More

    17 ಲೋಕಸಭೆ ಕ್ಷೇತ್ರಗಳಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚು!

    ಬೆಂಗಳೂರು: 17 ಲೋಕಸಭೆ, 113 ವಿಧಾನಸಭೆ ಕ್ಷೇತ್ರಗಳಲ್ಲಿ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚು! ಮತದಾರರ ಪಟ್ಟಿ ಪರಿಷ್ಕರಣೆ ಬಳಿಕ ಈ ಮಾಹಿತಿ ಲಭ್ಯವಾಗಿದೆ.

    ಮೈಸೂರು, ರಾಯಚೂರು,ಚಿಕ್ಕಬಳ್ಳಾಪುರ, ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ಕೊಪ್ಪಳ, ದಕ್ಷಿಣ ಕನ್ನಡ, ಬಾಗಲಕೋಟೆ, ಮಂಡ್ಯ, ಚಾಮರಾಜನಗರ, ಶಿವಮೊಗ್ಗ, ಹಾಸನ, ಕೋಲಾರ, ದಾವಣಗೆರೆ, ತುಮಕೂರು ಮತ್ತು ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರಗಳ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

    ಅಂತಿಮ ಮತದಾರರ ಪಟ್ಟಿಯನ್ನು ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ, ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಾಧಿಗಳ ಕಚೇರಿ ಮತ್ತು ಎಲ್ಲಾ ಮತಗಟ್ಟೆಗಳಲ್ಲಿ ಪ್ರಕಟಿಸಲಾಗಿದೆ. ರಾಜ್ಯದಲ್ಲಿ ಒಟ್ಟು 5,37,85,815 ಸಾಮಾನ್ಯ ಮತದಾರರಿದ್ದಾರೆ. ಈ ಪೈಕಿ 2,69,33,750 ಪುರುಷ 2,68,47,145 ಮಹಿಳಾ ಮತದಾರರು ಇದ್ದು, 4,920 ಇತರೆ ಮತದಾರರಿದ್ದಾರೆ. ಕರಡು ಮತದಾರರ ಪಟ್ಟಿಗೆ ಹೋಲಿಸಿದ್ದಲ್ಲಿ 4,08,653 ಮತದಾರರು ಅಂತಿಮ ಮತದಾರರ ಪಟ್ಟಿಯಲ್ಲಿ ಹೆಚ್ಚಾಗಿದ್ದಾರೆ. ಇದರಲ್ಲಿ 2,77,717 ಮಹಿಳಾ ಮತದಾರರು ಗಮನಾರ್ಹ ಸಂಖ್ಯೆಯಲ್ಲಿ ಹೆಚ್ಚಾಗಿದ್ದಾರೆ. 1,30,912 ಪುರುಷ ಹಾಗೂ 24 ಇತರೆ ಮತದಾರರು ಹೆಚ್ಚಳವಾಗಿದ್ದಾರೆ ಎಂದರು.

    ಎಲ್ಲಿ ಹೆಚ್ಚು? ಎಲ್ಲಿ ಕಡಿಮೆ?

    ರಾಜ್ಯದ 224 ವಿಧಾನಸಭಾ ಕ್ಷೇತ್ರದ ಪೈಕಿ ಬೆಂ. ದಕ್ಷಿಣ ವಿಧಾನಸಭಾ ಕ್ಷೇತ್ರ 7,17,201 ಮತದಾರರನ್ನು ಹೊಂದಿದ್ದು, ಅತಿ ಹೆಚ್ಚು ಮತದಾರರನ್ನು ಹೊಂದಿದ ಕ್ಷೇತ್ರವಾಗಿದೆ. ಶೃಂಗೇರಿ ಕ್ಷೇತ್ರವೂ 1,67,556 ಮತದಾರರನ್ನು ಹೊಂದಿದ್ದು, ರಾಜ್ಯದಲ್ಲಿಯೇ ಅತಿ ಕಡಿಮೆ ಮತದಾರರನ್ನು ಹೊಂದಿದ ಕ್ಷೇತ್ರವಾಗಿದೆ ಎಂದು ಹೇಳಿದರು.

    ಮುಂಚಿತವಾಗಿ ಅರ್ಜಿ ಸಲ್ಲಿಸಬಹುದು

    2024ರ ಜನವರಿ 1ಕ್ಕೆ ಅರ್ಹತೆ ಹೊಂದಿರುವ ಇದುವರೆಗೆ ನೋಂದಣಿಯಾಗದೆ ಇರುವವರು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು ಮತದಾರರ ಸೇವಾ ಪೋರ್ಟಲ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಹತಾ ದಿನಾಂಕ 2024ರ ಏಪ್ರಿಲ್ 1, ಜುಲೈ 1 ಹಾಗೂ ಅಕ್ಟೋಬರ್ 1ರಂತೆ ಅರ್ಹತೆ ಹೊಂದುವ ಹೊಸ ಮತದಾರರು ಮುಂಚಿತವಾಗಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದರು.

    ಶೇ.100 ಗುರುತಿನ ಚೀಟಿ ಹಂಚಿಕೆ

    ಮತದಾರರ ಗುರುತಿನ ಚೀಟಿ ಹಂಚಿಕೆಯನ್ನು ಶೇ.100ರಷ್ಟು ಹಂಚಲಾಗಿದೆ ಹಾಗೂ ಭಾವಚಿತ್ರ ಅಳವಡಿಸಲಾಗಿದೆ . ಗುರುತಿನ ಚೀಟಿಗಳನ್ನು ತ್ವರಿತ ಅಂಚೆ ಸೇವೆ ಮೂಲಕ ಮತದಾರರ ವಿಳಾಸಕ್ಕೆ ತಲುಪಿಸಲಾಗುತ್ತ್ತಿದೆ. ನವೆಂಬರ್ ಅಂತ್ಯಕ್ಕೆ 17,47,518 ಗುರುತಿನ ಚೀಟಿಗಳನ್ನು ಮತದಾರರಿಗೆ ತಲುಪಿಸಲಾಗಿದೆ. ಇನ್ನೂ 10,76,506 ಗುರುತಿನ ಚೀಟಿ ಮುದ್ರಿಸಿದ್ದು, ಮತದಾರರಿಗೆ ತಲುಪಿಸಲಾಗುವುದೆಂದು ತಿಳಿಸಿದರು.

    ಸೇವಾ ಮತದಾರರ ಸಂಖ್ಯೆ ಇಳಿಕೆ

    ಅಂತಿಮ ಮತದಾರರ ಪಟ್ಟಿಯಲ್ಲಿ ಸೇವಾ ಮತದಾರರ ಸಂಖ್ಯೆ ಇಳಿಕೆಯಾಗಿದೆ. ಕರಡು ಪಟ್ಟಿಯಲ್ಲಿ 47,172 ಇದ್ದ ಸೇವಾ ಮತದಾರರ ಸಂಖ್ಯೆ ಅಂತಿಮ ಪಟ್ಟಿಯಲ್ಲಿ 46,501ಕ್ಕೆ ಇಳಿಕೆಯಾಗಿದೆ. 18ರಿಂದ 19 ವರ್ಷದ ಮತದಾರರ ಸಂಖ್ಯೆ ಹೆಚ್ಚಾಗಿದ್ದು, ಅಂತಿಮ ಪಟ್ಟಿಯಲ್ಲಿ 10,34,018ರಷ್ಟು ಯುವ ಮತದಾರರಿದ್ದಾರೆ. 3,88,527ರಷ್ಟು ಯುವ ಮತದಾರರ ಸಂಖ್ಯೆ ಹೆಚ್ಚಳವಾಗಿದೆ. ಸಾಗರೋತ್ತರ ಮತದಾರರ ಸಂಖ್ಯೆ 3,164ರಷ್ಟಿದೆ ಎಂದು ವಿವರಿಸಿದರು.

    100 ವರ್ಷ ಮೇಲ್ಪಟ್ಟವರು 17,937

    80 ವರ್ಷ ಮೇಲ್ಪಟ್ಟ ಹಿರಿಯ ಮತದಾರರ ಸಂಖ್ಯೆ 12,71,862 ಆಗಿದ್ದು, 100 ವರ್ಷ ಮೇಲ್ಪಟ್ಟ ಮತದಾರರ ಸಂಖ್ಯೆ 17,937ರಷ್ಟಿದ್ದಾರೆ. ವಿಕಲ ಚೇತನ ಮತದಾರ ಸಂಖ್ಯೆ 562890 ರಷ್ಟಿದೆ. 58834 ಮತಗಟ್ಟೆಗಳಿದ್ದು, 845 ಮತಗಟ್ಟೆಗಳನ್ನು ಸೇರ್ಪೆಡೆಗೊಳಿಸಿದ್ದು, 293 ಮತಗಟ್ಟೆಗಳನ್ನು ವಿಲೀನಗೊಳಿಸಲಾಗಿದೆ. 2019ಕ್ಕೆ ಹೋಲಿಸಿದರೆ ಈ ಬಾರಿ 552 ಮತಗಟ್ಟೆಗಳು ಹೆಚ್ಚಳವಾಗಿದೆ.

    ಸೇರ್ಪಡೆ, ಅಳಿಸುವಿಕೆಯಲ್ಲಿ ಹೆಚ್ಚಳ

    ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತೆಗೆದು ಹಾಕುವಿಕೆ ಹಾಗೂ ಮಾರ್ಪಾಡು ಮಾಡಲು ನಿಗದಿತ ನಮೂನೆಯಲ್ಲಿ ಸಲ್ಲಿಸಬಹುದಾಗಿದೆ. ಈ ರೀತಿ 35,02,328 ಮತದರರು ಸೇರ್ಪಡೆಯಾಗಿದ್ದಾರೆ. 11,14,257 ಹೆಸರುಗಳನ್ನು ತೆಗೆದು ಹಾಕಲಾಗಿದೆ ಮತ್ತು 13,43,123 ಮತದಾರರ ವಿವರಗಳನ್ನು ಮಾರ್ಪಾಡು ಮಾಡಲಾಗಿದೆಯೆಂದು ಮಾಹಿತಿ ನೀಡಿದರು.

    ಲಿಂಗಾನುಪಾತದಲ್ಲಿ ಹೆಚ್ಚಳ

    ಅಂತಿಮ ಮತದಾರರ ಪಟ್ಟಿಯಲ್ಲಿ ಸಾಮಾನ್ಯ ಮತದಾರರ ಲಿಂಗಾನುಪಾತವು 991ರಿಂದ 997 ಹೆಚ್ಚಳವಾಗಿದೆ. ಯುವ ಮತದಾರರ ಲಿಂಗಾನುಪಾತವು 818 ರಿಂದ 856ಕ್ಕೆ ಹೆಚ್ಚಳವಾಗಿದೆ ಎಂದು ಮನೋಜ್ ಕುಮಾರ್ ಮೀನಾ ಹೇಳಿದರು.
    ಅಪರ ಮುಖ್ಯ ಚುನಾವಣಾಕಾರಿಗಳಾದ ವೆಂಕಟೇಶ್ ಕುಮಾರ್ ಹಾಗೂ ಕೂರ್ಮರಾವ್ ಉಪಸ್ಥಿತರಿದ್ದರು.

    ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರೆ, ಅವರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ತಕ್ಷಣವೇ ನೋಂದಾಯಿಸಲು ಪ್ರೋತ್ಸಾಹಿಸಲಾಗುತ್ತದೆ. ಮತದಾನದ ದಿನದಂದು ಮತದಾರರ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ ಎಂಬುದು ಗಮನದಲ್ಲಿರಲಿ. ಆದ್ದರಿಂದ, ಮತದಾರರು ತುರ್ತಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಪರಿಶೀಲಿಸಲು ಮತ್ತು ದೃಢೀಕರಿಸಲು ಮನವಿ ಮಾಡಲಾಗಿದೆ. ಅರ್ಹ ಮತದಾರರು ಅರ್ಜಿಗಳನ್ನು ಸಲ್ಲಿಸಲು ತಮ್ಮ ಮೊಬೈಲ್ ನಲ್ಲಿ ವೋಟರ್ ಹೆಲ್ಪ್‌ಲೈನ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ತಾವೇ ಅರ್ಜಿ ಸಲ್ಲಿಸಬಹುದು ಅಥವಾ ಠಿಠಿ://ಟಠಿಛ್ಟಿಟ್ಟಠಿಚ್ಝ.ಛ್ಚಿಜಿ.ಜಟ.ಜ್ಞಿ/ ಪೋರ್ಟಲ್ ಮೂಲಕವೂ ಅರ್ಜಿಗಳನ್ನು ಸಲ್ಲಿಸಬಹುದು.

    ತಿದ್ದುಪಡಿ ಯಾವುದು? ಎಷ್ಟು?

    ಮಾರ್ಪಾಡಿನಲ್ಲಿ ವಲಸೆ ಹೋದವರ ಸಂಖ್ಯೆ 87,571 ಆಗಿದ್ದರೆ, 3,70,671 ತಿದ್ದುಪಡಿ ಮಾಡಲಾಗಿದೆ. ತಿದ್ದುಪಡಿಯಲ್ಲಿ ವಯಸ್ಸಿನ ತಿದ್ದುಪಡಿ 95, ವಿಳಾಸ ತಿದ್ದುಪಡಿ 86,910, ಸಂಬಂಧಿಯ ತಿದ್ದುಪಡಿ 93,808, ಸಂಬಂಧದ ತಿದ್ದುಪಡಿ 32,056, ಭಾವಚಿತ್ರ ತಿದ್ದುಪಡಿ 1,85,456, ಹೆಸರು ತಿದ್ದುಪಡಿ 1,58,385, ಮೊಬೈಲ್ ಸಂಖ್ಯೆ ತಿದ್ದುಪಡಿ 1,71,713, ಲಿಂಗ ತಿದ್ದುಪಡಿ 3,533, ಜನ್ಮ ದಿನಾಂಕ ತಿದ್ದುಪಡಿ 1,22,500, ಬದಲಿ ಮತದಾರರ ಗುರುತಿನ ಚೀಟಿ 28,294 ಹಾಗೂ ವಿಕಲಚೇತನ ಮತದಾರರನ್ನು ಗುರುತಿಸಲು 8044 ತಿದ್ದುಪಡಿ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts