More

    ಕಲ್ಲು ಗಣಿಗಾರಿಕೆ ತಂದಿಟ್ಟ ಸಂಕಷ್ಟ; ಪರಿಸರವಾದಿಗಳ ಆತಂಕ ಸೂಕ್ಷ್ಮವಲಯ ರಕ್ಷಿಸುವಂತೆ ಜಿಲ್ಲಾಧಿಕಾರಿಗೆ ಮನವಿ

    ತುಮಕೂರು: ಜಿಲ್ಲೆಯಲ್ಲಿ ಪ್ರತಿ ದಿನ ಕರಡಿ, ಚಿರತೆಯಂತಹ ವನ್ಯಪ್ರಾಣಿಗಳ ದಾಳಿಗೆ ಮುಖ್ಯ ಕಾರಣ ಅವುಗಳ ಆವಾಸ ಸ್ಥಳಗಳಾದ ಬೆಟ್ಟ-ಗುಡ್ಡಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಅವೈಜ್ಞಾನಿಕ ಕಲ್ಲುಗಣಿಗಾರಿಕೆ ಎಂದು ಪರಿಸರವಾದಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

    ರಾಜ್ಯದಲ್ಲಿಯೇ ಹೆಚ್ಚು ಬೆಟ್ಟ-ಗುಡ್ಡಗಳಿರುವ ತುಮಕೂರು, ಕೊರಟಗೆರೆ, ಮಧುಗಿರಿ, ಪಾವಗಡ, ಕುಣಿಗಲ್ ತಾಲೂಕು ಕಲ್ಲುಗಾರಿಕೆಯಲ್ಲಿ ಆದಾಯ ತರುವ ಕೇಂದ್ರಗಳಾಗಿದ್ದು, ರಾಜಕಾರಣಿಗಳಿಗೆ ಮತ್ತು ಬಲಾಢ್ಯರ ಗಮನ ಸಳೆದಿವೆ.

    ಇಲ್ಲಿನ ಪರಿಸರ, ವನ್ಯಜೀವಿಗಳು, ಜನಸಾಮಾನ್ಯರ ಬದುಕನ್ನು ಒಕ್ಕಲೆಬ್ಬಿಸುವ ಹುನ್ನಾರ ಜಿಲ್ಲೆಯಾದ್ಯಂತ ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಅಧ್ಯಕ್ಷ ಬಿ.ವಿ.ಗುಂಡಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

    ಬೆಟ್ಟ-ಗುಡ್ಡ ಪ್ರದೇಶಗಳು ಚಿರತೆ, ಕರಡಿ, ಕಾಡು ಹಂದಿ, ಕಾಡುಬೆಕ್ಕು, ಕಡವೆ, ಜಿಂಕೆ, ಮೊಲಗಳಿಗೆ ರಕ್ಷಣೆ ಹಾಗೂ ಆವಾಸ ಸ್ಥಳಗಳಾಗಿವೆ. ಇದಲ್ಲದೆ ಬನ್ನೇರುಘಟ್ಟ, ಬಂಡೀಪುರ ಅರಣ್ಯದಿಂದ ವಲಸೆ ಬರುತ್ತಿದ್ದ 16 ಗಂಡಾನೆಗಳು ಈ ಗುಡ್ಡಗಳಲ್ಲಿ ತಂಗುತ್ತಿದ್ದವು. ತುಮಕೂರು ಸುತ್ತಮುತ್ತಲ ಬೆಟ್ಟ-ಗುಡ್ಡಗಳು ಆನೆ ಕಾರಿಡಾರ್‌ಗೆ ತಂಗುದಾಣಗಳಾಗಿದ್ದವು. ಇಲ್ಲಿನ ವನ್ಯಪ್ರಾಣಿಗಳಲ್ಲಿ ಸಾಮರಸ್ಯವಿತ್ತು, ಸಮತೋಲನವಿತ್ತು. 1995ರಲ್ಲಿ ಒಂದೆರಡ್ಡಿದ್ದ ಕ್ವಾರಿಗಳು 2000ದ ಇಸವಿ ವೇಳೆಗೆ ಗರಿಗೆದರಿತು. ಕಾರಣ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು, ಕಂದಾಯ ಇಲಾಖೆ, ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಕಲ್ಲುಗಣಿ ನಡೆಸುವ ಪ್ರದೇಶವನ್ನು ಸ್ಥಳಪರಿವೀಕ್ಷಣೆ ಮಾಡದೆ, ಅಲ್ಲಿನ ನೈಜ ಸ್ಥಿತಿಗಳನ್ನು ತಿಳಿಯದೆ, ಮುಂದೆ ಆಗುವ ಅನಾಹುತಗಳ ವಿವೇಚನೆ ಇಲ್ಲದೆ ಗಣಿಗಾರಿಕೆಗೆ ಪರವಾನಗಿ ನೀಡುತ್ತಿದ್ದಾರೆ ಎಂದು ಅವರು ವಿವರಿಸಿದರು.

    ತಾವಿರುವವರೆಗೆ ಪರವಾನಗಿಗಾಗಿ ಬಂದಿರುವ ಪೈಲ್‌ಗಳನ್ನು ಟೇಬಲ್‌ಗಳ ಮೇಲೆ ಇಟ್ಟುಕೊಂಡು ವರ್ಗಾವಣೆ ಅಥವಾ ನಿವೃತ್ತಿ ಹೊಂದುವಾಗ ನಿರಾಕ್ಷೇಪಣಾ ಕಡತಗಳಿಗೆ ಸಹಿ ಹಾಕಿ ಜಿಲ್ಲಾ ಗಣಿ ಮತ್ತು ಭೂಗರ್ಭ ಇಲಾಖೆಯ ಅಧಿಕಾರಿಗಳ ಅಮೃತ ಹಸ್ತಕ್ಕೆ ವರ್ಗಾಯಿಸಿ ನಿರ್ಗಮಿಸಿದ ತಾಜಾ ಉದಾಹರಣೆ ಎಂದರೆ ತುಮಕೂರು ತಾಲೂಕಿನ ಶೇಟುಪಾಳ್ಯದಲ್ಲಿ ಕಲ್ಲುಗಣಿಗಾರಿಕೆ ಮಾಡಲು ನೀಡಿರುವ ಪರವಾನಗಿ ಎಂದರು.

    ಇಲಾಖೆಗಳಿಂದಲೇ ಮಾನವ-ವನ್ಯಜೀವಿ ಸಂಘರ್ಷ: ತುಮಕೂರು ತಾಲೂಕಿನ ದುರ್ಗದಹಳ್ಳಿ ಸಮೀಪದ ಶೇಟುಪಾಳ್ಯದಲ್ಲಿ ಕಲ್ಲುಗಣಿಗಾರಿಕೆಗೆ ಆಯ್ಕೆ ಮಾಡಿಕೊಂಡಿರುವ ಜಾಗದಲ್ಲಿ ಅಳಲೆ, ಪಚ್ಚಾಲೆ, ಮುತ್ತುಗ, ಆಲ, ಕಕ್ಕೆಮರ, ಮರಹಾಲೆ, ಅಂಕೋಲೆ, ಜಾಲಾರಿ, ಅರಿಶಿಣಬೂರುಗ, ಕಗ್ಗಲಿ, ಕಾಡುದ್ರಾಕ್ಷಿ ಇತ್ಯಾದಿ ನೂರಾರು ವರ್ಷಗಳ ಹಳೆಯ ಗಿಡಮರಗಳಿವೆ.

    ದೇವರಾಯನದುರ್ಗ ಸಂರಕ್ಷಿತ ಅರಣ್ಯದ ಬರ್ ವಲಯದಲ್ಲಿದ್ದು, ಸುತ್ತಲೂ ಒಲತಿಕಲ್ಲುಬೆಟ್ಟ, ಯೋಗನರಸಿಂಹಸ್ವಾಮಿ ಬೆಟ್ಟ, ಚಿನಗಬೆಟ್ಟ, ಕದುರಪ್ಪನಬೆಟ್ಟ, ವಡ್ಡರಹಳ್ಳಿಬೆಟ್ಟ, ಸತ್ತಿಕಲ್ಲು ಬೆಟ್ಟಗಳಿವೆ. ಈ ಬೆಟ್ಟಗಳು ನವಿಲು, ಮುಳ್ಳುಹಂದಿ, ಚಿಪ್ಪುಹಂದಿ, ಕಾಡುಹಂದಿ, ಚಿರತೆ, ಕರಡಿ, ಕಾಡುಬೆಕ್ಕು ಇಂತಹ ಪ್ರಾಣಿಗಳು ಓಡಾಡುವ ಮೊಗಶಾಲೆ (ಕಾರಿಡಾರ್) ಎನಿಸಿದೆ. ಜೀವವೈವಿಧ್ಯ ಸಮೃದ್ಧವಾಗಿರುವ ಈ ಪ್ರದೇಶದಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆಯವರು ಗಣಿಗಾರಿಕೆ ಮಾಡಲು ನಿರಪೇಕ್ಷಣಾ ಪತ್ರಗಳನ್ನು ನೀಡಿ ಈ ಪ್ರದೇಶದಲ್ಲಿ ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಾರಣರಾಗಿದ್ದಾರೆ ಎಂಬ ದೂರಿದೆ.

    ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಮಾನವ, ಕಾಡುಪ್ರಾಣಿಗಳ ಸಂಘರ್ಷಕ್ಕೆ ಕಾರಣವಾಗಿರುವ ಕಲ್ಲುಗಣಿಗಾರಿಕೆಗಳು.

    ಮುಂದಿದೆ ದೊಡ್ಡ ಅಪಾಯ: ಶೇಟುಪಾಳ್ಯದಲ್ಲಿ ಬಗರ್‌ಹುಕುಂ ಅಡಿ ನೀಡಿದ ಸರ್ಕಾರಿ ಖರಾಬು ಜಾಗದಲ್ಲಿ ಮನೆಗಳನ್ನು ಕಟ್ಟಿಕೊಂಡು, ತಮಗೆ ಸಿಕ್ಕಿರುವ ಸರ್ಕಾರಿ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. ಇಂತಹ ಪ್ರದೇಶದಲ್ಲಿ ಸರ್ವೇ ನಂಬರ್-4 (ಹೊಸದಾಗಿ ಸರ್ವೇ ನಂ-132)ರಲ್ಲಿ 3.32 ಎಕರೆ ಭಾಗದಲ್ಲಿ ಕಲ್ಲುಗಣಿಗಾರಿಕೆ ಮಾಡಲು ಅನುಮತಿ ನೀಡಿರುವುದರಿಂದ 100ಮೀ ಹತ್ತಿರುವ ಈ ಹಳ್ಳಿಯ ಜನಜೀವನದ ಮೇಲೆ ಗಂಭೀರ ಪರಿಣಾಮವಾಗಲಿದೆ.

    ದುರ್ಗದಹಳ್ಳಿ, ಅನುಪನಹಳ್ಳಿ, ತಿಮ್ಮನಾಯಕನಹಳ್ಳಿ, ಶೆಟ್ಟರಪಾಳ್ಯದಲ್ಲಿ ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗುತ್ತದೆ. ಅರಣ್ಯ ಪ್ರದೇಶದ ಬರ್ ವಲಯದಲ್ಲಿ ಮಾನವ ಚಟುವಟಿಕೆ ಹೆಚ್ಚಾದರೆ ವನ್ಯಪ್ರಾಣಿಗಳ ಸ್ವಚ್ಛಂದ ಬದುಕಿಗೆ ಅಡಚಣೆಯಾಗುತ್ತದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಈ ಪ್ರದೇಶದಲ್ಲಿ ಗಣಿಗಾರಿಕೆಗೆ ಕೊಟ್ಟಿರುವ ಅನುಮತಿ ರದ್ದುಗೊಳಿಸಿ ಈ ಸೂಕ್ಷ್ಮ ಪ್ರದೇಶವನ್ನು ಸಂರಕ್ಷಿಸಬೇಕು.
    | ಬಿ.ವಿ.ಗುಂಡಪ್ಪ, ಅಧ್ಯಕ್ಷ, ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts