More

    ನಮಗೂ ಬೇಕು ಉದ್ಯೋಗ ಮೀಸಲು -ಪ್ರೊಫೆಲಾಕ್ಸಿಸ್ ಚಿಕಿತ್ಸೆ ನೀಡಿ – ಮಾಧ್ಯಮ ಸಂವಾದದಲ್ಲಿ ಕುಸುಮರೋಗಿಗಳ ಹಕ್ಕೊತ್ತಾಯ 

    ದಾವಣಗೆರೆ: ನಮಗೆ ಶಿಕ್ಷಣಕ್ಕೂ ಮುನ್ನ ಚಿಕಿತ್ಸೆ ಅತ್ಯವಶ್ಯ, ಅನುಕಂಪಕ್ಕಿಂತ ಅವಕಾಶ ಬೇಕು. ನಾವೂ ಸಾಮಾನ್ಯರಂತೆ ಜೀವಿಸುವಂತಾಗಲು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನೀಡುವ ಪ್ರೊಫೆಲಾಕ್ಸಿಸ್ ಚುಚ್ಚುಮದ್ದನ್ನು ಸರ್ಕಾರ ನೀಡಬೇಕು. ಉದ್ಯೋಗದಲ್ಲಿ ಮೀಸಲು ಕಲ್ಪಿಸಬೇಕು. ಜಿಲ್ಲಾಸ್ಪತ್ರೆಗಳಲ್ಲಿ ಕುಸುಮರೋಗ ಪತ್ತೆ ಮಾಡುವ ವ್ಯವಸ್ಥೆ ಬರಬೇಕು..
    ನಗರದ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನಾಲ್ಕನೇ ದಿನದ ಯುವ ಶಿಬಿರದಲ್ಲಿ ಮಾಧ್ಯಮ ಸಂವಾದದಲ್ಲಿ ಕುಸುಮರೋಗ ಬಾಧಿತರು ಆಗಬೇಕಿರುವ ಕೆಲಸಗಳ ಬಗ್ಗೆ ಚೆಳಕು ಚೆಲ್ಲಿದರು. ತಮಗಿರುವ ಸಾಮಾಜಿಕ ತೊಡಕುಗಳನ್ನು ಹೇಳಿಕೊಂಡರು.
    ವಿಜಯಪುರದ ಶಿವಕುಮಾರ ಮೇತ್ರಿ ಮಾತನಾಡಿ ನಮಗೂ ಓದಿ ದೊಡ್ಡ ಹುದ್ದೆ ಪಡೆಯುವ ಆಸೆ ಇದೆ. ಆದರೆ ಕೀಲು ರಕ್ತಸ್ರಾವ ಆಗುವ ಕಾರಣಕ್ಕೆ ಶಾಲೆಗೆ ಹೋಗುವುದು ಕಷ್ಟ. ಆದರೆ, ವಿದೇಶಗಳಲ್ಲಿ ರಕ್ತಸ್ರಾವ ಆಗುವ ಮುನ್ನವೇ ಪ್ರೊಫೆಲಾಕ್ಸಿಸ್ ಚಿಕಿತ್ಸೆ ನೀಡಲಾಗುತ್ತಿದೆ. ಅದನ್ನು ನೀಡಿದರೆ ನಮಗೆ ವಿಕಲತೆಯ ಭಾವನೆ ಬರೋದಿಲ್ಲ ಎಂದರು.
    ಸುರೇಶ್ ಮಾತನಾಡಿ ಕುಸುಮ ರೋಗ ಎಂಬುದು ಮುಳ್ಳಿನ ಹಾಸಿಗೆ. ನಾನು ಸೌಲಭ್ಯ ಪಡೆದು ಓದಿ ಕೆಲಸದಲ್ಲಿದ್ದೇನೆ. ಆದರೆ ನನ್ನ ಜತೆಗಾರರೂ ಓದಿ ಜೀವನದಲ್ಲಿ ಅನುಕೂಲತೆ ಪಡೆಯಲು ಹಿಮೋಫಿಲಿಯಾ ಬಾಧಿತರಿಗೆ ಉದ್ಯೋಗ ಮೀಸಲು ಕಲ್ಪಿಸಬೇಕಿದೆ ಎಂದರು.
    ಬಳ್ಳಾರಿಯ ರವಿಕುಮಾರ್ ಮಾತನಾಡಿ ಹಿಮೋಫಿಲಿಯಾ ಇದೊಂದು ಕಡಿಮೆ ಜಾಗೃತಿಯುಳ್ಳ ಕಾಯಿಲೆ. ಮಕ್ಕಳು ಆಟವಾಡುವಾಗ ಬಿದ್ದು ನಿರಂತರ ರಕ್ತಸ್ರಾವ ಆಗುತ್ತಿದ್ದಲ್ಲಿ ಸಂಬಂಧಿಸಿದ ವೈದ್ಯರು, ಸೊಸೈಟಿ ಸಂಪರ್ಕಿಸಬೇಕು. ಹಿಮೋಫಿಲಿಯಾ ಬಾಧಿತರೂ ಓದು ದೊಡ್ಡ ಹುದ್ದೆಯಲ್ಲಿದ್ದಾರೆ, ಸಾಧನೆ ಮಾಡುತ್ತಿದ್ದಾರೆ. ಅಂಥವರ ಬಗ್ಗೆಯೂ ಮಾಧ್ಯಮಗಳು ಬೆಳಕು ಚೆಲ್ಲಿದರೆ ಉಳಿದವರನ್ನೂ ಮುಖ್ಯವಾಹಿನಿಗೆ ತರಬಹುದು ಎಂದು ಅನಿಸಿಕೆ ಹೇಳಿಕೊಂಡರು.
    ಶಿರಸಿಯ ಆಜಾದ್ ಮಾತನಾಡಿ ಕುಸುಮ ರೋಗಿಗಳು ಕನಿಷ್ಠ ಮಟ್ಟದ ಜೀವನ ನಿಭಾಯಿಸಲು ಕೆಲವು ಬ್ಯಾಂಕ್ ಹಾಗೂ ಸರ್ಕಾರೇತರ ಸಂಸ್ಥೆಗಳು ನಡೆಸುವ ಸ್ವ ಉದ್ದಿಮೆ ಕೌಶಲಗಳ ತರಬೇತಿ ನೀಡುವಂತಾದರೆ ಅನುಕೂಲ ಎಂದು ಹೇಳಿದರು.
    ಹುಬ್ಬಳ್ಳಿಯ ಇ. ಶ್ರೀಕಾಂತ್‌ಗೌಡ ಮಾತನಾಡಿ ಹಿಮೋಫಿಲಿಯಾ ಬಾಧಿತರಿಗೆ ಸಂಘ ಸಂಸ್ಥೆಗಳಿಂದ ಕೇವಲ ಸಹಾನುಭೂತಿ ಬದಲಿಗೆ ನೆರವು ಅಗತ್ಯವಿದೆ ಎಂದರೆ, ಹಿಮೋಫಿಲಿಯಾ ಸಂಸ್ಥೆಗೆ ದಾನಿಗಳಿಂದ ವಿವಿಧ ಸ್ವರೂಪಗಳಲ್ಲಿ ಸಹಾಯ ಬೇಕಿದೆ ಎಂದು ಹೇಳಿದರು.
    ಹಿಮೋಫಿಲಿಯಾ ಸೊಸೈಟಿ ಅಧ್ಯಕ್ಷ ಡಾ. ಸುರೇಶ್ ಹನಗವಾಡಿ ಅಂಗವಿಕಲರ ಕಾಯ್ದೆ ವ್ಯಾಪ್ತಿಗೆ ಇತ್ತೀಚೆಗೆ ಹಿಮೋಫಿಲಿಯಾ ಸೇರ್ಪಡೆಯಾಗಿದೆ. ಎಲ್ಲ ಬಾಧಿತರಿಗೆ ಯುಡಿಐಡಿ ಪತ್ರ ನೀಡುವ ಪ್ರಕ್ರಿಯೆ ಶುರುವಾಗಿದೆ. ಆದರೆ, ಬೆಂಚ್ ಮಾರ್ಕ್ ವ್ಯಾಪ್ತಿಯಿಂದ ಕೈ ತಪ್ಪಿರುವ ಕಾರಣಕ್ಕೆ ಉದ್ಯೋಗ ಮೀಸಲು ದಕ್ಕಿಲ್ಲ. ಇದಕ್ಕಾಗಿ ಹೋರಾಟ ನಡೆದಿದೆ ಎಂದರು.
    ಆನುವಂಶಿಕ ರೋಗಗಳ ಕುರಿತು ಸಂಚಾರಿ ಹಿಮೋಫಿಲಿಯಾ ಚಿಕಿತ್ಸಾ ಘಟಕದ ಮೂಲಕ ಹೋಬಳಿ, ತಾಲೂಕು ಮಟ್ಟದಲ್ಲಿ ಜಾಗೃತಿ ಜತೆಗೆ ಪುನರ್ವಸತಿ ಕಲ್ಪಿಸಲಾಗುತ್ತಿದೆ. ಶೀಘ್ರವೇ ಮಾಸಿಕ ಕ್ಲಿನಿಕ್ ಆರಂಭಿಸುವ ಆಲೋಚನೆ ಇದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹಿಮೋಫಿಲಿಯಾ ಬಾಧಿತರಿಗೆ ಔಷಧ ಪೂರೈಕೆ ಮಾಡುವಷ್ಟರ ಮಟ್ಟಿಗೆ ಬೆಳವಣಿಗೆ ಆಗಿದೆ.
    ಪ್ರೊಫೆಲಾಕ್ಸಿಸ್ ಚಿಕಿತ್ಸೆ ಭಾರತದಲ್ಲೂ ಅನ್ವಯಗೊಳಿಸಲು ಸರ್ಕಾರಕ್ಕೆ ಒತ್ತಡ ತರಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗ ಪತ್ತೆಯ ಉಪಕರಣ ಕಲ್ಪಿಸುವ ಬಗ್ಗೆ ಆರೋಗ್ಯ ಸಚಿವರು ಪ್ರಸ್ತಾಪಿಸಿರುವುದು ಕೂಡ ಬಲ ಬಂದಿದೆ ಎಂದು ಹೇಳಿದರು.
    ಸಂವಾದದಲ್ಲಿ ಪತ್ರಕರ್ತರಾದ ಮಂಜುನಾಥ ಕಾಡಜ್ಜಿ, ಕೆ.ಎನ್.ಮಲ್ಲಿಕಾರ್ಜುನ ಹಾಗೂ ಡಿ.ಎಂ.ಮಹೇಶ್ ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts