More

    ಲಕ್ಷ್ಮೇಶ್ವರದ ಬಜಾರ ರಸ್ತೆ ಬೇಸಿಗೆಗೆ ಧೂಳು, ಮಳೆ ಬಂದರೆ ಕೆಸರು

    ಲಕ್ಷ್ಮೇಶ್ವರ: ಪಟ್ಟಣದ ಮುಖ್ಯ ಬಜಾರ ಅಭಿವೃದ್ಧಿಗೆ ಇಬ್ಬರು ಶಾಸಕರು ಭೂಮಿಪೂಜೆ ನೆರವೇರಿಸಿದರೂ ರಸ್ತೆ ಅಭಿವೃದ್ಧಿಗೆ ಹಿಡಿದ ಗ್ರಹಣ ಇನ್ನೂ ಸರಿದಿಲ್ಲ. ಬೇಸಿಗೆಯಲ್ಲಿ ಧೂಳು, ಮಳೆಗಾಲದಲ್ಲಿ ಕೆಸರಿನ ಸಮಸ್ಯೆಗೆ ಪರಿಹಾರ ದೊರೆತಿಲ್ಲ. 4 ದಿನಗಳಿಂದ ಹಿಡಿದ ಜಿಟಿಜಿಟಿ ಮಳೆಗೆ ರಸ್ತೆ ಕೆಸರುಗದ್ದೆಯಂತಾಗಿದ್ದು, ಈ ರಸ್ತೇಲಿ ಹೆಂಗಪ್ಪ ಸಂಚರಿಸೋದು? ಎಂದು ಜನರು ಪುರಸಭೆಗೆ ಶಾಪ ಹಾಕುತ್ತಿದ್ದಾರೆ.

    ವ್ಯಾಪಾರಿ ಕೇಂದ್ರ ಎನಿಸಿಕೊಂಡ ಪಟ್ಟಣದ ಮುಖ್ಯ ಬಜಾರ ರಸ್ತೆ ಹದಗೆಟ್ಟು ವರ್ಷಗಳೇ ಕಳೆದಿವೆ. ಜನಪ್ರತಿನಿಧಿಯಾಗಲಿ ಅಥವಾ ಅಧಿಕಾರಿಗಳಾಗಲಿ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ರಾಮಣ್ಣ ಲಮಾಣಿ ಶಾಸಕರಾಗಿದ್ದಾಗ ಪೌರಾಡಳಿತ ಇಲಾಖೆಯಿಂದ ಬಿಡುಗಡೆಯಾದ 1 ಕೋಟಿ ರೂ. ಅನುದಾನದ 300 ಮೀಟರ್ ಸಿ.ಸಿ. ರಸ್ತೆ ಕುಂಟುತ್ತಾ ಪೂರ್ಣಗೊಂಡಿದೆ. ಅರ್ಧಕ್ಕೆ ನಿಂತ ಮುಖ್ಯ ಬಜಾರ ರಸ್ತೆ ಅಭಿವೃದ್ಧಿಗೆ ಸದಸ್ಯರು ತಮ್ಮ ವಾರ್ಡ್ ಅಭಿವೃದ್ಧಿಯನ್ನು ಬದಿಗಿಟ್ಟು ಪುರಸಭೆಯ 15ನೇ ಹಣಕಾಸಿನ 68.80 ಲಕ್ಷ ರೂ. ಹಾಗೂ ಎಸ್‌ಎಫ್‌ಸಿ ಮುಕ್ತನಿಧಿಯ 23.86 ಲಕ್ಷ ರೂ. ಅನುದಾನ ಕಲ್ಪಿಸಿದ್ದಾರೆ.
    ಪುರಸಭೆ ಅನುದಾನದಡಿ ಕೈಗೊಂಡ ರಸ್ತೆ ಅಭಿವೃದ್ಧಿಗೆ ಶಾಸಕ ಡಾ. ಚಂದ್ರು ಲಮಾಣಿ ಅವರು ಭೂಮಿಪೂಜೆ ನೆರವೇರಿಸಿ ತಿಂಗಳು ಕಳೆದರೂ ಕಾಮಗಾರಿ ಮಾತ್ರ ಪ್ರಾರಂಭವಾಗಿಲ್ಲ. ಇದರಿಂದ ನೂತನ ಶಾಸಕರು ಲಕ್ಷ್ಮೇಶ್ವರ ತಾಲೂಕಿನಲ್ಲಿ ಮಾಡಿದ ಪ್ರಥಮ ರಸ್ತೆ ಅಭಿವೃದ್ಧಿ ಕಾಮಗಾರಿಯ ಪೂಜೆಗೆ ವಿಘ್ನ ಉಂಟಾಗಿದೆ.

    ತಪ್ಪದ ಗೋಳು: 10 ವರ್ಷಗಳ ಹಿಂದೆ ಡಾಂಬರೀಕರಣಗೊಂಡಿದ್ದ ಬಜಾರ ರಸ್ತೆ 2-3 ವರ್ಷಗಳಲ್ಲಿ ಕಿತ್ತು ಹೋಯಿತು. ಐದಾರು ವರ್ಷಗಳ ಹಿಂದೆ ಒಳಚರಂಡಿ ಕಾಮಗಾರಿಯಿಂದ ರಸ್ತೆ ಸಂಪೂರ್ಣ ಹದಗೆಟ್ಟಿತು. ಅಲ್ಲಿಂದ ಇಲ್ಲಿಯವರೆಗೂ ರಸ್ತೆ ಅಭಿವೃದ್ಧಿ ಕಾಣದೇ ಜನರು ಧೂಳು, ಕೆಸರು, ಗಲೀಜಿನಿಂದ ರೋಸಿ ಹೋಗಿದ್ದಾರೆ. ಹಲವಾರು ಕಾರಣಗಳಿಂದ ಅಭಿವೃದ್ಧಿ ಕಾಣದ ರಸ್ತೆಗೆ ಕೊನೆಗೆ ಪುರಸಭೆ ಸದಸ್ಯರ ವಾರ್ಡ್ ಅಭಿವೃದ್ಧಿ ಅನುದಾನ ನೀಡಿದರೂ ಯಾವುದೇ ಕೆಲಸವಾಗಿಲ್ಲ. ಇದೀಗ ಮತ್ತೆ ಮಳೆಗಾಲ ಪ್ರಾರಂಭವಾಗಿದ್ದು ಮಾರುಕಟ್ಟೆಗೆ ಬರುವ ಜನರು, ವ್ಯಾಪಾರಸ್ಥರು, ವಿದ್ಯಾರ್ಥಿಗಳು, ವೃದ್ಧರಿಗೆ ಗೋಳು ತಪ್ಪದಂತಾಗಿದೆ.

    ಗುತ್ತಿಗೆದಾರರ ನಿರ್ಲಕ್ಷೃ ನಮಗೂ ಮುಜುಗರ ಉಂಟು ಮಾಡುತ್ತಿದೆ. ಕಾಮಗಾರಿ ಪ್ರಾರಂಭಿಸುವಂತೆ ಗುತ್ತಿಗೆದಾರರಿಗೆ ನೋಟಿಸ್ ನೀಡುವಂತೆ ಮುಖ್ಯಾಧಿಕಾರಿಗೆ ಸೂಚಿಸಿದ್ದೇನೆ. ಇನ್ನು ಮೇಲೆ ಕಾಮಗಾರಿ ಪ್ರಾರಂಭವಾಗುವವರೆಗೂ ಭೂಮಿಪೂಜೆ ಮಾಡುವುದಿಲ್ಲ.
    -ಡಾ. ಚಂದ್ರು ಲಮಾಣಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts