More

    ಕಾಂಕ್ರೀಟ್ ರಸ್ತೆ ಮತ್ತಷ್ಟು ಬಿರುಕು, ಅವಘಡಕ್ಕೆ ಮುನ್ನ ಬೇಕಿದೆ ದುರಸ್ತಿ

    ಭರತ್ ಶೆಟ್ಟಿಗಾರ್ ಮಂಗಳೂರು

    ನಗರದಲ್ಲಿ ಒಂದೆಡೆ ಹೊಸದಾಗಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗುತ್ತಿದ್ದರೆ, ಇನ್ನೊಂದೆಡೆ ಹಳೇ ರಸ್ತೆಗಳು ಬಿರುಕು ಬಿಟ್ಟು, ಕಾಂಕ್ರೀಟ್ ಸವೆದು ಹೋಗಿ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.

    ರಸ್ತೆಯ ಕಾಂಕ್ರೀಟ್ ಸ್ಲಾೃಬ್ ನಡುವಿನ ಬಿರುಕು ನಿಧಾನವಾಗಿ ಹೆಚ್ಚುತ್ತಿರುವುದು ಗಮನಿಸಬಹುದು. ಇವು ದ್ವಿಚಕ್ರ ವಾಹನ ಸವಾರರಿಗೆ ಅಪಾಯಕಾರಿಯಾಗಿವೆ. ಇನ್ನು ಚತುಷ್ಪಥ ರಸ್ತೆಗಳಲ್ಲಿ ಒಂದು ಭಾಗದಲ್ಲಿ ಎರಡು ಸ್ಲಾೃಬ್ ರೀತಿಯಲ್ಲಿ ಕಾಂಕ್ರೀಟನ್ನು ಮಧ್ಯದಲ್ಲಿ ಕತ್ತರಿಸಲಾಗಿದೆ. ಹೊಸ ರಸ್ತೆಗಳಲ್ಲಿ ಇವುಗಳು ಒಂದಕ್ಕೊಂದು ಅಂಟಿಕೊಂಡಿವೆ. ಕೆಲವೆಡೆ ಡಾಂಬರಿನಲ್ಲಿ ಎರಡು ಭಾಗವನ್ನು ಅಂಟಿಸಲಾಗಿದೆ. ಆದರೆ ಹಳೇ ರಸ್ತೆಗಳಲ್ಲಿ ನಡುವಿನ ಬಿರುಕು ಹೆಚ್ಚಾಗಿದೆ. ಕೆಲವೆಡೆ ದ್ವಿಚಕ್ರ ವಾಹನಗಳ ಟೈರ್ ಮಧ್ಯದಲ್ಲಿ ಸಿಲುಕುವಷ್ಟು ಅಗಲವಾಗಿದೆ.

    ಕೊಟ್ಟಾರ ಇನ್ಫೋಸಿಸ್ ಕಡೆಯಿಂದ ಕೊಟ್ಟಾರ ಚೌಕಿಗೆ ವಾಹನದಲ್ಲಿ ಹೋಗುವಾಗ ಇಳಿಜಾರು ಕಾಂಕ್ರೀಟ್ ರಸ್ತೆ ಸಮತಟ್ಟಾಗಿರದೆ ಮೆಟ್ಟಿಲು ಇಳಿದಂತೆ ಭಾಸವಾಗುತ್ತದೆ. ಲಾಲ್‌ಭಾಗ್‌ನಲ್ಲೂ ಮಹಾನಗರ ಪಾಲಿಕೆ ಕಟ್ಟಡ ಮುಂಭಾಗದ ಕಾಂಕ್ರೀಟ್ ರಸ್ತೆಯಲ್ಲಿ ಒಂದು ಸ್ಲಾೃಬ್ ಮೇಲೆದ್ದಿದೆ. ಎಸ್‌ಡಿಎಂ ಕಾಲೇಜು ಬಳಿಯೂ ರಸ್ತೆ ಮಧ್ಯದ ಬಿರುಕು ಅಗಲವಾಗಿದ್ದು, ದ್ವಿಚಕ್ರ ವಾಹನ ಸವಾರರಿಗೆ ಅಪಾಯಕಾರಿಯಾಗಿದೆ. ಉರ್ವಸ್ಟೋರ್‌ನಿಂದ ಚಿಲಿಂಬಿ ಕಡೆಗೆ ಸಂಚರಿಸುವಾಗಲು ರಸ್ತೆ ಸಮತಟ್ಟಾಗಿಲ್ಲ.

    ವಿಜಯವಾಣಿ ಸರಣಿ ವರದಿ: ಕವಿತಾ ಸನಿಲ್ ಮಂಗಳೂರು ಮೇಯರ್ ಆಗಿದ್ದ ವೇಳೆ ‘ವಿಜಯವಾಣಿ’ ಕಾಂಕ್ರೀಟ್ ರಸ್ತೆಗಳು ಅಪಾಯಕಾರಿಯಾಗಿರುವ ಕುರಿತು ಸರಣಿ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಇದಕ್ಕೆ ಸ್ಪಂದಿಸಿದ್ದ ಅವರು, ಹಲವೆಡೆ ರಸ್ತೆ ದುರಸ್ತಿ ಮಾಡಿಸಿದ್ದರು. ಎಂಜಿ ರಸ್ತೆಯ ಲಾಲ್‌ಭಾಗ್, ವಿಮಾನ ನಿಲ್ದಾಣ ರಸ್ತೆಯ ಶರ್ಬತ್ ಕಟ್ಟೆ ಮೊದಲಾದೆಡೆ ರಸ್ತೆಯ ಅಂಚು ಸರಿಪಡಿಸಲಾಗಿತ್ತು. ಲೇಡಿಹಿಲ್‌ನಲ್ಲಿ ರಸ್ತೆಯಲ್ಲಿ ಎತ್ತರ ತಗ್ಗಾಗಿದ್ದ ಎರಡು ಸ್ಲಾೃಬ್‌ಗಳನ್ನು ತೆಗೆದು ಹೊಸದಾಗಿ ನಿರ್ಮಿಸಲಾಗಿತ್ತು. ಅವರ ಅವಧಿ ಮುಗಿದು ನಾಲ್ಕು ವರ್ಷ ಕಳೆದಿದ್ದು, ಇತರೆಡೆ ರಸ್ತೆಗಳು ಹಾಳಾಗಿವೆ.

    ಕಾಂಕ್ರೀಟ್ ಎದ್ದು ಹೊರಬಂದ ರಾಡ್!: ಕೊಟ್ಟಾರ ಚೌಕಿಯಿಂದ ಮಂಗಳೂರು ನಗರಕ್ಕೆ ಪ್ರವೇಶಿಸುವ ರಸ್ತೆಯಲ್ಲಿ ಕಾಂಕ್ರೀಟ್ ಸವೆದು ಒಳಗಿನ ಕಬ್ಬಿಣದ ರಾಡ್ ಹೊರಬಂದಿದೆ. ಈ ರಸ್ತೆ ನಿರ್ಮಾಣವಾಗಿ ಒಂದು ದಶಕ ಕಳೆದಿದೆ. ಪ್ರಸ್ತುತ ರಾಡ್ ಮೇಲೆದ್ದು, ಅಪಾಯಕ್ಕೆ ಆಹ್ವಾನ ನೀಡಿದಂತಿದೆ. ವಾಹನಗಳು ಚಲಿಸುವಾಗ ಚಕ್ರಕ್ಕೆ ಸಿಲುಕಿ ಅಪಘಾತಕ್ಕೂ ಕಾರಣವಾಗಬಹುದು. ಆದ್ದರಿಂದ ಈ ರಸ್ತೆ ದುರಸ್ಥಿಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ವ್ಯಾಪಾರಿಗಳು ಆಗ್ರಹಿಸಿದ್ದಾರೆ.

    ಕೊಟ್ಟಾರ ಚೌಕಿ ಸೇರಿದಂತೆ ನಗರದ ವಿವಿಧೆಡೆ ಭಾಗದಲ್ಲಿ ಕಾಂಕ್ರೀಟ್ ರಸ್ತೆ ಹಾಳಾಗಿರುವುದು, ಮಧ್ಯದಲ್ಲಿ ಬಿರುಕು ಬಿಟ್ಟಿರುವುದು ಗಮನಕ್ಕೆ ಬಂದಿದೆ. ಆದ್ಯತೆಯ ಮೇಲೆ ನಗರದಲ್ಲಿ ರಸ್ತೆ ದುರಸ್ತಿ ಕಾಮಗಾರಿ ನಡೆಸಲಾಗುತ್ತಿದೆ. ಎಲ್ಲ ರಸ್ತೆಗಳನ್ನು ಸಂಚಾರ ಯೋಗ್ಯ ಮಾಡಲಾಗುವುದು.

    ದಿವಾಕರ್ ಪಾಂಡೇಶ್ವರ
    ಮಂಗಳೂರು ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts