More

    ಅಷ್ಟಲಕ್ಷ್ಮೀಯರು ನೆಲೆಸಿರುವ ಏಕೈಕ ದೇಗುಲ

    ಚಿಕ್ಕಮಗಳೂರು: ಯಾವುದೇ ಮಹಾಲಕ್ಷ್ಮೀ ದೇವಾಲಯಕ್ಕೆ ಹೋದರೆ ಅಲ್ಲಿ ಕೇವಲ ಲಕ್ಷ್ಮೀ ದೇವಿಯನ್ನು ನೋಡಲು ಮಾತ್ರ ಸಾಧ್ಯ. ಆದರೆ ಚಿಕ್ಕಮಗಳೂರಿನ ಕೆ.ಎಂ.ರಸ್ತೆಯಲ್ಲಿರುವ ಶ್ರೀ ಮಹಾಲಕ್ಷ್ಮೀ ದೇವಾಲಯ ಪ್ರಪಂಚದಲ್ಲೇ ಅತ್ಯಂತ ಶ್ರೇಷ್ಠವಾದ ದೇವಾಲಯ ಎನ್ನುವ ಪ್ರಖ್ಯಾತಿಗೆ ಒಳಗಾಗಿದೆ. ಇದಕ್ಕೆ ಕಾರಣ ಇಲ್ಲಿ ಮಹಾಲಕ್ಷ್ಮೀ ದೇವಿಯ ಜತೆಗೆ ಅಷ್ಟಲಕ್ಷ್ಮೀಯರೂ ನೆಲೆಸಿದ್ದಾರೆ. ಪ್ರತಿದಿನವೂ ಇಲ್ಲಿ ಶ್ರೀ ಮಹಾಲಕ್ಷ್ಮೀ ಅಮ್ಮನವರ ಜತೆಗೆ ಅಷ್ಟ ಲಕ್ಷ್ಮೀಯರಿಗೂ ವಿಶೇಷ ಪೂಜೆ ನೆರವೇರುತ್ತದೆ.

    ಚಿಕ್ಕಮಗಳೂರಿನಿಂದ ಕಡೂರಿಗೆ ಹೋಗುವ ಹೆದ್ದಾರಿಯಲ್ಲಿ ಈ ದೇವಾಲಯವಿದ್ದು, ಶ್ರೀ ಮಹಾಲಕ್ಷ್ಮಿಯ ಮುಖ್ಯ ಗುಡಿಯ ಸುತ್ತಲೂ ಶ್ರೀ ವಿಜಯಲಕ್ಷ್ಮೀ, ಶ್ರೀ ಆದಿಲಕ್ಷ್ಮೀ, ಶ್ರೀ ಧಾನ್ಯಲಕ್ಷ್ಮೀ, ಶ್ರೀಧನಲಕ್ಷ್ಮೀ, ಶ್ರೀ ಗಜಲಕ್ಷ್ಮೀ, ಶ್ರೀವೀರಲಕ್ಷ್ಮೀ, ಶ್ರೀ ಐಶ್ವರ್ಯ ಲಕ್ಷ್ಮೀ, ಶ್ರೀ ಸಂತಾನ ಲಕ್ಷ್ಮೀಯ ಅಮೃತ ಶಿಲೆಯ ಸುಂದರ ವಿಗ್ರಹಗಳು ಭಕ್ತರನ್ನು ಸೆಳೆದು ಆಶೀರ್ವದಿಸುವ ಭಂಗಿಯಲ್ಲಿದ್ದು, ದೇವಾಲಯದ ಆಸ್ತಿಕ ವಾತಾವರಣವನ್ನು ಹೆಚ್ಚಿಸಿವೆ.
    ಇಷ್ಟಕ್ಕೇ ಮುಗಿಯುವುದಿಲ್ಲ ಈ ದೇವಸ್ಥಾನದ ವಿಶಿಷ್ಟತೆ ಶ್ರೀಮಹಾಲಕ್ಷ್ಮಿಯ ತಾಯಿಯ ಜತೆ ನಿತ್ಯಾರಾಧನೆಯ ಅಷ್ಟ ಲಕ್ಷ್ಮಿಯರೊಂದಿಗೆ ನಾಲ್ಕು ಉಪ ದಿಕ್ಕುಗಳಲ್ಲೂ ಶ್ರೀರಾಮ, ಶ್ರೀ ಆಂಜನೇಯ, ಶ್ರೀ ಶಕ್ತಿ ಗಣಪತಿ ಮತ್ತು ಶ್ರೀ ಕಾರ್ತಿಕೇಯ ದೇಗುಲಗಳು ಚಚ್ಚೌಕಾರದ ಜಗುಲಿಯಲ್ಲಿ ನಿರ್ಮಾಣಗೊಂಡು ಭಕ್ತರಿಂದ ಪೂಜೆಗೊಳ್ಳುತ್ತಿರುವುದು ವಿಶೇಷ.
    ಶೃಂಗೇರಿ ಜಗದ್ಗುರು ಮಹಾ ಸನ್ನಿಧಾನ ಶ್ರೀ ಭಾರತೀ ತೀರ್ಥ ಮಹಾಸ್ವಾಮಿ ಅವರ ಆದೇಶ ಹಾಗೂ ದಿವ್ಯ ಮಾರ್ಗದರ್ಶನದಲ್ಲಿ ಈ ಮಹಾಲಕ್ಷ್ಮೀ ಸಹಿತ ಅಷ್ಟಲಕ್ಷ್ಮೀಯರ ದೇವಾಲಯವನ್ನು ಶ್ರೀ ವಿ.ರಾಮರಾವ್ ಮತ್ತು ಕುಟುಂಬ ವರ್ಗ ಹಾಗೂ ಹಲವು ದಾನಿಗಳ ನೆರವಿನಿಂದ ನಿರ್ಮಿಸಲಾಗಿದೆ. ಅಂತಾರಾಷ್ಟ್ರೀಯ ಖ್ಯಾತಿವೆತ್ತ ಶಿಲ್ಪಿ ಡಾ. ವಿ.ಗಣಪತಿ ಸ್ಥಪತಿ ಅವರ ಮಾರ್ಗದರ್ಶನದಲ್ಲಿ ಈ ದೇವಾಲಯ ನಿರ್ಮಾಣವಾಗಿದೆ.
    ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳು ಮಹಾ ಕುಂಭಾಭಿಷೇಕ ನೆರವೇರಿಸಿ ಈ ದೇವಾಲಯವನ್ನು ಶಾಸ್ತ್ರ ಬದ್ಧವಾಗಿಸಿ ಭಕ್ತರ ಅಭೀಷ್ಟಗಳನ್ನು ಶ್ರೀ ಮಹಾಲಕ್ಷ್ಮೀ ಅನುಗ್ರಹಿಸುವಂತೆ ಮಾಡಿದ್ದು, ದೇವಾಲಯದಲ್ಲಿ ನಿತ್ಯಪೂಜೆ ನಡೆಯುತ್ತಿದೆ. ಶ್ರೀ ಅಷ್ಟಲಕ್ಷ್ಮೀಯರು ಆವಿರ್ಭವಿಸಿಕೊಂಡ ಈ ಶ್ರೀ ಮಹಾಲಕ್ಷ್ಮೀ ದೇವಾಲಯ ಈ ಭಾಗದಲ್ಲಿ ಅತ್ಯಂತ ಅಪೂರ್ವವೆನಿಸಿದ್ದಾಗಿದೆ. ಇನ್ನೊಂದು ವಿಶೇಷವೆಂದರೆ ಈ ದೇವಾಲಯವು ಶೃಂಗೇರಿ ಶ್ರೀ ಶಾರದಾಪೀಠದ ಆಡಳಿತಕ್ಕೊಳಪಟ್ಟಿದೆ.

    ಗುರುಭವನಕ್ಕೆ ಭೂಮಿ ಪೂಜೆ 
    ಶೃಂಗೇರಿ ಜಗದ್ಗುರುಗಳು ಚಿಕ್ಕಮಗಳೂರು ಭಾಗಕ್ಕೆ ಬಂದಾಗ ಅವರಿಗೆ ತಂಗಲು ಅನುಕೂಲವಾಗುವಂತೆ ಚಿಕ್ಕಮಗಳೂರು ಕೆ.ಎಂ.ರಸ್ತೆಯಲ್ಲಿರುವ ಶ್ರೀ ಮಹಾಲಕ್ಷ್ಮೀ ದೇವಾಲಯದ ಆವರಣದಲ್ಲಿ ಗುರುಭವನ ನಿರ್ಮಿಸಲು ಉದ್ದೇಶಿಸಲಾಗಿದ್ದು, ಗುರುಭವನದ ಭೂಮಿ ಪೂಜೆ ಕಾರ್ಯಕ್ರಮ ಮಾ.25ರಂದು ಬೆಳಗ್ಗೆ 9.5ಕ್ಕೆ ನೆರವೇರಲಿದೆ. ಇದರೊಂದಿಗೆ ಯಾಗಶಾಲೆ, ಅರ್ಚಕರ ನಿವಾಸ ಮತ್ತು ಆಡಳಿತ ಕಚೇರಿ ಕಟ್ಟಡಕ್ಕೂ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ. ದೇವಾಲಯದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಯಾಗಶಾಲೆಯ ವಿಶೇಷವೆಂದರೆ ಸಹಸ್ರ ಚಂಡಿಕಾಹೋಮ ಹಾಗೂ ಅತಿರುದ್ರ/ಮಹಾರುದ್ರ ಮಹಾಯಾಗ ಮಾಡುವಂಥ 11 ಕುಂಡಗಳ ಯಾಗಶಾಲೆ ಇದಾಗಿದೆ. ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಶೃಂಗೇರಿ ಶ್ರೀ ಶಾರದಾ ಪೀಠದ ಪ್ರಧಾನ ಸಲಹೆಗಾರರು, ಗುರುಸೇವಾ ಧುರೀಣ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ವಿ.ಆರ್.ಗೌರಿಶಂಕರ್, ಅರ್ಚಕರ ನಿವಾಸದ ದಾನಿಗಳಾದ ಲೈಪ್ ಲೈನ್ ಫೀಡ್ಸ್ ಸಂಸ್ಥೆಯ ಕಿಶೋರ್ ಕುಮಾರ್ ಹೆಗ್ಡೆ ಅವರು ಭಾಗವಹಿಸಲಿದ್ದಾರೆ.

    ಶೃಂಗೇರಿಯ ಶ್ರೀ ಜಗದ್ಗುರುಗಳು ಚಿಕ್ಕಮಗಳೂರು ಭಾಗಕ್ಕೆ ಬಂದಾಗ ಅವರಿಗೆ ತಂಗಲು ವ್ಯವಸ್ಥೆಯಿರಲಿಲ್ಲ. ಭಕ್ತರ ಮನೆಗಳಿಗೆ ಹೋಗಿ ತಂಗಬೇಕಿತ್ತು. ಇದನ್ನು ಮನಗಂಡು ಶ್ರೀಮಹಾಲಕ್ಷ್ಮೀ ದೇವಾಲಯದ ಆವರಣದಲ್ಲಿ ಗುರುಭವನ ನಿರ್ಮಾಣ ಮಾಡಲಾಗುತ್ತಿದೆ. ಇದು ಕೇವಲ ಗುರುಗಳು ಬಂದಾಗ ವಾಸ್ತವ್ಯಕ್ಕೆ ಮಾತ್ರ ಸೀಮಿತವಾಗಿರಲಿದೆ.
    ವಿ.ರಾಮರಾವ್, ದೇವಾಲಯದ ಧರ್ಮಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts