More

    ನಿಲ್ಲದ ರಥಬೀದಿ ವಿಸ್ತರಣೆ ಕೂಗು

    ಸಿ.ಎನ್.ವಿಜಯ್ ಪಿರಿಯಾಪಟ್ಟಣ

    ಪಟ್ಟಣದ ಶಕ್ತಿ ದೇವತೆ ಶ್ರೀ ಮಸಣಿಕಮ್ಮ ದೇವಾಲಯದ ಮುಖ್ಯ ಸಂಪರ್ಕ ರಸ್ತೆ ಹಾಗೂ ರಥಬೀದಿ ವಿಸ್ತರಣೆ ಮಾಡುವಂತೆ ಹಲವು ಬಾರಿ ಒತ್ತಾಯಿಸಿದ್ದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷೃದಿಂದಾಗಿ ಪ್ರತಿ ಮಂಗಳವಾರ, ಶುಕ್ರವಾರ ಮತ್ತು ಜಾತ್ರೋತ್ಸವದ ಸಂದರ್ಭ ಜನರು ತೊಂದರೆ ಅನುಭವಿಸುವುದು ತಪ್ಪಿಲ್ಲ.

    ಜೀರ್ಣೋದ್ಧಾರದ ನಿರೀಕ್ಷೆಯಲ್ಲಿರುವ, ನೂರಾರು ವರ್ಷಗಳ ಇತಿಹಾಸ ಹೊಂದಿರುವ ಶಕ್ತಿ ದೇವತೆ ಶ್ರೀ ಮಸಣಿಕಮ್ಮ ದೇವಾಲಯಕ್ಕೆ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಬೆಂಗಳೂರು, ಮಂಡ್ಯ, ರಾಮನಗರ, ತುಮಕೂರು, ಹಾಸನ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ಭಕ್ತರು ಬಂದು ದೇವತೆಗೆ ಪೂಜೆ ಸಲ್ಲಿಸುತ್ತಾರೆ. ವಿಶೇಷವಾಗಿ ಮಂಗಳವಾರ, ಶುಕ್ರವಾರ ಮತ್ತು ಭಾನುವಾರಗಳಂದು ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಿದ್ದು, ತಾಯಿಗೆ ಹರಕೆ ಸಲ್ಲಿಸಿ ತೆರಳುತ್ತಾರೆ. ಈ ದಿನಗಳಲ್ಲಿ ದೇವಾಲಯದಲ್ಲಿ ಜನ ಜಾತ್ರೆಯೇ ಆಗಲಿದೆ.

    ಪಟ್ಟಣದ ಮುಖ್ಯ ರಸ್ತೆಯಾದ ಬಿ.ಎಂ. ರಸ್ತೆಯಿಂದ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ರಥ ಬೀದಿಯ ಇಕ್ಕೆಲಗಳಲ್ಲಿ ಪುರಸಭೆಯಿಂದ ಸುಮಾರು 30 ವರ್ಷಗಳ ಹಿಂದೆ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳು ಇದ್ದು, ರಸ್ತೆ ಅತ್ಯಂತ ಕಿರಿದಾಗಿ ವಾಹನಗಳ ಸಂಚಾರವೇ ದುಸ್ತರವಾಗಿದೆ. ಮುಖ್ಯ ರಸ್ತೆಯಿಂದ ದೇವಾಲಯಕ್ಕೆ ತೆರಳುವ ರಥ ಬೀದಿಯ ಎಡ ಬದಿಯಲ್ಲಿ ಹೂ ಮಾರುವವರು ಸಾಲಾಗಿ ಅಂಗಡಿಗಳನ್ನು ಇಟ್ಟುಕೊಂಡಿದ್ದರೆ, ಬಲ ಬದಿಯಲ್ಲಿರುವ ಪುರಸಭೆ ವಾಣಿಜ್ಯ ಮಳಿಗೆಗಳಲ್ಲಿ ಪೂಜಾ ಸಾಮಗ್ರಿಗಳು, ದಿನಸಿ ಮತ್ತಿತರ ವ್ಯಾಪಾರ ಮಾಡುವವರು ಇದ್ದಾರೆ. ಪುರಸಭೆ ವಾಣಿಜ್ಯ ಮಳಿಗೆಯಲ್ಲಿ ವಹಿವಾಟು ನಡೆಸುವವರು ತಮ್ಮ ತಮ್ಮ ಅಂಗಡಿಗಳ ಮುಂಭಾಗ ಸುಮಾರು 5-6 ಅಡಿಗಳಷ್ಟು ರಸ್ತೆ ಜಾಗವನ್ನು ಅತಿಕ್ರಮಿಸಿ, ತಾತ್ಕಾಲಿಕ ಚಾವಣಿ ನಿರ್ಮಿಸಿಕೊಂಡು ವಹಿವಾಟು ನಡೆಸುತ್ತಿದ್ದಾರೆ. ಇದರಿಂದಾಗಿ ದೇವಸ್ಥಾನಕ್ಕೆ ತೆರಳುವ ರಥಬೀದಿ ಅತ್ಯಂತ ಕಿರಿದಾಗಿದೆ. ಹೊರ ಊರುಗಳಿಂದ ಕಾರು ಮತ್ತಿತರ ವಾಹನಗಳಲ್ಲಿ ಬರುವವರು ಈ ರಸ್ತೆಯಲ್ಲಿ ಸಾಗುವುದೇ ದುಸ್ಸಾಹಸವಾಗಿದೆ. ಒಂದು ಬದಿಯಿಂದ ಒಂದು ವಾಹನ ಬಂದರೆ ಎದುರು ಬದಿಯಿಂದ ಮತ್ತೊಂದು ವಾಹನ ಹೋಗಲು ಹರಸಾಹಸಪಡುವಂತಹ ಪರಿಸ್ಥಿತಿ ಇದೆ.

    ಕನಿಷ್ಠ 30-40 ಅಡಿ ಇರಬೇಕಾದ ರಥಬೀದಿ 15 ಅಡಿಗಳಿಗಿಂತಲೂ ಕಿರಿದಾಗಿದ್ದು ರಥೋತ್ಸವದ ಸಂದರ್ಭದಲ್ಲಿ ಈ ಚಿಕ್ಕ ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರುವ ಭಕ್ತರು ರಥವನ್ನು ಎಳೆದುಕೊಂಡು ಹೋಗುವುದೇ ಒಂದು ಸಾಹಸ. ಇತ್ತೀಚೆಗೆ ಮಾ.14 ರ ಗುರುವಾರ ನಡೆದ ದೇವಿಯ ಜಾತ್ರೋತ್ಸವದ ಸಂದರ್ಭದಲ್ಲಿ ಭಕ್ತರು ಕಿರಿದಾದ ರಸ್ತೆಯಲ್ಲಿ ರಥವನ್ನು ಎಳೆದು ತರುತ್ತಿದ್ದ ಸಂದರ್ಭದಲ್ಲಿ ರಥ ಸ್ವಲ್ಪ ಎಡಕ್ಕೆ ತಿರುಗಿದ ಪರಿಣಾಮ ವಾಣಿಜ್ಯ ಮಳಿಗೆಗಳ ಮುಂಭಾಗ ಹಾಕಿರುವ ತಗಡಿನ ಶೀಟ್‌ಗಳು ರಥಕ್ಕೆ ತಾಗಿದ್ದರಿಂದ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನೂ ಸ್ವಲ್ಪ ಮುಂದೆ ಚಲಿಸಿದ್ದಲ್ಲಿ ವಾಣಿಜ್ಯ ಮಳಿಗೆಗೆ ಡಿಕ್ಕಿ ಹೊಡೆಯುವುದರ ಜತೆಗೆ ರಥದ ಮೇಲೆ ಮತ್ತು ಅಕ್ಕ ಪಕ್ಕದಲ್ಲಿದ್ದಲ್ಲಿದ್ದ ಭಕ್ತರಿಗೂ ಅಪಾಯವಾಗುವ ಸಾಧ್ಯತೆಗಳಿತ್ತು. ಕೂಡಲೇ ಎಚ್ಚೆತ್ತುಕೊಂಡ ರಥ ನಿರ್ವಹಣೆ ಮಾಡುತ್ತಿದ್ದ ಸಿಬ್ಬಂದಿ ರಥವನ್ನು ಸರಿದಾರಿಗೆ ತರುವಲ್ಲಿ ಸಫಲರಾದರು. ಇಕ್ಕಟ್ಟಾದ ರಸ್ತೆಯಲ್ಲಿ ಭಕ್ತರು ರಥವನ್ನು ತುಂಬಾ ಎಚ್ಚರಿಕೆಯಿಂದಲೇ ಎಳೆದು ತಂದರು.

    ರಥಬೀದಿ ವಿಸ್ತರಣೆ ಆಗಬೇಕೆಂದು ಸಾರ್ವಜನಿಕರ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿದ್ದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ವಾಣಿಜ್ಯ ಮಳಿಗೆಗಳ ಮುಂಭಾಗ ಅಕ್ರಮವಾಗಿ ಹಾಕಿರುವ ಶೀಟ್‌ಗಳನ್ನು ರಥೋತ್ಸವದ ಸಂದರ್ಭದಲ್ಲಿ ಕಡ್ಡಾಯವಾಗಿ ತೆಗೆಯುವಂತೆ ಪುರಸಭೆ ಅಧಿಕಾರಿಗಳು ಸೂಚನೆ ನೀಡಿದ್ದರೂ ಒಂದೆರಡು ಅಂಗಡಿಗಳ ಮುಂಭಾಗ ಬಿಟ್ಟರೆ ಇನ್ನುಳಿದಂತೆ ಎಲ್ಲ ಅಂಗಡಿಗಳ ಮುಂಭಾಗ ಶೀಟ್‌ಗಳು ಹಾಗೆಯೇ ಇದ್ದವು. ಇನ್ನಾದರೂ ದೊಡ್ಡ ಅನಾಹುತಗಳು ಸಂಭವಿಸುವ ಮೊದಲೇ ರಥಬೀದಿ ವಿಸ್ತರಣೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ನೂತನ ಮಳಿಗೆ ನಿರ್ಮಾಣ: ಸರಿ ಸುಮಾರು 30 ವರ್ಷಗಳನ್ನು ಪೂರೈಸಿರುವ ವಾಣಿಜ್ಯ ಮಳಿಗೆಯ ಬದಲಿಗೆ ಹಿಂಭಾಗದಲ್ಲಿಯೇ ಇರುವ ಜಾಗದಲ್ಲಿ ಎರಡು ಅಂತಸ್ತಿನ ನೂತನ ವಾಣಿಜ್ಯ ಮಳಿಗೆ ನಿರ್ಮಿಸಿದಲ್ಲಿ, ಈಗ ಇರುವ ವಾಣಿಜ್ಯ ಮಳಿಗೆಗಳನ್ನು ನೆಲಸಮಗೊಳಿಸಿ ಹಾಲಿ ವ್ಯಾಪಾರ ವಹಿವಾಟು ನಡೆಸುತ್ತಿರುವವರಿಗೆ ನೂತನ ಮಳಿಗೆಗಳಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬಹುದು. ಇಕ್ಕಟ್ಟಾಗಿರುವ ಕಿರಿದಾದ ರಸ್ತೆಯನ್ನು ವಿಶಾಲ ರಥಬೀದಿಯನ್ನಾಗಿ ನಿರ್ಮಿಸಬಹುದು. ಬಿ.ಎಂ.ರಸ್ತೆಯಿಂದ ದೇವಸ್ಥಾನದವರೆಗೆ ನೇರ ರಸ್ತೆಯನ್ನು ಮಾಡಬಹುದು. ಹೆಚ್ಚುವರಿ ವಾಣಿಜ್ಯ ಮಳಿಗೆಗಳನ್ನು ಹರಾಜು ಮೂಲಕ ಹೊಸಬರಿಗೆ ನೀಡಿದಲ್ಲಿ ಪುರಸಭೆಯ ಆದಾಯವು ಹೆಚ್ಚಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

    ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಆಗಲಿರುವ ಶ್ರೀ ಮಸಣಿಕಮ್ಮ ದೇವಾಲಯಕ್ಕೆ ಬಿ.ಎಂ.ರಸ್ತೆಯಿಂದ ನೇರ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಲಿದ್ದು, ವಾಣಿಜ್ಯ ವಹಿವಾಟು ಮತ್ತಷ್ಟು ಉತ್ತಮಗೊಳ್ಳುವ ನಿರೀಕ್ಷೆ ಇದೆ. ಸಚಿವ ಕೆ.ವೆಂಕಟೇಶ್ ಮತ್ತು ಪುರಸಭೆಯ ಜನಪ್ರತಿನಿಧಿಗಳು ಈ ಬಗ್ಗೆ ವಿಶೇಷ ಆಸಕ್ತಿ ವಹಿಸಿದರೆ ಸ್ಥಳೀಯರು ಮತ್ತು ದೂರದೂರುಗಳಿಂದ ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಸ್ಥಳೀಯರು.

    ಪಿರಿಯಾಪಟ್ಟಣದ ಬಿ.ಎಂ. ರಸ್ತೆಯಿಂದ ಮಸಣಿಕಮ್ಮ ದೇವಾಲಯದವರೆಗಿನ ರಸ್ತೆ ಅಭಿವೃದ್ಧಿಪಡಿಸುವಂತೆ ಜನರಿಂದ ಒತ್ತಾಯ ಕೇಳಿ ಬರುತ್ತಿದೆ. ದೇವಸ್ಥಾನದ ರಸ್ತೆಯಲ್ಲಿ ಇರುವ ಪುರಸಭೆ ವಾಣಿಜ್ಯ ಮಳಿಗೆಗಳ ಬಾಡಿಗೆದಾರರಿಗೆ ರಸ್ತೆಯನ್ನು ಅತಿಕ್ರಮಿಸದಂತೆ ಹಲವು ಬಾರಿ ಸೂಚನೆ ನೀಡಲಾಗಿದೆ. ಪುರಸಭೆ ವಾಣಿಜ್ಯ ಮಳಿಗೆ ಸೇರಿದಂತೆ ಒಟ್ಟು 37 ಗುಂಟೆ ಜಾಗ ಸರ್ಕಾರದ ಹೆಸರಿನಲ್ಲಿಯೇ ಇದೆ. ಅದನ್ನು ಪುರಸಭೆಗೆ ಹಸ್ತಾಂತರಿಸುವಂತೆ ಮನವಿ ಸಲ್ಲಿಸಿದ್ದೇವೆ. ದೇವಸ್ಥಾನದ ಜೀರ್ಣೋದ್ಧಾರದ ಕಾಮಗಾರಿ ಆರಂಭಗೊಂಡಲ್ಲಿ ದೇವಾಲಯದ ಸುತ್ತಮುತ್ತಲಿನ ಆವರಣದ ಸ್ವರೂಪವೇ ಬದಲಾಗಲಿದೆ.

    ಕೆ.ಯು.ಮುತ್ತಪ್ಪ, ಪುರಸಭೆ ಮುಖ್ಯಾಧಿಕಾರಿ, ಪಿರಿಯಾಪಟ್ಟಣ

    ರಥೋತ್ಸವದ ಸಂದರ್ಭದಲ್ಲಿ ಕಿರಿದಾದ ರಸ್ತೆಯಲ್ಲಿ ರಥವನ್ನು ಎಳೆದು ತರುವುದು ಪ್ರಯಾಸದ ಕೆಲಸ. ಸಂತೆಪೇಟೆಯಲ್ಲಿರುವ ಪುರಸಭೆ ವಾಣಿಜ್ಯ ಮಳಿಗೆಯ ಮುಂಭಾಗದ ರಸ್ತೆಯನ್ನು ವಿಸ್ತರಣೆ ಮಾಡುವಂತೆ ಪುರಸಭೆಯಲ್ಲಿ ನಡೆದ ಆಡಳಿತಾಧಿಕಾರಿಗಳ ಸಭೆಯಲ್ಲಿಯೂ ಚರ್ಚಿಸಲಾಗಿದೆ. ದೇವಸ್ಥಾನಕ್ಕೆ ತೆರಳುವ ರಥಬೀದಿಯು ಅತ್ಯಂತ ಕಿರಿದಾಗಿದ್ದು, ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪುರಸಭಾ ಆಡಳಿತಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಶ್ರೀ ಮಸಣಿಕಮ್ಮ ದೇವಾಲಯಕ್ಕೆ ಬಿ.ಎಂ.ರಸ್ತೆಯಿಂದ ನೇರ ಸಂಪರ್ಕ ರಸ್ತೆ ಇದಾಗಲಿದ್ದು, ವಾಣಿಜ್ಯ ವಹಿವಾಟು ಮತ್ತಷ್ಟು ಉತ್ತಮಗೊಳ್ಳುವ ನಿರೀಕ್ಷೆ ಇದೆ.

    ಎಚ್.ಕೆ.ಮಂಜುನಾಥ್, ಪುರಸಭೆ ಸದಸ್ಯರು, ಪಿರಿಯಾಪಟ್ಟಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts