More

    ಪಾಲಿಕೆ ಬಜೆಟ್ ಹಿಗ್ಗಿಸಿ ಒಪ್ಪಿಗೆ ನೀಡಿದ ಸರ್ಕಾರ

    ಬೆಂಗಳೂರು: ಇತ್ತೀಚಿಗೆ ಬಿಬಿಎಂಪಿ ಮಂಡಿಸಿದ್ದ 2024-25ನೇ ಸಾಲಿನ ಬಜೆಟ್ ಮೊತ್ತಕ್ಕೆ ಹೆಚ್ಚುವರಿಯಾಗಿ 745 ಕೋಟಿ ರೂ. ಸೇರಿಸಿ ಒಟ್ಟಾರೆ 13,114 ಕೋಟಿ ರೂ. ಆಯವ್ಯಯಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
    ಕಳೆದ ಫೆ.29ರಂದು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತರು 12,371.63 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದರು. ಇದಾಗಿ ವಾರದಲ್ಲೇ ಪಾಲಿಕೆಯಿಂದ ಸರ್ಕಾರಕ್ಕೆ ಒಪ್ಪಿಗೆ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದನ್ನು ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಬೆಂಗಳೂರು ನಗರ ಅಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಪರಸ್ಪರ ಚರ್ಚಿಸಿದ್ದರು. ಬಜೆಟ್‌ನಲ್ಲಿ ಸರ್ಕಾರದ ಅನುದಾನ ಕಡಿಮೆ ಇದ್ದ ಕಾರಣ ಅನುಮೋದನೆ ನೀಡುವ ವೇಳೆ ಕೆಲವೊಂದು ಕಾರ್ಯಕ್ರಮಗಳಿಗೆ ಹೆಚ್ಚಿನ ಮೊತ್ತ ನಿಗದಿಗೊಳಿಸಿ ಅನುಮೋದನೆ ನೀಡಲಾಗಿದೆ.

    ಹೆಚ್ಚುವರಿಯಾಗಿ ದೊರೆತಿರುವ 745 ಕೋಟಿ ರೂ. ಮೊತ್ತದಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮದ ಕಾರ್ಯಕ್ಕೆ 200 ಕೋಟಿ ರೂ., ಮಂಜೂರಾತಿ ನೀಡಲಾಗಿದೆ. ಜತೆಗೆ ಸರ್ಕಾರದ ಪಾಲು ನೀಡುವ ಯೋಜನೆಗಳಿಗೆ 100 ಕೋಟಿ ರೂ., ಡಿಸಿಎಂ ವಿವೇಚನಾ ನಿಧಿಗೆ 100 ಕೋಟಿ ರೂ., ಆಸ್ಪತ್ರೆಗಳ ಮೂಲಸೌಕರ್ಯ ಮೇಲ್ದರ್ಜೆಗೆ 150 ಕೋಟಿ ರೂ., ಶಿವಾಜಿನಗರ ರಸೆಲ್ ಮಾರುಕಟ್ಟೆ ಅಭಿವೃದ್ಧಿಗೆ 40 ಕೋಟಿ ರೂ. ಸೇರಿ ಇನ್ನೂ 4 ಬಾಬ್ತುಗಳಿಗೆ ಅನುದಾನ ಒದಗಿಸಲಾಗಿದೆ.

    ತಕ್ಷಣವೇ ಜಾರಿಗೆ ಸಂಹಿತೆ ಅಡ್ಡಿ:

    ಬಿಬಿಎಂಪಿ ಬಜೆಟ್‌ಗೆ ಸರ್ಕಾರ ಅನುಮೋದನೆ ನೀಡಿದ್ದರೂ, ಅದನ್ನು ಜಾರಿಗೊಳಿಸಲು ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಅಡ್ಡಿಯಾಗಿದೆ. ಸರ್ಕಾರದ ಒಪ್ಪಿಗೆ ಪಡೆದ ಬಳಿಕ ವಿವಿಧ ಕಾರ್ಯಕ್ರಮಗಳ ಜಾರಿಗೆ ಟೆಂಡರ್ ಆಹ್ವಾನಿಸಬೇಕಾಗುತ್ತದೆ. ಆದರೆ, ಸಂಹಿತ ಕಾರಣದಿಂದ ಟೆಂಡರ್ ಪ್ರಕ್ರಿಯೆಯನ್ನು ಈ ಹಂತದಲ್ಲಿ ನಡೆಸಲು ಅವಕಾಶ ಇಲ್ಲ. ಹಾಗಾಗಿ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕವಷ್ಟೇ (ಜೂ.5) ಪಾಲಿಕೆ ಈ ಹಣವನ್ನು ವಿವಿಧ ಯೋಜನೆಗಳಿಗೆ ಬಳಸಿಕೊಳ್ಳಲು ಅವಕಾಶವಿದೆ.

    ಇದರ ಹೊರತಾಗಿಯೂ ಪಾಲಿಕೆ ಮಂಡಿಸಿರುವ ಬಜೆಟ್ ಘೋಷಿತ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಹರಸಾಹಸ ಪಡಬೇಕಿದೆ. ಬಿಬಿಎಂಪಿಗೆ ಆಸ್ತಿತೆರಿಗೆ ಮೂಲಕ ಸಂಗ್ರಹವಾಗುವ ಆದಾಯ ಪ್ರಮುಖ ಆರ್ಥಿಕ ಸಂಪನ್ಮೂಲವಾಗಿದೆ. 2024-25ನೇ ಸಾಲಿನಲ್ಲಿ 4-5 ಸಾವಿರ ಕೋಟಿ ರೂ. ಆಸ್ತಿತೆರಿಗೆ ವಸೂಲು ಮಾಡುವ ಗುರಿ ಹೊಂದಿದ್ದರೂ, ಅಷ್ಟೂ ಹಣ ಸಿಗುವ ಖಾತರಿ ಇಲ್ಲ. ಜತೆಗೆ ಜಾಹೀರಾತು ನೀತಿ ಹಾಗೂ ಇತರ ಬಾಬ್ತಿನಿಂದ ಆದಾಯ ಸಿಗುವುದೆಂದು ಪಾಲಿಕೆ ಮುಖ್ಯ ಆಯುಕ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ಆರ್ಥಿಕ ವರ್ಷಾಂತ್ಯದಲ್ಲಿಯಷ್ಟೇ ಪಾಲಿಕೆ ಹೊಂದಿರುವ ಗುರಿ ತಲುಪಿದೆಯೇ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts