More

    ಶ್ರೀಶೈಲದಲ್ಲಿ ಮಲ್ಲಿಕಾರ್ಜುನಸ್ವಾಮಿ ಮಹಾಕುಂಭಾಭಿಷೇಕ ; ಶ್ರೀಶೈಲ, ಕಾಶೀ ಜಗದ್ಗುರುಗಳ ಸಾನ್ನಿಧ್ಯ

    ಶ್ರೀಶೈಲಂ :ಅಹಂಕಾರದ ಆವರಣದಿಂದ ಮಲಿನವಾದ ಜ್ಞಾನವನ್ನು ವಿವೇಕದಿಂದ ನಿರ್ಮಲಗೊಳಿಸುವುದೇ ನಿಜವಾದ ಮಹಾಕುಂಭಾಭಿಷೇಕ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಾಹಾಸ್ವಾಮಿಗಳು ಹಾಗೂ ಕಾಶೀ ಪೀಠದ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವ್ವಾಮಿಗಳು ಅಭಿಪ್ರಾಯಿಸಿದ್ದಾರೆ.

    ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಶ್ರೀಶೈಲಮಲ್ಲಿಕಾರ್ಜುನ ದೇವಾಲಯದಲ್ಲಿ ಅಯೋಜಿಸಿದ್ದ ಉತ್ತರ ಮಹಾದ್ವಾರದ ಲೋಕಾರ್ಪಣೆ, ಸುವರ್ಣ ಕಳಸಾರೋಹಣ ಮತ್ತು ವಿವಿಧ ದೇವರುಗಳ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

    ಸಾಮಾನ್ಯವಾಗಿ ಪ್ರತಿಷ್ಠಿತ ದೇವಾಲಯಗಳು ಜೀರ್ಣೋದ್ಧಾರ ಕಾರ್ಯಗಳನ್ನು ನೆರವೇರಿಸುವಾಗ ದೇವಾಲಯದಲ್ಲಿ ಅನೇಕ್ಷಿತ ವಸ್ತುಗಳು ವ್ಯಕ್ತಿಗಳು ಮತ್ತು ಸಂಗತಿಗಳು ಬರುವುದರಿಂದ ಅಲ್ಲಿರುವ ದೇವಾಲಯಗಳು ಉಪ ದೇವಾಲಯಗಳು ಮತ್ತು ಶಿಖರಗಳು ಅಪವಿತ್ರವೂ, ಮಲಿನವೂ ಆಗಿರುತ್ತವೆ. ಅವುಗಳನ್ನು ಮಂತ್ರೋಚ್ಛಾರ, ಹೋಮ, ಜಪ, ಪಾರಾಯಣ ಮೊದಲಾದ ಆಗಮಿಕ ಮತ್ತು ವೈದಿಕ ಕ್ರಿಯೆಗಳ ಮೂಲಕ ದೇವಸ್ಥಾನದ ಶಿಖರಗಳಿಗೆ ಮಾಡಲಾಗುವ ಕುಂಭಾಭಿಷೇಕದಿಂದ ಪವಿತ್ರಗೊಳಿಸಲಾಗುತ್ತದೆ. ಇದು ಬಹಿರಂಗ ಕುಂಭಾಭಿಷೇಕ ಹಿನ್ನೆಲೆ. ಆದರೆ ದೇಹವೆಂಬ ದೇವಾಲಯದ ಶಿರವೆಂಬ ಶಿಖರದಲ್ಲಿ ರಾರಾಜಿಸುವ ಜ್ಞಾನವೆಂಬ ಕಳಸವು ಕೂಡ ಅಹಂಕಾರಾದಿಗಳ ಆವರಣದಿಂದ ಮಲಿನವಾಗುತ್ತದೆ. ಸದ್ಗುಣ ಹಾಗೂ ಸುವಿವೇಕಾದಿಗಳ ಅಭಿಷೇಕದಿಂದ ಆ ಮಾಲಿನ್ಯವನ್ನು ಕಳೆದುಕೊಳ್ಳುವುದು ಅಂತರಂಗ ಕುಂಭಾಭಿಷೇಕ. ಇದನ್ನು ಪ್ರತಿಯೊಬ್ಬ ಸಾಧಕರೂ ಮಾಡಿಕೊಳ್ಳಬೇಕು ಎಂದು ಉಭಯ ಜಗದ್ಗುರುಗಳು ವಿವರಿಸಿದರು.

    ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಅತಿ ಎತ್ತರದ ರಾಜಗೋಪುರವೆಂದು ಪ್ರಸಿದ್ಧಿಯನ್ನು ಪಡೆದ ಉತ್ತರದ (ಶಿವಾಜಿ) ರಾಜಗೋಪುರದ ಮೇಲೆ ಸುವರ್ಣ ಕಳಸಾರೋಹಣ ನೆರವೇರಿಸಿ ಕುಂಭಾಭಿಷೇಕವನ್ನು ಮಾಡಿ ನಂತರ ಮಲ್ಲಿಕಾರ್ಜುನ ದೇವಸ್ಥಾನ ಹಾಗೂ ಭ್ರಮರಾಂಬಾ ದೇವಸ್ಥಾನದ ಶಿಖರದ ಮೇಲೆ ವಿಧ್ಯುಕ್ತವಾಗಿ ಪುಷ್ಪಾಭಿಷೇಕ ನೆರವೇರಿಸಲಾಯಿತು. ಇದೇ ವೇಳೆ ಶ್ರೀಶೈಲದ ಇತರೆ 45 ದೇವಾಲಯಗಳ ಮೇಲೆ ಏಕಕಾಲದಲ್ಲಿ ಕುಂಭಾಭಿಷೇಕ ನಡೆಯಿತು. ಪೂರ್ವಭಾವಿಯಾಗಿ ಐದು ದಿನಗಳ ಪರ್ಯಂತ ವೀರಶೈವಾಗಮ ಹಾಗೂ ಸ್ಮಾರ್ತಾಗಮ ಪದ್ಧತಿಯಂತೆ ಹೋಮ, ಜಪ, ಪಾರಾಯಣ ಮೊದಲಾದ ಧಾರ್ಮಿಕ ವಿಧಿ ವಿಧಾನಗಳು ಶಾಸ್ತ್ರೋಕ್ತವಾಗಿ ನೆರವೇರಿದವು.

    ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ಮುಜರಾಯಿ ಸಚಿವ ಕೊಟ್ಟು ಸತ್ಯನಾರಾಯಣ, ಕಂಚಿ ಪೀಠದ ಜಗದ್ಗುರು ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಮಹಾಸ್ವಾಮಿಗಳು, ಪುಷ್ಪಗಿರಿ ಪೀಠದ ಜಗದ್ಗುರು ಶ್ರೀ ವಿದ್ಯಾಶಂಕರ ಭಾರತಿ ಮಹಾಸ್ವಾಮಿಗಳು, ಚಿಟಗುಪ್ಪ, ಅಂಬಿಕಾನಗರ, ಕ್ಯಾಸನೂರು, ನೂಲ, ಅಂಕುಶದೊಡ್ಡಿ, ತಂಗಡಪಲ್ಲಿ ಸೇರಿದಂತೆ ವಿವಿಧ ಮಠಗಳ ಶ್ರೀಗಳು ಪಾಲ್ಗೊಂಡಿದ್ದರು.

    ಶ್ರೀಶೈಲ ಕ್ಷೇತ್ರದ ಶಾಸಕ ಶಿಲ್ಪಾ ಚಕ್ರಪಾಣಿ ರಡ್ಡಿ, ಮುಜರಾಯಿ ಕಮಿಷನರ್ ಸತ್ಯನಾರಾಯಣ, ವಿಶೇಷಾಧಿಕಾರಿಗಳಾದ ವೇದಾಂತ ಚಕ್ರವರ್ತಿ, ಚಂದ್ರಶೇಖರ ಆಝಾದ, ದೇವಸ್ಥಾನದ ಆಡಳಿತಾಧಿಕಾರಿಯಾದ ಪೆದ್ದಿರಾಜು, ಪ್ರಧಾನ ಅರ್ಚಕರಾದ ವೀರಯ್ಯ ಸ್ವಾಮಿ, ಮಾರ್ಕಂಡೇಯ ಶಾಸ್ತ್ರಿ ತಂಡದವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts