂದ ಜನ ವಾಸ್ತವ್ಯಕ್ಕಾಗಿ ಬೇರೆಡೆಗೆ ಸ್ಥಳಾಂತರಗೊಳ್ಳುವ ಪರಿಸ್ಥಿತಿ ನಿರ್ವಣವಾಗಿದೆ.

    suranga

    ಪರಿಸರವಾದಿಗಳ ವಿರೋಧ: ಕೇಂದ್ರ ಸರ್ಕಾರದ ಅತಿಯಾದ ಮೂಲಸೌಕರ್ಯ ಯೋಜನೆಗಳು ಪರಿಸರ ಅಸಮತೋಲನಕ್ಕೆ ಕಾರಣವಾಗುತ್ತಿದೆ ಎಂಬ ಆರೋಪವೂ ಪರಿಸರವಾದಿಗಳಿಂದ ಕೇಳಿಬಂದಿದೆ. ಇತ್ತೀಚೆಗೆ ರಾಜ್ಯದ ಸಿಲ್ಕಿಯಾರಾ ಸುರಂಗ ಕುಸಿದು ಅಲ್ಲಿ ಸಿಲುಕಿಕೊಂಡು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ 41 ಮಂದಿಯನ್ನು ರಕ್ಷಣೆ ಮಾಡಲಾಗಿತ್ತು. ಬಿಜೆಪಿ ಇದರ ಚುನಾವಣಾ ಲಾಭ ಪಡೆಯಲೂ ಯತ್ನಿಸಿದೆ. ಅದೇ ರೀತಿ, ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿದ್ದು, ಉತ್ತರಾಖಂಡದಲ್ಲೂ ಭಾರೀ ಸದ್ದು ಮಾಡಿದೆ. ರಾಜ್ಯದಲ್ಲಿ ನಿವೃತ್ತ ಯೋಧರ (ಹುತಾತ್ಮ ಸೇನಾನಿಗಳ ಪತ್ನಿಯರೂ ಸೇರಿ) ಸಂಖ್ಯೆ 1.10 ಲಕ್ಷದಷ್ಟಿದ್ದು, ದೇಶಕ್ಕೆ ಅತಿಹೆಚ್ಚು ಸೇನಾನಿಗಳನ್ನು ನೀಡಿದ ಖ್ಯಾತಿ ಉತ್ತರಾಖಂಡದ್ದು. ಹೀಗಾಗಿ, ಕಾಂಗ್ರೆಸ್ ಅಗ್ನಿಪಥ್ ಯೋಜನೆ ರಾಜ್ಯದ ಯುವಕರಿಗೆ ಶಾಪ ಎಂದು ಕಿಡಿಕಾರುತ್ತಿದ್ದು, ಅಧಿಕಾರಕ್ಕೆ ಬಂದರೆ ಇದನ್ನು ರದ್ದುಗೊಳಿಸುವ ಭರವಸೆ ನೀಡಿದೆ.

    ಅನಿಲ್ ಬಲೂನಿ VS ಗಣೇಶ್ ಗೊಡಿಯಾಲ್: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಆಪ್ತವರ್ಗದಲ್ಲಿ ಗುರುತಿಸಿಕೊಂಡಿರುವ ರಾಜ್ಯಸಭೆ ಸದಸ್ಯ ಅನಿಲ್ ಬಲೂನಿ ಈ ಬಾರಿ ಪೌರಿ ಗಡ್​ವಾಲ್ ಕ್ಷೇತ್ರದಿಂದ ಕಾಂಗ್ರೆಸ್​ನ ಮಾಜಿ ರಾಜ್ಯಾಧ್ಯಕ್ಷ ಗಣೇಶ್ ಗೊಡಿಯಾಲ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ತೀರ್ಥ ಸಿಂಗ್ ರಾವತ್ ಪೌರಿ ಗಡ್​ವಾಲ್​ನಿಂದ ಸ್ಪರ್ಧಿಸಿ ಗೆದ್ದಿದ್ದರು. ಕೆಲ ತಿಂಗಳುಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ನಂತರ ಸಿಎಂ ಸ್ಥಾನದಿಂದ ಕೆಳಗಿಳಿಸಿ, ಧಾಮಿ ಸಿಎಂ ಹುದ್ದೆಗೇರಿದರು. ರಾವತ್ ಸಂಸದ ಸ್ಥಾನದಲ್ಲಿ ಮುಂದುವರಿದರು. ಆದರೆ ಈ ಬಾರಿ ರಾವತ್ ಬದಲಿಗೆ, ಕೇಂದ್ರ ಬಿಜೆಪಿ ಮಾಧ್ಯಮ ವಿಭಾಗದ ಮುಖ್ಯಸ್ಥ ಅನಿಲ್ ಬಲೂನಿಗೆ ಟಿಕೆಟ್ ನೀಡಲಾಗಿದ್ದು, ಮೊದಲ ಬಾರಿಗೆ ಚುನಾವಣಾ ಕಣದಲ್ಲಿದ್ದಾರೆ. ಮೋದಿ ಜನಪ್ರಿಯತೆ ಹಾಗೂ ಸ್ಥಳೀಯ ಮಟ್ಟದಲ್ಲಿ ಮೂಲಸೌಕರ್ಯ ವೃದ್ಧಿಗೆ ಸರ್ಕಾರ ಒತ್ತು ನೀಡುತ್ತಿರುವುದನ್ನು ಪ್ರಸ್ತಾಪಿಸುತ್ತ ಜನಮನ ಸೆಳೆಯಲು ಯತ್ನಿಸಿದ್ದಾರೆ.

    ಪೌರಿ ಗಡ್​ವಾಲ್ ದೇಶದ ಅತಿದೊಡ್ಡ ಕ್ಷೇತ್ರಗಳಲ್ಲಿ ಒಂದಾಗಿದ್ದು, ಬದ್ರಿನಾಥ್, ಥರಾಲಿ, ಕರ್ಣಪ್ರಯಾಗ, ಕೇದಾರನಾಥ, ರುದ್ರಪ್ರಯಾಗ, ದೇವಪ್ರಯಾಗ, ನರೇಂದ್ರನಗರ, ಯಮಕೇಶ್ವರ, ಪೌರಿ, ಶ್ರೀನಗರ, ಲ್ಯಾನ್ಸ್​ಡೌನ್ಮ ಕೋಟ್​ದ್ವಾರ್, ರಾಮನಗರ ಸೇರಿ ಒಟ್ಟು 14 ವಿಧಾನಸಭೆಗಳ ಜತೆಗೆ 5 ಜಿಲ್ಲೆಗಳನ್ನು ಹೊಂದಿದೆ. 2022ರ ವಿಧಾನಸಭೆ ಚುನಾವಣೆಯಲ್ಲಿ ಈ 14 ಕ್ಷೇತ್ರಗಳಲ್ಲಿ 13ನ್ನು ಬಿಜೆಪಿ ಗೆದ್ದುಕೊಂಡಿತ್ತು. ಬೆಟ್ಟಗುಡ್ಡಗಳ ಮಧ್ಯೆ ಸಾಗುವ 125 ಕಿಮೀ ಉದ್ದದ ಉದ್ದೇಶಿತ ಹೃಷಿಕೇಶ-ಕರ್ಣಪ್ರಯಾಗ ರೈಲ್ವೆ ಯೋಜನೆ ಪೌರಿ ಗಡ್​ವಾಲ್ ಲೋಕಸಭೆ ವ್ಯಾಪ್ತಿಯಲ್ಲಿದ್ದು, 2025ರ ಡಿಸೆಂಬರ್ ಒಳಗಾಗಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಇದರಲ್ಲಿ ಸುಮಾರು 105 ಕಿಮೀ ರೈಲ್ವೆ ಟ್ರಾ್ಯಕ್ ಸುರಂಗ ಮಾರ್ಗದಲ್ಲಿ ನಿರ್ವಣಗೊಳ್ಳುತ್ತಿದೆ. ಈ ರೈಲ್ವೆ ಯೋಜನೆ ಐತಿಹಾಸಿಕ ಎನಿಸಿಕೊಳ್ಳಲಿದ್ದು, ಚಾರ್​ಧಾಮ್ ಯಾತ್ರೆಗೆ ಅನುಕೂಲವಾಗಲಿದೆ. ಕೇಂದ್ರದ ವಿವಿಧ ಯೋಜನೆಗಳ ಜತೆಗೆ ಈ ರೈಲ್ವೆ ಯೋಜನೆಯನ್ನೂ ಬಿಜೆಪಿ ಪ್ರಚಾರಕ್ಕಾಗಿ ಬಳಸಿಕೊಂಡಿದೆ.

    ಹರಿದ್ವಾರದಲ್ಲಿ ಹರೀಶ್ ಪುತ್ರ: ರಾಜ್ಯದ ಮಾಜಿ ಸಿಎಂ, ಬಿಜೆಪಿಯ ತ್ರಿವೇಂದ್ರ ಸಿಂಗ್ ರಾವತ್ ಹರಿದ್ವಾರದಲ್ಲಿ ಕಣದಲ್ಲಿದ್ದು, ಕಾಂಗ್ರೆಸ್ ನಾಯಕ ಮಾಜಿ ಸಿಎಂ ಹರೀಶ್ ರಾವತ್ ಪುತ್ರ ವೀರೇಂದ್ರ ರಾವತ್ ಮಧ್ಯೆ ಜಿದ್ದಾಜಿದ್ದಿನ ಚುನಾವಣಾ ಸಂಘರ್ಷ ಏರ್ಪಟ್ಟಿದೆ. ಪುತ್ರನ ಗೆಲುವಿವಾಗಿ ಹರೀಶ್ ರಾವತ್ ಹರಿದ್ವಾರದಲ್ಲೇ ಕ್ಯಾಂಪ್ ಹಾಕಿದ್ದು, ಉಳಿದ ನಾಲ್ಕು ಕ್ಷೇತ್ರಗಳತ್ತ ಮುಖ ಮಾಡಿಲ್ಲ ಎನ್ನುವುದು ರಾಜ್ಯ ಕಾಂಗ್ರೆಸ್ಸಿಗರ ಮುನಿಸಿಗೆ ಕಾರಣವಾಗಿದೆ.

    2014 ಮತ್ತು 19ರಲ್ಲಿ ಹರಿದ್ವಾರದಿಂದ ಬಿಜೆಪಿ ನಾಯಕ, ರಾಜ್ಯದ ಮಾಜಿ ಸಿಎಂ ರಮೇಶ್ ನಿಷಾಂಕ್ ಪೋಖ್ರಿಯಾಲ್ ಅವರು ಸಂಸದರಾಗಿದ್ದರು. ಈ ಬಾರಿ ನಿಷಾಂಕ್ ಬದಲಿಗೆ ಮತ್ತೋರ್ವ ಮಾಜಿ ಸಿಎಂ ತ್ರಿವೇಂದ್ರ ರಾವತ್​ರನ್ನು ಕಣಕ್ಕಿಳಿಸಲಾಗಿದೆ. ಇಲ್ಲಿಂದ ಹರೀಶ್ ರಾವತ್ ಸ್ಪರ್ಧಿಸಬೇಕು ಎಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದರು. ಆದರೆ, ಅನಾರೋಗ್ಯದ ನೆಪವೊಡ್ಡಿದ 76 ವಯಸ್ಸಿನ ರಾವತ್, ಮಗನ ರಾಜಕೀಯ ಭವಿಷ್ಯ ಭದ್ರಗೊಳಿಸಲು ಮುಂದಾಗಿದ್ದಾರೆ. 2009ರಲ್ಲಿ ರಾವತ್ ಹರಿದ್ವಾರದಿಂದ ಗೆದ್ದು, ಕೇಂದ್ರದಲ್ಲಿ ಮಂತ್ರಿಯಾಗಿದ್ದರು. 2014ರ ಚುನಾವಣೆಯಲ್ಲಿ ರಾವತ್ ಪತ್ನಿ ರೇಣುಕಾ ರಾವತ್ ಸ್ಪರ್ಧಿಸಿ, ಸೋತಿದ್ದರು. 2022ರ ವಿಧಾನಸಭೆ ಚುನಾವಣೆಯಲ್ಲಿ ಹರಿದ್ವಾರ ಗ್ರಾಮೀಣ ಕ್ಷೇತ್ರದಲ್ಲಿ ಹರೀಶ್ ರಾವತ್ ಪುತ್ರಿ ಅನುಪಮಾ ಸ್ಪರ್ಧಿಸಿ, ಶಾಸಕರಾಗಿದ್ದ ಬಿಜೆಪಿಯ ಸ್ವಾಮಿ ಯತೀಶ್ವರಾನಂದ್​ರನ್ನು ಸೋಲಿಸಿದ್ದರು. ಹರಿದ್ವಾರ ಲೋಕಸಭೆಯಿಂದ ಬಿಎಸ್​ಪಿ ಜಮೀಲ್ ಅಹ್ಮದ್​ರನ್ನು ಅಭ್ಯರ್ಥಿಯನ್ನಾಗಿ ನಿಲ್ಲಿಸಿದೆ. ಇಲ್ಲಿ ಶೇಕಡ 30ರಷ್ಟು ಮುಸ್ಲಿಂ ಜನಸಂಖ್ಯೆಯಿರುವುದರಿಂದ ಮತಗಳ ವಿಭಜನೆ ಕಾಂಗ್ರೆಸ್​ನ್ನು ಚಿಂತೆಗೀಡುಮಾಡಿದೆ.

    ನಿಮ್ಮ ಕಣ್ಣಿಗೊಂದು ಸವಾಲ್​: ಜಸ್ಟ್​ 10 ಸೆಕೆಂಡ್​ನಲ್ಲಿ ಈ ಚಿತ್ರದಲ್ಲಿರುವ ಸಿಂಹವನ್ನು ಹುಡುಕಿ…

    T20 World Cup: ಶಿವಂ ದುಬೆ ಮತ್ತು ಹಾರ್ದಿಕ್ ಪಾಂಡ್ಯ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಮನೋಜ್ ತಿವಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts