More

    ನರಗುಂದದಲ್ಲಿ ಮತ್ತೆ ಮಾರ್ಧನಿಸುತ್ತಿದೆ ಬಂಡಾಯದ ಕೂಗು

    ನರಗುಂದ: ಬಂಡಾಯ ನಡೆದು 43 ವರ್ಷಗಳೇ ಕಳೆದಿವೆ. ಆದರೆ, ಈ ಭಾಗದ ರೈತರ ಜ್ವಲಂತ ಸಮಸ್ಯೆಗಳನ್ನು ಸರ್ಕಾರ ಇಂದಿಗೂ ಈಡೇರಿಸುತ್ತಿಲ್ಲ. ಅವರ ಬಾಳು ಹಸನಾಗುತ್ತಿಲ್ಲ.

    ಮತ್ತೆ ಬಂಡಾಯ ನಡೆಸಬೇಕೆಂಬ ಕೂಗು ಪ್ರತಿವರ್ಷವೂ ಮಾರ್ಧನಿಸುತ್ತಿದೆ. ಆದರೆ, ಅಸಹಾಯಕ ಸ್ಥಿತಿಯಲ್ಲಿರುವ ರೈತರು ಸಂಘಟನಾತ್ಮಕ ಬಲವಿಲ್ಲದೇ ಜು. 21ರಂದು ನರಗುಂದ ಪಟ್ಟಣ ಹಾಗೂ ತಾಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ರೈತ ಹುತಾತ್ಮ ದಿನ ಆಚರಿಸುವಂತಾಗಿದೆ.


    ಏನಿದು ರೈತ ಬಂಡಾಯ

    1979 ರಲ್ಲಿ ಬರಗಾಲ ಬಿದ್ದಾಗ ಕಾಲುವೆಗಳಿಂದ ರೈತರ ಹೊಲಗಳಿಗೆ ನೀರು ಬರುವುದು ಸಂಪೂರ್ಣ ನಿಂತು ಹೋಯಿತು. ಈ ವೇಳೆ ಬೆಳೆಯುತ್ತಿದ್ದ ಹತ್ತಿ, ಗೋವಿನಜೋಳದ ಬೆಲೆಯೂ ಇಳಿಕೆ ಆಗಿದ್ದರಿಂದ ರೈತರು ಸಂಪೂರ್ಣ ಕಂಗಾಲಾಗಿ ಹೋಗಿದ್ದರು. ಬ್ಯಾಂಕ್​ಗಳಲ್ಲಿ ಮಾಡಿರುವ ಸಾಲ ತೀರಿಸಲಾಗದೆ ದಿವಾಳಿಯಾಗುವ ಪರಿಸ್ಥಿತಿಗೆ ಬಂದು ನಿಂತಿದ್ದರು. ವಾಡಿಕೆಯಂತೆ ಮುಂದಿನ ಬೆಳೆಯನ್ನಾದರೂ ತೆಗೆಯೋಣವೆಂದರೆ ಬೀಜ, ಗೊಬ್ಬರಕ್ಕೂ ಹಣವಿಲ್ಲದಂತಹ ಪರಿಸ್ಥಿತಿ ರೈತರದ್ದಾಗಿತ್ತು.


    ರೈತರು ಇಷ್ಟೊಂದು ಕಷ್ಟದ ಪರಿಸ್ಥಿತಿಯಲ್ಲಿದ್ದರೂ ಅಂದಿನ ಆರ್.ಆರ್. ಗೂಂಡೂರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಾರದ ನೀರಿಗೆ ನೀರಿನ ಕರ (ಬೆಟರ್​ವೆುಂಟ್ ಲೇವಿ) ಕಾಯ್ದೆ ಜಾರಿಗೆ ತಂದಿತ್ತು. ಇದರಿಂದ ಆಕ್ರೋಶಗೊಂಡ ನರಗುಂದ, ನವಲಗುಂದ, ಸವದತ್ತಿ ಭಾಗದ ರೈತರು ಹೋರಾಟಕ್ಕೆ ತಯಾರಾಗಿದ್ದರು. ಹೋರಾಟದ ನೇತೃತ್ವವನ್ನು ಮಲಪ್ರಭಾ ರೈತ ಹೋರಾಟ ಸಮನ್ವಯ ಸಮಿತಿ ವಹಿಸಿಕೊಂಡಿತ್ತು. ನೀರಿನ ಬೆಟರ್​ವೆುಂಟ್ ಲೇವಿ ರದ್ದುಪಡಿಸಬೇಕು. ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳೊಂದಿಗೆ ರೈತರು ಹೋರಾಟ ಪ್ರಾರಂಭಿಸಿದ್ದರು.


    ದಿನಗಳು ಕಳೆದಂತೆ ಹೋರಾಟ ತೀವ್ರವಾಯಿತು. ಸುಮಾರು ಆರು ತಿಂಗಳು ನಡೆದ ಅಂದಿನ ಹೋರಾಟಕ್ಕೆ ಸರ್ಕಾರ ಕಿಂಚಿತ್ತೂ ಕಿವಿಗೊಡಲಿಲ್ಲ. ಯಾವ ಪ್ರತಿಭಟನೆಗೂ ಸರ್ಕಾರ ಜಗ್ಗದೆ ಇದ್ದಾಗ 1980 ಜುಲೈ 21ರಂದು ನರಗುಂದ, ನವಲಗುಂದ ಹಾಗೂ ಸವದತ್ತಿ ತಾಲೂಕುಗಳಲ್ಲಿ ಬಂದ್ ಗೆ ಕರೆ ನೀಡಲಾಯಿತು.

    ಸುತ್ತಮುತ್ತಲಿನ ಹಳ್ಳಿಗಳ ಜನರು ಹೋರಾಟದ ಕೇಂದ್ರಗಳಿಗೆ ಬಂದಿದ್ದರು. ರೈತರು ಪ್ರತಿಭಟನೆ ಮೂಲಕ ಬ್ಯಾಂಕ್, ಅಂಚೆ ಕಚೇರಿ ಬಂದ್ ಮಾಡಿಸುತ್ತಾ ಬರುತ್ತಿದ್ದರು. ಕೆಲ ರೈತರು ತಹಸೀಲ್ದಾರ್ ಕಚೇರಿಗೆ ಅಡ್ಡಲಾಗಿ ಮಲಗಿದ್ದರೂ ಅವರನ್ನು ದಾಟಿಕೊಂಡು ಕಚೇರಿಗೆ ಪ್ರವೇಶ ಮಾಡಿದ್ದ ಅಂದಿನ ತಹಸೀಲ್ದಾರ ಎಫ್.ಎಸ್. ವರೂರ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

    ಮಾತಿಗೆ ಮಾತು ಬೆಳೆದು ಪ್ರಕ್ಷುಬ್ಧ ಪರಿಸ್ಥಿತಿ ಉಂಟಾದಾಗ ಅಂದಿನ ಪಿಎಸ್​ಐ ಸಿಕಂದರ್ ಪಟೇಲ್ ಎಂಬುವರು ಹಾರಿಸಿದ ಗುಂಡೇಟಿಗೆ ಚಿಕ್ಕನರಗುಂದದ ರೈತ ವೀರಪ್ಪ ಕಡ್ಲಿಕೊಪ್ಪ ಸ್ಥಳದಲ್ಲಿಯೇ ಮೃತಪಟ್ಟರು. ನವಲಗುಂದ ತಾಲೂಕಿನಲ್ಲಿ ಅಳಗವಾಡಿಯ ಬಸಪ್ಪ ಲಕ್ಕುಂಡಿ ಹುತಾತ್ಮರಾದರು. ಇದರಿಂದ ಆಕ್ರೋಶಗೊಂಡ ರೈತರು ಮೇಳಿ (ಕೃಷಿ ಪರಿಕರಗಳಿಂದ) ಸಿಕ್ಕಸಿಕ್ಕವರನ್ನು ಥಳಿಸಿದರು. ಪಿಎಸ್​ಐ ಸಿಕಂದರ್ ಪಟೇಲ್ ಸೇರಿ ಅನೇಕ ಪೊಲೀಸ್ ಪೇದೆಗಳು ಸಾವನ್ನಪ್ಪಿದರು.

    ಕೆಲ ಅಧಿಕಾರಿಗಳು ಹೋರಾಟ ಸ್ಥಳದಿಂದ ಪಲಾಯನಗೈದರು. ರೈತರ ಮೇಳಿ ಹೊಡೆತಕ್ಕೆ ಅಂದಿನ ತಹಸೀಲ್ದಾರ ಫಕೀರಪ್ಪ ವರೂರ ಅವರ ಕಿವಿ ತುಂಡಾಗಿ ರಕ್ತಸಿಕ್ತವಾಗಿ ನೇತಾಡ ತೊಡಗಿತ್ತು. ಗೋಲಿಬಾರ್​ನಲ್ಲಿ ಬಹುತೇಕ ರೈತರು ಗಾಯಗೊಂಡಿದ್ದರು. ಹೋರಾಟದಲ್ಲಿ ಪಾಲ್ಗೊಂಡಿದ್ದ ನೂರಾರು ರೈತರನ್ನು ಬಂಧಿಸಲಾಯಿತು.

    ಇದರ ಸ್ಮರಣಾರ್ಥವಾಗಿ ಪ್ರತಿವರ್ಷ ಜು. 21ರಂದು ನರಗುಂದದಲ್ಲಿ ರೈತ ಹುತಾತ್ಮ ದಿನ ಆಚರಿಸಲಾಗುತ್ತದೆ. ಆದರೆ, ರೈತರ ಸಮಸ್ಯೆಗಳು ಮಾತ್ರ ಕ್ಷುಲ್ಲಕ ರಾಜಕಾರಣದಿಂದ ಇನ್ನೂ ಬಗೆಹರಿಯುವ ಲಕ್ಷಣಗಳು ಗೋಜರಿಸುತ್ತಿಲ್ಲ.


    ಇಲ್ಲಿ ನಡೆದ ಹೋರಾಟದಿಂದ ರಾಜ್ಯಾದ್ಯಂತ ರೈತ ಸಂಘಟನೆಗಳ ಸ್ಥಾಪನೆಗೆ ಪ್ರೇರಣೆಯಾಯಿತು. ಆದರೀಗ ಈ ಭಾಗದಲ್ಲಿ ನಡೆಯುತ್ತಿರುವ ಮಹದಾಯಿ, ಕಳಸಾ- ಬಂಡೂರಿ ಕಿಚ್ಚು ರಾಷ್ಟ್ರ ರಾಜಧಾನಿಯವರೆಗೆ ಹಬ್ಬಿದರೂ ಯಾವುದೇ ಪ್ರಯೋಜನವಾಗಿಲ್ಲ. ನೀರಿಗಾಗಿ ಅಂದು ನಡೆದ ಹೋರಾಟ ಇಂದಿಗೂ ನಡೆಯುತ್ತಿದೆ. ಇದೇ ಜು. 16ಕ್ಕೆ ನಿರಂತರ 7 ವರ್ಷ ಪೂರೈಸಿ 8ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಆದರೆ, ಈವರೆಗೆ ಒಂದು ಹನಿ ನೀರು ಕೂಡ ಮಲಪ್ರಭೆಗೆ ಹರಿದು ಬಂದಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts