More

    ರಾಮಜನ್ಮಭೂಮಿಯಲ್ಲಿ ಸೀತಾಭಕ್ತರ ಹರ್ಷೋಲ್ಲಾಸ

    ರಾಘವ ಶರ್ಮ ನಿಡ್ಲೆ ಅಯೋಧ್ಯೆ
    ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ವಣವಾಗುತ್ತಿರುವ ಖುಷಿ ಭಾರತದಾದ್ಯಂತ ಮನೆ ಮಾಡಿದ್ದರೆ, ಮಾತೆ ಸೀತಾದೇವಿಯ ಜನ್ಮಸ್ಥಾನ ನೇಪಾಳದ ಜನಕಪುರಿ ನಿವಾಸಿಗರಲ್ಲೂ ಸಂಭ್ರಮ ಮುಗಿಲುಮುಟ್ಟಿದೆ. ಅಯೋಧ್ಯೆ-ನೇಪಾಳ ದೇಶಗಳನ್ನು ರಾಜತಾಂತ್ರಿಕತೆಗಿಂತ ಹೆಚ್ಚು ಭಗವಾನ್ ಶ್ರೀರಾಮ ಮತ್ತು ಸೀತೆಯೇ ಧಾರ್ವಿುಕವಾಗಿ ಬೆಸೆದಿದ್ದು, ನೇಪಾಳದ ಗಂಡಕಿ ನದಿಯಿಂದ ಸಾಲಿಗ್ರಾಮ ಶಿಲೆ ಬಂದ ಬಳಿಕ, ಇದೀಗ, ನೇಪಾಳದ ಜನಕಪುರಿಯಿಂದ 13 ಸಾವಿರ ಯಾತ್ರಾರ್ಥಿಗಳು ಅಯೋಧ್ಯೆಗೆ ಬಂದಿದ್ದು, ಬಾಲರಾಮನ ಪ್ರಾಣಪ್ರತಿಷ್ಠೆಯ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿರುವುದು ಉಭಯ ದೇಶಗಳ ನಂಟನ್ನು ಹೆಚ್ಚಿಸಿದೆ.

    ಕಳೆದ 8-10 ದಿನಗಳಿಂದ ಅಯೋಧ್ಯೆಯಲ್ಲಿ ನೆಲೆಸಿರುವ ಜನಕಪುರಿ ನಿವಾಸಿಗರು, ನಿತ್ಯವೂ ಸರಯೂ ನದಿ ದಂಡೆಯಲ್ಲಿ ಸೀತಾ-ರಾಮ ಜಪದಲ್ಲಿ ತೊಡಗಿದ್ದಾರೆ. ವಿಶ್ವ ಹಿಂದು ಪರಿಷತ್ ಆಹ್ವಾನದ ಮೇರೆಗೆ ಜನಕಪುರಿ ಹಳ್ಳಿ ಹಳ್ಳಿಯ ಜನರನ್ನು ಅಯೋಧ್ಯೆಗೆ ಕರೆತರಲಾಗಿದೆ. ‘ನಾವು ನಿತ್ಯವೂ ಸೀತಾ ಮಾತೆಯನ್ನು ಪೂಜಿಸುತ್ತೇವೆ ಮತ್ತು ಅವಳ ಪತಿಯ ಜನ್ಮಸ್ಥಾನಕ್ಕೆ ಬಂದಿರುವುದು ನಮ್ಮೆಲ್ಲರ ಭಾಗ್ಯ. ಅಯೋಧ್ಯೆಯಲ್ಲಿ ರಾಮನ ಭವ್ಯ ದೇಗುಲವಿಲ್ಲ ಎನ್ನುವುದು ನಮ್ಮನ್ನೂ ಹತ್ತಾರು ವರ್ಷಗಳ ಕಾಲ ಕಾಡಿತ್ತು’ ಎನ್ನುತ್ತಾರೆ ಜನಕಪುರಿಯ ಅರ್ನಾಕುಜಾ ಗ್ರಾಮದ ನಿವಾಸಿ ನಾರಾಯಣ ರಾವುತ್.

    ‘ಸರಯೂ ನದಿ ದಂಡೆಯಲ್ಲಿ ಸೀತಾರಾಮ ಜಪಕ್ಕೆಂದೇ ನಮ್ಮನ್ನು ಆಹ್ವಾನಿಸಿದ್ದಾರೆ ಮತ್ತು ವಿಶೇಷ ಗುರುತಿನ ಕಾರ್ಡಗಳನ್ನೂ ನೀಡಿದ್ದಾರೆ’ ಎಂದು ಸಂತಸದಿಂದ ಹೇಳಿಕೊಳ್ಳುವ ತಂಡದ ಮಹಿಳಾ ಸದಸ್ಯರು, ರಾಮ ಭಜನೆ, ಕೀರ್ತನೆಗಳನ್ನು ಹಾಡುತ್ತ, ರಾಮ ವನವಾಸ ಮುಗಿಸಿ ಬಂದಿದ್ದಾನೆ ಎಂದು ಹರ್ಷ ವ್ಯಕ್ತಪಡಿಸಿದರು.

    Ayodhya

    ಹಳ್ಳಿಗಳಲ್ಲಿ ದಿನಗೂಲಿ, ಕೃಷಿ ಕೆಲಸಗಳನ್ನು ಮಾಡುತ್ತ ಜೀವನೋಪಾಯ ಕಂಡುಕೊಂಡಿರುವ ಇವರಲ್ಲಿ ಬಹುಪಾಲು ಮಂದಿ ಕಡುಬಡವರು. ರಾಮನ ಪ್ರತಿಷ್ಠಾಪನೆಗೆ ನಮ್ಮನ್ನು ಅಯೋಧ್ಯೆಗೆ ಆಹ್ವಾನಿಸಿದ್ದಾರೆ ಎಂಬ ಹೆಮ್ಮೆ ಪ್ರತಿಯೊಬ್ಬರಲ್ಲೂ ಕಾಣುತ್ತಿದೆ. 27ರತನಕ ಜನಕಪುರಿ ನಿವಾಸಿಗರು ನಗರದಲ್ಲೇ ವಾಸ್ತವ್ಯ ಹೂಡಲಿದ್ದು, ನಂತರ ನೇಪಾಳಕ್ಕೆ ವಾಪಸಾಗಲಿದ್ದಾರೆ. ಅಯೋಧ್ಯೆಗೆ ಮೊದಲು ತಲುಪಿದ್ದ ಜನಕಪುರಿಯ ರಾಮಜಾನಕಿ ದೇಗುಲದ ಸುಮಾರು 500 ಭಕ್ತರು, ಭಕ್ತಿಸೂಚಕವಾಗಿ ಬಾಲರಾಮ ಮತ್ತು ಜಾನಕಿಗೆಂದು 4000ಕ್ಕೂ ಹೆಚ್ಚು ವಿಭಿನ್ನ ಉಡುಗೊರೆಗಳನ್ನು ತಂದಿದ್ದಾರೆ. ಹಣ, ಬಟ್ಟೆ, ಹಣ್ಣು, ಹೂ, ಸಿಹಿತಿಂಡಿಗಳು, ಚಿನ್ನ, ಬೆಳ್ಳಿ ಸೇರಿ ಹತ್ತುಹಲವು ಸಾಮಗ್ರಿಗಳನ್ನು ರಾಮಜಾನಕಿ ದೇಗುಲದ ಮುಖ್ಯ ಅರ್ಚಕ ರಾಮ್ೋಶನ್ ದಾಸ್ ಅವರು ತೀರ್ಥಕ್ಷೇತ್ರ ಟ್ರಸ್ಟ್​ಗೆ ಹಸ್ತಾಂತರಿಸಿದ್ದಾರೆ.

    ಪುರಾಣದ ಪ್ರಕಾರ, ತ್ರೇತಾಯುಗದಲ್ಲಿ ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ರಾಮ-ಸೀತೆ ವಿವಾಹವನ್ನು ‘ವಿವಾಹ ತಿಥಿ ಪಂಚಮಿ’ ಎಂದು ಸ್ಮರಿಸಲಾಗುತ್ತದೆ. ಅಯೋಧ್ಯೆ ಮತ್ತು ಜನಕಪುರದ ನಡುವಿನ ಸಾಂಸ್ಕೃತಿಕ ಸಂಬಂಧಗಳನ್ನು ಗಟ್ಟಿಗೊಳಿಸುವ ಈ ಮಂಗಳಕರ ದಿನದಂದು ಜನಕಪುರಿಯಲ್ಲೂ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ.

    ಗುಜರಾತ್ ಕೃಷಿಕರಿಂದ ಉಚಿತ ಭೋಜನಾಲಯ: ಭಕ್ತಾದಿಗಳಿಗೆ ಭೋಜನಕ್ಕೆ ತೊಂದರೆಯಾಗಬಾರದು ಎಂದು ನಗರದ ವಿವಿಧೆಡೆ ಭೋಜನಾಲಯ ತೆರೆಯಲಾಗಿದೆ. ರಾಮಮಂದಿರಕ್ಕೆ ಸಾಗುವ ಅಯೋಧ್ಯಾಧಾಮ್ ರಸ್ತೆಯಲ್ಲಿ ಗುಜರಾತ್​ನ ಸಾನಂದ್ ಬಾವ್ಳಾ ತಾಲೂಕಿನ ವಿವಿಧ ಗ್ರಾಮಗಳ ನಿವಾಸಿಗರು ನಿರ್ವಿುಸಿರುವ ಭೋಜನಾಲಯ ವಿಶೇಷವಾಗಿ ಗಮನಸೆಳೆಯುತ್ತಿದೆ. ಸುಮಾರು 200 ಮಂದಿ ಸೇವೆಗೆಂದು ಸಾನಂದ್ ಬಾವ್ಳಾದಿಂದ ಬಂದಿದ್ದಾರೆ. ಭಕ್ತಾದಿಗಳನ್ನು ‘ಬನ್ನಿ ಭೋಜನ ಮಾಡಿ’ ಎಂದು ಪ್ರೀತಿಯಿಂದ ಸ್ವಾಗತಿಸಿ, ಪೂರಿ-ಪಲ್ಯ, ಪೊಂಗಲ್ ಹಾಗೂ ಸಿಹಿತಿನಿಸುಗಳನ್ನು ನೀಡಲಾಗುತ್ತಿದೆ. ಬೆಳಗ್ಗೆ 9 ಗಂಟೆಗೆ ಆರಂಭಗೊಳ್ಳುವ ಭೋಜನಸೇವೆ ರಾತ್ರಿ 11 ಗಂಟೆ ತನಕ ಮುಂದುವರಿಯುತ್ತಿದೆ. ಬಡವ-ಶ್ರೀಮಂತರೆನ್ನದೆ ಭಕ್ತರಿಲ್ಲಿ ಊಟ ಮಾಡುತ್ತಿದ್ದಾರೆ.

    ಭೋಜನಗೃಹಕ್ಕೆ ಯಾವುದೇ ಉದ್ಯಮಿ ಅಥವಾ ಸಂಸ್ಥೆ ಹಣಕಾಸು ನೆರವು ನೀಡಿಲ್ಲ. ಸಾನಂದ್ ಬಾವ್ಳಾದ ಜನರೇ ಸ್ವಂತ ಖರ್ಚಿನಿಂದ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ. ಅವರಲ್ಲಿ ಬಹುತೇಕರು ಕೃಷಿಕರು. ಜಮೀನಿನಲ್ಲಿ ಬೆಳೆದ ಆಲೂಗಡ್ಡೆ, ಈರುಳ್ಳಿ, ಗೋಧಿ ಸೇರಿ ವಿವಿಧ ಆಹಾರ ಪದಾರ್ಥಗಳನ್ನು ತಮ್ಮೊಂದಿಗೆ ತಂದಿದ್ದಾರೆ.

    Ayodhya

    ಜ.27ರವರೆಗೆ ಭೋಜನಶಾಲೆ ಮುಂದುವರಿಯಲಿದೆ ಎಂದ ಸಾನಂದ್ ಬಾವ್ಳಾದ ರಾಮಕೃಷ್ಣ ಪಟೇಲ್, ‘ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ಗುಜರಾತ್​ನ ಹಳ್ಳಿ-ಹಳ್ಳಿಗಳಲ್ಲಿ ಇಂಥ ಭೋಜನಶಾಲೆ ತೆರೆಯಲಾಗಿದೆ. ನಾವು ಅಯೋಧ್ಯೆಯಲ್ಲಿ ಸೇವೆ ಮಾಡಲು ಬಂದಿದ್ದೇವೆ. ಆಹಾರ ಸಾಮಗ್ರಿಗಳನ್ನು ಟ್ರಕ್ ಮೂಲಕ ತಂದಿದ್ದೇವೆ’ ಎಂದರು. ಆಹಾರ ಸಾಮಗ್ರಿಗೆ ರೂ. 50 ಲಕ್ಷ ಮತ್ತು ರೂ. 20 ಲಕ್ಷ ಇತರ ರೂಪದಲ್ಲಿ ಖರ್ಚಾಗಿದೆ ಎಂದು ತಂಡದ ಸದಸ್ಯ ರಾಧೇಶ್ಯಾಮ್ ಠಾಕೂರ್ ಮಾಹಿತಿ ನೀಡಿದರು. ಹನುಮಾನ್ ಗಡಿ ನಿವಾಸಿಯಾದ ಮಹಾಂತ ಕಲ್ಯಾಣ್ ದಾಸ್​ಜೀ ಮಹಾರಾಜ್ ತಮ್ಮ ಜಮೀನಿನಲ್ಲಿ ಈ ಭೋಜನಶಾಲೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.

    ಅಯೋಧ್ಯೆಗೆ ಗದಗದ ಆಧುನಿಕ ಗಾಂಧಿ: ಗದಗ ಮೂಲದ ಆಧುನಿಕ ಗಾಂಧಿ ಎಂದೇ ಗುರುತಿಸಿಕೊಂಡಿರುವ ಮುತ್ತಣ್ಣ ತಿರ್ಲಾಪುರ ಅಯೋಧ್ಯೆಗೆ ಪಾದಯಾತ್ರೆ ಮೂಲಕ ತಲುಪಿದ್ದಾರೆ. ರಾಮಮಂದಿರಕ್ಕೆ ತೆರಳುವ ರಾಮ್ ಕಾರಿಡಾರ್ ಬಳಿ ವಿಜಯವಾಣಿ ಜತೆ ಮಾತನಾಡಿದ ಅವರು, ‘ಗಾಂಧೀಜಿ ರಾಮರಾಜ್ಯದ ಕನಸು ಕಂಡಿದ್ದರು. ಅಯೋಧ್ಯೆ ರಾಮಮಂದಿರ ಸಮೃದ್ಧತೆಯ ಸಂಕೇತ. ನಾವೆಲ್ಲರೂ ಕೂಡಿ, ಬೇಧಭಾವವಿಲ್ಲದೆ ಬದುಕಬೇಕು. ಈ ಖುಷಿಯಲ್ಲಿ ಗದಗದಿಂದ 2000 ಕಿಮೀ ಪಾದಯಾತ್ರೆ ಮಾಡಿ ಬಂದಿದ್ದೇನೆ’ ಎಂದರು. ಡಿಸೆಂಬರ್ 9ಕ್ಕೆ ಪಾದಯಾತ್ರೆ ಶುರು ಮಾಡಿದ ಮುತ್ತಣ್ಣ, 40 ದಿನ ನಡೆದುಕೊಂಡು ಬಂದಿದ್ದಾರೆ. ‘ದಾರಿಯಲ್ಲಿ ಜನರು ಪ್ರೀತಿಯಿಂದ ಊಟ-ಉಪಚಾರ ನೀಡಿದ್ದಾರೆ. ಥರಗುಟ್ಟುವ ಚಳಿ ಇದ್ದರೂ, ಯಾವುದೇ ಆರೋಗ್ಯ ಸಮಸ್ಯೆ ಆಗಿಲ್ಲ. ಜನರ ಕಾಳಜಿಯಿಂದಲೇ ಯಾತ್ರೆ ಯಶಸ್ವಿಯಾಗಿದೆ’ ಎಂದ ಮುತ್ತಣ್ಣ, ‘ದೇಶದ ಜನರಿಗೆ ಒಳ್ಳೆಯದಾಗಬೇಕು ಎಂಬ ಸಂಕಲ್ಪದಿಂದ ಬಂದಿದ್ದೇನೆ. ಜನರ ರೂಪದಲ್ಲೇ ಶ್ರೀರಾಮ ನನ್ನ ಕಾಳಜಿ ವಹಿಸಿದ್ದಾನೆ. 22ರ ಕಾರ್ಯಕ್ರಮದ ಬಳಿಕ ರೈಲಿನ ಮೂಲಕ ಊರಿಗೆ ವಾಪಸಾಗುತ್ತೇನೆ’ ಎಂದು ತಿಳಿಸಿದರು.

    ವೃದ್ಧನ ಸೈಕಲ್ ಯಾತ್ರೆ: ರಾಮಮಂದಿರಕ್ಕಾಗಿ ಹಿಂದೆ ಕರಸೇವೆ ಮಾಡಿದ್ದ ರಾಜಸ್ಥಾನದ ಜಾಲೋರ್​ನ ನೇಮಾರಾಮ್ ಪ್ರಜಾಪತಿ ಎಂಬ ವೃದ್ಧ ಗುಜರಾತ್​ನ ಅಹ್ಮದಾಬಾದ್​ನಿಂದ ಸೈಕಲ್ ಯಾತ್ರೆ ಮೂಲಕ ಅಯೋಧ್ಯೆಗೆ ಬಂದಿದ್ದಾರೆ. ‘ರಾಮ ಮಂದಿರ ನಿರ್ಮಾಣ ಆಗಬೇಕು ಎನ್ನುವುದು ನಮ್ಮೆಲ್ಲರ ಕನಸು. ಇದು ನನಸಾಗುತ್ತಿದೆ ಎಂದೇ ಸೈಕಲ್​ನಲ್ಲಿ ರಾಮರಥ ಯಾತ್ರೆ ಮಾಡುತ್ತ ಬಂದಿದ್ದೇನೆ’ ಎನ್ನುತ್ತಾರೆ. ‘1992ರ ಕರಸೇವೆ ನಂತರ ಮಂದಿರ ನಿರ್ವಣವಾಗುವ ತನಕ ಚಪ್ಪಲಿ ಹಾಕುವುದಿಲ್ಲ’ ಎಂದು ಪ್ರತಿಜ್ಞೆ ಮಾಡಿದ್ದ ನೇಮಾರಾಮ್ ಪ್ರಾಣಪ್ರತಿಷ್ಠೆ ಬಳಿಕ ಚಪ್ಪಲಿ ಧರಿಸಲಿದ್ದಾರೆ. ಇದುವರೆಗೆ ಒಟ್ಟು 45 ಸಾವಿರ ಕಿಮೀಗಳನ್ನು ಸೈಕಲ್ ಯಾತ್ರೆ ಮೂಲಕವೇ ನೇಮಾರಾಮ್ ಕ್ರಮಿಸಿದ್ದಾರೆ.

    Ayodhya

    ಅಯೋಧ್ಯೆಗೆ ಶೃಂಗೇರಿ ಆಡಳಿತಾಧಿಕಾರಿ ಡಾ. ಗೌರೀಶಂಕರ್: ಅಯೋಧ್ಯೆಯಲ್ಲಿ ಜ.22ರಂದು ನಡೆಯುವ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯದಲ್ಲಿ ಶ್ರೀಮಠದ ಆಡಳಿತಾಧಿಕಾರಿ ಡಾ. ವಿ.ಆರ್.ಗೌರೀಶಂಕರ್ ಪಾಲ್ಗೊಳ್ಳುವರು ಎಂದು ಶೃಂಗೇರಿ ಮಠದ ಅಧಿಕೃತ ವೆಬ್​ಸೈಟ್​ನಲ್ಲಿ ಮಾಹಿತಿ ನೀಡಲಾಗಿದೆ. ಅಯೋಧ್ಯೆ ಮತ್ತು ಶೃಂಗೇರಿಗೆ ಅವಿನಾಭಾವ ಸಂಬಂಧವಿದ್ದು, ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ಎಂದು ಇತ್ತೀಚೆಗೆ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ತಿಳಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts