More

    ಜಗಳ ಬಿಡಿಸಲು ಹೋದವನ ಬರ್ಬರ ಹತ್ಯೆ

    ಹುಬ್ಬಳ್ಳಿ: ಹಳೇಹುಬ್ಬಳ್ಳಿ ಈಶ್ವರ ನಗರದಲ್ಲಿ ಜಗಳ ಬಿಡಿಸಲು ಹೋದ ಯುವಕನೊಬ್ಬನನ್ನು ದುಷ್ಕರ್ವಿುಗಳು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಗುರುವಾರ ತಡರಾತ್ರಿ ನಡೆದಿದೆ.

    ಹಳೇಹುಬ್ಬಳ್ಳಿ ಅಲ್ತಾಫ್ ಪ್ಲಾಟ್ ನಿವಾಸಿ ಶಾರುಖ್ ಮುನೀರಹ್ಮದ ಸೌದಾಗರ (25) ಹತ್ಯೆಯಾದ ಯುವಕ. ಹಳೇ ಹುಬ್ಬಳ್ಳಿಯ ರೌಡಿಶೀಟರ್ ಸಲೀಂ ಬಳ್ಳಾರಿ, ಸಲ್ಮಾನ್ ಸವಣೂರ, ಅಸ್ಲಂ ಸವಣೂರ, ದತ್ತಾ ಸೋಳಂಕೆ, ಅಫ್ತಾಬ ಮುಲ್ಲಾ ಹತ್ಯೆಗೈದ ಆರೋಪಿಗಳು.

    ಸ್ನೇಹಿತರ ಎರಡು ಗುಂಪುಗಳ ನಡುವಿನ ಜಗಳ ಬಿಡಿಸಲು ಮುಂದಾಗಿದ್ದಕ್ಕೆ ಕೊಲೆಗೈಯಲಾಗಿದೆ. ಚಾಕುವಿನಿಂದ ಹೊಟ್ಟೆ, ತೊಡೆ ಭಾಗಕ್ಕೆ ಇರಿದು ಗಂಭೀರವಾಗಿ ಗಾಯಗೊಳಿಸಿದ್ದರು. ನಂತರ ಅವರೇ ಶಾರುಖ್​ನನ್ನು ಆಟೋದಲ್ಲಿ ಕರೆತಂದು ಕಿಮ್ಸ್​ಗೆ ದಾಖಲಿಸಿದ್ದರು. ರಕ್ತಸ್ರಾವ ಹೆಚ್ಚಾಗಿ ಆತ ಬದುಕುಳಿಯುವುದು ಕಷ್ಟ ಎಂದು ಗೊತ್ತಾದಾಗ ಅಲ್ಲಿಂದ ಕಾಲ್ಕಿತ್ತಿದ್ದರು. ನಂತರ ಕಸಬಾಪೇಟ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಆರೋಪಿಗಳಾದ ಸಲ್ಮಾನ್ ಸವಣೂರ, ಅಸ್ಲಂ ಸವಣೂರ, ದತ್ತಾ ಸೋಳಂಕೆ ಹಾಗೂ ಅಫ್ತಾಬ ಮುಲ್ಲಾನನ್ನು ವಶಕ್ಕೆ ಪಡೆದಿರುವ ಪೊಲೀಸರು ಸಲೀಂ ಬಳ್ಳಾರಿ ಪತ್ತೆಗೆ ಬಲೆ ಬೀಸಿದ್ದಾರೆ.

    ಹತ್ಯೆಗೆ ಕಾರಣ ಏನು ?

    ರಾತ್ರಿ 10 ಗಂಟೆಗೆ ಅಸ್ಲಂ ಸವಣೂರ ಮತ್ತು ಆತನ ಸ್ನೇಹಿತರು ಚಹಾ ಕುಡಿಯಲು ಈಶ್ವರ ನಗರಕ್ಕೆ ಹೋಗಿದ್ದರು. ಆ ವೇಳೆ ದತ್ತಾ ಸೋಳಂಕೆ ಕಡೆಯ ಹುಡುಗರು ಅಸ್ಲಂ ಮೇಲೆ ಹಲ್ಲೆ ನಡೆಸಿದ್ದರು. ಆ ಬಗ್ಗೆ ಕೇಳುವಂತೆ ಅಸ್ಲಂ, ಶಾರುಖ್ ಸೌದಾಗಾರನಿಗೆ ಹೇಳಿದ್ದ. ‘ಯಾಕೆ ಜಗಳ ಮಾಡುತ್ತೀರಿ’ ಎಂದು ಶಾರುಖ್ ಕೇಳಿದ್ದ. ಅಷ್ಟಕ್ಕೇ ಸಿಟ್ಟಾದ ಸಲ್ಮಾನ್, ದತ್ತಾ ಮತ್ತು ಅಫ್ತಾಬ ಅವಾಚ್ಯ ಶಬ್ದಗಳಿಂದ ನಿಂದಿಸಿ ಆತನ ಮೇಲೆ ಹಲ್ಲೆಗೈದರು. ‘ನಿಂದ ಭಾಳ ಆಗೇತಿ ತಡಿಲೇ’ ಎಂದು ಎಲ್ಲರೂ ಸೇರಿ ಬಿಗಿಯಾಗಿ ಹಿಡಿದುಕೊಂಡರು. ಆಗ ರೌಡಿಶೀಟರ್ ಸಲೀಂ ಬಳ್ಳಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

    ಸುಪಾರಿ ಹಂತಕ ಸಲೀಂ ಬಳ್ಳಾರಿ

    ಕಸಬಾಪೇಟ ಪೊಲೀಸ್ ಠಾಣೆ ವ್ಯಾಪ್ತಿಯ ಕುಖ್ಯಾತ ರೌಡಿ ಸಲೀಂ ಬಳ್ಳಾರಿ ಒಬ್ಬ ಸುಪಾರಿ ಕಿಲ್ಲರ್. ಕೊಪ್ಪಳ, ಬಳ್ಳಾರಿ ಸೇರಿ ವಿವಿಧೆಡೆ ನಾಲ್ಕೈದು ಕೊಲೆ ಪ್ರಕರಣಗಳಲ್ಲಿ ಈತ ಆರೋಪಿ. ಕೊಲೆ ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದ ಈತ ಜಾಮೀನಿನ ಮೇಲೆ ಹೊರ ಬಂದಿದ್ದ. ಪಡಿತರ ಅಕ್ಕಿಯನ್ನು ಖರೀದಿಸಿ ಮಾರಾಟ ಮಾಡುವುದರಲ್ಲೂ ತೊಡಗಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.

    ಪರೇಡ್​ಗೆ ಬಂದಿರಲಿಲ್ಲವೆ?

    ಕಳೆದ ನವೆಂಬರ್​ನಲ್ಲಿ ಪೊಲೀಸರು ರೌಡಿ ಪರೇಡ್ ಮಾಡಿದ್ದರು. 300ಕ್ಕೂ ಅಧಿಕ ರೌಡಿಗಳನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದರು. ಕಸಬಾಪೇಟ ಠಾಣೆ ವ್ಯಾಪ್ತಿಯ ಕುಖ್ಯಾತ ರೌಡಿ ಸಲೀಂ ಬಳ್ಳಾರಿಯನ್ನು ಕರೆಸಿರಲಿಲ್ಲವೆ ಎಂಬ ಪ್ರಶ್ನೆ ಮೂಡಿದೆ.

    ಈ ಹಿಂದೆ ಮೇನಲ್ಲಿ ಲಾಕ್​ಡೌನ್ ಸಮಯದಲ್ಲಿ ಹೋಟೆಲ್ ಒಂದರಲ್ಲಿ ಊಟ ಕೊಡಲಿಲ್ಲವೆಂದು ಇದೇ ಸಲೀಂ ಬಳ್ಳಾರಿ ರಂಪಾಟ ಮಾಡಿದ್ದ. ಆತನನ್ನು ಸಾರ್ವಜನಿಕರೇ ಹಿಡಿದು ಕಸಬಾಪೇಟ ಪೊಲೀಸರಿಗೆ ಒಪ್ಪಿಸಿದ್ದರು. ಆ ವೇಳೆಯೇ ಆತನಿಗೆ ಸರಿಯಾಗಿ ಬುದ್ಧಿ ಕಲಿಸಿದ್ದರೆ ಈಗ ಇಂತಹ ಕೃತ್ಯ ಎಸಗುತ್ತಿರಲಿಲ್ಲ ಎಂಬ ಅಭಿಪ್ರಾಯವೂ ಕೇಳಿಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts