More

    ಹರಗ ಗ್ರಾಮಸ್ಥರನ್ನು ಕಾಡುತ್ತಿದೆ ಜಾಗದ ಭೂತ

    ಸೋಮವಾರಪೇಟೆ: ಸಿ ಆ್ಯಂಡ್ ಡಿ (ವ್ಯವಸಾಯಕ್ಕೆ ಯೋಗ್ಯವಲ್ಲದ ಭೂಮಿ) ಜಾಗದ ಭೂತ ತಾಲೂಕಿನ ಹರಗ ಗ್ರಾಮಸ್ಥರನ್ನು ಕಾಡುತ್ತಿದೆ.

    ಶಾಂತಳ್ಳಿ ಹೋಬಳಿಯ ಹರಗ ಗ್ರಾಮದಲ್ಲಿ 150 ಕುಟುಂಬಗಳಿದ್ದು, 600 ರಷ್ಟು ಜನಸಂಖ್ಯೆ ಇದೆ. ಎಲ್ಲರೂ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಕಾಫಿ, ಕಾಳುಮೆಣಸು, ಭತ್ತ, ತರಕಾರಿ, ಬಾಳೆ, ಅಡಕೆ ಇತರ ತೋಟಗಾರಿಕಾ ಬೆಳೆ ಬೆಳೆಯುತ್ತಾರೆ. ಆದರೆ ಶೇ.90ರಷ್ಟು ಕೃಷಿಕರಿಗೆ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ. ಮಳೆಹಾನಿ ಪರಿಹಾರ, ರೈತರಿಗೆ ಸಿಗುವಂತಹ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

    ಅಂದಾಜು 300 ಎಕರೆ ಜಾಗದಲ್ಲಿ ಕೃಷಿ ಮಾಡಲಾಗುತ್ತಿದ್ದು, ಅದರಲ್ಲಿ 200 ಎಕರೆ ಸಿ ಆ್ಯಂಡ್ ಡಿ ಭೂಮಿಯಲ್ಲಿ ಕೃಷಿ ಮಾಡಿದ್ದಾರೆ. ಐದಾರು ದಶಕಗಳ ಹಿಂದೆ ಕೃಷಿಕರು ಸರ್ಕಾರಿ ಪೈಸಾರಿ ಜಾಗದಲ್ಲಿ ಕೃಷಿ ಮಾಡಿ, ಉತ್ತಮ ಫಸಲು ತೆಗೆಯುತ್ತಿದ್ದರು. ನಂತರದ ದಿನಗಳಲ್ಲಿ ಕಂದಾಯ ಇಲಾಖೆಯ ಕೆಲ ಅಧಿಕಾರಿಗಳು ಪೈಸಾರಿ ಎಂಬುದನ್ನು ಸಿ ಆ್ಯಂಡ್ ಡಿ ಎಂದು ಬದಲಾಯಿಸಿದರು. ನಂತರ ಇದು ರೈತರಿಗೆ ಮಾರಕವಾಯಿತು.

    ವ್ಯವಸಾಯಕ್ಕೆ ಯೋಗ್ಯವಲ್ಲದ ಭೂಮಿಯಲ್ಲಿ ಕೃಷಿ ಅಸಾಧ್ಯ ಎಂಬುದು ಸರ್ಕಾರದ ವಾದ. ಈ ಭೂಮಿಯ ಆಸ್ತಿ ದಾಖಲಾತಿಯನ್ನು ಈವರೆಗೂ ಸರ್ಕಾರ ರೈತರಿಗೆ ನೀಡಿಲ್ಲ. 20 ವರ್ಷಗಳಿಂದ ಆಸ್ತಿ ದಾಖಲಾತಿಗಾಗಿ ಫಾರ್ಮ್ ನಂ.50, 53, 57ರಲ್ಲಿ ಅರ್ಜಿ ಸಲ್ಲಿಸಿದ್ದು, ತಾಲೂಕು ಕಚೇರಿಯಲ್ಲಿ ಧೂಳು ತಿನ್ನುತ್ತಿವೆ.

    ಹರಗ ಗ್ರಾಮದಲ್ಲಿ ವಾರ್ಷಿಕವಾಗಿ ಹೆಚ್ಚು ಮಳೆ ಬೀಳುತ್ತದೆ. ಅಕಾಲಿಕ ಮಳೆ, ಅತಿವೃಷ್ಟಿಯಿಂದ ಕೃಷಿ ಫಸಲು ಹಾನಿಯಾಗುತ್ತದೆ. ಗ್ರಾಮಕ್ಕೆ ಹೊಂದಿಕೊಂಡಂತೆ ಅರಣ್ಯವಿದ್ದು, ಕಾಡುಕೋಣ, ಕಾಡುಹಂದಿ, ನವಿಲು ಇನ್ನಿತರ ವನ್ಯಪ್ರಾಣಿಗಳು ತಿಂದು ಉಳಿಸಿದ ಫಸಲನ್ನು ಗ್ರಾಮದ ಕೃಷಿಕರು ಪಡೆದುಕೊಳ್ಳಬೇಕಾಗಿದೆ.

    ಮುಂಗಾರಿನಲ್ಲಿ ಅತಿವೃಷ್ಟಿಯಿಂದಾಗಿ ಭತ್ತದ ಗದ್ದೆಗಳು ನೀರಿನಿಂದ ಅವೃತ್ತಗೊಂಡು, ಭತ್ತದ ಪೈರುಗಳೇ ಕೊಳೆತು ಹೋದ ನಿದರ್ಶನಗಳಿವೆ. ಭತ್ತದ ಗದ್ದೆಗಳ ಮೇಲೆ ಹೂಳು ಅವೃತ್ತವಾಗುತ್ತಿರುತ್ತದೆ. ಕಾಫಿಗೆ ಕೊಳೆರೋಗ ಬಂದರೆ, ಶೀತದಿಂದ ಕಾಳುಮೆಣಸು ಬಳ್ಳಿಗಳು ಸತ್ತು ಹೋಗುತ್ತವೆ. ಇಷ್ಟೆಲ್ಲ ಹಾನಿಯಾದರೂ ಅಸ್ತಿ ದಾಖಲಾತಿ ಇಲ್ಲದ ಹಿನ್ನೆಲೆಯಲ್ಲಿ ಪರಿಹಾರ ಪಡೆಯಲು ಆಗುತ್ತಿಲ್ಲ. ಸಹಕಾರ ಬ್ಯಾಂಕ್‌ನಲ್ಲಿ ಶೂನ್ಯ ಬಡ್ಡಿ ದರದಲ್ಲಿ ಸಾಲವೂ ಇಲ್ಲದಂತಾಗಿದೆ. ಹೆಚ್ಚು ಬಡ್ಡಿಗೆ ಜಾಮೀನು, ಆಭರಣ ಮತ್ತು ಪಿಗ್ಮಿ ಮೇಲಿನ ಸಾಲ ಪಡೆಯುವಂತಹ ದುಸ್ಥಿತಿ ರೈತರಿಗಿದೆ. ಸಾಲ ಮನ್ನಾ, ಬಡ್ಡಿಮನ್ನಾ, ಕಿಸಾನ್ ಸಮ್ಮಾನ್ ಯೋಜನೆಯಿಂದಲೂ ಗ್ರಾಮದ ಕೃಷಿಕರು ವಂಚಿತರಾಗಿದ್ದಾರೆ.

    ಕುಡಿಯುವ ನೀರಿನ ಸಮಸ್ಯೆ: ಬೆಟ್ಟದಲ್ಲಿ ಹರಿಯುವ ನೀರಿಗೆ ಪೈಪ್ ಅಳವಡಿಸಿಕೊಂಡು ನೀರಿನ ಸಮಸ್ಯೆ ನೀಗಿಸಿಕೊಂಡಿದ್ದಾರೆ. ಆದರೆ ಫೆಬ್ರವರಿ, ಮಾರ್ಚ್, ಏಪ್ರಿಲ್‌ನಲ್ಲಿ ನೀರು ಬತ್ತಿದಾಗ, ಕುಡಿಯುವ ನೀರಿಗೂ ಹಾಹಾಕಾರ ಪ್ರಾರಂಭವಾಗುತ್ತದೆ. ಎರಡು ವರ್ಷದ ಹಿಂದೆ ಜಲಜೀವನ್ ಯೋಜನೆಯಡಿ ಕಾಮಗಾರಿ ಮುಗಿಯಿತಾದರೂ ಇವತ್ತಿಗೂ ಪೈಪ್‌ನಲ್ಲಿ ನೀರು ಹರಿದಿಲ್ಲ. ಅಲ್ಲದೆ, ಕುಡಿಯುವ ನೀರಿನ ಕಾಮಗಾರಿಗೆ ಈಗಾಗಲೇ 40 ಲಕ್ಷ ರೂ. ವಿನಿಯೋಗವಾಗಿದೆ.

    ರಸ್ತೆ ಸಮಸ್ಯೆ: ಕನ್ನಳ್ಳಿ ಕಟ್ಟೆಯಿಂದ ಹರಗ ರಸ್ತೆ ಸುಮಾರಾಗಿದೆ. ಆದರೆ ಗ್ರಾಮದೊಳಗಿನ 2ಕಿ.ಮೀ. ರಸ್ತೆ ಹಾಳಾಗಿದೆ. ಆ ರಸ್ತೆಯಲ್ಲೇ ಒಂದು ಕೆ.ಎಸ್.ಆರ್.ಟಿ.ಸಿ.ಬಸ್ ಹರಸಾಹಸ ಮಾಡಿ ಸಂಚರಿಸಬೇಕಾಗಿದೆ. ಇರುವ ಒಂದು ಬಸ್‌ನಿಂದ ಶಾಲಾ ಕಾಲೇಜು ಮಕ್ಕಳಿಗೆ ಪ್ರಯೋಜನವಿಲ್ಲ. ಬೆಳಗ್ಗೆ 10 ಗಂಟೆಗೆ ಗ್ರಾಮಕ್ಕೆ ಬರುತ್ತದೆ. ಸಂಜೆ 3.30ಕ್ಕೆ ಸೋಮವಾರಪೇಟೆಯಿಂದ ಹೊರಟು ಗ್ರಾಮಕ್ಕೆ 4ಗಂಟೆಗೆ ಬಂದು ಮಡಿಕೇರಿಗೆ ಹೋಗುತ್ತದೆ. ಶಾಲಾ ಸಮಯಕ್ಕೆ ಇನ್ನೊಂದು ಬಸ್ ಬೇಕು ಎಂಬುದು ಗ್ರಾಮಸ್ಥರ ಆಗ್ರಹ.

    ಮಳೆಗಾಲದಲ್ಲಿ ಕತ್ತಲೆಯಲ್ಲಿ ಗ್ರಾಮ: ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆಯಿಂದ ಗ್ರಾಮಸ್ಥರು ಬೇಸತ್ತಿದ್ದಾರೆ. ಶಾಂತಳ್ಳಿ, ಗುಡ್ಡಳ್ಳಿ ಮಾರ್ಗವಾಗಿ ವಿದ್ಯುತ್ ಮಾರ್ಗ ಬಂದಿದ್ದು, ಗುಡ್ಡಳ್ಳಿ ಹೊಳೆಯೊಳಗೆ ಕಂಬಗಳನ್ನು ನೆಟ್ಟು ತಂತಿ ಎಳೆಯಲಾಗಿದೆ. ಮಳೆಗಾಲದಲ್ಲಿ ಹೊಳು ತುಂಬಿದರೆ, ಲೈನ್‌ಮನ್‌ಗಳು ಕೂಡ ಕಂಬದ ಪಕ್ಕಕ್ಕೆ ಹೋಗಲು ಸಾಧ್ಯವಿಲ್ಲ. ಮರಗಳು ವಿದ್ಯುತ್ ತಂತಿ ಮೇಲೆ ಬಿದ್ದು ಹಾಳಾದರೆ, ವಾರಗಟ್ಟಲೆ ಗ್ರಾಮ ಕತ್ತಲೆಯಲ್ಲಿರಬೇಕಾದ ಅನಿವಾರ್ಯತೆ ಇದೆ. ರಸ್ತೆ ಪಕ್ಕದಲ್ಲೇ ವಿದ್ಯುತ್ ತಂತಿ ಎಳೆಯುವಂತೆ ಗ್ರಾಮಸ್ಥರು ಅರ್ಜಿ ನೀಡಿದರೂ, ಸೆಸ್ಕ್ ಸ್ಪಂದಿಸುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ.

    ಟವರ್ ಬೇಡಿಕೆ ಈಡೇರಿಲ್ಲ: ಇವತ್ತಿಗೂ ಬಿಎಸ್‌ಎನ್‌ಎಲ್‌ನ 2ಜಿ ನೆಟ್‌ವರ್ಕ್‌ನಲ್ಲಿ ಗ್ರಾಮಸ್ಥರು ಸಂಪರ್ಕ ಸಾಧಿಸಬೇಕಾಗಿದೆ. ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಮತ್ತು ವರ್ಕ್ ಫ್ರಮ್ ಹೋಂ ನೌಕರರು ಹರಗ ಗ್ರಾಮದಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ಗ್ರಾಮದ ಸಮೀಪದಲ್ಲೇ ಬಿಎಸ್‌ಎನ್‌ಎಲ್ ಟವರ್ ಇದೆಯಾದರೂ ಕರೆಂಟ್ ಇದ್ದರೆ ಮಾತ್ರ ನೆಟ್‌ವರ್ಕ್ ಸಿಗುತ್ತದೆ. ಇಲ್ಲದಿದ್ದರೆ ಮೊಬೈಲ್ ಸಂಪರ್ಕ ಅಸಾಧ್ಯ ಎಂಬುದು ಗ್ರಾಮಸ್ಥರ ಮಾತು. ನೂತನ ಟವರ್ ನಿರ್ಮಾಣದ ಮನವಿಗೂ ಸ್ಪಂದನೆ ಸಿಕ್ಕಿಲ್ಲ. ಒಟ್ಟಿನಲ್ಲಿ ಹರಗ ಗ್ರಾಮ ಸಮಸ್ಯೆಗಳನ್ನು ಹೊದ್ದು ಮಲಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

    ಸಿ ಆ್ಯಂಡ್ ಡಿ ಹಕ್ಕುಪತ್ರ ಸಿಕ್ಕರೆ ರೈತರು ನೆಮ್ಮದಿಯಿಂದ ಬದುಕಬಹುದು. ಸರ್ಕಾರದ ಬಹುತೇಕ ಸೌಲಭ್ಯಗಳಿಂದ ರೈತರು ವಂಚಿತರಾಗಿದ್ದಾರೆ. ನಮ್ಮ ಸಮಸ್ಯೆ ಬಗೆಹರಿಸಲು ಶಾಸಕಾಂಗ, ಕಾರ್ಯಂಗ ಮುಂದಾಗಬೇಕು. ವನ್ಯಪ್ರಾಣಿಗಳಿಂದ ಹಾನಿಯಾದ ಬೆಳೆಗೆ ಸೂಕ್ತ ಪರಿಹಾರ ಕಲ್ಪಿಸಬೇಕು.
    ಧರ್ಮಪ್ಪ, ಅಧ್ಯಕ್ಷರು, ಹರಗ ಗ್ರಾಮಾಭಿವೃದ್ಧಿ ಮಂಡಳಿ

    ಹರಗ ಗ್ರಾಮದಲ್ಲಿ ಹೆಚ್ಚಿನ ಸಮಸ್ಯೆಗಳಿವೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಲಿದೆ. ಜಲಜೀವನ್ ಯೋಜನೆಯಡಿ ಕಾಮಗಾರಿ ಪ್ರಾರಂಭವಾಗಿ 2 ವರ್ಷಗಳು ಕಳೆದಿದ್ದು, ಪೈಪ್‌ಲೈನ್ ಏನಾಗಿದೆಯೋ ಗೊತ್ತಿಲ್ಲ. ನೀರು ಮಾತ್ರ ಬಂದಿಲ್ಲ. ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಬೇಕು.
    ಶರಣ್‌ಗೌಡ, ಕೃಷಿಕ, ಹರಗ ಗ್ರಾಮ

    ಸ್ವಾತಂತ್ರ್ಯ ಬಂದು 76 ವರ್ಷ ಕಳೆದಿದೆ. ನಾವು ಇವತ್ತಿಗೂ ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ರಸ್ತೆ, ವಿದ್ಯುತ್, ಕುಡಿಯುವ ನೀರಿಗಾಗಿ ಪರದಾಡಬೇಕಿರುವುದು ದುರಂತವೇ ಸರಿ. ಗ್ರಾಮೀಣಾಭಿವೃದ್ಧಿ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು.
    ಆದಿತ್ಯ ಡಿ.ಕುಶಾಲಪ್ಪ, ಕಾಫಿ ಬೆಳೆಗಾರರು, ಹರಗ ಗ್ರಾಮ

    ಹರಗ ಗ್ರಾಮದೊಳಗಿನ ರಸ್ತೆಯನ್ನು ಸರಿಪಡಿಸಬೇಕು. ಮಳೆಗಾಲದಲ್ಲಿ ಗುಂಡಿ ಬಿದ್ದ ರಸ್ತೆಯಲ್ಲಿ ತೆರಳುವುದು ಕಷ್ಟಕರ. ಅಕಾಲಿಕ ಮಳೆಯಿಂದ ಕಾಫಿ, ಕಾಳುಮೆಣಸು ಫಸಲು ಹಾನಿಯಾಗುತ್ತಿದೆ. ವೈಜ್ಞಾನಿಕ ಪರಿಹಾರ ಸಿಗಬೇಕು. ಆಸ್ತಿ ದಾಖಲಾತಿ ಇಲ್ಲದವರಿಗೂ ಪರಿಹಾರ ಸಿಗುವಂತಾಗಬೇಕು.
    ಕಾರ್ತಿಕ್ ಕುಶಾಲಪ್ಪ, ಕಾಫಿ ಬೆಳೆಗಾರ, ಹರಗ ಗ್ರಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts