More

    ಜೇಕಿನಕಟ್ಟಿ ಗ್ರಾಮದ ಬಳಿ ಕಾಡಾನೆಗಳು ಪ್ರತ್ಯಕ್ಷ

    ಶಿಗ್ಗಾಂವಿ: ಪಟ್ಟಣದ ಹೊರವಲಯದ ಜೇಕಿನಕಟ್ಟಿ ಗ್ರಾಮದ ಮುರಾರ್ಜಿ ವಸತಿ ಶಾಲೆ ಪಕ್ಕದ ಅರಣ್ಯದಲ್ಲಿ ಶನಿವಾರ ಬೆಳಗ್ಗೆ ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಜನರು ಭಯಭೀತರಾಗಿದ್ದಾರೆ.

    ಜನರನ್ನು ಕಂಡ ಕಾಡಾನೆಗಳು ರೊಚ್ಚಿಗೆದ್ದು ಏರಿ ಬರುತ್ತಿರುವುದನ್ನು ಕಂಡು ದಿಕ್ಕೆಟ್ಟು ಓಡಿ ಹೋದ ಘಟನೆಯೂ ನಡೆದಿದೆ. ಸ್ಥಳಕ್ಕಾಗಮಿಸಿದ ದುಂಡಸಿ ವಲಯ ಅರಣ್ಯಾಧಿಕಾರಿ ರಮೇಶ ಸೇತಸನದಿ ನೇತೃತ್ವದ ಅರಣ್ಯ ಸಿಬ್ಬಂದಿ ತಂಡ ಪಟಾಕಿ ಸಿಡಿಸಿ ಆನೆಗಳನ್ನು ಓಡಿಸಲು ಪ್ರಯತ್ನಿಸಿದರು. ಆದರೂ ಆನೆಗಳು ಸ್ಥಳದಿಂದ ತೆರಳುತ್ತಿಲ್ಲ. ಹೀಗಾಗಿ ಜೇಕಿನಕಟ್ಟಿಯಲ್ಲಿಯೇ ಠಿಕಾಣಿ ಹೂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳು ನಾಡಿಗೆ ಬರದಂತೆ ಕ್ರಮ ವಹಿಸಿದ್ದಾರೆ. ಇತ್ತ ಆನೆಗಳನ್ನು ನೋಡಲು ತಂಡೋಪತಂಡವಾಗಿ ಜನರು ಧಾವಿಸುತ್ತಿದ್ದಾರೆ. ಆನೆಗಳು ಕಂಡುಬಂದಿರುವ ಸ್ಥಳದ ಅನತಿ ದೂರದಲ್ಲಿ ವಾಸದ ಮನೆಗಳು, ಕಬ್ಬು ಕಟಾವು ಮಾಡಲು ಬಂದಿರುವ ಕೂಲಿ ಕಾರ್ವಿುಕರ ಗುಡಿಸಲುಗಳಿವೆ. ಹೇಗಾದರೂ ಮಾಡಿ ಸಂಜೆಯೊಳಗಾಗಿ ಆನೆಗಳನ್ನು ಇಲ್ಲಿಂದ ಕಾಡಿಗೆ ಓಡಿಸಿ ಎಂದು ಅರಣ್ಯ ಅಧಿಕಾರಿಗಳಿಗೆ ಸಾರ್ವಜನಿಕರು ವಿನಂತಿ ಮಾಡಿದ್ದಾರೆ.

    ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅರಣ್ಯಾಧಿಕಾರಿ ರಮೇಶ ಸೇತಸನದಿ, ‘ಯಲ್ಲಾಪುರ ಅರಣ್ಯದಿಂದ ಬಂದಿರುವ ಆರು ಆನೆಗಳು ಬೆಳಗ್ಗೆ ಈ ಭಾಗದಲ್ಲಿ ಕಂಡು ಬಂದಿದೆ. ಶಿಗ್ಗಾಂವಿ, ಬಂಕಾಪುರ, ಜೇಕಿನಕಟ್ಟಿ ಸೇರಿ ಗ್ರಾಮಗಳತ್ತ ಹೋಗದಂತೆ ಪಟಾಕಿ, ಹುಸಿಗುಂಡುಗಳನ್ನು ಹಾರಿಸಿ ತಡೆದಿದ್ದೇವೆ. ಅವು ಬೀಡು ಬಿಟ್ಟಿರುವ ಸ್ಥಳದಲ್ಲಿ ಕಬ್ಬಿನ ಹೊಲ, ಭತ್ತದ ಹೊಲ ಹಾಗೂ ನೀರಿನ ಸೌಕರ್ಯ ಇದ್ದ ಕಾರಣ ಆನೆಗಳು ಇಲ್ಲಿಂದ ಕದಲುತ್ತಿಲ್ಲ’ ಎಂದರು.

    ಬೆಳಗ್ಗೆ ಜನರ ಕೂಗಾಟದಿಂದ ವಿಚಲಿತರಾದಂತೆ ಕಂಡು ಬಂದಿರುವ ಆನೆಗಳನ್ನು ರಾತ್ರಿಯವರೆಗೆ ನಿಗಾ ವಹಿಸುತ್ತೇವೆ. ಯಲ್ಲಾಪುರ ಅರಣ್ಯ ತಂಡದವರ ಸಹಾಯ ಪಡೆದು ಇಲ್ಲಿಂದ ಯಲ್ಲಾಪುರ ಅರಣ್ಯಕ್ಕೆ ಕಳುಹಿಸುವ ಕಾರ್ಯ ಮಾಡುತ್ತೇವೆ. ಈಗಾಗಲೇ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವಶ್ಯಬಿದ್ದಲ್ಲಿ ಬೇರೆ ಬೇರೆ ವಲಯಗಳಿಂದ ಸಿಬ್ಬಂದಿ ಕರೆಯಿಸಿಕೊಳ್ಳಲಾಗುವುದು. ಗ್ರಾಮಸ್ಥರು ಯಾವುದೇ ಕಾರಣಕ್ಕೆ ಆತಂಕಕ್ಕೆ ಒಳಗಾಗಬಾರದು ಎಂದು ಸೇತಸನದಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts