More

    ಗಾಜಿನಮನೆ ಕಾಮಗಾರಿ ನಿಧಾನ, ಶೆಟ್ಟರ್ ಅಸಮಾಧಾನ

    ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಅನುದಾನದಲ್ಲಿ ನಗರದ ಇಂದಿರಾ ಗಾಜಿನಮನೆ ಉದ್ಯಾನ ನವೀಕರಣ ಕಾಮಗಾರಿ ನಿಧಾನಗತಿಯಲ್ಲಿ ಸಾಗಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು.

    ಶನಿವಾರ ಸಂಜೆ ಇಂದಿರಾ ಗಾಜಿನಮನೆ ಉದ್ಯಾನಕ್ಕೆ ಭೇಟಿ ನೀಡಿದ ಅವರು ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು. 2020ರ ಡಿಸೆಂಬರ್​ನಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಕರೊನಾದಿಂದ 6 ತಿಂಗಳು ವಿಳಂಬವಾಗಿಯೆಂದು ಭಾವಿಸಿದರೂ ಇಲ್ಲಿ ನೋಡಿದರೆ 2021ರ ಜೂನ್​ನಲ್ಲಿ ಕಾಮಗಾರಿ ಮುಗಿಯುತ್ತದೆಯೆಂದು ನನಗೆ ಅನಿಸುತ್ತಿಲ್ಲ. ಲ್ಯಾಂಡ್ ಸ್ಕೇಪಿಂಗ್ ಕೆಲಸ ಪೂರ್ಣಗೊಂಡಂತೆ ಕಾಣಿಸುತ್ತಿಲ್ಲ ಎಂದರು.

    ಸುತ್ತಲೂ ಪೇವರ್ಸ್ ಅಳವಡಿಸಿರುವುದು ಬಿಟ್ಟರೆ ಬೇರೆ ಏನೂ ಕೆಲಸ ಆಗಿಲ್ಲ. ಎಲ್ಲವೂ ಯೋಜನೆ ಪ್ರಕಾರ ನಡೆಯಬೇಕು. ಕಾಲ ಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶೆಟ್ಟರ್, ಇಂದಿರಾ ಗಾಜಿನಮನೆ ಉದ್ಯಾನ ನವೀಕರಣ ಕಾಮಗಾರಿ ನಿಧಾನವಾಗಿ ಸಾಗಿರುವ ಬಗ್ಗೆ ಇಲ್ಲಿ ನಿತ್ಯ ಆಗಮಿಸುವ ವಾಯು ವಿಹಾರಿಗಳು ನನ್ನ ಗಮನಕ್ಕೆ ತಂದಿದ್ದರು. ಇಂದು ಇಲ್ಲಿಗೆ ಬಂದು ನೋಡಿದಾಗ ಕಾಮಗಾರಿ ನಿಜವಾಗಿಯೂ ನಿಧಾನವಾಗಿ ಸಾಗಿರುವುದು ಮನದಟ್ಟಾಗಿದೆ. ವೇಗವಾಗಿ ಹಾಗೂ ಗುಣಮಟ್ಟದ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

    ಪುಣೆ ಕಂಪನಿಗೆ ಟಾಯ್ ಟ್ರೇನ್ ಅಳವಡಿಕೆಗೆ ಗುತ್ತಿಗೆ ನೀಡಲಾಗಿದೆ. 5 ವರ್ಷಗಳ ಕಾಲ ನಿರ್ವಹಣೆ ಜವಾಬ್ದಾರಿ ಅವರದ್ದೇ ಆಗಿರಲಿದೆ. ಹಾಗಾಗಿ ಈ ಹಿಂದೆ ಆದಂತೆ 1 ತಿಂಗಳಲ್ಲಿಯೇ ಟಾಯ್ ಟ್ರೇನ್ ಹಾಳಾಗುವ ಸಾಧ್ಯತೆಗಳಿರುವುದಿಲ್ಲ ಎಂದು ಹೇಳಿದರು.

    ‘ಇಂದಿರಾ ಗಾಜಿನಮನೆ ಉದ್ಯಾನದಲ್ಲಿ ಪಜಲ್ ರ್ಪಾಂಗ್ ವ್ಯವಸ್ಥೆ ಹಾಗೂ ಸಂಗೀತ ಕಾರಂಜಿ ಕಾಮಗಾರಿ ಪೂರ್ಣಗೊಂಡಿದೆ. ಟಾಯ್ ಟ್ರೇನ್ ಸಂಚಾರ ಮಾರ್ಗ ಬಿಟ್ಟು ಉಳಿದೆಡೆ ವಾಕಿಂಗ್ ಪಾತ್, ಪೇವರ್ಸ್ ಅಳವಡಿಕೆ, ಹುಲ್ಲುಹಾಸು ಕಾಮಗಾರಿ ಪೂರ್ಣಗೊಂಡಿದೆ. ಟಾಯ್ ಟ್ರೇನ್ ಸೌರಶಕ್ತಿಯಿಂದ ಓಡಲಿದೆ. ಸಂಪೂರ್ಣ ಹವಾನಿಯಂತ್ರಿತ ನಾಲ್ಕು ಬೋಗಿಗಳ (ಒಟ್ಟು 64 ಆಸನಗಳು) ಟ್ರೇನ್ ಅಳವಡಿಸಲು ನಾಲ್ಕು ವಾರಗಳು ಸಾಕೆಂದು ಗುತ್ತಿಗೆದಾರರು ತಿಳಿಸಿದ್ದಾರೆ’ ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.

    ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಸಾಬೂನು ಮತ್ತು ಮಾರ್ಜಕ ನಿಯಮಿತದ ನಿರ್ದೇಶಕ ಮಲ್ಲಿಕಾರ್ಜುನ ಸಾವಕಾರ, ಪಾಲಿಕೆ ಮಾಜಿ ಸದಸ್ಯ ಮಹೇಶ ಬುರ್ಲಿ, ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್​ನ ಎಂಡಿ ಶಕೀಲ್ ಅಹ್ಮದ್, ಇತರರು ಇದ್ದರು.

    ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸೂಚಿಸಿದ್ದೇನೆ

    ಹುಬ್ಬಳ್ಳಿ ಗಾಂಧಿವಾಡ ರಾಮನಗರದ ಹರಿಜನ ಅನುದಾನಿತ ಕನ್ನಡ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಚಿವ ಶೆಟ್ಟರ್ ತಿಳಿಸಿದರು.

    ಶಾಲೆಗೆ ನೀಡಿದ್ದ ಜಮೀನಿನ 30 ವರ್ಷಗಳ ಲೀಸ್ ಅವಧಿ ಮುಗಿದಿದೆ. ನ್ಯಾಯಾಲಯದ ಆದೇಶದ ಮೇರೆಗೆ ಗಾಂಧಿವಾಡ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯವರು ಶಾಲೆಗೆ ನೀಡಿದ್ದ ಜಾಗವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಇಲ್ಲಿ ಕಾನೂನಿನ ಸೂಕ್ಷ್ಮತೆಗಳಿವೆ. ಕ್ಷೇತ್ರ ಶಿಕ್ಷಣಾಧಿಕಾರಿಯವರನ್ನು ಕರೆಯಿಸಿ ಮಕ್ಕಳಿಗೆ ತೊಂದರೆ ಆಗಬಾರದು ಎಂದು ಹೇಳಿದ್ದೇನೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts