More

    ವನ್ಯಜೀವಿ ಅಂಗಾಂಗ ವಾಪಸ್‌ಗೆ ಅವಕಾಶ; ಜ.16 ರಿಂದ 3 ತಿಂಗಳು ಗಡುವು ನೀಡಿದ ಸರ್ಕಾರ

    ಬೆಂಗಳೂರು: ಹುಲಿ, ಚಿರತೆ ಉಗುರು, ಜಿಂಕೆ ಕೊಂಬು, ಆನೆ ದಂತ, ಕೂದಲು ಇತ್ಯಾದಿ ವನ್ಯಜೀವಿ ಅಂಗಾಂಗಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿರುವವರು ಸರ್ಕಾರಕ್ಕೆ ವಾಪಸ್ ನೀಡಲು ಸರ್ಕಾರ ಅವಕಾಶ ಗಡುವು ನೀಡಿದೆ.

    ಅಘೋಷಿತ ವನ್ಯಜೀವಿ ಅಂಗಾಂಗ ಮರಳಿಸಲು ಜ.16ರಿಂದ 3 ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಹುಲಿ, ಚಿರತೆ ಉಗುರು, ಜಿಂಕೆ ಕೊಂಬು, ಆನೆ ದಂತ, ಕೂದಲು ಇತ್ಯಾದಿ ವನ್ಯಜೀವಿ ಅಂಗಾಂಗಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಳ್ಳುವುದು, ವನ್ಯಜೀವಿ ಮಾಂಸ ಭಕ್ಷಣೆ ಅಪರಾಧವಾಗಿದ್ದು, 1978ರಲ್ಲಿ ಮತ್ತು 2003ರಲ್ಲಿ ಈ ವಸ್ತುಗಳಿದ್ದರೆ ಘೋಷಣೆ ಮಾಡಿ ಹಕ್ಕು ಪ್ರಮಾಣ ಪತ್ರ ಪಡೆಯಲು ಅವಕಾಶ ನೀಡಲಾಗಿತ್ತು. ಆಗ ಘೋಷಣೆ ಮಾಡಿಕೊಳ್ಳದೆ ಕೆಲವರು ವಿವಿಧ ವನ್ಯಜೀವಿ ಅಂಗಾಂಗದ ಟ್ರೋಫಿ, ಕೊಂಬು ಇತ್ಯಾದಿ ಹೊಂದಿದ್ದು, ಇದು ಶಿಕ್ಷಾರ್ಹ ಅಪರಾಧವಾಗಿರುತ್ತದೆ.

    ಕಾಯಿದೆಯ ಅರಿವಿಲ್ಲದೆ ಮುಗ್ಧ ಜನರು ಸಂಕಷ್ಟಕ್ಕೆ ಸಿಲುಕಬಾರದು ಎಂದು ಈಗ ಒಂದು ಬಾರಿಯ ಅವಕಾಶ ನೀಡಲು ತೀರ್ಮಾನಿಸಲಾಗಿದ್ದು, ಇವುಗಳನ್ನು ಸರ್ಕಾರಕ್ಕೆ ಮರಳಿಸಲು ಅವಕಾಶ ಕಲ್ಪಿಸಲಾಗಿದೆ. ಜ.16ರಿಂದ 3 ತಿಂಗಳುಗಳ ಕಾಲ ಈ ವಸ್ತುಗಳನ್ನು ಹತ್ತಿರದ ಅರಣ್ಯ ಇಲಾಖೆಯ ಕಚೇರಿಗೆ ಮರಳಿಸಬಹುದು ಮತ್ತು ಮರಳಿಸಿದಾಗ ಅವರಿಗೆ ಸ್ವೀಕೃತಿ ನೀಡಲಾಗುವುದು ಎಂದು ಹೇಳಿದರು.

    ಸರ್ಕಾರ ನೀಡಿರುವ ಗಡುವಿನ ನಂತರ ಯಾರೇ ಇಂತಹ ವನ್ಯಜೀವಿ ಅಂಗಾಂಗದ ಆಭರಣ ಧರಿಸಿದರೆ, ಮನೆಗಳಲ್ಲಿ ಅಘೋಷಿತ ಟ್ರೋಫಿ, ಇತ್ಯಾದಿ ಹೊಂದಿದ್ದರೆ ದೂರು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು. ಹೀಗಾಗಿ ಎಲ್ಲರೂ ಒಂದು ಬಾರಿಯ ಅವಕಾಶ ಬಳಸಿಕೊಳ್ಳುವಂತೆ ಈಶ್ವರ ಖಂಡ್ರೆ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts