More

    ಚುನಾವಣೆ ಸಮಿತಿ ಸಭೆ ನಂತರ ಕೈ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

    ಹುಬ್ಬಳ್ಳಿ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಮಾ. 7ರಂದು ದೆಹಲಿಯಲ್ಲಿ ಚುನಾವಣೆ ಸಮಿತಿ ಸಭೆ ನಡೆಯಲಿದೆ. ಸಭೆಯ ನಂತರ ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳ್ಳಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದ್ದಾರೆ.

    ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಾಸಕರಾದ ಶಿವರಾಮ ಹೆಬ್ಬಾರ ಹಾಗೂ ಎಸ್.ಟಿ. ಸೋಮಶೇಖರ ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಬಿಜೆಪಿಯ ನೂರಾರು ಪ್ರಮುಖರು ಕಾಂಗ್ರೆಸ್​ಗೆ ಬರುತ್ತಿದ್ದಾರೆ. ನಮ್ಮ ಪಕ್ಷದ ತತ್ವ, ಸಿದ್ಧಾಂತ ಒಪ್ಪಿ ಯಾರೇ ಬಂದರೂ ಅವರನ್ನು ಸ್ವಾಗತಿಸುತ್ತೇವೆ ಎಂದು ತಿಳಿಸಿದರು.

    ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರು ಕಾಂಗ್ರೆಸ್​ಗೆ ಬಂದು, ಬಿಜೆಪಿಗೆ ಮರಳಿದರು. ಇನ್ನೂ ಕೇವಲ ಒಂದೇ ತಿಂಗಳು ಕಾಯಿರಿ, ಶೆಟ್ಟರ್ ಅವರಿಂದ ಬಿಜೆಪಿಗೆ ಮರಳಿದ್ದಕ್ಕೆ ಪಶ್ಚಾತಾಪದ ಹೇಳಿಕೆ ಬರುತ್ತದೆ ಎಂದು ಭವಿಷ್ಯ ನುಡಿದರು.

    ಮಹದಾಯಿ ಕಾಮಗಾರಿ ವಿಳಂಬಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉತ್ತರಿಸಬೇಕು. ಈ ಹಿಂದೆ ಮಹದಾಯಿ ನದಿ ನೀರು ತಂದೇಬಿಟ್ಟೇವು ಎಂಬಂತೆ ಬಿಜೆಪಿಯವರು ಹುಬ್ಬಳ್ಳಿಯಲ್ಲಿ ವಿಜಯೋತ್ಸವ ಆಚರಿಸಿದರು. ಆದರೆ, ಇನ್ನೂ ಮಹದಾಯಿ ಬಿಕ್ಕಟ್ಟು ಬಗೆಹರಿದಿಲ್ಲ. ಈ ಬಗ್ಗೆ ಬಿಜೆಪಿ ಮುಖಂಡರು ಉತ್ತರಿಸಬೇಕು. ತೊಡಕುಗಳನ್ನು ನಿವಾರಿಸಿ, ಮಹದಾಯಿ ನದಿ ನೀರು ತಂದರೆ ಅವರಿಗೂ ಗೌರವ ಎಂದು ಹೇಳಿದರು.

    ಪಾಕ್​ಪರ ಘೋಷಣೆಗೆ ಸಂಬಂಧಿಸಿದಂತೆ ಬಿಜೆಪಿಯವರು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರ ರಾಜೀನಾಮೆ ಕೇಳುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ, ಯಾವಾಗ ಬೇಕಂತೆ ರಾಜೀನಾಮೆ ? ರಾಜೀನಾಮೆ ಕೊಡೋಣ ಎಂದು ವ್ಯಂಗ್ಯವಾಗಿ ನುಡಿದರು.

    ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಪಾಕ್​ಪರ ಘೋಷಣೆ ಕೂಗಿದ್ದರೂ, ಅವರನ್ನು ಹಿಂದಿನ ಸರ್ಕಾರ ಏಕೆ ಬಂಧಿಸಲಿಲ್ಲ ಎಂದು ಪ್ರಶ್ನಿಸಿದರು. ಪಾಕ್​ಪರ ಘೋಷಣೆ ಕೂಗಿದವರನ್ನು ನಮ್ಮ ಸರ್ಕಾರ ಬಂಧಿಸಿ, ಪಾರದರ್ಶಕವಾಗಿ ವಿಚಾರಣೆ ನಡೆಸುತ್ತಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts