More

    ಮಾಧ್ಯಮಗಳು ಕೇವಲ ರಾಜಕೀಯಕ್ಕೆ ಪ್ರಾಮುಖ್ಯ ನೀಡಬಾರದು

    ಮಂಗಳೂರು: ಮಾಧ್ಯಮಗಳಲ್ಲಿ ಕೇವಲ ರಾಜಕೀಯಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡುವುದರಿಂದ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಹಾಗಾಗಿ ಅದಕ್ಕೆ ಕಡಿಮೆ ಪ್ರಾಶಸ್ಱ ನೀಡಿ, ಇತರ ವ್ಯವಸ್ಥೆಗಳಿಗೆ ಆದ್ಯತೆ ನೀಡುವಂತೆ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಹೇಳಿದರು.

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶನಿವಾರ 2 ದಿನಗಳ 35ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

    ಜಾಗತೀಕರಣ ಬಂದ ಬಳಿಕ ಎಲ್ಲ ಕ್ಷೇತ್ರಗಳಲ್ಲೂ ಹಣಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಇಂತಹ ಸಂದರ್ಭದಲ್ಲಿ ವೃತ್ತಿಯಲ್ಲಿ ಮೌಲ್ಯಗಳನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ, ಸವಾಲುಗಳನ್ನು ಮೀರಿ ನಿಂತು ಸ್ವಾಭಿಮಾನದಿಂದ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ಹೇಳಿದರು. ಪತ್ರಿಕೋದ್ಯಮವು ವಾಣೀಜ್ಯೀಕರಣಗೊಳ್ಳದೆ ಪ್ರೆಸ್ ಟ್ರಸ್ಟ್ ಕಾಯ್ದೆಗೊಳಪಟ್ಟರೆ ಮಾಧ್ಯಮಗಳು ಮತ್ತು ಪತ್ರಕರ್ತರು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿತ್ತು ಎಂದೂ ಹೇಳಿದರು.

    ವ್ಯಂಗ್ಯಚಿತ್ರ ಪ್ರದರ್ಶನವನ್ನು ಡಿಸಿಎಂ ಅಶ್ವತ್ಥ ನಾರಾಯಣ, ಫೋಟೋ ಪ್ರದರ್ಶನ ಮತ್ತು ವಸ್ತುಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ತರಂಗ ವಾರಪತ್ರಿಕೆಯ ಸಂಪಾದಕಿ ಸಂಧ್ಯಾ ಪೈ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ದರು.

    ಪ್ರಕಟಿಸುವಾಗ ಎಚ್ಚರವಹಿಸಿ: ಜನರು ಈಗ ಮೊದಲಿನಂತಿಲ್ಲ, ಪತ್ರಿಕೆಗಳನ್ನು ಓದುವ ಜತೆಗೆ ವಿವಿಧ ಮಾಧ್ಯಮಗಳಿಂದ ವಿಷಯಗಳನ್ನು ಅರಿತು, ವಿಚಾರ ವಿಮರ್ಶೆ ಮಾಡುವಷ್ಟು ಪ್ರಜ್ಞಾವಂತರಾಗಿದ್ದು ಪತ್ರಕರ್ತರು ವರದಿ ಬರೆಯುವಾಗ ಹೆಚ್ಚು ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸಲಹೆ ನೀಡಿದರು.ಡಿಜಿಟಲ್ ಕೌಶಲ ಅನಿವಾರ್ಯ: ಪ್ರಸ್ತುತ ಕಾಲಘಟ್ಟದಲ್ಲಿ ಊಹಿಸಲೂ ಆಗದಷ್ಟು ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳೇ ಮುಖ್ಯವಾಹಿನಿ ಮಾಧ್ಯಮಗಳಾಗಿ ಹೊರಹೊಮ್ಮುತ್ತಿವೆ. ಇದಕ್ಕೆ ತಕ್ಕುದಾಗಿ ಪತ್ರಕರ್ತರು ಡಿಜಿಟಲ್ ಕೌಶಲ ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹಿರಿಯ ಪತ್ರಕರ್ತ ರವಿ ಹೆಗಡೆ ಹೇಳಿದರು. ‘ಪತ್ರಕರ್ತರ ವೃತ್ತಿ ಸವಾಲು ಮತ್ತು ಸಾಮಾಜಿಕ ಹೊಣೆಗಾರಿಕೆ’ ವಿಷಯದ ಕುರಿತು ಮಾತನಾಡಿದ ಅವರು, ಮಾಧ್ಯಮ ಕ್ಷೇತ್ರ ಹೊಸ ವಿಸ್ತಾರತೆಗೆ ತೆರೆದುಕೊಳ್ಳುತ್ತಿರುವಾಗ ಪತ್ರಕರ್ತರೂ ಹೊಸ ಕೌಶಲ್ಯಗಳನ್ನು ಕಲಿತುಕೊಳ್ಳಬೇಕಿದೆ ಎಂದು ಹೇಳಿದರು.

    ಪತ್ರಕರ್ತರಾದ ದಿನೇಶ್ ಅಮೀನ್ ಮಟ್ಟು, ನಾ ವಿನಯ್, ಕಂ.ಕ. ಮೂರ್ತಿ, ರವಿಕಾಂತ ಕುಂದಾಪುರ ಮಾತನಾಡಿದರು.

    ಇಂದು ಪ್ರಶಸ್ತಿ ಪ್ರದಾನ: ವೃತ್ತಿ, ಸೇವೆ, ಸಾಧನೆ ಹಾಗೂ ಅತ್ಯುತ್ತಮ ವರದಿಗಳಿಗಾಗಿ ಪತ್ರಕರ್ತರಿಗೆ ನೀಡುವ 2018ನೇ ಸಾಲಿನ ದತ್ತಿ ಪ್ರಶಸ್ತಿಗಳು ಭಾನುವಾರ ಪ್ರದಾನವಾಗಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts