More

    ಕೋಟಿ ಗಳಿಕೆಯ ಮಾರ್ಗ ತುಂಬ ಸುಲಭ!

    ಕೋಟಿ ಗಳಿಕೆಯ ಮಾರ್ಗ ತುಂಬ ಸುಲಭ!ಹಣ ಮಾಡುವ ಕನಸು-ಮನಸು ಎಲ್ಲರಿಗೂ ಇದ್ದೇ ಇರುತ್ತದೆ, ಆದರೆ ಸಾಮಾನ್ಯವಾಗಿ ಕಷ್ಟಪಡಲು ಯಾರೂ ತಯಾರಿಲ್ಲ. ಆದರೆ ನನ್ನೊಡನಿದ್ದು ತನ್ನ ಶ್ರಮ ಮತ್ತು ಬುದ್ಧಿವಂತಿಕೆಯಿಂದ ಮೇಲೇರಿದ ಓಂ ಗಣೇಶ್ ಎಂಬ ಕಲಾವಿದನ ಬಗ್ಗೆ ನಿಮಗೆ ಹೇಳಲೇಬೇಕು. ಈತ ನನ್ನ ಗರಡಿಯಲ್ಲೇ ಪಳಗಿದ ಹುಡುಗನಾದ್ದರಿಂದ ಸಲಿಗೆಯಿಂದ ಏಕವಚನದಲ್ಲೇ ಸಂಬೋಧಿಸುತ್ತಿದ್ದೇನೆ. ಇದು ಇಪ್ಪತ್ತೈದು ವರ್ಷ ಹಿಂದಿನ ಮಾತು.

    ಓಂ ಗಣೇಶ್ ದಕ್ಷಿಣ ಕನ್ನಡದ ಉಪ್ಪುಂದ ಎಂಬ ಹಳ್ಳಿಯವನು. ಅವನ ತಂದೆ ಅಲ್ಲೊಂದು ಸಣ್ಣ ಹೋಟೆಲ್ ನಡೆಸುತ್ತಿದ್ದರು. ತಂದೆಯ ವ್ಯಾಪಾರದಲ್ಲಿ ಸಹಾಯ ಮಾಡುತ್ತಿದ್ದ ಓಂ ಗಣೇಶ್​ಗೆ ಹೋಟೆಲ್ ಕೆಲಸದ ಅನುಭವ ಸಾಕಷ್ಟು ಇತ್ತು. ಕೆಲಸದವರು ಬಾರದಿದ್ದಲ್ಲಿ ಇವನೇ ಅಡುಗೆ ಭಟ್ಟ, ಸಪ್ಲೈಯರ್, ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ. ಒಟ್ಟಿನಲ್ಲಿ ಮಹಾನ್ ಕೆಲಸಗಾರ, ಉತ್ತಮ ಕಲೆಗಾರ, ದೊಡ್ಡ ಕನಸುಗಾರ.

    ಚಿಕ್ಕ ವಯಸ್ಸಿನಲ್ಲೇ ಮ್ಯಾಜಿಕ್, ಶ್ಯಾಡೊ ಪ್ಲೇ, ಮಾತಾಡುವ ಗೊಂಬೆ, ಸಂಗೀತ, ಹಾರ್ಮೋನಿಯಂ ಮುಂತಾದ ಕಲೆಗಳಲ್ಲಿ ಪರಿಣತಿ ಪಡೆದಿದ್ದ. ಕಾಶೀನಾಥರ ಕೆಲವು ಸಿನಿಮಾಗಳಲ್ಲೂ ನಟಿಸಿದ್ದ. ಮ್ಯಾಜಿಕ್, ಆರ್ಕೆಸ್ಟ್ರಾ ಹುಚ್ಚಿನಿಂದಾಗಿ 18 ಸಾವಿರ ರೂ. ಸಾಲ ಕೂಡ ಮಾಡಿದ್ದ. ಕಲೆಯ ಗೀಳಿದ್ದ ಆತನಿಗೆ ಹೋಟೆಲ್ ಕೆಲಸ ಒಗ್ಗಲಿಲ್ಲ. ಪರಿಸ್ಥಿತಿ ಹೀಗಿರುತ್ತ ಹಿರಿಯರು ‘ಗಣೇಶನ ಮದುವೆ’ ಮಾಡಿದರು. ಹುಡುಗ ಹೆಂಡತಿ ಜತೆ ಹನಿಮೂನಿಗೆ ಬೆಂಗಳೂರಿಗೆ ಬಂದ. ಎಲ್ಲ ಮುಗಿದ ಮೇಲೆ ಕೊನೆಯ ಕಾರ್ಯಕ್ರಮವಾಗಿ ನನ್ನನ್ನು ಭೇಟಿಯಾಗಲು ಬಂದ. ಆ ಸಮಯದಲ್ಲೇ ನಾನು ಜಾದೂ ಕಿಟ್​ಗಳನ್ನು ಮಾರಿ ಹಣ ಮಾಡುವ ಯೋಜನೆಯೊಂದರ ರೂಪುರೇಷೆ ಹಾಕುತ್ತಿದ್ದೆ. ಇದಕ್ಕಾಗಿ ಯೋಗ್ಯ ವ್ಯಕ್ತಿಯೊಬ್ಬನ ಹುಡುಕಾಟದಲ್ಲಿದ್ದೆ. ಮಾತಿನ ಮಧ್ಯೆ ಓಂ ಗಣೇಶ್ ಹೋಟೆಲ್ ಉದ್ಯೋಗ ಬಿಟ್ಟು ಬೇರೇನಾದರೂ ಮಾಡುವ ಇಂಗಿತವನ್ನು ನನ್ನಲ್ಲಿ ಹೇಳಿಕೊಂಡ. ಆತನೇ ನನಗೆ ಸೂಕ್ತ ವ್ಯಕ್ತಿ ಎಂಬ ತೀರ್ಮಾನಕ್ಕೆ ಬಂದೆ. ಸರಿಯಾದ ದಿಕ್ಕಿನಲ್ಲಿ ತೊಡಗಿಸಿದರೆ ಅವನಿಗೆ ಯಶಸ್ಸು ಗ್ಯಾರೆಂಟಿ (ನನಗೂ!) ಎಂದು ತಿಳಿದಿತ್ತು. ಐಡಿಯಾಗಳನ್ನೆಲ್ಲ ಅವನಿಗೆ ವಿವರಿಸಿ, ಹುರಿದುಂಬಿಸಿ, ‘ಬಂದ ಲಾಭ ನಿನಗಿರಲಿ, ನಷ್ಟ ನನಗಿರಲಿ’ ಎಂದು ಹೇಳಿ ತಲೆಯಲ್ಲಿ ಹುಳ ಬಿಟ್ಟೆ. ಜತೆಗೆ ಮ್ಯಾಜಿಕ್ ಕಿಟ್​ಗಳನ್ನು ಉಡುಗೊರೆಯಾಗಿ ಕೊಟ್ಟು ಊರಿಗೆ ಕಳುಹಿಸಿಕೊಟ್ಟೆ.

    ಒಂದು ವಾರದಲ್ಲಿ ಓಂ ಗಣೇಶನಿಂದ ಸುದೀರ್ಘವಾದ ಪತ್ರ ಬಂತು. ಮ್ಯಾಜಿಕ್ ಕಿಟ್​ಗಳನ್ನು ಸಂತೆ, ಬಸ್, ರೈಲುಗಳಲ್ಲಿ ಮಾರಲು ಸಿದ್ಧವಿರುವುದಾಗಿ ತಿಳಿಸಿದ್ದ. ಸಂತೆಗೆ ಕಡಿಮೆ ಅಂದರೂ 50 ಸಾವಿರ ಜನ ಬರುತ್ತಾರೆ. ಶೇಕಡ 10 ಜನ ಅಂದರೆ 5 ಸಾವಿರ ಜನ ಕಿಟ್ ಕೊಂಡರೂ ಒಂದು ಕಿಟ್​ಗೆ 10 ರೂಪಾಯಿ ಲಾಭದಂತೆ 50 ಸಾವಿರ ರೂಪಾಯಿ ಸಿಗುತ್ತದೆ ಎಂಬ ಲೆಕ್ಕಾಚಾರವನ್ನು ಅಂಕಿ-ಅಂಶಗಳ ಸಮೇತ ವಿವರಿಸಿದ್ದ! ಬರಿಯ ಲೆಕ್ಕಾಚಾರಗಳ ಬಗ್ಗೆ ನಂಬಿಕೆ ಇರದ ನಾನು ‘ಮಾಡಿ ನೋಡು’ ಎಂದು ಹೇಳಿ ಕಿಟ್​ಗಳನ್ನು ಕಳುಹಿಸಿಕೊಟ್ಟೆ.

    ಸಂತೆಗೆ ಬರುವ ಗ್ರಾಹಕರ ಉದ್ದೇಶವೇ ಬೇರೆ ಇರುತ್ತದೆ. ಅದರಲ್ಲೂ ತೀರಾ ಹಳ್ಳಿಗಳಲ್ಲಿ ನಡೆಯುವ ಸಂತೆಗಳಲ್ಲಿ ಕಿಟ್​ಗಳನ್ನು ಕೊಳ್ಳುವಂಥ ಗ್ರಾಹಕರು ಇರುವುದಿಲ್ಲ. ಗ್ರಾಹಕನ ಅವಶ್ಯಕತೆಗೂ ಮಾರಲು ಇಟ್ಟ ವಸ್ತುವಿಗೂ ತಾಳೆಯಾದರೆ ಮಾತ್ರ ಅಲ್ಲಿ ವ್ಯಾಪಾರ ನಡೆಯುತ್ತದೆ ಎಂದು ಮನಗಂಡ ಓಂಗಣೇಶ, ಸಂತೆ ವ್ಯಾಪಾರದ ಐಡಿಯಾ ಕೈ ಬಿಟ್ಟು, ಶಾಲೆಗಳಿಗೆ ತೆರಳಿ ಮಕ್ಕಳಿಗೆ ಕಿಟ್​ಗಳನ್ನು ಮಾರಾಟ ಮಾಡತೊಡಗಿದ. ವ್ಯಾಪಾರ ಸಾಧಾರಣವಾಗಿತ್ತು. ಆದ್ದರಿಂದ ನಿರಾಶನಾದ. ಸರಿಯಾದ ಸ್ಥಳ ಗೊತ್ತುಮಾಡಿ ಅಲ್ಲಿ ವ್ಯಾಪಾರ ಮಾಡಿದರೆ ವ್ಯಾಪಾರ ಗ್ಯಾರಂಟಿ ಎಂದು ಆತನಿಗೆ ಧೈರ್ಯ ತುಂಬಿದೆ. ನಾನು ಊರೂರಲ್ಲಿ ಮ್ಯಾಜಿಕ್ ಶೋ ಕೊಡುತ್ತಿದ್ದಾಗ ಇಂತಹ ಅನೇಕ ಕಹಿ ಅನುಭವಗಳು ಆಗಿದ್ದವು. ಆದ ಅನುಭವವೇ ದಕ್ಕಿದ ಲಾಭ!

    ಸುಮಾರು ಮೂರು ತಿಂಗಳ ನಂತರ ಗೋವಾದಲ್ಲಿ ಅವನ ಪ್ರದರ್ಶನ ಫಿಕ್ಸ್ ಆಯಿತು. ಸರಿ, ವ್ಯಾಪಾರ ಬಿಟ್ಟು ಅಲ್ಲಿಗೆ ತೆರಳಿದ. ಅದೊಮ್ಮೆ ನಾನು ಕಾಯುತ್ತಿದ್ದ ಸಂದರ್ಭವೊಂದು ಒದಗಿಬಂತು. ಪ್ರತಿವರ್ಷ ದೆಹಲಿಯ ಪ್ರಗತಿ ಮೈದಾನದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಸ್ತುಪ್ರದರ್ಶನ ನಡೆಯುತ್ತದೆ. ಅಲ್ಲಿ ಮೂರು-ನಾಲ್ಕು ತಿಂಗಳು ಮುಂಚಿತವಾಗಿಯೇ ಮಳಿಗೆಗಳನ್ನು ಮುಂಗಡ ಸಮೇತ ಕಾದಿರಿಸಬೇಕು. ಆದರೆ ಇದ್ದುದು ಕೇವಲ ಒಂದೇ ತಿಂಗಳು. ನನ್ನ ಮಿತ್ರ, ಆಗಿನ ಶಾಸಕ ವಿಜಯಕುಮಾರ್ ಶೆಟ್ಟಿಯವರ ಬೆನ್ನು ಬಿದ್ದೆ. ಅವರು ಶತಾಯಗತಾಯ ಪ್ರಯತ್ನಿಸಿ ಜಾಗ ಕೊಡಿಸಿದ್ದು ಮಾತ್ರವಲ್ಲ -ಠಿ; 15 ಸಾವಿರ ಸಂಭಾವನೆಯ ಶೋ ಕೂಡ ಕೊಡಿಸಿದರು.

    ಬೆಂಗಳೂರಿನಿಂದ ದೆಹಲಿಗೆ ಕಿಟ್​ಗಳನ್ನು ಸಾಗಿಸಬೇಕಲ್ಲ. ಲಾರಿಯಲ್ಲಿ ಕಿಟ್​ಗಳನ್ನು ತುಂಬಿಕೊಂಡು ಸ್ನೇಹಿತ ರವಿಶಂಕರ ಕಿಣಿಯವರ ಸಾರಥ್ಯದಲ್ಲಿ (ಅವರೇ ಲಾರಿಗೆ ಡ್ರೖೆವರು) ದೇಶದ ರಾಜಧಾನಿಯೆಡೆಗೆ ನಮ್ಮ ಘೊಷಯಾತ್ರೆ ಹೊರಟಿತು. ಇತ್ತ ರಾಜ್ಯದ ರಾಜಧಾನಿಯಲ್ಲಿ ವ್ಯಾಪಾರಕ್ಕೆ ಸೂಕ್ತವಾದ ತಂಡವೊಂದರ ತಯಾರಿಗೆ ತಾಲೀಮು ಶುರು ಮಾಡಿದೆವು. ತಂಡದ ಸದಸ್ಯರಿಗೆ ಉತ್ಸಾಹ ವಿಪರೀತವಾಗಿತ್ತು. ಆದರೆ ದೈಹಿಕವಾಗಿಯೂ ಅವರು ಫಿಟ್ ಆಗಬೇಕಾಗಿತ್ತು. ದಿನವಿಡೀ ಒಂದೇ ಸ್ಥಳದಲ್ಲಿ ನಿಲ್ಲುವ ಸಾಮರ್ಥ್ಯ, ಬೇಜಾರಿಲ್ಲದೆ, ಮತ್ತಷ್ಟು ಆಕರ್ಷಕವಾಗಿ ಕಿಟ್​ಗಳ ಬಗ್ಗೆ ವಿವರಿಸುವ ಲವಲವಿಕೆ- ಇವುಗಳಿಗೆ ಒಗ್ಗಿಕೊಳ್ಳಬೇಕಾಗಿತ್ತು. ಇದಕ್ಕಾಗಿ ಬೆಳಗ್ಗೆ 5 ಗಂಟೆಗೆ ಎದ್ದು ಒಂದು ಗಂಟೆ ಜಾಗಿಂಗ್, ಲಘು ವ್ಯಾಯಾಮ ಮುಂತಾದವುಗಳ ಮೂಲಕ ಮೇಲಿನ ಕೊರತೆ ತುಂಬಿಕೊಳ್ಳುವ ಸಾಧನೆ ಆರಂಭಿಸಿದೆವು. ಮೈಮನ ಗಟ್ಟಿಯಾಯಿತು. ನಮ್ಮ ತಂಡದಲ್ಲಿ ಓಂ ಗಣೇಶ್, ಗಿರಿ, ರಾಜ, ವಿನೋದ್, ಚೆಂಗಪ್ಪ, ಕುಟಾಣಿ, ನರಸಿಂಹ ನಾಯಕ್ ಎಂಬ ಉತ್ಸಾಹಿ ಯುವಕರಿದ್ದರು. ಎಲ್ಲರಿಗೂ ಏನಾದರೂ ಮಾಡಬೇಕೆಂಬ ಹಂಬಲ.

    ಆ ದಿನ ಬಂದೇ ಬಿಟ್ಟಿತು. ಕಿಣಿ, ರಾಜ, ಭಡ್ಜಿ ಆಗಲೇ ಲಾರಿಯಲ್ಲಿ ಹೊರಟಿದ್ದರು. ಉಳಿದ ನಾವು ರೈಲಿನಲ್ಲಿ ದೆಹಲಿಗೆ ಹೋದೆವು. ಪ್ರಗತಿ ಮೈದಾನದ ವಸ್ತುಪ್ರದರ್ಶನದಲ್ಲಿ ಮೂರು ಮಳಿಗೆಗಳನ್ನು ಬಾಡಿಗೆಗೆ ಪಡೆದಿದ್ದೆವು. ಟಾಯ್ ಫೇರ್ ಎಂಬಲ್ಲಿಯ ಮಳಿಗೆಗೆ ಹೆಚ್ಚು ಬಾಡಿಗೆ, ಗುಡ್ ಲಿವಿಂಗ್ ಎಂಬಲ್ಲಿಯ ಮಳಿಗೆಗೆ ಸ್ವಲ್ಪ ಕಮ್ಮಿ ಬಾಡಿಗೆ, ಕರ್ನಾಟಕ ಪೆವಿಲಿಯನ್​ನ ಮಳಿಗೆಗೆ ಇನ್ನೂ ಸ್ವಲ್ಪ ಕಮ್ಮಿ ಬಾಡಿಗೆ. ಟಾಯ್ ಫೇರ್​ನಲ್ಲಿ ಓಂ ಗಣೇಶ್, ರಾಜ ಮತ್ತು ಚೆಂಗಪ್ಪ, ಗುಡ್ ಲಿವಿಂಗ್​ನಲ್ಲಿ ಗಿರಿ ಮತ್ತು ನರಸಿಂಹ, ಕರ್ನಾಟಕ ಪೆವಿಲಿಯನ್​ನಲ್ಲಿ ವಿನೋದ್ ಮತ್ತು ಕುಟಾಣಿ ವ್ಯಾಪಾರ ಆರಂಭಿಸಿದರು. ನಿರಂತರ ಮೂರು ದಿನ ಒಂದೇ ಒಂದು ಕಿಟ್ ಬಿಕರಿಯಾಗಲಿಲ್ಲ! ಎಲ್ಲರಿಗೂ ತೀರಾ ನಿರಾಶೆ. ಅದಾಗಲೇ ಎಲ್ಲರ ತ್ರಾಣ, ಉತ್ಸಾಹ, ಹಣ ಕರಗತೊಡಗಿತ್ತು. ನಮ್ಮ ನಿರೀಕ್ಷೆಯಂತೆ ವಹಿವಾಟು ನಡೆಯುವ ಸೂಚನೆ ಕಾಣಲಿಲ್ಲ.

    ಜೋಕು

    ರಾಮು: ‘ಜೀವನದಲ್ಲಿ ಯಾವುದಕ್ಕೂ ಹೆದರದೆ ಧೈರ್ಯವಂತರಾಗಿ ಬಾಳೋದು ಹೇಗೆ?’ ಅಂತ ಪುಸ್ತಕ ಬರೀತಿದ್ದೆಯಲ್ಲಾ, ಮುಗೀತಾ?

    ಶಾಮು: ಮುಗೀತು. ಆದ್ರೆ ಪ್ರಕಟಿಸೋಕ್ಕೆ ಯಾಕೋ ಧೈರ್ಯಾನೇ ಬರ್ತಾ ಇಲ್ಲ!

    (ಲೇಖಕರು ಖ್ಯಾತ ಜಾದೂಗಾರರು, ಬರಹಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts