More

    ದಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ದಿವಾಳಿ; ಸಾವಿರಾರು ಗ್ರಾಹಕರು ಕಂಗಾಲು

    ಬೆಂಗಳೂರು: ರಾಜಧಾನಿಯಲ್ಲಿ ಮತ್ತೊಂದು ಪ್ರತಿಷ್ಠಿತ ದಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ದಿವಾಳಿಯತ್ತ ಸಾಗಿದೆ. ರಿಸರ್ವ್ ಬ್ಯಾಂಕ್ ಆಫ್​​​ ಇಂಡಿಯಾ(ಆರ್‌ಬಿಐ) ಬ್ಯಾಂಕಿನ ಕಾರ್ಯನಿರ್ವಹಣೆಗೆ ನಿರ್ಬಂಧ ಹೇರಿ ಸುತ್ತೋಲೆ ಹೊರಡಿಸಿದ್ದ ವಿಚಾರ ತಿಳಿದು ಆತಂಕಗೊಂಡ ಸಾವಿರಾರು ಗ್ರಾಹಕರು, ಮಂಗಳವಾರ ಬೆಳಗ್ಗೆಯಿಂದಲೇ ಬಸವನಗುಡಿ, ಜಯನಗರ ಸೇರಿ ಇತರ ಕಡೆಗಳಲ್ಲಿ ಬ್ಯಾಂಕಿನ ಶಾಖೆಗಳ ಮುಂದೆ ತಂಡೋಪತಂಡವಾಗಿ ಜಮಾಯಿಸಿದ್ದರು. ತಾವು ಇಟ್ಟಿದ್ದ ಲಕ್ಷಾಂತರ ರೂಪಾಯಿ ಠೇವಣಿ ಹಣದ ಪಡೆಯಲು ಗ್ರಾಹಕರು ಸರದಿ ಸಾಲಿನಲ್ಲಿ ನಿಂತುಕೊಂಡು ಆತಂಕ ವ್ಯಕ್ತಪಡಿಸುತ್ತಿದ್ದರು.

    ಕೆಲವರು ತಮ್ಮ ಸಂಬಂಧಿಕರಿಗೆ ಕರೆ ಮಾಡಿ ದುಗುಡ ವ್ಯಕ್ತಪಡಿಸುತ್ತಿದ್ದ ದೃಶ್ಯ ಕಂಡುಬಂತು. ಮಕ್ಕಳ ಮದುವೆಗೆ, ವಿದ್ಯಾಭ್ಯಾಸಕ್ಕೆ, ಹೊಸ ಮನೆ ಕಟ್ಟಲು, ಔಷಧ ಖರೀದಿಸಲು ಸೇರಿ ಇತರ ಖರ್ಚು ವೆಚ್ಚಗಳಿಗಾಗಿ ದುಡಿದಿಟ್ಟಿದ ಹಣವನ್ನು ಸಾವಿರಾರು ಗ್ರಾಹಕರು ಠೇವಣಿ ಇಟ್ಟಿದ್ದರು.ಈ ಹಣವೂ ವಾಪಸ್ ಬರುತ್ತೋ ಅಥವಾ ಇಲ್ಲವೂ ಎಂಬುದರ ಬಗ್ಗೆ ಖಚಿತ ಖಾತ್ರಿ ಇಲ್ಲದಿರುವ ಹಿನ್ನೆಲೆಯಲ್ಲಿ ಕೆಲವರು ಗೋಳಾಡುತ್ತಿದ್ದರು.

    ಇದನ್ನು ಓದಿ: ರಾಜ್ಯಾದ್ಯಂತ ಇನ್ನಷ್ಟು ಬಿರುಸು ಪಡೆದ ಮಳೆ; ಮೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ

    ಹೊಸದಾಗಿ ಸಾಲ ವಿತರಣೆ ಮಾಡಬಾರದು, ಹೂಡಿಕೆಗೆ ಹಣ ಹೂಡಬಾರದು, ಹೊಸದಾಗಿ ಠೇವಣಿ ಸ್ವೀಕರಿಸಬಾರದು, ದೊಡ್ಡ ಮೊತ್ತ ಪಾವತಿ ಮಾಡಬಾರದು, ಅನುಮತಿ ಇಲ್ಲದೆ ಬ್ಯಾಂಕ್ ಆಸ್ತಿ ಮಾರಾಟ ಅಥವಾ ಪರಭಾರೆ ಒಪ್ಪಂದ ಮಾಡಬಾರದು, ಗ್ರಾಹಕರು ತಮ್ಮ ಖಾತೆಯಿಂದ 50 ಸಾವಿರ ರೂ.ಗಿಂತ ಹೆಚ್ಚು ಹಣ ಪಡೆಯಬಾರದು ಎಂದು ಆರ್‌ಬಿಐ ನಿಯಮ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಠೇವಣಿ ಹಣ ಬಿಡಿಸಿಕೊಳ್ಳಲು ಗ್ರಾಹಕರು ಬ್ಯಾಂಕ್‌ಗೆ ಮುಗಿಬಿದ್ದಿದ್ದು, ಠೇವಣಿ ಇಟ್ಟಿದ್ದ ರಸೀದಿ ತೋರಿ 50 ಸಾವಿರ ರೂ.ಹಣ ಪಡೆದುಕೊಳ್ಳುತ್ತಿದ್ದರು. ಆದರೆ, 50 ಸಾವಿರ ರೂ.ಮಾತ್ರ ಹಿಂಪಡೆಯಬಹುದು ಎಂದು ಆರ್‌ಬಿಐ ಮಿತಿ ಹೇರಿದ ಹಿನ್ನೆಲೆಯಲ್ಲಿ ಹೆಚ್ಚಿನ ಹಣ ಪಡೆಯಲು ಸಾಧ್ಯವಾಗದ ಗ್ರಾಹಕರು ಕಂಗಾಲಾದರು. ಹಲವು ವರ್ಷಗಳಿಂದ ಸಂಪಾದಿಸಿ ಕೂಡಿಟ್ಟ ಹಣವನ್ನು ಈ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಿದ್ದೆವು. ಔಷಧ ಖರೀದಿಗೆ, ಜೀವನ ನಿರ್ವಹಣೆ ಮಾಡುವುದಕ್ಕೆ ಕಷ್ಟವಾಗಲಿದೆ ಎಂದು ಹಿರಿಯ ನಾಗರಿಕರು ಅಳಲು ತೋಡಿಕೊಂಡರು. ನಿಮ್ಮ ಹಣ ಭದ್ರವಾಗಿದೆ ಎಂದು ಬ್ಯಾಂಕ್ ಸಿಬ್ಬಂದಿ ಭರವಸೆ ನೀಡುತ್ತಿದ್ದರೂ ಇದನ್ನು ನಂಬದ ಗ್ರಾಹಕರು ತಮ್ಮ ಹಣ ಪಡೆಯಲು ಮುಗಿಬೀಳುತ್ತಿದ್ದರು. ತಾಸುಗಟ್ಟಲೆ ನಿಂತಲ್ಲೇ ನಿಂತು ಸುಸ್ತಾದ ಕೆಲ ಗ್ರಾಹಕರು ಬ್ಯಾಂಕಿನ ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದರು.

    ದಿವಾಳಿಗೆ ಕಾರಣಗಳೇನು?

    ಅಂದಾಜು 24 ಸಾವಿರ ಸದಸ್ಯರು ಇರುವ ಈ ಬ್ಯಾಂಕ್ ಅಂದಾಜು 12 ಶಾಖೆಗಳನ್ನು ಹೊಂದಿದೆ. ನಗರದಲ್ಲಿ ಹಳೆಯ ಬ್ಯಾಂಕ್‌ಗಳಲ್ಲಿ ಇದು ಒಂದಾಗಿತ್ತು. ಆದರೆ, ಆದಾಯ ಗುರುತಿಸುವಿಕೆ, ಆಸ್ತಿ ವರ್ಗೀಕರಣ ನಿಯಮ ಪಾಲಿಸದೆ ಕಾನೂನು ಉಲ್ಲಂಘನೆ, ಯಾವುದೇ ಭದ್ರತೆ ಪಡೆಯದೆ ಬೇಕಾದವರಿಗೆ ಕೋಟ್ಯಂತರ ರೂ.ಸಾಲ, ಕೊಟ್ಟಿರುವ ಸಾಲ ವಸೂಲಿ ಮಾಡದಿರುವುದು, ಠೇವಣಿ ಇಲ್ಲದಿದ್ದರೂ ಠೇವಣಿ ಇದೆ ಎಂದು ಕೋಟ್ಯಂತರ ರೂ.ಸಾಲ ನೀಡಿಕೆ, ಬೇನಾಮಿ ಹೆಸರಿನಲ್ಲಿ ವ್ಯವಹಾರ ಹಾಗೂ ಕಮಿಷನ್ ದಂಧೆ ಸೇರಿ ಇತರ ಕಾರಣಗಳಿಂದ ಬ್ಯಾಂಕ್ ದಿವಾಳಿಯಾಗಿದೆ.

    ಆಡಳಿತ ಮಂಡಳಿ ಮಾಹಿತಿ:

    ಬ್ಯಾಂಕಿನ ಒಟ್ಟು ಠೇವಣಿ 1,416 ಕೋಟಿ ರೂ, ಒಟ್ಟು ಸಾಲ 569 ಕೋಟಿ ರೂ., ಸಾಲಗಳ ಮೇಲೆ ಬರಬೇಕಾದ ಬಡ್ಡಿ 355 ಕೋಟಿ ರೂ., ಸರ್‌ೇಸಿ ಕಾಯ್ದೆಯಲ್ಲಿ ವಸೂಲಾತಿ ಮೊತ್ತ 340 ಕೋಟಿ ರೂ., ಹರಾಜು ಪ್ರಕ್ರಿಯೆಯಲ್ಲಿ 203 ಕೋಟಿ ರೂ., ಕೋರ್ಟ್‌ನಲ್ಲಿ ಇರತಕ್ಕ ದಾವೆಗಳು 110 ಕೋಟಿ ರೂ., ಹೂಡಿಕೆ ಮತ್ತು ಬರಬೇಕಾದ ಬಾಕಿ 738 ಕೋಟಿ ರೂ, ಸ್ವಂತ ಆಸ್ತಿಯು 65 ಕೋಟಿ ರೂ ಸೇರಿ ಹಣಕಾಸಿನ ವಿವರದ ಪ್ರತಿಯನ್ನು ಬ್ಯಾಂಕಿನ ಗೋಡೆ ಮೇಲೆ ಆಡಳಿತ ಮಂಡಳಿ ಅಂಟಿಸಿದೆ. ಗ್ರಾಹಕರು, ಠೇವಣಿದಾರರು ತಾಳ್ಮೆ ಕಳೆದುಕೊಳ್ಳಬಾರದು. ನಾವು ಕೊಟ್ಟಿರುವ ಸಾಲಗಳಲ್ಲಿ ಅಡಮಾನ ಮಾಡಿದ ಆಸ್ತಿಯು ಮೊತ್ತ 1,500 ಕೋಟಿ ರೂ.ಅಧಿಕ ಹಣ ನಮ್ಮಲ್ಲಿದೆ. ಅದಷ್ಟು ಶೀಘ್ರ ಸಾಲ ವಸೂಲಾತಿ ಮಾಡಿ ಸಮಸ್ಯೆಯನ್ನು ಪ್ರಮಾಣಿಕವಾಗಿ ಬಗೆಹರಿಸುವುದಾಗಿ ಆಡಳಿತ ಮಂಡಳಿ ಪತ್ರದಲ್ಲಿ ಭರವಸೆ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts