More

    ಹಳೇ ಹುಲಿಗಳ ಕಾದಾಟ , ಕಣ ರೋಚಕ

    ಗದಗ: ಜಿಲ್ಲೆಯ ಗದಗ ಹಾಗೂ ನರಗುಂದ ಮತಕ್ಷೇತ್ರ ಹಳೇ ಹುಲಿಗಳ ಕಾದಾಟ ಕ್ಕೆ ಸಾಕ್ಷಿಯಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ 2018ರ ಮುಖಗಳನ್ನೇ ರಾಷ್ಟ್ರಿಯ ಪಕ್ಷಗಳು ಹುರಿಯಾಳಾಗಿಸಿವೆ.

    ಕಾಂಗ್ರೆಸ್ ಪಕ್ಷ ರೆಡ್ಡಿ ಸಮುದಾಯಕ್ಕೆ ಮಣೆ ಹಾಕಿದರೆ, ಬಿಜೆಪಿ ಮತ್ತೊಮ್ಮೆ ವೀರಶೈವ ಲಿಂಗಾಯತರ ಗಾಳ ಉರುಳಿಸಿದೆ.
    ನರಗುಂದಕ್ಕೆ ಸಚಿವ ಸಿ.ಸಿ. ಪಾಟೀಲ, ಗದಗಕ್ಕೆ ಅನಿಲ ಮೆಣಸಿನಕಾಯಿ ವೀರಶೈವ ಲಿಂಗಾಯತರಾಗಿದ್ದು, ಕಾಂಗ್ರೆಸ್ಸಿನಿಂದ ಗದಗ ಕ್ಷೇತ್ರಕ್ಕೆ ಎಚ್.ಕೆ. ಪಾಟೀಲ, ನರಗುಂದಕ್ಕೆ ಬಿ.ಆರ್. ಯಾವಗಲ್ ರಡ್ಡಿ ಸಮುದಾಯದವರು.

    ಗದಗ ಮತಕ್ಷೇತ್ರ: 2018ರಲ್ಲಿ ಅನಿಲ ಮೆಣಸಿನಕಾಯಿ ಬಿಜೆಪಿಗೆ ಹೊಸಬರಾಗಿದ್ದರು. ಟಿಕೆಟ್ ೋಷಣೆ ಸಂದರ್ಭದಲ್ಲಿ ಬಿಜೆಪಿಯ ಒಳಬೇಗುದಿಗಳು ಹಿಡಿತಕ್ಕೆ ಸಿಕ್ಕಿರಲಿಲ್ಲ.
    ತರಾತುರಿಯಲ್ಲಿ ನಾಮಪತ್ರ ಸಲ್ಲಿಸಿ ಚುನಾವಣೆ ಎದುರಿಸಿ 1,800 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು.

    ಎಚ್.ಕೆ. ಪಾಟೀಲ ಗೆಲುವು ಸಾಧಿಸಿದ್ದರೂ ನೈತಿಕ ಸೋಲು ಎಂಬುದು ಕಾಂಗ್ರೆಸ್ ವಲಯದಲ್ಲಿ ಚರ್ಚೆಯಾಗಿತ್ತು. ಎಚ್.ಕೆ. ಪಾಟೀಲ ಅವರೂ ಕಡಿಮೆ ಅಂತರದಲ್ಲಿ ಗೆಲುವು ದೊರೆಯುತ್ತದೆ ಎಂದು ನಿರೀಕ್ಷಿರಲಿಲ್ಲ.

    ಆದರೆ, ಈ ಬಾರಿ ಭಿನ್ನ ಸನ್ನಿವೇಶಗಳಿವೆ. 2018ರ ತಪ್ಪು ಮರುಕಳಿಸದಂತೆ ಜಾಣ ನಡೆ ಅನುಸರಿಸಲಾಗುತ್ತಿದೆ.
    ಗ್ರಾಮೀಣ ಭಾಗದಲ್ಲಿ ಕಳೆದ ಬಾರಿಗಿಂತಲೂ ಹೆಚ್ಚಿನ ಸಂಪರ್ಕ ಸಾಧಿಸಲಾಗುತ್ತಿದೆ. ಇನ್ನೂಂದೆಡೆ ಎಚ್.ಕೆ. ಪಾಟೀಲರೂ ಸೇರಿ ಕಾಂಗ್ರೆಸ್ಸಿಗರ ನಡೆ ಬಿಜೆಪಿ ಮುಖಂಡರಿಗೆ ಅರ್ಥವಾಗುತ್ತಿಲ್ಲ.
    ಮಠಗಳಿಗೆ ದೌಡಾಯಿಸುತ್ತಿರುವ ಕಾಂಗ್ರೆಸ್ಸಿಗರು ಸಮುದಾಯದ ಮುಖಂಡರನ್ನು ಸೆಳೆಯುತ್ತಿದ್ದಾರೆ. ಬಿಜೆಪಿ ಟಿಕೆಟ್ ದೊರೆಯದೆ ನೊಂದಿರುವ ಆಕಾಂಕ್ಷಿಗಳನ್ನು ಭೇಟಿ ಮಾಡುತ್ತಿಸಿದ್ದಾರೆ.
    ನರಗುಂದ ಕ್ಷೇತ್ರ: ಕ್ಷೇತ್ರದ ಬಹುತೇಕ ರಸ್ತೆಗಳನ್ನು ಅಭಿವೃದ್ಧಿಪಡಿಸಿರುವ ಸಚಿವ ಸಿ.ಸಿ. ಪಾಟೀಲ ಚುನಾವಣಾ ವಿಷಯದಲ್ಲಿ ಚಾಣಾಕ್ಷರು. ಕ್ಷೇತ್ರಕ್ಕೆ 1,800 ಕೋಟಿ ರೂ. ಅನುದಾನ ತಂದರೂ ಆತ್ಮವಿಶ್ವಾಸದಲ್ಲಿ ಬೀಗುತ್ತಿಲ್ಲ.

    ಬಿ.ಆರ್. ಯಾವಗಲ್‌ರಿಂದ ನೇರ ಸ್ಪರ್ಧೆ ಎದುರಿಸುತ್ತಿದ್ದಾರೆ. ಕ್ಷೇತ್ರದ ಕುರುಬ ಸಮುದಾಯ ಬರೀ ಕಾಂಗ್ರೆಸ್ ಪಕ್ಷದ ಜತೆಗಿರದೇ ಬಿಜೆಪಿಯತ್ತಲೂ ವಾಲಿದೆ ಎನ್ನಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಜಾತಿ ರಾಜಕಾರಣ ಮಾಡದೆ ಎಲ್ಲ ಸಮುದಾಯಕ್ಕೆ ಸಮಾನ ಗೌರವ ನೀಡಿದ್ದಾರೆ.

    ಚುನಾವಣಾ ಪ್ರಚಾರದಲ್ಲಿ ತಮ್ಮಷ್ಟೇ ಜವಾಬ್ದಾರಿಯನ್ನು ತಮ್ಮ ಕುಟುಂಬಕ್ಕೂ ವಹಿಸಿದ್ದು, ಪ್ರಚಾರದಲ್ಲೂ ಹಿಡಿತ ಸಾಧಿಸಿದ್ದಾರೆ.
    ಐದು ವರ್ಷದಿಂದ ರಾಜಕೀಯ ನೆಲೆಗೆ ಶ್ರಮಿಸುತ್ತಿರುವ ಕಾಂಗ್ರೆಸ್ಸಿನ ಬಿ.ಆರ್. ಯಾವಗಲ್ ಹಿರಿಯ ರಾಜಕಾರಣಿ.

    2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಸಚಿವ ಸ್ಥಾನದಿಂದ ವಂಚಿತರಾಗಿದ್ದರು. ಸಜ್ಜನ ರಾಜಕಾರಣಿಯಾದರೂ ತಮ್ಮಂತೆ ತಮ್ಮ ಮಕ್ಕಳಿಗೆ ಸಕ್ರಿಯ ರಾಜಕಾರಣದ ಮಾರ್ಗದರ್ಶನ ನೀಡಿಲ್ಲ. ಯಾವಗಲ್ ಅವರ ಬೆನ್ನಿಗೆ ಹಳೇ ತಲೆಮಾರಿನ ಮತದಾರರು ಇದ್ದಾರೆ.

    10ನೇ ಬಾರಿ ಅಭ್ಯರ್ಥಿಯಾದರೂ ಬಿಗುಮಾನದ ರಾಜಕಾರಣಿಯಲ್ಲ. ಆದರೆ, ಸ್ವಪಕ್ಷೀಯರ ವಿರೋಧ ಶಮನಗೊಳಿಸವುದೇ ದೊಡ್ಡ ಸವಾಲು.

    ಟಿಕೆಟ್ ವಂಚಿತ ಸಂಗಮೇಶ ಕೊಳ್ಳಿ ನಡೆ ನಿಗೂಢವಾಗಿದೆ. ಬಿ.ಆರ್. ಯಾವಗಲ್ ವಿರೋಧಿ ಬಳಗದಲ್ಲಿರುವ ದಶರಥ ಗಾಣಿಗೇರ ಬೆಂಬಲವೂ ಇನ್ನೂ ಸ್ಪಷ್ಟವಾಗಿಲ್ಲ.

    ಅಂದು-ಇಂದು: ಗದಗ ಮತ್ತು ನರಗುಂದದಲ್ಲಿ ಕಳೆದ ಬಾರಿಗಿಂತಲೂ ಈ ಬಾರಿ ಕಣ ವಿಭಿನ್ನವಾಗಿದೆ. ಕಳೆದ ಬಾರಿ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದ ಸುಳಿಯಲ್ಲಿ ಸಿಕ್ಕು ಕಾಂಗ್ರೆಸ್ ನಷ್ಟ ಅನುಭವಿಸಿದೆ.

    ಹಲವು ಮಠಾಧೀಶರು ಕಾಂಗ್ರೆಸ್ ಪಕ್ಷದ ಮೇಲೆ ಮುನಿಸಿಕೊಂಡಿದ್ದರು. ಪಂಚಮಸಾಲಿಗಳಿಗೆ 2ಡಿ ಮೀಸಲಾತಿ ಮತ್ತು ನ್ಯಾ.ಸದಾಶಿವ ಆಯೋಗದ ವರದಿ ಜಾರಿ ವಿಚಾರದಲ್ಲಿ ಬಿಜೆಪಿ ಎಚ್ಚರಿಕೆಯ ನಡೆ ಇಟ್ಟಿದೆ.

    ಕಾಂಗ್ರೆಸ್ ಕುರುಬ ಸಮುದಾಯಕ್ಕೆ ಜಿಲ್ಲೆಯಲ್ಲಿ ಟಿಕೆಟ್ ನೀಡಿಲ್ಲ ಮತ್ತು ಕುರುಬ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಮುಖಂಡರು ರಾಜ್ಯಮಟ್ಟದಲ್ಲಿ ಧ್ವನಿ ಎತ್ತಲಿಲ್ಲ ಎಂಬ ನೋವು ಕಾಂಗ್ರೆಸ್ ಮುಖಂಡರನ್ನು ಕಾಡುತ್ತಿದೆ. ಗದಗ ಕ್ಷೇತ್ರದಲ್ಲಿ ಬಣಜಿಗ ಮತ್ತು ಪಂಚಮಸಾಲಿ ಒಳಬೇಗುದಿ ತಣ್ಣಗಾಗುತ್ತಿದೆ ಎಂದು ಹೇಳಲಾಗುತ್ತಿದೆ.

    ಬಿಜೆಪಿಯಿಂದ ಲಿಂಗಾಯತರು ಪ್ರವರ್ಧಮಾನಕ್ಕೆ

    ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ರಡ್ಡಿ ಸಮುದಾಯದ ಪಾರುಪತ್ಯವಿದೆ. ಕಾಂಗ್ರೆಸ್ ಪಕ್ಷ 1970ರ ದಶಕದ ನಂತರ ಟಿಕೆಟ್ ವಿಚಾರದಲ್ಲಿ ರಡ್ಡಿ ಸಮುದಾಯಕ್ಕೆ ಮಣೆ ಹಾಕುತ್ತಲೇ ಬಂದಿದೆ.

    2004ರಲ್ಲಿ ರಾಜ್ಯದಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬಂದ ನಂತರ ಬಿಜೆಪಿಯಲ್ಲಿ ವೀರಶೈವ ಲಿಂಗಾಯತರು ಮುನ್ನೆಲೆಗೆ ಬಂದರು. ರೋಣ, ಗದಗ ಮತ್ತು ನರಗುಂದದಲ್ಲಿ ರಡ್ಡಿ ವರ್ಸಸ್ ಲಿಂಗಾಯತರು ರಾಜಕೀಯ ಮುಖ್ಯಭೂಮಿಕೆ ನಿಭಾಯಿಸುತ್ತಿರುವುದು ವಿಶೇಷ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts