More

    ಗುಜರಿ ಮಾರಿ ನಿರ್ಗತಿಕರಿಗೆ ಕಿಟ್ ವಿತರಣೆ

    ರಾಜು ಹೊಸಮನಿ ನರಗುಂದ

    ಕರೊನಾ ಹಾವಳಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಜನತಾ ಕರ್ಫ್ಯೂ, ಲಾಕ್​ಡೌನ್ ಹಿನ್ನೆಲೆಯಲ್ಲಿ ನಿರ್ಗತಿಕರು ಒಂದು ಹೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದಾರೆ. ಈ ಮಧ್ಯೆ ಪಟ್ಟಣದ ಯುವಕರ ತಂಡವೊಂದು ಮೋಡ್ಕಾ (ಗುಜರಿ) ಸಂಗ್ರಹಿಸಿ ನಿರ್ಗತಿಕರ ಕುಟುಂಬಗಳಿಗೆ ಕಿಟ್​ಗಳನ್ನು ವಿತರಿಸಲು ಮುಂದಾಗಿದೆ.

    ಪಟ್ಟಣದ ಹೆಲ್ಪಿಂಗ್ ಹ್ಯಾಂಡ್ಸ್ ಮುಸ್ಲಿಂ ಸಂಘಟನೆ ಸದಸ್ಯರು, ಆರ್ಥಿಕವಾಗಿ ಸಂಕಷ್ಟದಲ್ಲಿರುವ ನಿರ್ಗತಿಕರು, ಅಸಹಾಯಕರು, ವಿಧವೆಯರ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್​ಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಸಂಘಟನೆ ಸದಸ್ಯರು ಹಳೆಯ ಪಾತ್ರೆ, ಕಬ್ಬಿಣ, ಪ್ಪಾಸ್ಟಿಕ್ ಡಬ್ಬಿ, ಬಕೇಟ್ ಗುಜರಿ ಸಂಗ್ರಹಿಸಿ, ಅವುಗಳನ್ನು ಮಾರಿ ಬಂದ ಹಣದಲ್ಲಿ ಕಿಟ್​ಗಳನ್ನು ತಯಾರಿಸಿ ವಿತರಿಸುತ್ತಿದ್ದಾರೆ.

    ಇದೀಗ ರಂಜಾನ್ ತಿಂಗಳಲ್ಲಿ ಮುಸ್ಲಿಂ ಸಮಾಜದವರು ಮನೆಗಳನ್ನು ಸ್ವಚ್ಛ ಮಾಡಿಕೊಳ್ಳುತ್ತಿದ್ದಾರೆ. ಈ ವೇಳೆ ಮನೆಯಲ್ಲಿರುವ ಗುಜರಿ ವಸ್ತುಗಳನ್ನು ಹೊರಗೆ ಹಾಕುತ್ತಾರೆ. ಅಂಥ ವಸ್ತುಗಳನ್ನು ಸಂಘಟನೆಯ 50 ಸದಸ್ಯರು ಸಂಗ್ರಹಿಸಿದ್ದಾರೆ. ಅಂದಾಜು 6 ಟಾಟಾ ಏಸ್ ವಾಹನಗಳಷ್ಟು ಗುಜರಿ (ಮೋಡ್ಕಾ) ಸಂಗ್ರಹವಾಗಿದ್ದು, ಅದನ್ನು ಮಾರಾಟ ಮಾಡಿದ್ದಾರೆ. ಜತೆಗೆ ಕೆಲವು ದಾನಿಗಳಿಂದ ಹಣ ಸಂಗ್ರಹಿಸಿ 60ಕ್ಕೂ ಅಧಿಕ ನಿರ್ಗತಿಕ ಮಹಿಳೆಯರಿಗೆ ಕಿಟ್​ಗಳನ್ನು ವಿತರಿಸಿದ್ದಾರೆ. ಕಿಟ್​ನಲ್ಲಿ 5 ಕೆಜಿ ಅಕ್ಕಿ, ಅಡುಗೆ ಎಣ್ಣೆ, ಅರಿಷಿಣ ಪುಡಿ, ಉಪ್ಪು, ಬೇಳೆ, ಶ್ಯಾವಿಗೆ ಪ್ಯಾಕೆಟ್, ಮಸಾಲೆ ಪದಾರ್ಥ ಒಳಗೊಂಡಿದ್ದು, 1200 ರೂಪಾಯಿ ಮೌಲ್ಯದ ಸಾಮಗ್ರಿಗಳಿವೆ.

    ನನಗೀಗ 75 ವರ್ಷ, ನಾನು ಪಾರ್ಶ್ವವಾಯುದಿಂದ ಬಳಲುತ್ತಿದ್ದೇನೆ. ಪತಿಯಿಲ್ಲ, ಮಗ ಮಾನಸಿಕ ಅಸ್ವಸ್ಥ. ಲಾಕ್​ಡೌನ್​ನಿಂದ ಸಾಕಷ್ಟು ಸಮಸ್ಯೆಯಾಗಿದೆ. ಯಾರೂ ದಿಕ್ಕಿಲ್ಲದ ನನಗೆ ರಂಜಾನ್ ಹಬ್ಬ ಆಚರಿಸುವುದಿರಲಿ, ಒಂದು ಹೊತ್ತಿನ ಊಟಕ್ಕೂ ಕಷ್ಟವಿದೆ. ಹುಡುಗರು ಬಂದು ನಮ್ಮ ಕುಟುಂಬಕ್ಕೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದ್ದಾರೆ. ಇದರಿಂದ ಒಂದು ವಾರದ ಊಟಕ್ಕೆ ಅನುಕೂಲವಾಗುತ್ತದೆ.

    | ಅಮೀನಬಿ ಗುಡಾರ ಕಿಟ್ ಪಡೆದ ಫಲಾನುಭವಿ

    ಪ್ರವಾಹ, ಲಾಕ್​ಡೌನ್​ನಿಂದಾಗಿ ತಾಲೂಕಿನ ಜನರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಸ್ಥಿತಿವಂತರು ಹೇಗಾದರೂ ಬದುಕುತ್ತಾರೆ. ಆದರೆ, ಬಡವರಿಗೆ ಯಾರೂ ದಿಕ್ಕಿಲ್ಲದಂತಾಗಿದೆ. ನಮ್ಮ ಸಂಘಟನೆ ಸದಸ್ಯರೂ ಆರ್ಥಿಕವಾಗಿ ಸದೃಢರಿಲ್ಲ. ಹೀಗಾಗಿ ಮೋಡ್ಕಾ ಸಂಗ್ರಹಿಸಿ ಕೈಲಾದ ಸಹಾಯ ಮಾಡುತ್ತಿದ್ದೇವೆ.

    | ಖಲಂದರ ಮಾಲ್ದಾರ

    ಹೆಲ್ಪಿಂಗ್ ಹ್ಯಾಂಡ್ಸ್ ಗ್ರೂಪ್ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts