More

    ವರುಣಾಕ್ರೋಶಕ್ಕೆ ಬೆಳೆಗಾರ ತತ್ತರ

    ಮುಂಡರಗಿ: ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಶುಕ್ರವಾರ ರಾತ್ರಿ ಸುರಿದ ಅಕಾಲಿಕ ಮಳೆಯಿಂದ ಕಡಲೆ, ಜೋಳ, ಗೋಧಿ ಮೊದಲಾದ ಬೆಳೆಗಳು ಹಾನಿಗೀಡಾಗಿವೆ. ಇದರಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ.

    ತಾಲೂಕಿನಲ್ಲಿ 15,058 ಹೆಕ್ಟೇರ್ ಜೋಳ, 2538 ಹೆಕ್ಟೇರ್ ಗೋವಿನಜೋಳ, 1536 ಹೆಕ್ಟೇರ್ ಗೋಧಿ, 15,763 ಹೆಕ್ಟೇರ್ ಕಡಲೆ, 1952 ಹೆಕ್ಟೇರ್ ಸೂರ್ಯಕಾಂತಿ, 495 ಹೆಕ್ಟೇರ್ ಕುಸುಬೆ, 50 ಹೆಕ್ಟೇರ್ ಹತ್ತಿ ಬಿತ್ತನೆಯಾಗಿದೆ. ಡಂಬಳ, ಡೋಣಿ, ವೆಂಕಟಾಪುರ, ಹಳ್ಳಿಗುಡಿ, ಶಿಂಗಟಾಲೂರ, ಹಮ್ಮಿಗಿ, ಬಿದರಳ್ಳಿ, ಮುರುಡಿ, ಬಾಗೇವಾಡಿ, ಹೈತಾಪುರ, ಯಕ್ಲಾಸಪುರ ಮೊದಲಾದ ಗ್ರಾಮಗಳಲ್ಲಿ ಹೆಚ್ಚು ಮಳೆ ಸುರಿದ ಪರಿಣಾಮ ಬೆಳೆಗಳಲ್ಲಿ ನೀರು ನಿಂತಿದೆ.

    ಗಾಳಿ-ಮಳೆಯಿಂದ ಜೋಳದ ಬೆಳೆ ನೆಲಕಚ್ಚಿದೆ. ಕಡಲೆ ಬೆಳೆ ಹುಳಿ ಬಿಟ್ಟು ಕಾಯಿ ಹಿಡಿಯುವುದಿಲ್ಲ. ಈಗಾಗಲೇ ಬಿಟ್ಟಿರುವ ಕಾಯಿ ಸಹ ಗಟ್ಟಿಗೊಳ್ಳುವುದಿಲ್ಲ. ಜೋಳದ ತೆನೆಯಲ್ಲಿ ಸುಂಕ ಹಸಿಯಾಗಿ ಕಾಳು ಕಪ್ಪು ಮತ್ತು ಕೆಂಪು ಬಣ್ಣಕ್ಕೆ ತಿರುಗುತ್ತವೆ. ಇದರಿಂದ ರೈತರು ಚಿಂತಿತರಾಗಿದ್ದಾರೆ. ಬಿದರಳ್ಳಿ ಗ್ರಾಮದಲ್ಲಿ ಗೋವಿನಜೋಳ ರಾಶಿ ಮಾಡುವುದಕ್ಕೆ ಹಾಕಲಾಗಿದ್ದ ತೆನೆಗಳು ಮಳೆಗೆ ತೇಲಿಹೋಗಿವೆ. ಮುರುಡಿ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದೆ.

    ಬೆಳೆಗಳೆಲ್ಲ ಜಲಾವೃತ: ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ಡಂಬಳ ವ್ಯಾಪ್ತಿಯ ಜೋಳ, ಕಡಲೆ, ಗೋಧಿ ಬೆಳೆಗಳು ಜಲಾವೃತಗೊಂಡಿವೆ. ಡೋಣಿ, ಹಿರೇವಡ್ಡಟ್ಟಿ, ಜಂತ್ಲಿ-ಶಿರೂರ, ಪೇಠಾಲೂರು, ಹಳ್ಳಿಕೇರಿ, ಹಳ್ಳಿಗುಡಿ, ವೆಂಕಟಾಪುರ, ಮೇವುಂಡಿ, ಹೈತಾಪುರ, ಯಕ್ಲಾಸಪುರ ಗ್ರಾಮ ಸೇರಿ 14 ಸಾವಿರ ಹೆಕ್ಟೇರ್​ನಲ್ಲಿ ಜೋಳ, 14200 ಹೆಕ್ಟೇರ್​ನಲ್ಲಿ ಕಡಲೆ, 1200 ಹೆಕ್ಟೇರ್ ಗೋಧಿ ಸೇರಿ 29400 ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರು ಹಂಗಾಮಿನ ಬೆಳೆಗಳ ಬಿತ್ತನೆಯಾಗಿದೆ. ಬೆಳೆ ಕಟಾವು ಮಾಡಬೇಕೆನ್ನುವಷ್ಟರಲ್ಲಿ ಅಕಾಲಿಕ ಮಳೆ ಎಲ್ಲ ಹಾಳುಗೆಡವಿದೆ. ಗಾಳಿ-ಮಳೆಗೆ ಜೋಳ ಬೆಳೆಯೆಲ್ಲ ನಾಶವಾಗಿದೆ. ದನಕರುಗಳಿಗೆ ಮೇವಿನ ಅಭಾವ ಕಾಡಲಿದೆ ಎಂದು ರೈತರು ಅಳಲು ತೋಡಿಕೊಂಡರು.

    ಅಕಾಲಿಕ ಮಳೆಯಿಂದ ಹಾನಿಗೀಡಾದ ಕಡಲೆ, ಜೋಳ ಮೊದಲಾದ ಬೆಳೆಗಳನ್ನು ಪರಿಶೀಲಿಸಲಾಗುತ್ತದೆ. ಬೆಳೆ ಹಾನಿ ವರದಿ ತಯಾರಿಸಿ ಮೇಲಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು.

    | ಪ್ರಮೋದ ತುಂಬಳ, ಮುಂಡರಗಿ ಕೃಷಿ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts