More

    ವಾಟ್ಸ್ಆ್ಯಪ್‌ನಲ್ಲೇ ಸಿಗಲಿದೆ ಪಾಸ್ ; ಆನ್‌ಲೈನ್‌ನಲ್ಲಿ ಸಲ್ಲಿಸಬಹುದು ಅರ್ಜಿ

    ತುಮಕೂರು: ಲಾಕ್‌ಡೌನ್ ಜಾರಿ ಸಂದರ್ಭದಲ್ಲಿ ಹೊರ ಜಿಲ್ಲೆಗಳಿಗೆ ತೆರಳಲು ಅನಿವಾರ್ಯತೆ ಎದುರಾದಾಗ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಅಲೆಯುವ ಬದಲು ಇನ್ನು ಮುಂದೆ ಆನ್‌ಲೈನ್‌ನಲ್ಲೇ ಪಾಸ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ.

    ಲಾಕ್‌ಡೌನ್ 2.0 ಮತ್ತಷ್ಟು ಕಠಿಣಗೊಳಿಸಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಮನೆಯಲ್ಲೇ ಇದ್ದು ಸರ್ಕಾರದ ಆದೇಶ ಪಾಲಿಸಬೇಕಿದೆ. ಆದರೆ, ಅನಿವಾರ್ಯ ಸಂದರ್ಭದಲ್ಲಿ ಪೊಲೀಸರ ಪಾಸ್ ಪಡೆದು ಹೊರ ಜಿಲ್ಲೆಗಳಿಗೆ ತೆರಳಲು ಮಾನವೀಯತೆ ಆಧಾರದಲ್ಲಿ ಅನುಮತಿ ಕೊಡಲಾಗುತ್ತಿದೆ. ಈ ಅನುಮತಿ ಪಾಸ್‌ಗಾಗಿ ದಿನವಿಡೀ ಪೊಲೀಸ್ ಕಚೇರಿ ಬಳಿ ಕಾಯುವ ಅಗತ್ಯವಿಲ್ಲ. ಇ-ಮೇಲ್, ವಾಟ್ಸ್‌ಆ್ಯಪ್‌ಗಳಲ್ಲಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಅನುಮತಿ ಪಾಸ್ ಕೂಡ ಆನ್‌ಲೈನ್‌ನಲ್ಲೇ ಪಡೆದುಕೊಳ್ಳಬಹುದಾಗಿದೆ.

    ತುರ್ತು ಇದ್ದರೆ ಪಾಸ್: ತುರ್ತು ಚಿಕಿತ್ಸೆ, ರಕ್ತಸಂಬಂಧಿಗಳ ಅಂತ್ಯಕ್ರಿಯೆ, ಸ್ವಂತ ಮದುವೆ ಹಾಗೂ ಇತರ ಅನಿವಾರ್ಯ ಕಾರಣಗಳಿಗಾಗಿ ತುಮಕೂರು ಜಿಲ್ಲೆಯಿಂದ ಹೊರಜಿಲ್ಲೆಗಳಿಗೆ ತೆರಳುವ ಸಂದರ್ಭ ಒದಗಿ ಬಂದಲ್ಲಿ ಪೂರ್ಣ ಮಾಹಿತಿ ಹಾಗೂ ದಾಖಲಾತಿಗಳ ನಕಲುಗಳೊಂದಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಿದೆ. ಅರ್ಜಿದಾರರ ಹೆಸರು ಹಾಗೂ ವಿಳಾಸ, ಆಧಾರ್ ನಂಬರ್, ಪ್ರಯಾಣಿಸುವ ವಾಹನದ ನಂಬರ್ ಹಾಗೂ ಪ್ರಯಾಣಿಕರ ಸಂಖ್ಯೆ, ಪ್ರಯಾಣ ಮಾಡುವ ಸ್ಥಳ, ದಿನಾಂಕ ಹಾಗೂ ಪ್ರಯಾಣದ ಉದ್ದೇಶದೊಂದಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಇನ್ಮುಂದೆ ಕಚೇರಿಗೆ ಅಲೆದಾಡುವುದು ತಪ್ಪುತ್ತದೆ ಎನ್ನುತ್ತಾರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ.

    ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸ್ವೀಕಾರ!: ಜಿಲ್ಲಾ ಪೊಲೀಸ್ ಕಚೇರಿ, ಠಾಣೆ, ವೃತ್ತ, ಉಪವಿಭಾಗ ಕಚೇರಿಗಳಲ್ಲಿ ಪಾಸ್‌ಗಳಿಗಾಗಿ ನೇರವಾಗಿ ಅರ್ಜಿ ಸ್ವೀಕರಿಸಲಾಗುವುದಿಲ್ಲ. ಸಾರ್ವಜನಿಕರು ಲಾಕ್‌ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಾಗಿರುವುದರಿಂದ ವಿನಾಕಾರಣ ಪೊಲೀಸ್ ಠಾಣೆ, ಕಚೇರಿಗಳಿಗೆ ಹೋಗದೆ ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ಸಲ್ಲಿಸಿದ ಅರ್ಜಿಯನ್ನು ಮಾತ್ರ ಸ್ವೀಕರಿಸಲಾಗುವುದು. ಪಾಸ್‌ಗಳನ್ನು ವಾಟ್ಸ್ಆ್ಯಪ್, ಇ-ಮೇಲ್‌ಗಳಿಗೆ ತುರ್ತಾಗಿ ಕಳುಹಿಸಿಕೊಡಲಾಗುವುದು.

    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದರಲ್ಲೇನಾದರೂ ಸುಳ್ಳು ಮಾಹಿತಿಗಳನ್ನು ನೀಡಿ ಪಾಸ್‌ಗಳಿಗೆ ಅರ್ಜಿ ಸಲ್ಲಿಸಿದ್ದು ಕಂಡುಬಂದರೆ ಅಂತಹವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು.
    ಡಾ.ಕೆ.ವಂಶಿಕೃಷ್ಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts