More

    ಹಣ್ಣುಗಳ ರಾಜನಿಗೆ ಇಬ್ಬನಿ ಕಾಟ

    ಲಕ್ಷೆ್ಮೕಶ್ವರ: ಕಳೆದ ನಾಲ್ಕೈದು ದಿನಗಳಿಂದ ಬೆಳಗ್ಗೆ ತಾಲೂಕಿನಾದ್ಯಂತ ದಟ್ಟವಾದ ಇಬ್ಬನಿ, ಮಂಜು ಆವರಿಸುತ್ತಿರುವುದರಿಂದ ಮಾವಿನ ಹೀಚು, ಸಣ್ಣ ಕಾಯಿಗಳು ಉದುರಿಬೀಳುತ್ತಿವೆ. ಹೀಗಾಗಿ ಈ ವರ್ಷ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಬೆಳೆಗಾರರು ಕಂಗಾಲಾಗಿದ್ದಾರೆ.

    ಅತಿವೃಷ್ಟಿ, ಬರಗಾಲದಿಂದ ಖುಷ್ಕಿ ಜಮೀನಿನಲ್ಲಿ ನಷ್ಟ ಅನುಭವಿಸಿ ತೋಟಗಾರಿಕೆ ಬೆಳೆಯತ್ತ ಚಿತ್ತ ಹರಿಸಿರುವ ರೈತ ಸಮುದಾಯಕ್ಕೆ ಅಕಾಲಿಕ ಮಳೆ, ಹವಾಮಾನ ವೈಪರೀತ್ಯ, ರೋಗಬಾಧೆ ಇತರೆ ಕಾರಣಗಳಿಂದ ಇಲ್ಲಿಯೂ ಕೈ ಸುಟ್ಟುಕೊಳ್ಳುವಂತಾಗಿದೆ.

    ತೋಟಗಾರಿಕೆ ಇಲಾಖೆಯ ಮಾಹಿತಿ ಪ್ರಕಾರ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರು, ದೊಡ್ಡೂರು, ಉಂಡೇನಹಳ್ಳಿ, ಶ್ಯಾಬಳಾ, ಶಿಗ್ಲಿ, ಕುಂದ್ರಳ್ಳಿ, ರಾಮಗೇರಿ, ಸೂರಣಗಿ ಸೇರಿದಂತೆ ಒಟ್ಟು 350 ಎಕರೆ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ತಾಲೂಕಿನ ಈ ಯಾವ ಭಾಗದಲ್ಲಿಯೂ ನದಿ, ಕೆರೆ, ಕಾಲುವೆ ಇತರೆ ನೀರಾವರಿ ಮೂಲ ಇಲ್ಲದಿದ್ದರೂ ಬೋರ್​ವೆಲ್ ನೀರನ್ನೇ ನೆಚ್ಚಿ ಬೆಳೆ ಬೆಳೆಯುವಂತಾಗಿದೆ. ಮಾವು, ಚಿಕ್ಕು, ಪೇರಲ, ತೆಂಗು, ನಿಂಬೆ, ಹೂವು, ಕರಿಬೇವು ಸೇರಿದಂತೆ ಇತರ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇತ್ತೀಚಿನ ನಾಲ್ಕಾರು ವರ್ಷಗಳಲ್ಲಿ ಮಳೆಯ ಪ್ರಮಾಣ ಅತ್ಯಂತ ಕಡಿಮೆಯಾಗಿ ಅಂತರ್ಜಲಮಟ್ಟ ಪಾತಾಳ ಕಂಡಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿ ಯಲ್ಲಿಯೂ ರೈತರು ಹರಸಾಹಸಪಟ್ಟು ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಂಡಿದ್ದಾರೆ. ಈ ವರ್ಷ ಉತ್ತಮ ಮಳೆ, ಅಂತರ್ಜಲ ಮಟ್ಟ ಹೆಚ್ಚಳ, ಚಳಿಗಾಲದ ಪೂರಕ ವಾತಾವರಣ ದಿಂದ ಮಾವಿನ ಮರದಲ್ಲಿ ಹೂವು, ಹೀಚು ತುಂಬಿದ್ದನ್ನು ಕಂಡು ರೈತರು ದಿಲ್​ಖುಷ್ ಆಗಿದ್ದರು. ಆದರೆ, ಡಿಸೆಂಬರ್​ನಲ್ಲಿ ಹೂವಿನಿಂದ ಕೂಡಿದ್ದ ಗಿಡಗಳು ಅಕಾಲಿಕ ಮಳೆಯಿಂದಾಗಿ ಅಪಾರ ಹಾನಿಯುಂಟು ಮಾಡಿತು. ಮಾವು ಅಷ್ಟೇ ಅಲ್ಲದೆ, ಉಳ್ಳಾಗಡ್ಡಿ ಬೀಜದ ಬೆಳೆಗೂ ಮಾರಕ ಪರಿಣಾಮ ಬೀರುತ್ತಿದೆ.

    ಮರದ ತುಂಬೆಲ್ಲ ಕಣ್ಮನ ಸೆಳೆಯುವಂತೆ ತುಂಬಿಕೊಂಡಿದ್ದ ಹೂವುಗಳು ಕಾಡಿಗೆ, ಬೂದು ರೋಗಕ್ಕೆ ತುತ್ತಾಗಿ ಕಮರಿವೆ. ಈ ವೇಳೆ ಸಾವಿರಾರು ರೂಪಾಯಿ ಖರ್ಚು ಮಾಡಿ ಔಷಧೋಪಚಾರ ಮಾಡಿದ ರೈತರು ಒಂದಷ್ಟು ಬೆಳೆ ಉಳಿಸಿಕೊಂಡಿದ್ದರು. ಇದೀಗ ಮತ್ತೆ ಇಬ್ಬನಿಯಿಂದಾಗಿ ಗಿಡದಲ್ಲಿನ ಮಾವಿನ ಸಣ್ಣ ಕಾಯಿಗಳು, ಹೀಚು ನೆಲಕಚ್ಚುತ್ತಿವೆ. ಇದು ಹೀಗೆಯೇ ಮುಂದುವರಿದರೆ ಫಸಲು ಕಡಿಮೆಯಾಗಿ ಹಣ್ಣುಗಳು ಕೈಗೆಟಕುವುದು ಕಷ್ಟಸಾಧ್ಯವಾಗಬಹುದು.

    ಮಳೆ ಕೊರತೆಯ ನಡುವೆಯೂ 4 ಎಕರೆ ಜಮೀನಿನಲ್ಲಿ ಬೆಳೆದಿದ್ದ ಮಾವಿನ ಗಿಡಗಳನ್ನು ಕಾಪಾಡಿದ್ದೇವೆ. ಅಕಾಲಿಕ ಮಳೆಗೆ ಹೂವು ಉದುರಿತು. ಇದೀಗ ಒಂದು ವಾರದಿಂದ ಬೀಳುತ್ತಿರುವ ಇಬ್ಬನಿಯಿಂದಾಗಿ ಅಳಿದುಳಿದ ಮಾವಿನ ಸಣ್ಣ ಕಾಯಿ, ಹೀಚು ಉದುರಿಬೀಳುತ್ತಿವೆ. ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ವರ್ಷಪೂರ್ತಿ ಸಾವಿರಾರು ರೂಪಾಯಿ ಖರ್ಚು ಮಾಡಿ ಬಂಪರ್ ಫಸಲು ಹಾಗೂ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದೆವು. ಆದರೆ, ಅದೆಲ್ಲವೂ ಹುಸಿಯಾಗಿದೆ. ಸರ್ಕಾರ ಅಕಾಲಿಕ ಮಳೆ ಮತ್ತು ಹವಾಮಾನ ವೈಪರೀತ್ಯದಿಂದ ಹಾನಿಗೀಡಾಗಿರುವ ಮಾವು ಸೇರಿ ಇತರೆ ಬೆಳೆಗಾರರಿಗೆ ಸಹಾಯಧನ ನೀಡಬೇಕು.

    | ನಿಂಗಪ್ಪ ಪೂಜಾರ, ಸುರೇಶ ಕುರ್ಡೆಕರ

    ಮಾವು ಬೆಳೆಗಾರರು, ಲಕ್ಷ್ಮೇಶ್ವರ

    ಮಾವಿನಗಿಡಗಳಲ್ಲಿರುವ ಸಣ್ಣ ಕಾಯಿ, ಹೀಚು ಒಣಗಿ ಉದುರುತ್ತಿರುವುದನ್ನು ತಡೆಗಟ್ಟಲು ಪ್ರತಿ 10 ಲೀಟರ್ ನೀರಿಗೆ 50 ಗ್ರಾಂ ಮ್ಯಾಂಗೋ ಸ್ಪೆಷಲ್, 10 ಗ್ರಾಂ ಕಾರ್ಬನ್ ಡೈಜಿಮ್ 30 ಎಂಎಲ್ ಬೇವಿನ ಎಣ್ಣೆ, ಬೆರೆಸಿ 7 ದಿನಗಳೊಗೊಮ್ಮೆ ಎರಡು ಸಲ ಸಿಂಪಡಿಸಬೇಕು. ಇದರಿಂದ ಹೀಚು ಉದುರುವುದು ನಿಯಂತ್ರಣವಾಗಿ ಉತ್ತಮ ಫಸಲು ಸಾಧ್ಯವಾಗುತ್ತದೆ. ಬಿಸಿಲು ಹೆಚ್ಚಿರುವುದರಿಂದ ನೀರು ಹಾಯಿಸಬೇಕು.

    | ಸುರೇಶ ಕುಂಬಾರ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts