More

    ಕುಸಿಯುವ ಭೀತಿಯಲ್ಲಿ ಲ್ಯಾನ್ಸ್‌ಡೌನ್..!

    ಸದೇಶ್ ಕಾರ್ಮಾಡ್ ಮೈಸೂರು
    ಒಂದು ದಶಕದಿಂದ ನಿರ್ವಹಣೆ ಇಲ್ಲದೆ ಗಾಳಿ, ಮಳೆಯ ಹೊಡೆತಕ್ಕೆ ಸಿಲುಕಿ ನಲುಗಿರುವ ನಗರದ ಪಾರಂಪರಿಕ ಕಟ್ಟಡ ಲ್ಯಾನ್ಸ್‌ಡೌನ್ ಕಟ್ಟಡ ಕುಸಿಯುವ ಭೀತಿ ಎದುರಿಸುತ್ತಿದೆ.

    ಕಟ್ಟಡ ಹಿಂಭಾಗದ ಹಲವಾರು ಕಿಟಕಿಗಳನ್ನು ಕಳ್ಳರು ಕದ್ದೊಯ್ದಿದ್ದು, ಗೋಡೆಗಳು ಕಿತ್ತು ಬಂದಿವೆ. ಹೀಗಾಗಿ ಕಟ್ಟಡ ದಿನೇ ದಿನೆ ದುರ್ಬಲಗೊಳ್ಳುತ್ತಿದ್ದು, ಕುಸಿಯುವ ಆತಂಕವನ್ನು ಎದುರಿಸುತ್ತಿದೆ. ಕಾಲ ಕಾಲಕ್ಕೆ ಈ ಕಟ್ಟಡ ಕನಿಷ್ಠ ಸುಣ್ಣ ಬಣ್ಣವನ್ನಾದರೂ ಕಂಡಿದ್ದರೆ ಕಟ್ಟಡ ಇಂದಿಗೂ ಸದೃಢವಾಗಿ ಇರುತಿತ್ತು. ಆದರೆ, ಕಟ್ಟಡದ ನಿರ್ವಹಣೆ ಕುರಿತು ಸರ್ಕಾರ ಸಂಪೂರ್ಣ ನಿರ್ಲಕ್ಷೃ ವಹಿಸಿದ ಪರಿಣಾಮ ಪ್ರಸ್ತುತ ಕಟ್ಟಡ ಸಂಪೂರ್ಣ ದುಸ್ಥಿತಿಗೆ ತಲುಪಿದೆ. ಈ ಕಟ್ಟಡ ಸಂರಕ್ಷಣಾ ಕಾರ್ಯದ ಸಂದರ್ಭ 2 ಕೋಟಿ ರೂ.ಮೌಲ್ಯದ ಮರದ ತೊಲೆಗಳನ್ನು ಅಳವಡಿಸಲಾಗಿತ್ತು. ಈ ಪೈಕಿ ಬಹುತೇಕ ಮರದ ತೊಲೆಗಳು ಕಳುವಾಗಿದೆ.

    ಕಟ್ಟಡದಲ್ಲಿ ತ್ಯಾಜ್ಯದ ರಾಶಿ

    ಕಟ್ಟಡ ದುಸ್ಥಿತಿಯಲ್ಲಿರುವ ಹಿನ್ನೆಲೆಯಲ್ಲಿ ಈ ಕಟ್ಟಡದ ಬಳಿಗೆ ಯಾರೂ ತೆರಳದಂತೆ ಕಟ್ಟಡದ ಮುಂಭಾಗ ಗ್ರಿಲ್‌ಗಳನ್ನು ಅಳವಡಿಸಲಾ ಗಿದೆ. ಹಾಗಾಗಿ ಕಟ್ಟಡದ ಮುಂಭಾಗದ ಮೂಲಕ ಯಾರು ಸಹ ಕಟ್ಟಡವನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಆದರೆ, ಕಟ್ಟಡದ ಹಿಂಭಾಗದಲ್ಲಿರುವ ಬಹುತೇಕ ಎಲ್ಲ ಕಿಟಕಿಗಳನ್ನು ಕಳ್ಳರು ಕದ್ದೊಯ್ದಿರುವ ಹಿನ್ನೆಲೆಯಲ್ಲಿ ಸುಲಭವಾಗಿ ಕಿಟಕಿ ಮೂಲಕ ಕಟ್ಟಡವನ್ನು ಪ್ರವೇಶಿಸಬ ಹುದು. ಹೀಗಾಗಿ ಹಿಂಭಾಗದ ಮೂಲಕ ಈ ಕಟ್ಟಡ ಕೊಠಡಿಗಳಿಗೆ ತ್ಯಾಜ್ಯದ ರಾಶಿಯನ್ನು ತಂದು ಸುರಿಯಲಾಗುತ್ತಿದ್ದು, ಸುತ್ತಮುತ್ತ ಅನೈರ್ಮಲ್ಯದ ವಾತಾವರಣ ನಿರ್ಮಾಣಗೊಂಡಿದೆ.

    ಇಲಿ ಹೆಗ್ಗಣಗಳ ಕಾಟ

    ಸರ್ಕಾರದ ನಿರ್ಲಕ್ಷೃದಿಂದ ಕಟ್ಟಡ ನಿರ್ವಹಣೆ ಕಾಣದೆ ದಿನೇ ದಿನೆ ದುಸ್ಥಿತಿಗೆ ತಲುಪುತ್ತಿರುವುದು ಒಂದು ಕಡೆಯಾದರೆ ಇಲಿ, ಹೆಗ್ಗಣ, ಗೆದ್ದಲುಗಳ ಕಾಟದಿಂದ ಈ ಕಟ್ಟಡ ದುರ್ಬಲಗೊಳ್ಳುತ್ತಿದೆ. ಕಟ್ಟಡದ ಅಡಿಪಾಯವನ್ನು ಹೆಗ್ಗಣಗಳು ಕೊರೆಯುತ್ತಿದ್ದು, ಹೀಗೆಯೇ ಬಿಟ್ಟರೆ ಕಟ್ಟಡ ಶೀಘ್ರದಲ್ಲಿಯೇ ಕುಸಿದು ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾಗಿ ಸರ್ಕಾರ ಈ ಕಟ್ಟಡದ ಸಂರಕ್ಷಣೆಯ ವಿಚಾರದಲ್ಲಿ ತುರ್ತಾಗಿ ಒಂದು ನಿರ್ಧಾರಕ್ಕೆ ಬರುವುದು ಉತ್ತಮ.

    ಪರಂಪರೆಯ ಮೂಲಕವೇ ಮೈಸೂರು ನಗರ ವಿಶ್ವದ ಗಮನ ಸೆಳೆದಿದೆ. ಆದರೆ, ಇಲ್ಲಿನ ಪಾರಂಪರಿಕ ಕಟ್ಟಡಗಳನ್ನು ಕೆಡವುತ್ತಾ ಹೋದರೆ ಮೈಸೂರು ಪಾರಂಪರಿಕ ನಗರಿ ಎಂಬ ಗರಿಮೆಯನ್ನು ಕಳೆದುಕೊಳ್ಳುವುದು ನಿಶ್ಚಿತ ಎಂಬ ಆತಂಕವನ್ನು ಪಾರಂಪರಿಕ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರದಿಂದ ಈ ಕಟ್ಟಡಗಳನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗದೆ ಇದ್ದರೆ ನಾವು ಅಭಿವೃದ್ಧಿ ಪಡಿಸುತ್ತೇವೆ ಎಂದು ಈ ಹಿಂದೆ ಮೈಸೂರು ರಾಜಮನೆತದ ಪ್ರಮೋದಾದೇವಿ ಒಡೆಯರ್ ಹೇಳಿಕೆ ನೀಡಿದ್ದರು. ಅಲ್ಲದೆ, ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಒಡೆಯರ್ ಸಹ ಕಟ್ಟಡ ಪುನರ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಸರ್ಕಾರ ಖಾಸಗಿ ಸಹಭಾಗಿತ್ವದಲ್ಲಾದರೂ ಈ ಕಟ್ಟಡವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕಾಗಿದೆ.

    2012ರಲ್ಲಿ ಕುಸಿದ ಕಟ್ಟಡ

    ಶತಮಾನದ ಇತಿಹಾಸ ಹೊಂದಿರುವ ಪಾರಂಪರಿಕ ‘ಲ್ಯಾನ್ಸ್‌ಡೌನ್’ ಕಟ್ಟಡ 2012 ಆಗಸ್ಟ್ 23,24 ರಂದು ಸುರಿದ ಧಾರಾಕಾರ ಮಳೆಗೆ ಆ.25 ರಂದು ಸಂಜೆ 6ಕ್ಕೆ ಕಟ್ಟಡದ ಒಂದು ಭಾಗ ಕುಸಿದು ನಾಲ್ವರು ಮೃತಪಟ್ಟಿದ್ದರು. ಲ್ಯಾನ್ಸ್‌ಡೌನ್ ಕಟ್ಟಡದ ದಕ್ಷಿಣ ಭಾಗದ ಮೊದಲ ಮಹಡಿಯ ಕೊಠಡಿ ಸಂಖ್ಯೆ 10, 11 ಮತ್ತು ನೆಲಮಾಳಿಗೆಯ 17ರ ಮೇಲ್ಛಾವಣಿ ಕುಸಿದಿತ್ತು. 11 ಜನವರಿ 2015 ರಂದು ಲ್ಯಾನ್ಸ್‌ಡೌನ್ ಕಟ್ಟಡದ ಜತೆಗೆ ದುಸ್ಥಿತಿಯಲ್ಲಿದ್ದ ಶತಮಾನದ ಇತಿಹಾಸ ಹೊಂದಿರುವ ದೇವರಾಜ ಮಾರುಕಟ್ಟೆ ಸಂರಕ್ಷಣಾ ಕಾರ್ಯಕ್ಕೆ ಚಾಲನೆ ದೊರೆಯಿತು. ದೇವರಾಜ ಮಾರುಕಟ್ಟೆಯನ್ನು 9 ಕೋಟಿ ರೂ., ಲ್ಯಾನ್ಸ್‌ಡೌನ್ ಕಟ್ಟಡವನ್ನು 6 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಕಾಮಗಾರಿ ಕೈಗೊಳ್ಳಲಾಯಿತು. ಆದರೆ, 28 ಆಗಸ್ಟ್ 2016 ರಂದು ದೇವರಾಜ ಮಾರುಕಟ್ಟೆ ಸಂರಕ್ಷಣಾ ಕಾರ್ಯ ಸಂದರ್ಭ ಕಟ್ಟಡದ ಒಂದು ಭಾಗ ಕುಸಿದು ಬಿತ್ತು. ಹೀಗಾಗಿ ಲ್ಯಾನ್ಸ್‌ಡೌನ್ ಹಾಗೂ ದೇವರಾಜ ಮಾರುಕಟ್ಟೆಯ ಅಭಿವೃದ್ಧಿ ಕಾರ್ಯವನ್ನು ಕೈ ಬಿಡಲಾಯಿತು. ನಂತರ ತಜ್ಞರು ಅಧ್ಯಯನ ನಡೆಸಿ ಕಟ್ಟಡದ ಸಂರಕ್ಷಣಾ ಕಾರ್ಯ ಕೈಗೊಳ್ಳಲು ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ಸಂರಕ್ಷಣಾ ಕಾರ್ಯ ಕೈಬಿಟ್ಟು ಪಾರಂಪರಿಕ ಶೈಲಿಯಲ್ಲಿ ಪುನರ್ ನಿರ್ಮಾಣ ಮಾಡುವುದು ಸೂಕ್ತ ಎಂದು ಸಲಹೆ ನೀಡಿದರು. ಈ ಸಲಹೆ ಮೇರೆಗೆ ನಗರ ಪಾಲಿಕೆ ಕಟ್ಟಡ ಪುನರ್ ನಿರ್ಮಾಣಕ್ಕೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ವರದಿ ಸಲ್ಲಿಸಿತು.

    ಲ್ಯಾನ್ಸ್‌ಡೌನ್ ಕಟ್ಟಡ ನಿರ್ವಹಣೆ ಇಲ್ಲದೆ ಶೋಚನೀಯ ಸ್ಥಿತಿಗೆ ತಲುಪಿರುವುದನ್ನು ಗಮನಿಸಿದ್ದೇನೆ. ಕಟ್ಟಡದ ಕಿಟಕಿಗಳನ್ನು ಕಳವು ಮಾಡಿರುವ ಹಿನ್ನೆಲೆಯಲ್ಲಿ ಕಟ್ಟಡ ಮತ್ತಷ್ಟು ದುರ್ಬಲಗೊಳ್ಳುತ್ತಿದೆ. ಕಟ್ಟಡದ ಸಂರಕ್ಷಣೆಯ ವಿಚಾರದ ಕುರಿತು ಮುಂದಿನ ಜಿಲ್ಲಾ ಪಾರಂಪರಿಕ ಸಮಿತಿ ಸಭೆಯಲ್ಲಿ ಗಮನ ಸೆಳೆಯಲಾಗುವುದು.
    ಡಾ.ಎನ್.ಎಸ್. ರಂಗರಾಜು,
    ಸದಸ್ಯ, ಜಿಲ್ಲಾ ಪಾರಂಪರಿಕ ಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts