More

    ದೆಹಲಿಯ ರಾಜೀವ್​ ಚೌಕ್​ ಮೆಟ್ರೋ ಸ್ಟೇಷನ್​ನಲ್ಲಿ ಗೋಲಿ ಮಾರ್​ ಘೋಷಣೆ: ಆರು ಯುವಕರ ಬಂಧನ

    ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಸಿಎಎ, ಎನ್​ಆರ್​ಸಿ ಪರ ವಿರೋಧದ ಹೋರಾಟ ಹಿಂಸಾತ್ಮಕ ರೂಪ ಪಡೆದುಕೊಂಡು ಇದೀಗ ಕೊಂಚ ಸುಧಾರಿಸಿದೆ. ಇದರ ಬೆನ್ನಲ್ಲೇ ರಾಷ್ಟ್ರ ರಾಜಧಾನಿಯ ರಾಜೀವ್​ ಚೌಕ್​ ಮೆಟ್ರೋ ನಿಲ್ದಾಣದಲ್ಲಿ ಗೋಲಿ ಮಾರೋ ಘೋಷಣೆ ಕೇಳಿಬಂದಿದ್ದು, ಘೋಷಣೆ ಕೂಗಿದ ಆರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

    ಇಂದು ಬೆಳಗ್ಗೆ ಕೇಸರಿ ಜುಬ್ಬ ಮತ್ತು ಟೀ ಶರ್ಟ್​ಗಳನ್ನು ತೊಟ್ಟ ಆರು ಯುವಕರ ಗುಂಪೊಂದು ರಾಜೀವ್​ ಚೌಕ್​ ಮೆಟ್ರೋ ನಿಲ್ದಾಣದಲ್ಲಿ “ಗೋಲಿ ಮಾರೋ” ಎಂದು ಘೋಷಣೆ ಕೂಗಿದೆ. ರೈಲಿನಿಂದ ಇಳಿಯುವಾಗ ಘೋಷಣೆ ಕೂಗಲು ಆರಂಭಿಸಿದ ಅವರು, ಮೆಟ್ರೋ ನಿಲ್ದಾಣದಲ್ಲಿ ಈ ದೇಶದ ಯುವಕರು ಸಿಎಎಗೆ ಬೆಂಬಲ ನೀಡಲಿದ್ದೇವೆ ಎನ್ನುವ ಅರ್ಥ ನೀಡುವ ಘೋಷಣೆಗಳನ್ನು ಕೂಗಿದ್ದಾರೆ. ಈ ರೀತಿಯ ಘೋಷಣೆ ಕೂಗುತ್ತಿರುವುದನ್ನು ಸಹ ಪ್ರಯಾಣಿಕರು ವಿಡಿಯೋ ಮಾಡಿದ್ದು ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಯುವಕರು ಘೋಷಣೆ ಕೂಗುತ್ತಿರುವ ಮಾಹಿತಿ ಲಭಿಸಿದ ತಕ್ಷಣ ಅವರ ಬಳಿ ಬಂದ ಸಿಐಎಸ್​ಎಫ್​ ಪೊಲೀಸರು ಯುವಕರನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸುವ ಸಲುವಾಗಿ ಯುವಕರನ್ನು ದೆಹಲಿ ಮೆಟ್ರೋ ಪೊಲೀಸ್​ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

    ಗೋಲಿ ಮಾರ್​ ಘೋಷಣೆಯನ್ನು ಪರಿಚಯಿಸಿದ್ದು ಬಿಜೆಪಿಯ ಸಚಿವ ಅನುರಾಗ್​ ಠಾಕೂರ್​. ದೆಹಲಿ ವಿಧಾನ ಸಭಾ ಚುನಾವಣೆಯ ಪ್ರಚಾರ ಸಭೆಯೊಂದರಲ್ಲಿ ಭಾಗವಹಿಸಿದ್ದ ಅವರು ಗೋಲಿಮಾರ್​ ಘೋಷಣೆಯನ್ನು ಕೂಗಿ, ಜನರ ಬಾಯಿಂದಲೂ ಆ ಘೋಷಣೆಯನ್ನು ಕೂಗಿಸಿದ್ದರು.

    ದೆಹಲಿ ಮೆಟ್ರೋ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ 2002ರ ಪ್ರಕಾರ, ದೆಹಲಿ ಮೆಟ್ರೋ ನಿಲ್ದಾಣದಲ್ಲಿ ಯಾವುದೇ ರೀತಿಯ ಪ್ರದರ್ಶನ ಅಥವಾ ಉಪದ್ರವವನ್ನು ನಿಷೇಧಿಸಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts