More

    ಪಾಳು ಕೊಂಪೆಯಾದ ಶ್ರೀಕಂಠೇಶ್ವರ ಕಲಾ ಮಂದಿರ

    ನಂಜನಗೂಡು: ಕಲೆ ಮತ್ತು ನಾಟಕಗಳ ತವರೂರಾಗಿರುವ ನಂಜನಗೂಡಿನಲ್ಲಿ ಕಲಾಸಕ್ತರಿಗೆ ನೆರವಾಗಬೇಕೆಂಬ ನಿಟ್ಟಿನಲ್ಲಿ ಮೂರು ದಶಕಗಳ ಹಿಂದೆ ನಿರ್ಮಿಸಲಾದ ಶ್ರೀಕಂಠೇಶ್ವರ ಕಲಾಮಂದಿರ ಪ್ರಸ್ತುತ ಪಾಳು ಕೊಂಪೆಯಾಗಿ ಬಿದ್ದಿದೆ.

    ವಿಪರ್ಯಾಸವೆಂದರೆ, ಈ ಕಲಾಮಂದಿರ ಯಾವ ಇಲಾಖೆಯ ಸುಪರ್ದಿಯಲ್ಲಿದೆ, ನಿರ್ವಹಣೆಯ ಹೊಣೆ ಯಾರದು ಎಂಬುದೇ ಯಕ್ಷಪ್ರಶ್ನೆಯಾಗಿದೆ. ರಂಗಾಸಕ್ತರನ್ನು ಉತ್ತೇಜಿಸುವ ನಿಟ್ಟಿನಲ್ಲಿ 1990ರ ವೇಳೆಯಲ್ಲಿ ಮಾಜಿ ಸಚಿವ ಡಿ.ಟಿ.ಜಯಕುಮಾರ್ ಅವರ ಒತ್ತಾಸೆ ಮೇರೆಗೆ ದೇಣಿಗೆ ಸಂಗ್ರಹಿಸಿ, 1993ರಲ್ಲಿ ಕಲಾಮಂದಿರವನ್ನು ನಿರ್ಮಾಣ ಮಾಡಲಾಗಿತ್ತು. ತಮ್ಮ ಕಲೆಗೆ ನೆಲೆ ಕೊಟ್ಟ ಸ್ಮರಣಾರ್ಥವಾಗಿ ಡಾ.ರಾಜಕುಮಾರ್ ಅವರು ಕೂಡ ದೇಣಿಗೆಯನ್ನು ನೀಡಿದ್ದಲ್ಲದೆ, ಸ್ವತಃ ಅವರೇ ಖುದ್ದು ಕಲಾಮಂದಿರವನ್ನು ಉದ್ಘಾಟಿಸಿದ್ದರು. ಇನ್ನು ಡಿ.ಟಿ.ಜಯಕುಮಾರ್ ಅವರು ವ್ಯಾಪಾರಿಗಳು, ವರ್ತಕರಿಂದ ದೇಣಿಗೆ ಸಂಗ್ರಹಿಸಿ ನಿರ್ಮಿಸಿದ್ದ ಈ ಕಲಾಮಂದಿರ ದಶಕಗಳಿಂದ ಯಾವುದೇ ಕಾರ್ಯಚಟುವಟಿಕೆ ಹಾಗೂ ನಿರ್ವಹಣೆಯಿಲ್ಲದೆ ಸೊರಗಿದ್ದು, ರಂಗಾಸಕ್ತರಲ್ಲಿ ಬೇಸರ ಮೂಡಿದೆ.

    ಈ ಕಲಾಮಂದಿರ ಯಾರ ಸುಪರ್ದಿಯಲ್ಲಿದೆ ಎಂಬುದೂ ಯಕ್ಷಪ್ರಶ್ನೆಯಾಗಿದೆ. ನಗರಸಭೆಯೋ ಅಥವಾ ಕನ್ನಡ ಮತ್ತು ಸಂಸ್ಕತಿ ಇಲಾಖೆ ವ್ಯಾಪ್ತಿಗೆ ಬರಲಿದೆಯೋ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಆದರೆ, ಕಲಾಮಂದಿರವನ್ನು ಹಲವಾರು ವರ್ಷಗಳಿಂದ ಹಾಗೆಯೇ ಬಿಟ್ಟಿರುವುದರಿಂದ ಕುಸಿದು ಬೀಳುವ ಹಂತಕ್ಕೆ ತಲುಪಿದೆ. ಕಿಟಕಿ-ಬಾಗಿಲುಗಳು, ತಾರಸಿ ಎಲ್ಲವೂ ಶಿಥಿಲಗೊಂಡಿವೆ.

    ರಂಗಾಸಕ್ತರಲ್ಲಿ ಬೇಸರ: ವರನಟ ಡಾ.ರಾಜಕುಮಾರ್ ಅವರು ಸಿನಿಮಾ ಕ್ಷೇತ್ರಕ್ಕೆ ಬರುವ ಮುನ್ನ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಸಂದರ್ಭದಲ್ಲಿ ನಂಜನ ಗೂಡು ಅವರಿಗೆ ಆಶ್ರಯ ನೀಡಿತ್ತು. ಸ್ವರ್ಣಪದಕ ವಿಜೇತ ಖ್ಯಾತ ನಿರ್ದೇಶಕ ಜಿ.ವಿ.ಅಯ್ಯರ್ ಸೇರಿದಂತೆ ಹಲವಾರು ಕಲಾವಿದರನ್ನು ಕೊಡುಗೆಯಾಗಿ ಕೊಟ್ಟ ತವರೂರು ನಂಜನಗೂಡು. ಇನ್ನು ಡಾ.ಹಂಸಲೇಖ ಅವರು ಸಂಗೀತ ಕ್ಷೇತ್ರಕ್ಕೆ ಬರುವ ಮುನ್ನ ಅವರ ನಾಟಕಗಳಿಗೆ ನೆಲೆಯಾಗಿದ್ದು ನಂಜನಗೂಡು. ರಂಗಕರ್ಮಿ ನಾಗಪ್ಪ, ಎಚ್.ಎಲ್.ಎನ್.ಸಿಂಹ, ವೈವಿಎಸ್ ರಾವ್, ಭರತನಾಟ್ಯದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತರಾದ ಉಷಾ ವೇಣುಗೋಪಾಲ್, ಅಭಿರುಚಿ ಚಂದ್ರು… ಹೀಗೆ ಅನೇಕ ರಂಗ ಕಲಾವಿದರನ್ನು ಕೊಡುಗೆ ನೀಡಿದ್ದ ನಂಜನಗೂಡಿನಲ್ಲಿ ಶಾಶ್ವತವಾಗಿ ಕಲಾವಿದರನ್ನು ಪೋಷಿಸಲು ಹಾಗೂ ರಂಗ ಚಟುವಟಿಕೆಗಳು ನಡೆಯುವಂತಾಗಲಿ ಎಂಬ ಅಭಿಲಾಷೆಯೊಂದಿಗೆ ನಿರ್ಮಾಣಗೊಂಡ ಕಲಾಮಂದಿರಕ್ಕೆ ಪ್ರಸ್ತುತ ಯಾರೂ ದಿಕ್ಕಿಲ್ಲದಂತಾಗಿದೆ.

    ವಿಶಾಲ ಪ್ರದೇಶ: ನಾಟಕ ಪ್ರದರ್ಶನಕ್ಕೆ ಬೇಕಾದ ಅಗತ್ಯ ಗ್ಯಾಲರಿ ಹಾಗೂ ಕಲಾವಿದರು ಮೇಕಪ್ ಮಾಡಿಕೊಳ್ಳಲು ಕೊಠಡಿಗಳು ಇಲ್ಲಿದ್ದು, ಇದೀಗ ಭೂತಬಂಗಲೆಯಂತಾಗಿದೆ. ಸರಿಯಾದ ನಿರ್ವಹಣೆ ಇಲ್ಲದಿರುವುದೇ ಇದಕ್ಕೆ ಕಾರಣ. ಇನ್ನು ಕಲಾಮಂದಿರದ ಮುಂದೆ 500ಕ್ಕೂ ಹೆಚ್ಚು ಜನರು ಕುಳಿತು ವೀಕ್ಷಿಸಬಹುದಾದ ವಿಶಾಲವಾದ ಜಾಗವಿದ್ದು, ಇದೀಗ ಆ ಜಾಗ ಖಾಸಗಿಯವರ ವಾಹನ ನಿಲುಗಡೆಗೆ ಬಳಕೆಯಾಗುತ್ತಿದೆ.

    ಸಂಸ್ಕೃತಿ ಇಲಾಖೆ ಗಮನಹರಿಸಲಿ: ರಂಗ ಚಟುವಟಿಕೆಗಳಿಗೆ ಹೇಳಿ ಮಾಡಿಸಿದ ಸ್ಥಳ ಇದಾಗಿದೆ. ಹಾಗಾಗಿ, ಕಲಾ ಮಂದಿರದ ಉಸ್ತುವಾರಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಹಿಸಿಕೊಳ್ಳಲಿ ಎಂಬುದು ರಂಗಾಸಕ್ತರ ಒತ್ತಾಯ. ತಾಲೂಕು ಕೇಂದ್ರದಲ್ಲಿ ಈ ರೀತಿಯ ವಿಶಾಲವಾದ ಜಾಗ ಸಿಗುವುದು ವಿರಳ. ಕಲೆ, ನಾಟಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮೀಸಲಾಗಿರುವ ಈ ಕಲಾಮಂದಿರವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿ, ಅದಕ್ಕೆ ಮರುಜೀವ ನೀಡುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕ್ರಮವಹಿಸಲಿ ಎಂಬ ಕೂಗು ಕೇಳಿಬರುತ್ತಿದೆ.

    ಗ್ರಂಥಾಲಯಕ್ಕೆ ಬಳಕೆ: 1993ರಲ್ಲಿ ಉದ್ಘಾಟನೆಗೊಂಡ ಬಳಿಕ ಆರಂಭಿಕ ವರ್ಷಗಳಲ್ಲಿ ಒಂದಷ್ಟು ರಂಗಚಟುವಟಿಕೆಗಳು ನಡೆದವು. ಆನಂತರದ ವರ್ಷಗಳಲ್ಲಿ ರೋಟರಿ ಶಾಲೆ, ಲಯನ್ಸ್ ಶಾಲೆ, ನೀಲಕಂಠೇಶ್ವರ ಶಾಲೆ ಸೇರಿದಂತೆ ಹಲವು ಶಾಲೆಗಳು ವಾರ್ಷಿಕೋತ್ಸವ ಆಚರಿಸಲು ಬಳಸಿಕೊಳ್ಳುತ್ತಿದ್ದವು. ತಾಲೂಕು ಗ್ರಂಥಾಲಯದವರು ಸ್ವಂತ ಕಟ್ಟಡ ಆಗುವವರೆಗೂ ಹಲವು ವರ್ಷಗಳ ಕಾಲ ಕಲಾಮಂದಿರವನ್ನು ಬಳಕೆ ಮಾಡಿಕೊಂಡರು. ನಾಲ್ಕೈದು ವರ್ಷಗಳಿಂದ ಗ್ರಂಥಾಲದವರೂ ಖಾಲಿ ಮಾಡಿದ್ದು ಇದೀಗ ಕಲಾಮಂದಿರ ಅಕ್ಷರಶಃ ಪಾಳು ಮನೆಯಂತಾಗಿದೆ.

    ನಂಜನಗೂಡಿನಲ್ಲಿ ಸಾಕಷ್ಟು ಜನ ರಂಗಕಲಾವಿದರಿದ್ದಾರೆ. ಹಾಗೆಯೇ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಹಲವಾರು ಸಂಘ ಸಂಸ್ಥೆಗಳಿವೆ. ಆದರೆ, ಶ್ರೀಕಂಠೇಶ್ವರ ಕಲಾಮಂದಿರ ಸೂಕ್ತ ನಿರ್ವಹಣೆಯಿಲ್ಲದೆ, ಅಲ್ಲಿ ಯಾರೂ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಉದ್ದೇಶಿತ ಯೋಜನೆ ಸಾಕಾರಗೊಂಡಂತೆ ಆಗಿಲ್ಲ. ಮುಂದಿನ ಪೀಳಿಗೆಗೆ ಕಲೆ, ನಾಟಕ ಅಭಿರುಚಿ ಹೆಚ್ಚಿಸುವ ನಿಟ್ಟಿನಲ್ಲಿ ಕಲಾಮಂದಿರಕ್ಕೆ ಮರುಜೀವ ಕೊಡುವ ಅಗತ್ಯವಿದೆ. ಈ ಸಂಬಂಧ ಯಾವ ಇಲಾಖೆಯವರನ್ನು ಪ್ರಶ್ನಿಸಬೇಕೆಂಬುದೇ ತಿಳಿಯುತ್ತಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಚ್ಛಾಶಕ್ತಿ ತೋರಿ ಇದರ ನಿರ್ವಹಣೆಯ ಹೊಣೆ ಹೊತ್ತು, ಮರುಸ್ಪರ್ಶ ನೀಡುವಂತಾಗಲಿ ಎಂಬುದು ರಂಗಾಸಕ್ತರ ಒತ್ತಾಯವಾಗಿದೆ.
    ಎಂ.ಎಸ್.ಸತ್ಯನಾರಾಯಣ, ರಂಗ ಕಲಾವಿದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts