More

    ವಿರೋಧ ಪಕ್ಷದವರಿಗೆ ಟೀಕೆ ಮಾಡುವುದು ಬಿಟ್ಟು ಬೇರೆ ಕೆಲಸವಿಲ್ಲ; ಡಿಸಿಎಂ ಡಿಕೆಶಿ

    ಬೆಂಗಳೂರು: ಬೆಂಗಳೂರಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡರೂ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಪ್ರಯತ್ನಿಸಿಲ್ಲ ಎಂಬ ಪ್ರತಿಪಕ್ಷ ಬಿಜೆಪಿ ನಾಯಕರ ಟೀಕೆಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ವಿರೋಧ ಪಕ್ಷದವರಿಗೆ ಟೀಕೆ ಮಾಡುವುದು ಬಿಟ್ಟು ಬೇರೆ ಇನ್ನೇನು ಕೆಲಸ ಇಲ್ಲ ಎಂದು ಕಿಡಿಕಾರಿದ್ದಾರೆ.
    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಶೇಕಡಾ 50ರಷ್ಟು ಕೊಳವೆ ಬಾವಿಗಳು ಬರಿದಾಗಿದೆ. ಸಾವಿರಾರು ಟ್ಯಾಂಕರ್ ಗಳನ್ನು ನಾವು ನಿಯಂತ್ರಣಕ್ಕೆ ತೆಗೆದುಕೊಂಡು ನೀರಿನ ಮೂಲಗಳಿರುವ ಕಡೆಗಳಿಂದ ನೀರನ್ನು ಪೂರೈಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
    ಕುಡಿಯುವ ನೀರಿನ ಅಭಾವದ ಬಗ್ಗೆ ವಿರೋಧ ಪಕ್ಷಗಳು ರಾಜಕೀಯ ಟೀಕೆ ಬಿಟ್ಟು ರಚನಾತ್ಮಕ ಸಲಹೆ ಕೊಟ್ಟರೆ ಸ್ವೀಕರಿಸಲು ಸಿದ್ಧ ಎಂದ ಅವರು ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಟ್ಯಾಂಕರ್ ಹಾಗೂ ಖಾಸಗಿಯವರನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡು ಮಾಫಿಯಾ ತಡೆಗಟ್ಟಿದ್ದೇವೆ ಎಂದು ಸಮರ್ಥಿಸಿಕೊಂಡರು.
    ದೂರದಿಂದ ನೀರು ಪೂರೈಸುವ ಕಾರಣ ಟ್ಯಾಂಕರ್ ನೀರಿನ ದರ ನಿಗಧಿಯ ನಿರ್ಧಾರವನ್ನು ಅಧಿಕಾರಿಗಳಿಗೆ ಬಿಟ್ಟಿದ್ದೇವೆ. ಇನ್ನು ರಾಜ್ಯದಲ್ಲಿ ಖಾಲಿ ಇರುವ ದೊಡ್ಡ ಹಾಲಿನ ಟ್ಯಾಂಕರ್‌ಗಳನ್ನ ನೀರು ಪೂರೈಸಲು ಬಳಸಲಾಗುವುದು ಎಂದು ಹೇಳಿದರು.
    ಮಾಧ್ಯಮಗಳಲ್ಲಿ ನೀರಿನ ಆಹಾಕಾರದ ಬಗ್ಗೆ ತೋರಿಸುತ್ತಿದ್ದೀರಿ. ಕೊಳವೆ ಬಾವಿಗಳು ಬತ್ತಿದಾಗ ಹಾಹಾಕಾರಾ ಉದ್ಭವಿಸುತ್ತದೆ. ನಾವು ನೀರು ಪೂರೈಸಲು ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದ ಅವರು ಕಾವೇರಿ ನೀರನ್ನು ಸಮರ್ಪಕವಾಗಿ ಪೂರೈಸಲಾಗುತ್ತಿದೆ. ಬೆಂಗಳೂರಿನ ಹೊರವಲಯದ 110 ಹಳ್ಳಿಗಳಲ್ಲಿ ಕಾವೇರಿ ನೀರು ಪೂರೈಕೆ ಮೇ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
    ಈ ಪರಿಸ್ಥಿತಿಯಲ್ಲಿ ಕುಡಿಯುವ ನೀರನ್ನು ಕಾರು ವಾಹನ ತೊಳೆಯಲು ಹಾಗೂ ಇತರೆ ಬಳಕೆಗೆ ಬಳಸಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದೇವೆ. ನೀರಿನ ಬೆಲೆ ಎಲ್ಲರಿಗೂ ಅರ್ಥವಾಗಬೇಕು ಎಂದರು.
    ಬೆಂಗಳೂರು ಗ್ರಾಮಾಂತರ ಭಾಗದ ವಾರ್ಡ್‌ಗಳಿಗೆ ನೋಡಲ್ ಅಧಿಕಾರಿ ನೇಮಿಸಿದ್ದು, ಬೇರೆ ಭಾಗಗಳಲ್ಲಿ ಯಾಕೆ ನೇಮಿಸಿಲ್ಲ ಎಂದು ಸುದ್ದಿಗಾರರು ಕೇಳಿದಾಗ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನೋಡಲ್ ಅಧಿಕಾರಿ ನೇಮಕ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಭಾಗ ಸಂಪೂರ್ಣವಾಗಿ ಕೊಳವೆ ಬಾವಿಗಳ ಮೇಲೆ ಅವಲಂಬಿತವಾಗಿವೆ. ಬೆಂಗಳೂರು ನಗರ ಕಾವೇರಿ ನೀರನ್ನು ಅವಲಂಬಿಸಿದೆ. ಬೆಂಗಳೂರು ಗ್ರಾಮಾಂತರದಿಂದಲೇ ಹೆಚ್ಚು ಟ್ಯಾಂಕರ್ ಮೂಲಕ ನೀರು ಬರುತ್ತಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts