More

    ಹುಣಸಮ್ಮದೇವಿ ಮಹಿಮೆ ಅಪಾರ

    ಸಾಲಿಗ್ರಾಮ: ತಾಲೂಕಿನ ಮಿರ್ಲೆ ಗ್ರಾಮದಲ್ಲಿರುವ ಪ್ರಸಿದ್ಧ ಶ್ರೀ ಹುಣಸಮ್ಮ ಶಕ್ತಿ ದೇವತೆಗೆ 800 ವರ್ಷಗಳ ಇತಿಹಾಸವಿದ್ದು, ಭಕ್ತರ ಕೋರಿಕೆಗಳನ್ನು ಈಡೇರಿಸುವ ಮೂಲಕ ಶಕ್ತಿ ಸ್ವರೂಪಿಣಿಯಾಗಿ ನೆಲೆಸಿದ್ದಾಳೆ.

    ಈ ದೇವಾಲಯಕ್ಕೆ ಮೈಸೂರು ಜಿಲ್ಲೆ ಸೇರಿದಂತೆ ಕೊಡಗು, ಕೇರಳ ಸೇರಿದಂತೆ ಹೊರದೇಶದಿಂದಲೂ ಭಕ್ತರು ಬರುತ್ತಾರೆ. ಬೇಡಿದ ವರವನ್ನು ಈಡೇರಿಸುವ ಮೂಲಕ ಮನೆ ಮಾತಾಗಿದ್ದಾಳೆ. ಮಕ್ಕಳಿಲ್ಲದವರಿಗೆ ಮಕ್ಕಳ ಭಾಗ್ಯ, ಅನಾರೋಗ್ಯದಿಂದ ಬಳಲುತಿರುವವರಿಗೆ ತಾಯಿಯ ಆಶೀರ್ವಾದ ರಾಮಬಾಣದಂತೆ ಕೆಲಸ ಮಾಡುತ್ತದೆ. ಇನ್ನು ಉದ್ಯೋಗ, ವ್ಯಾಪಾರ-ವಹಿವಾಟು, ಉದ್ಯಮಿ ಮತ್ತು ರಾಜಕಾರಣಿಗಳಿಗೆ ದೇವಿ ಒಳಿದರೆ ರಾಜವೈಭೋಗ ದೊರೆಯಲಿದೆ ಎಂಬ ನಂಬಿಕೆ ಇಂದಿಗೂ ಭಕ್ತರಲ್ಲಿ ದಟ್ಟವಾಗಿ ಉಳಿದಿದೆ.

    ದೇವಾಲಯದ ಹಿನ್ನೆಲೆ: ಮಿರ್ಲೆ ಗ್ರಾಮವನ್ನು ಕಾಯಲು ನಾನು ಕೊಡಗಿನಿಂದ ಆಗಮಿಸಲಿದ್ದು, ಗ್ರಾಮದ ಹೆಬ್ಬಾಗಿಲಿನಲ್ಲಿರುವ ಹುಣಸೆ ಮರದಲ್ಲಿ ನೆಲೆಸುತ್ತೇನೆ. ನನ್ನಗೊಂದು ಗುಡಿ ಕಟ್ಟಿಸು ಎಂದು ಪಾಳೇಗಾರ ಮಾಚನಾಯಕ ಅವರ ಕನಸಿನಲ್ಲಿ ದೇವತೆ ತಿಳಿಸುತ್ತಾಳೆ. ದೇವಿಯ ಆಜ್ಞೆಯನ್ನು ಪರಿಪಾಲನೆ ಮಾಡುವ ಸಲುವಾಗಿ ಪಾಳೇಗಾರ ಮಾಚನಾಯಕ ಮಾಚನಾಯಕನ ಕೆರೆ ಮತ್ತು ದೇವಸ್ಥಾನ ನಿರ್ಮಾಣವಾಗುತ್ತದೆ.

    ದಿನ ಕಳೆದಂತೆ ಪಾಳೇಗಾರ ಮಾಚನಾಯಕ ಈ ವ್ಯಾಪ್ತಿಯಲ್ಲಿ ಸೈನ್ಯ ಕಟ್ಟಿಕೊಂಡು ಯುದ್ಧಕ್ಕೆ ಹೋಗುವ ಸಂದರ್ಭದಲ್ಲಿ ತಾಯಿಯ ಆಶೀರ್ವಾದ ಪಡೆದು ಹೋಗುತ್ತಿದ್ದ ಎನ್ನಲಾಗಿದೆ. ಮಾಚನಾಯಕನಿಗೆ ಹುಣಸಮ್ಮ ದೇವಿ ಶ್ರೀರಕ್ಷೆಯಾಗಿದ್ದಳು ಎಂಬುದು ಈಗ ಇತಿಹಾಸ. ಹಾಗಾಗಿ ನಂಬಿದವರನ್ನು ಕೈಬಿಡದೆ ಕಾಪಾಡುವ ಆದಿಶಕ್ತಿ ಹುಣಸಮ್ಮ ತಾಯಿಯನ್ನು ಈವರೆಗೆ ಜನರು ಕೈಬಿಡದೆ ಪೂಜಿಸುತ್ತಿದ್ದಾರೆ. ಅಂತೆಯೇ ಮಿರ್ಲೆ ಮತ್ತು ಸುತ್ತಮುತ್ತಲಿನ 9 ಗ್ರಾಮಗಳನ್ನು ಕಾಪಾಡುವ ಮೂಲಕ ದೇವಿ ಪವಾಡ ಮಾತೆ ಎಂದೆನಿಸಿಕೊಂಡಿದ್ದಾಳೆ.

    ಮಿರ್ಲೆ ಸುತ್ತಮುತ್ತ ಅರಣ್ಯ ಪ್ರದೇಶವಿದ್ದು, ಗ್ರಾಮದ ಹೆಬ್ಬಾಗಿಲಿನಲ್ಲಿ ಒಂದು ಹುಣಸೆ ಮರವಿತ್ತು. ಆ ಮರದ ಕೆಳಗೆ ತಾಯಿ ನೆಲೆಸಿದ್ದಳು ಎನ್ನಲಾಗಿದೆ. ಚೋಳರು ಈ ಮಾರ್ಗವಾಗಿ ಹೋಗುವ ಸಂದರ್ಭದಲ್ಲಿ ಒಂದು ರಾತ್ರಿ ಮರದ ಕೆಳಗೆ ತಂಗುತ್ತಾರೆ. ಅವರ ಸೈನ್ಯದಲ್ಲಿ ಒಬ್ಬ ಮಧ್ಯ ರಾತ್ರಿ ಎದ್ದು ಹುಣಸೆಮರದ ಬೊಡ್ಡೆಯ ಹತ್ತಿರ ಹೋಗುತ್ತಾನೆ. ಆಗ ಅಲ್ಲಿದ್ದ ದೇವಿಯ ಒಡವೆಗಳು ಈತನ ಕಣ್ಣಿಗೆ ಬೀಳುತ್ತದೆ. ತಕ್ಷಣ ಎಲ್ಲವನ್ನೂ ದೋಚಿಕೊಂಡು ಹೋಗುತ್ತಾನೆ. ಮಾರನೇ ದಿನ ಇಡೀ ಸೈನ್ಯಕ್ಕೆ ವಾಂತಿ-ಭೇದಿಯಾಗಿ ಕುಗ್ಗಿ ಹೋಗುತ್ತದೆ. ಆ ಬಳಿಕ ಕೇರಳದಿಂದ ಋಷಿಮುನಿಗಳನ್ನು ಕರೆಸಿ ವಿಶೇಷ ಪೂಜೆ ಮಾಡಿಸಿದ ಬಳಿಕ ಒಡವೆ ಕದ್ದಿದ್ದವನು ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾನೆ. ಮರು ಕ್ಷಣವೇ ಸೈನ್ಯಕ್ಕೆ ಮತ್ತೆ ಶಕ್ತಿ ಬರುತ್ತದೆ. ದಿನ ಕಳದಂತೆ ಹುಣಸೆಮರದಲ್ಲಿ ನೆಲೆಸಿರುವ ದೇವಿಯನ್ನು ಹುಣಸಮ್ಮ ದೇವಿ ಎಂದು ಕರೆಯಲಾಗುತ್ತದೆ.

    ಶಿವರಾತ್ರಿ ಹಬ್ಬ ಮುಗಿದ 15 ದಿನಕ್ಕೆ ಹುಣಸಮ್ಮ ಜಾತ್ರಾ ಮಹೋತ್ಸವ ನಡೆಯುವುದು ವಾಡಿಕೆ. ವಾಡಿಕೆಯಂತೆ ಜಾತ್ರೆ ಅಂದಿನಿಂದಲೂ ನಡೆಯುತ್ತಿದೆ. ವಿಶೇಷ ಎಂದರೆ ಕರೊನಾ ಸಂದರ್ಭದಲ್ಲಿ ರಾಜ್ಯಾದ್ಯಂತ ಧಾರ್ಮಿಕ ಕಾರ್ಯಗಳಿಗೆ ಸರ್ಕಾರ ನಿಚೇಧ ಹೇರಿದ್ದ ಸಂದರ್ಭದಲ್ಲೂ ಮಿರ್ಲೆಯಲ್ಲಿ ದೇವಿಯ ಉತ್ಸವ ಮತ್ತು ಜಾತ್ರೆ ನಡೆಯಿತು. ಸುಮಾರು 800 ವರ್ಷಗಳಿಂದಲೂ ಜಾತ್ರೆ ತಪ್ಪದೆ ನಡೆಯುತ್ತಿದ್ದು, ನಾನಾ ಕಾರಣಗಳಿಗಾಗಿ ನಿಲ್ಲುವುದಾದರೆ ಗ್ರಾಮಕ್ಕೆ ದೊಡ್ಡ ಗಂಡಾಂತರ ಕಾದಿದೆ ಎಂಬ ಕಾರಣಕ್ಕಾಗಿ ಜಾತ್ರೆ ನಡೆಯಿತು.

    ಹೆಣ್ಣು ಮಕ್ಕಳಿಗೆ ಶ್ರೀರಕ್ಷೆ: ಹುಣಸಮ್ಮ ದೇವಿಯ ರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಹೊರ ದೇಶಗಳಲ್ಲಿ ನೆಲೆಸಿರುವ ಮಿರ್ಲೆ, ಮಾಳನಾಳಕನಹಳ್ಳಿ, ಶ್ಯಾಬಾಳುನಾಟನಹಳ್ಳಿ, ಬೀಚನಹಳ್ಳಿಕೊಪ್ಪಲು, ಹನುಮನಹಳ್ಳಿ, ಹಳೆಮಿರ್ಲೇ, ಕೋಡಿಯಾಲ, ನರಚನಹಳ್ಳಿ ಗ್ರಾಮದ ಭಕ್ತರು ಮತ್ತು ಹೆಣ್ಣು ಮಕ್ಕಳು ಜಾತ್ರೆಯಲ್ಲಿ ತಪ್ಪದೆ ಭಾಗವಹಿಸುತ್ತಾರೆ. ಈ ಸಂದರ್ಭ ಭಕ್ತರು ತಂಬಿಟ್ಟಿನ ದೀಪ ಹಚ್ಚಿ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.

    ಉಯ್ಯಲೆಯಲ್ಲಿ ಆಟ: ಜಾತ್ರಾ ಮಹೋತ್ಸವ ಮುಗಿದ ನಂತರ ರಾತ್ರಿ ವೇಳೆ ದೇವಾಲಯ ಬಳಿ ಯಾರೂ ಹೋಗುವುದಿಲ್ಲ. ದೇವಾಲಯ ಮುಂಭಾಗದಲ್ಲಿರುವ ಉಯ್ಯಲೆ ಮೇಲೆ ಹುಣಸಮ್ಮ ತಾಯಿ ದೇವರು ಆಟವಾಡುತ್ತಾಳೆ ಎಂಬ ನಂಬಿಕೆ ಭಕ್ತರದ್ದು. ಹಾಗಾಗಿ ಅತ್ತ ಯಾರೂ ಸುಳಿಯುವುದಿಲ್ಲ. ಒಂದು ವೇಳೆ ಅಲ್ಲಿಗೆ ಹೋದರೆ ಕೇಡು ಉಂಟಾಗುತ್ತದೆ ಎಂಬ ನಂಬಿಕೆ ಜನರದ್ದು.

    ಮಾ.22ಮತ್ತು 23 ರಂದು ಮಿರ್ಲೆ ಗ್ರಾಮದಲ್ಲಿ ಹುಣಸಮ್ಮ ಜಾತ್ರಾ ಮಹೋತ್ಸವ ನಡೆಯಲಿದ್ದು, ಇದಕ್ಕಾಗಿ ಸಿದ್ಧತೆ ನಡೆಯುತ್ತಿದೆ. 22ರಂದು ಸಂಜೆ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮ ನಡೆದರೆ, 23ರಂದು ಜಾತ್ರಾ ಮಹೋತ್ಸವ ನಡೆಯಲಿದೆ. ಹಾಗಾಗಿ ಭಕ್ತರು ಆಗಮಿಸಿ ಜಾತ್ರೆಯನ್ನು ಯಶಸ್ವಿಗೊಳಿಸಬೇಕು.
    ಲೋಕೇಶ್ ಧರ್ಮದರ್ಶಿ, ಹುಣಸಮ್ಮದೇವಿ ದೇವಸ್ಥಾನ

    ಸಾವಿರಾರು ವರ್ಷಗಳ ಹಿಂದೆಯೇ ಆದಿಶಕ್ತಿ ಹುಣಸಮ್ಮದೇವಿ ಇಲ್ಲಿ ನೆಲೆಯಾಗಿದ್ದು, ಪಾಳೆಗಾರ ಮಂಚನಾಯಕ ಅವರ ಆಳ್ವಿಕೆಯಲ್ಲಿ ದೇವಿಯ ಅನುಗ್ರಹ ಪಡೆದು ರಾಜ ದೇವಸ್ಥಾನ ನಿರ್ಮಾಣ ಮಾಡುತ್ತಾನೆ. ದೇವಿಯ ಪವಾಡಗಳು ಹೇಳತಿರದು. ಭಕ್ತಿಯಿಂದ ದೇವಿಯನ್ನು ಆರಾಧಿಸಿದರೆ ಫಲ ಖಂಡಿತ ಸಿಗಲಿದೆ.
    ಜಿ.ಮಂಜುನಾಥ್ ಮಿರ್ಲೆ ನಿವಾಸಿ

    ಮಿರ್ಲೇ, ಹಳೇ ಮಿರ್ಲೇ, ನಾಟನಹಳ್ಳಿ, ಶ್ಯಾಬಾಳು, ನರಚನಹಳ್ಳಿ ಗ್ರಾಮಗಳಿಂದ ಸಿಡಿ ಬರಲಿದೆ. ಅಂತೆಯೇ ಕೋಡಿಯಾಲ, ಬೀಚನಹಳ್ಳಿ, ಬೀಚನಹಳ್ಳಿಕೊಪ್ಪಲು, ಮಾಳನಾಯಕನಹಳ್ಳಿ, ಮಾಳನಾಯಕನಹಳ್ಳಿಕೊಪ್ಪಲು, ಹನುಮನಹಳ್ಳಿಯಿಂದ ರಥಗಳು ಆಗಮಿಸಿ ಹುಣಸಮ್ಮ ದೇವಸ್ಥಾನದ ಮುಂದೆ ಒಟ್ಟಿಗೆ ಸೇರಲಿದ್ದು, ನಂತರ ತೇರನ್ನು ಎಳೆಯಲಾಗುತ್ತದೆ. 50 ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸುತ್ತಾರೆ.
    ಶೋಭಾ ಕೋಟೆಗೌಡ ಮಾಜಿ ಅಧ್ಯಕ್ಷೆ, ತಾಲೂಕು ಪಂಚಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts