More

    ರನ್‌ವೇ ಕಾಣದೆ ಬೆಂಗಳೂರಿಗೆ ಮರಳಿದ ವಿಮಾನ!

    ಶಿವಮೊಗ್ಗ: ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಭಾನುವಾರ ಆಗಮಿಸಬೇಕಿದ್ದ ಇಂಡಿಗೋ ವಿಮಾನ ಒಮ್ಮೆ ಏರ್‌ಪೋರ್ಟ್‌ನಲ್ಲಿ ಹಾರಾಟ ನಡೆಸಿ ಮತ್ತೆ ಬೆಂಗಳೂರಿಗೆ ಹಿಂದಿರುಗಿತು. ಅಲ್ಲಿಂದ ಮತ್ತೆ ಶಿವಮೊಗ್ಗ ಏರ್‌ಪೋರ್ಟ್‌ಗೆ ವಾಪಸ್ ಬಂದು ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಹವಾಮಾನ ವೈಪರೀತ್ಯವೇ ಇದಕ್ಕೆ ಕಾರಣ.

    ಬೆಂಗಳೂರಿನಿಂದ ಶಿವಮೊಗ್ಗ ಏರ್‌ಪೋರ್ಟ್‌ಗೆ ಬೆಳಗ್ಗೆ 10.45ರ ಸುಮಾರಿಗೆ ವಿಮಾನ ಆಗಮಿಸಿದ ಸಂದರ್ಭದಲ್ಲಿ ರನ್‌ವೇ ಪ್ರದೇಶದಲ್ಲಿ ತುಂತುರು ಮಳೆ ಬೀಳುತ್ತಿತ್ತು. ಹೀಗಾಗಿ ವಿಮಾನ ಲ್ಯಾಂಡ್ ಮಾಡಲು ಪೈಲಟ್‌ಗೆ ಸಾಧ್ಯವಾಗಲಿಲ್ಲ. ಸುಮಾರು 10 ನಿಮಿಷ ಆಗಸದಲ್ಲೇ ಸುತ್ತಿದ ಬಳಿಕವೂ ರನ್‌ವೇ ಸರಿಯಾಗಿ ಕಾಣಲಿಲ್ಲ. ಹೀಗಾಗಿ ಪೈಲಟ್ ವಿಮಾನವನ್ನು ಬೆಂಗಳೂರಿಗೆ ಕೊಂಡೊಯ್ದರು. ಅಲ್ಲಿ ಸುಮಾರು 20 ನಿಮಿಷ ವಿಮಾನ ಲ್ಯಾಂಡ್ ಮಾಡಲಾಯಿತು.
    ಶಿವಮೊಗ್ಗ ವಿಮಾನ ನಿಲ್ದಾಣದ ಸುತ್ತಲೂ ವಾತಾವರಣ ತಿಳಿಯಾಗಿದೆ ಎಂಬ ಸಂದೇಶ ದೊರೆತ ಬಳಿಕ ಮಧ್ಯಾಹ್ನ 1.52ಕ್ಕೆ ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಯಿತು. ಬಳಿಕ 2.29ಕ್ಕೆ ಶಿವಮೊಗ್ಗದಿಂದ ಪ್ರಯಾಣಿಕರನ್ನು ಹೊತ್ತು ಬೆಂಗಳೂರಿನೆಡೆಗೆ ವಿಮಾನ ಟೇಕಾಫ್ ಆಯಿತು.
    ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಅಧಿಕೃತವಾಗಿ ಕಾರ್ಯಾಚರಣೆ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಇಂತಹದೊಂದು ಘಟನೆ ಸಂಭವಿಸಿದೆ. ಮೊದಲ ಬಾರಿ ವಿಮಾನದಲ್ಲಿ ಪ್ರಯಾಣಿಸಿದವರಿಗಂತೂ ಇದು ಅವಿಸ್ಮರಣೀಯ. ಏಕೆಂದರೆ ಒಂದೇ ಟಿಕೆಟ್‌ನಲ್ಲಿ ಬೆಂಗಳೂರು-ಶಿವಮೊಗ್ಗ ನಡುವೆ ಮೂರು ಬಾರಿ ಪ್ರಯಾಣಿಸಿದ ಸೌಭಾಗ್ಯ ಅವರದಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts