More

    ರಾಮರಾಜ್ಯ ಸ್ಥಾಪನೆಯೇ ಕಾಂಗ್ರೆಸ್ ಕನಸು

    ಬಾಗಲಕೋಟೆ: ರಾಮರಾಜ್ಯ ಸ್ಥಾಪನೆಯೇ ಕಾಂಗ್ರೆಸ್ ಪಕ್ಷದ ಪ್ರಮುಖ ಗುರಿಯಾಗಿದೆ. ತುಳಿತಕ್ಕೆ ಒಳಗಾದವರನ್ನು ಮೇಲೆತ್ತುವುದು, ಸಾಮರಸ್ಯ ಸ್ಥಾಪಿಸುವುದೇ ರಾಮರಾಜ್ಯದ ಕಲ್ಪನೆ. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ತುಳಿತಕ್ಕೆ ಸಿಲುಕಿದ ಜನರನ್ನು ಮೇಲೆತ್ತುವ ಕೆಲಸ ಮಾಡುತ್ತಿದೆ ಎಂದು ಬಾಗಲಕೋಟೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಹೇಳಿದ್ದಾರೆ.

    ಬಾಗಲಕೋಟೆ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಾಗಲಕೋಟೆ ಕ್ಷೇತ್ರದಲ್ಲಿ 20 ವರ್ಷ ಗೆದ್ದಿರುವ ಪಿ.ಸಿ.ಗದ್ದಿಗೌಡರ ಅವರನ್ನು ಎದುರಿಸುವುದು ಎಂದರೆ ಇಷ್ಟು ದೀರ್ಘ ಅವಧಿಯಲ್ಲಿ ಕ್ಷೇತ್ರದಲ್ಲಿ ಅವರು ಏನೆಲ್ಲ ಕೆಲಸ ಮಾಡಿದ್ದಾರೆ ಎಂದು ಹೇಳಲಿ ಎಂದರು.

    ಮೂಲ ಉದ್ದೇಶ ಇಷ್ಟೆ, ನಮ್ಮಿಂದ ಜನರಿಗೆ ಸೇವೆ ಆಗಬೇಕು. ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ, ರೈಲು ಯೋಜನೆಗಳನ್ನು ತರುವುದು, ನಮಗೆ ಮತ ನೀಡುವ ಮತದಾರರ ಆಶಾಭಾವನೆಗಳು ಏನಿವೆ? ಆ ಬಗ್ಗೆ ಕೇಂದ್ರದಲ್ಲಿ ಧ್ವನಿ ಎತ್ತಿ ಜನರ ಬೇಡಿಕೆ ಈಡೇರಿಸುವುದು ಜನಪ್ರತಿನಿಧಿ ಆದವರ ಕೆಲಸ. ಆ ಜವಾಬ್ದಾರಿಯನ್ನು ನಾನು ನಿರ್ವಹಿಸಬಲ್ಲೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದರು.

    ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದ ವೀಣಾ ಕಾಶಪ್ಪನವರ ಖಂಡಿತವಾಗಿಯೂ ನಮ್ಮ ಜತೆ ಬರುತ್ತಾರೆ. ನಮಗೆ ಬಲ ತುಂಬುತ್ತಾರೆ ಎನ್ನುವ ಸಂಪೂರ್ಣ ವಿಶ್ವಾಸ ನನಗಿದೆ. ಕಳೆದ ಸಲ ಅವರು ಚುನಾವಣೆಗೆ ನಿಂತಾಗ ಪಕ್ಷದ ಕಾರ್ಯಕರ್ತರು, ಮುಖಂಡರು, ನಾವೆಲ್ಲ ಅವರ ಪರವಾಗಿ ಕೆಲಸ ಮಾಡಿದ್ದೇವೆ. ಈಗ ಅವರು ಸಹ ನಮ್ಮ ಜೊತೆ ಇದ್ದೇ ಇರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಉಳಿದಂತೆ ಜಿಲ್ಲೆಯ ಎಲ್ಲ ಶಾಸಕರು, ಮಾಜಿ ಶಾಸಕರು, ಮುಖಂಡರು, ಕಾರ್ಯಕರ್ತರು ಸಂಪೂರ್ಣವಾಗಿ ನನಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಬಿಚ್ಚು ಮನಸ್ಸಿನಿಂದ ಚುನಾವಣೆ ಗೆಲ್ಲಲು ರಣತಂತ್ರಗಳನ್ನು ರೂಪಿಸುತ್ತಿದ್ದಾರೆ. ಕಾರ್ಯಕರ್ತರು ಉತ್ಸಾಹದಲ್ಲಿ ಇದ್ದಾರೆ. ಈ ಸಲ ಬಾಗಲಕೋಟೆಯಲ್ಲಿ ಪಕ್ಷದ ಗೆಲುವು ನಿಶ್ಚಿತ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts