More

    ಮೃತ ಸ್ನೇಹಿತನ ಮನೆ ಕಟ್ಟಿ.. ಅಲ್ಲೇ 11ನೇ ದಿನದ ಕಾರ್ಯ ನೆರವೇರಿಸಿದ ಯುವಕರ ಸಾಹಸಗಾಥೆ ಇದು!

    | ಅಭಿಲಾಷ್​ ತಿಟ್ಟಮಾರನಹಳ್ಳಿ ಚನ್ನಪಟ್ಟಣ

    ಸ್ನೇಹಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಕಷ್ಟ-ಸುಖದಲ್ಲೂ ಕೈಜೋಡಿಸುವಂತೆ ಮಾಡುವುದೇ ಸ್ನೇಹ ಬಂಧನ ಎಂಬುದನ್ನು ಅಕ್ಷರಶಃ ಸಾಬೀತು ಮಾಡಿದ್ದಾರೆ ಇಲ್ಲಿನ ಸಿಂಗರಾಜಿಪುರ ಗ್ರಾಮದ ಯುವಕರು.

    ಇತ್ತೀಚಿಗೆ ಮೃತಪಟ್ಟ ಗೆಳೆಯನ 11ನೇ ದಿನದ ಪುಣ್ಯತಿಥಿಯನ್ನು ಹೊಸ ಮನೆ ಕಟ್ಟಿಸಿಯೇ ಮಾಡಿದ್ದಾರೆ. ಮೊದಲೇ ಕಡುಬಡತನದಲ್ಲಿದ್ದ ವೃದ್ಧ ದಂಪತಿಗೆ ಮಗನ ಸಾವು ಬರಸಿಡಿಲು ಬಡಿದಂತಾಗಿತ್ತು. ಇರಲು ಸೂರು ಇಲ್ಲದೆ, ಇತ್ತ ದುಡಿವ ಮಗನೂ ಇಲ್ಲದೆ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಮೃತನ ಸ್ನೇಹಿತರೇ ದಂಪತಿಗೆ ಆಸರೆಯಾಗಿದ್ದು, ಎಲ್ಲರಿಗೂ ಮಾದರಿ ಎನಿಸಿದ್ದಾರೆ.

    ಇದನ್ನೂ ಓದಿರಿ ಹೋಟೆಲ್​ ಮಾಲೀಕನ ಮಗನೇ ಎಂಜಲು ಮಾಡ್ತಾನೆ.. ಇಲ್ಲಿ ಊಟ ಮಾಡೋಕು ಮುನ್ನ ಎಚ್ಚರ!

    ಸಿಂಗರಾಜಿಪುರದ ಸಣ್ಣಮ್ಮ ಮತ್ತು ಲಂಕಣ್ಣ ದಂಪತಿ ಪುತ್ರ, ಬೆಂಗಳೂರಿನ ಟಾಕೀಸ್​ವೊಂದರಲ್ಲಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್​(30) ಮೇ 21ರಂದು ಹೃದಯಾಘಾತದಿಂದ ಮೃತಪಟ್ಟರು. ಇರಲು ಸೂರಿಲ್ಲದೆ, ಕೃಷಿ ಭೂಮಿಯೂ ಇಲ್ಲದೆ ಬೇರೆಯವರ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ ಶ್ರೀನಿವಾಸನೇ ಆಸರೆಯಾಗಿದ್ದ. ಇದ್ದ ಅಲ್ಪ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಅಡಿಪಾಯ ಹಾಕಿದ್ದ. ಮಗ ಮನೆ ಕಟ್ಟಿ, ನಮ್ಮ ಕೊನೇ ದಿನಗಳಲ್ಲಿ ನೆಮ್ಮದಿ ಕಲ್ಪಿಸುತ್ತಾನೆ ಎಂದು ಪಾಲಕರು ಕನಸು ಕಟ್ಟಿಕೊಂಡಿದ್ದರು. ಆದರೆ, ವಿಧಿಯಾಟದ ಎದುರು ಮಗ ಬದುಕಲಿಲ್ಲ.

    ಇದನ್ನೂ ಓದಿರಿ ‘ಈ ಸ್ಯಾನಿಟೈಸರ್​ ಹಚ್ಚಿ, ಕರೊನಾ ತೊಲಗಿಸಿ’ ಎಂದ ಕಂಪನಿಗೆ ಹೈಕೋರ್ಟ್​ನಿಂದ ಒಂದು ಲಕ್ಷ ರೂ. ದಂಡ

    ಮೃತ ಸ್ನೇಹಿತನ ಮನೆ ಕಟ್ಟಿ.. ಅಲ್ಲೇ 11ನೇ ದಿನದ ಕಾರ್ಯ ನೆರವೇರಿಸಿದ ಯುವಕರ ಸಾಹಸಗಾಥೆ ಇದು!
    ಸಿಂಗರಾಜಪುರ ಗ್ರಾಮದಲ್ಲಿ ಮೃತ ಶ್ರೀನಿವಾಸನ ಸ್ನೇಹಿತರೇ ಖುದ್ದು ಮನೆ ನಿರ್ಮಿಸುತ್ತಿರುವುದು.

    ಕಂಗೆಟ್ಟ ಶ್ರೀನಿವಾಸನ ಪಾಲಕರಿಗೆ ಆತನ ಸ್ನೇಹಿತರು ಧೈರ್ಯ ತುಂಬಿದರು. ಅಲ್ಲದೆ ಅರ್ಧಕ್ಕೆ ನಿಂತ ಮನೆಯನ್ನು ಗೆಳೆಯನ 11ನೇ ದಿನದ ಪುಣ್ಯತಿಥಿಯೊಳಗೆ ಕಟ್ಟಿ, ಆ ಮನೆಯಲ್ಲೇ ಕಾರ್ಯ ನೇರವೇರಿಸಬೇಕೆಂಬ ಸಂಕಲ್ಪ ಮಾಡಿದರು. ಅದರಂತೆ ತಾಲೂಕಿನ ದಾನಿಗಳ ಸಹಕಾರದೊಂದಿಗೆ, ತಮ್ಮ ಬಳಿ ಇರುವ ಹಣವನ್ನೂ ಒಟ್ಟು ಗೂಡಿಸಿದ ಸ್ನೇಹಿತರು, ತಾವೇ ಶ್ರಮದಾನ ಮಾಡುವ ಮೂಲಕ ಮನೆ ನಿರ್ಮಿಸಿಕೊಟ್ಟಿದ್ದಾರೆ. ಇದೇ ಮನೆಯಲ್ಲಿ ಮಂಗಳವಾರ (ಜೂ.2) ಗೆಳೆಯನ ಪುಣ್ಯತಿಥಿಯೂ ನಡೆಯಿತು. ಕ್ಷೇತ್ರದ ಶಾಸಕ ಎಚ್​.ಡಿ. ಕುಮಾರಸ್ವಾಮಿ 50 ಸಾವಿರ ರೂ. ನೆರವು ನೀಡಿದ್ದರು.

    ಇದನ್ನೂ ಓದಿರಿ ಯುವರಾಜ್ ಕ್ಷಮೆ ಕೇಳಬೇಕು, ಅಭಿಮಾನಿಗಳಿಂದ ಅಭಿಯಾನ!

    ಸೂರು ಸಿಕ್ತು… ಊಟಕ್ಕೆ..?: ಶ್ರೀನಿವಾಸನ ಪಾಲಕರಿಗೆ ಕೂಲಿಯೇ ಜೀವನಾಧಾರ. ಅನಾರೋಗ್ಯಕ್ಕೆ ತುತ್ತಾಗಿರುವ ಲಂಕಣ್ಣ ದುಡಿಯಲಾಗದ ಸ್ಥಿತಿಯಲ್ಲಿದ್ದಾರೆ. ಕುಟುಂಬ ಒಂದೊತ್ತಿನ ಊಟ ಮಾಡಬೇಕೆಂದರೆ ಸಣ್ಣಮ್ಮ ಕೂಲಿ ಮಾಡಬೇಕು. ಕಡು ಬಡತನದಲ್ಲೇ ಬೇಯುತ್ತಿರುವ ದಂಪತಿಯ ಜೀವನ ನಿರ್ವಹಣೆಗೆ ದಾನಿಗಳು ನೆರವು ನೀಡಬೇಕು ಎಂದು ಗ್ರಾಮದ ಸ್ನೇಹಿತರಾದ ರಾಘು, ಸಂತೋಷ್​, ನಂದೀಶ್, ವೆಂಕಟೇಶ್​, ನಾಗೇಶ್​, ರವಿ, ನಾಗರಾಜು ಮತ್ತಿತರರು ಮನವಿ ಮಾಡಿದ್ದಾರೆ.

    ಹೃದಯಾಘಾತದಲ್ಲಿ ಸ್ನೇಹಿತ ಮೃತಪಟ್ಟಿದ್ದ. ಆತನ ಶವ ಮಲಗಿಸಲು ಕೂಡ ಸ್ವಂತ ಜಾಗವಿರಲಿಲ್ಲ. ಅಡಿಪಾಯ ನಿರ್ಮಿಸಿ ಅರ್ಧಕ್ಕೆ ಬಿಟ್ಟಿದ್ದ ಸ್ನೇಹಿತನ ಮನೆಯನ್ನು ದಾನಿಗಳ ಸಹಾಯ ಪಡೆದು ನಿರ್ಮಿಸಿದೆವು. ಈಗ ಆ ವೃದ್ಧ ಕುಟುಂಬಕ್ಕೆ ನೆಲೆ ಸಿಕ್ಕಿದೆ. ಆದರೆ, ಅವರ ಮುಂದಿನ ಜೀವನಕ್ಕೆ ಉಳ್ಳವರು ನೆರವು ನೀಡಬೇಕು.
    | ಶ್ರೀನಿವಾಸ್​ ಮತ್ತು ಸುನೀಲ್​ ಸಿಂಗರಾಜಿಪುರದ ಸ್ನೇಹಿತರು

    ಇದನ್ನೂ ಓದಿರಿ ಜೂ. 5ರಂದು ಚಂದ್ರಗ್ರಹಣ: ಇಲ್ಲಿದೆ ಗೋಚರಿಸುವ ಸ್ಥಳ, ಸಮಯ ಮತ್ತಿತರ ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts