More

    ಮಂಗಳೂರು ರಥಬೀದಿಯಲ್ಲಿದ್ದ ಶತಮಾನಗಳ ಇತಿಹಾಸದ ಅಶ್ವತ್ಥಮರ ಧರೆಗೆ

    ಮಂಗಳೂರು: ನಗರದ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಎದುರಿದ್ದ ಬೃಹತ್ ಅಶ್ವತ್ಧ ಮರ ಭಾನುವಾರ ಬೆಳಗ್ಗೆ 8.10ರ ವೇಳೆಗೆ ಉರುಳಿ ಬಿದ್ದಿದೆ. ಮರದಡಿ ನಿಲ್ಲಿಸಲಾಗಿದ್ದ ನೀರಿನ ಟ್ಯಾಂಕರ್, ಕ್ರೇನ್ ಮತ್ತು ಒಂದು ಕಾರಿಗೆ ಹಾನಿಯಾಗಿದ್ದು, ಉಳಿದಂತೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಸುಮಾರು 300ಕ್ಕೂ ಅಧಿಕ ವರ್ಷದಿಂದ ಮರ ಅಲ್ಲಿತ್ತು. ಸುತ್ತಲೂ ಕಟ್ಟೆಯನ್ನು ಕಟ್ಟಿ ಆರಾಧಿಸಲಾಗುತ್ತಿತ್ತು. 1776ಕ್ಕೂ ಹಿಂದಿನಿಂದಲೂ ರಥಬೀದಿ ದೇವಳವಿದ್ದು, 1804ರಲ್ಲಿ ದೇವರ ಪ್ರತಿಷ್ಠಾಪನೆ ನಡೆದಿತ್ತು. ರಥಬೀದಿಯಲ್ಲಿದ್ದ ಈ ಮರ ವೆಂಕಟರಮಣ ದೇವಳದ ರಥೋತ್ಸವ ಸಂದರ್ಭ ವಿಶೇಷ ಮೆರಗು ನೀಡಿತ್ತು. ನೆರಳು ನೀಡುವುದರ ಜತೆಗೆ ಹಲವು ಪಕ್ಷಿಗಳ ಆಶ್ರಯ ತಾಣವೂ ಆಗಿತ್ತು.

    ಹಲವು ಮಂದಿ ಈ ಮರದೊಂದಿಗೆ ಬಾಂಧವ್ಯ ಹೊಂದಿದ್ದರು. ರಥಬೀದಿಯ ಚಿತ್ರಣವೆಂದರೆ ಅಲ್ಲೊಂದು ಅಶ್ವತ್ಥ ಮರ ಎಲ್ಲರ ಕಣ್ಮುಂದೆ ಬರುತಿತ್ತು. ರಾಜಕಳೆಯಾಗಿದ್ದ ಮರವಿಲ್ಲದೆ ಪ್ರದೇಶ ಬೋಳಾಗಿ ಕಾಣಿಸುತ್ತಿದೆ ಎನ್ನುತ್ತಾರೆ ಸ್ಥಳೀಯರು.

    ಘಟನೆ ಭಾನುವಾರ ಸಂಭವಿಸಿದ್ದರಿಂದ ಜನರ ಓಡಾಟ ಕಡಿಮೆಯಿತ್ತು. ಆಸುಪಾಸಿನ ರಸ್ತೆಗಳಲ್ಲೂ ವಾಹನಗಳ ಸಂಚಾರವಿರಲಿಲ್ಲ. ಮರ ಬಿದ್ದ ಜಾಗದಲ್ಲಿ ನಿಲ್ಲಿಸಲಾಗಿದ್ದ ವಾಹನಗಳಿಗೆ ಮಾತ್ರ ಹಾನಿಯಾಗಿದೆ. ಶನಿವಾರ ಮುಂಜಾನೆ ಸಾಕಷ್ಟು ಸಂಖ್ಯೆಯಲ್ಲಿ ಸ್ಥಳೀಯರು ವೃಕ್ಷಕ್ಕೆ ಪ್ರದಕ್ಷಿಣೆ ಹಾಕುತ್ತಾರೆ. ಈ ವೇಳೆ ಘಟನೆ ನಡೆದಿದ್ದರೆ ಸಾಕಷ್ಟು ಹಾನಿಯೂ ಸಂಭವಿಸುತಿತ್ತು.

    ಸ್ಥಳಕ್ಕೆ ಪೊಲೀಸ್, ಅಗ್ನಿಶಾಮಕ ದಳ, ಮೆಸ್ಕಾಂ, ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ನೀಡಿದ್ದು, ತೆರವು ಕಾರ್ಯಾಚರಣೆ ನಡೆಸಿದ್ದಾರೆ. ದೇವಳದ ಆಡಳಿತ ಮಂಡಳಿ ಪದಾಧಿಕಾರಿಗಳು ಸ್ಥಳದಲ್ಲಿದ್ದರು.

    ಗುರುಗಳ ಮಾತಿನಂತೆ ಮುಂದಿನ ನಡೆ: ಸ್ಥಳದಲ್ಲಿ ಇನ್ನೊಂದು ಅಶ್ವತ್ಥ ಗಿಡ ನೆಡುವ ಕುರಿತು ಕಾಶೀಮಠ ಸಂಸ್ಥಾನದ ಗುರುಗಳ ನಿರ್ದೇಶನದಂತೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ದೇವತಾ ಕಾರ್ಯಗಳಿಗೆ ಸಂಬಂಧಿಸಿ ದೇವಳದಲ್ಲಿ ಇನ್ನೊಂದು ಅಶ್ವತ್ಥ ಮರವಿದ್ದು, 50 ವರ್ಷಗಳ ಹಿಂದೆ ನೆಡಲಾಗಿತ್ತು. ಇದೊಂದು ಧರ್ಮಕ್ಕೆ ಸಂಬಂಧಿಸಿದ ವಿಚಾರವಾಗಿರುವುದರಿಂದ ಗುರುಗಳ ಏನು ಹೇಳುತ್ತಾರೆ ಅನ್ನುವುದು ಮುಖ್ಯವಾಗುತ್ತದೆ ಎಂದು ದೇವಳದ ಟ್ರಸ್ಟಿ ಸಿ.ಎಲ್.ಶೆಣೈ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts