More

    ಸಮ್ಮೇಳನದ ರಂಗು ಚುನಾವಣೆ ಗುಂಗು

    ಹಾವೇರಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ಲಭಿಸಿರುವ ಜಿಲ್ಲೆಯಲ್ಲಿ ತಯಾರಿ ಭರದಿಂದ ಸಾಗಿರುವುದು ಒಂದೆಡೆಯಾದರೆ ಮತ್ತೊಂದೆಡೆ ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ ಕೂಡ ರಂಗು ಪಡೆದಿದೆ. ಮೇ 9ರಂದು ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಶುರುವಾಗಿದೆ.

    ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅರ್ಧ ಡಜನ್​ಗಿಂತಲೂ ಅಧಿಕ ಆಕಾಂಕ್ಷಿಗಳು ಅಖಾಡದಲ್ಲಿ ಇಳಿಯಲು ಸಿದ್ಧತೆ ನಡೆಸಿದ್ದು, ಭಾರಿ ಪೈಪೋಟಿ ನಡೆಯುವ ಲಕ್ಷಣ ಗೋಚರಿಸುತ್ತಿದೆ. ಜಿಲ್ಲೆಯ 8 ತಾಲೂಕುಗಳಲ್ಲಿ ಎಲ್ಲ ಕಡೆಗಳಿಂದಲೂ ಆಕಾಂಕ್ಷಿಗಳು ಕಂಡುಬರುತ್ತಿದ್ದಾರೆ. ಆಕಾಂಕ್ಷಿಗಳಲ್ಲಿ ಕೆಲವರು ಈಗಾಗಲೇ ಕಸಾಪ ಸದಸ್ಯರನ್ನು, ಪದಾಧಿಕಾರಿಗಳನ್ನು ಭೇಟಿಯಾಗಿ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಸದ್ಯಕ್ಕೆ ಸಾಹಿತ್ಯ ವಲಯದಲ್ಲಿ ಇಂಥವರನ್ನೇ ಬೆಂಬಲಿಸಬೇಕು ಎನ್ನುವ ಒಗ್ಗಟ್ಟಿನ ಕೂಗು ಹೊರಬಿದ್ದಿಲ್ಲವಾದರೂ ಮತದಾರರ ಬೆಂಬಲ ಗಳಿಸಲು ಆಕಾಂಕ್ಷಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

    ಜಿಲ್ಲೆಯಲ್ಲಿ ಅಂದಾಜು 8 ಸಾವಿರದಷ್ಟು ಮತದಾರರಿದ್ದು, ಸಾಹಿತ್ಯಾಸಕ್ತರ ಮನಗೆಲ್ಲಲು ಕೆಲ ಆಕಾಂಕ್ಷಿಗಳು ಈಗಾಗಲೇ ತಾಲೀಮು ನಡೆಸಿದ್ದಾರೆ. ಇದೆಲ್ಲದರ ನಡುವೆ ಕೆಲ ಹಿರಿಯ ಸಾಹಿತಿಗಳು ಚುನಾವಣೆ ಬದಲು ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಒಲುವು ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಇದು ಸಾಧ್ಯವಾಗುವುದು ಕಷ್ಟ ಎಂಬ ಮಾತುಗಳು ಸಾಹಿತ್ಯ ವಲಯದಲ್ಲಿ ಕೇಳಿ ಬರುತ್ತಿವೆ.

    ಈ ಹಿಂದಿನ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಐವರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಬ್ಯಾಡಗಿಯ ಎಚ್.ಬಿ. ಲಿಂಗಯ್ಯ ಅವರು ತಮ್ಮ ಅವಧಿಯಲ್ಲೇ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದರೆ ಮತ್ತೊಂದು ಅವಧಿಗೆ ಸ್ಪರ್ಧಿಸುವ ಆಸಕ್ತಿ ಹೊಂದಿಲ್ಲ. ಒಂದೊಮ್ಮೆ ಸಮ್ಮೇಳನ ಏಪ್ರಿಲ್ ಅಂತ್ಯದೊಳಗೆ ನಡೆಯದೇ ಇದ್ದರೆ ಪುನಃ ಅಖಾಡಕ್ಕಿಳಿಯುವ ಆಸಕ್ತಿ ಹೊಂದಿದ್ದಾರೆ.

    ಆಕಾಂಕ್ಷಿಗಳು ಯಾರ್ಯಾರು?

    ಹಿಂದಿನ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಾದ ಹಾಲೇಶ ಶಿವಪ್ಪನವರ, ಕೆ.ಎಸ್. ನಾಗರಾಜ, ಮಾರುತಿ ಶಿಡ್ಲಾಪುರ ಹಾಗೂ ವಿರೂಪಾಕ್ಷಪ್ಪ ಪಡಗೋದಿ ಅವರಲ್ಲಿ ರಾಣೆಬೆನ್ನೂರಿನ ಹಾಲೇಶ ಶಿವಪ್ಪನವರ, ಹಾನಗಲ್ಲನ ಮಾರುತಿ ಶಿಡ್ಲಾಪುರ ಮಾತ್ರ ಅಖಾಡಕ್ಕಿಳಿಯಲಿದ್ದಾರೆ. ಹಿರೇಕೆರೂರ ತಾಲೂಕಿನಿಂದ ಕಸಾಪ ಮಾಜಿ ತಾಲೂಕಾಧ್ಯಕ್ಷ, ಕನ್ನಡ ಪ್ರಾಧ್ಯಾಪಕ ಹಾಗೂ ಸದ್ಯ ಪ್ರಾಚಾರ್ಯರಾಗಿರುವ ಡಾ. ಎಸ್.ಬಿ. ಚನ್ನಗೌಡ್ರ, ಎಸ್.ಪಿ. ಗೌಡರ, ಅಶೋಕ ಹಳ್ಳಿ, ಹಾವೇರಿಯಿಂದ ಹಾಲಿ ತಾಲೂಕಾಧ್ಯಕ್ಷ ವೈ.ಬಿ. ಆಲದಕಟ್ಟಿ, ಶಿಗ್ಗಾಂವಿಯಿಂದ ಉಪನ್ಯಾಸಕ ನಾಗರಾಜ ದ್ಯಾಮನಕೊಪ್ಪ, ಸವಣೂರಿನಿಂದ ಮಾಜಿ ತಾಲೂಕಾಧ್ಯಕ್ಷ ಎಂ.ಬಿ. ಶಾಂತಗಿರಿ, ರಟ್ಟಿಹಳ್ಳಿಯಿಂದ ಮಲ್ಲಿಕಾರ್ಜುನ ಏರಕಾರ್, ರಾಣೆಬೆನ್ನೂರಿನಿಂದ ಹಿರೇಬಿದರಿಯ ಡಿ.ಕೆ. ಆಂಜನೇಯ ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಇಚ್ಛೆ ಹೊಂದಿದ್ದಾರೆ.

    ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸದ್ಯಕ್ಕಂತೂ ನಾನು ಆಕಾಂಕ್ಷಿಯಲ್ಲ. ಆದರೆ, ನನ್ನ ಅವಧಿಯಲ್ಲಿ ಕಸಾಪ ಕೇಂದ್ರ ಸಮಿತಿ ಸದಸ್ಯರು, ಜಿಲ್ಲೆಯ ಸಚಿವರು, ಶಾಸಕರ ಮನವೊಲಿಸಿ ಜಿಲ್ಲೆಗೆ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಆತಿಥ್ಯ ಲಭಿಸುವಂತೆ ಪ್ರಯತ್ನಿಸಿದ್ದೇನೆ. ಕಸಾಪದ ಬಹುತೇಕ ಪದಾಧಿಕಾರಿಗಳು, ಸದಸ್ಯರು ನನ್ನ ಅವಧಿಯಲ್ಲಿಯೇ ಸಮ್ಮೇಳನ ನಡೆಯಬೇಕು ಎಂಬ ಆಶಾಭಾವನೆ ಹೊಂದಿದ್ದಾರೆ. ಒಂದೊಮ್ಮೆ ಸಮ್ಮೇಳನ ಈ ಅವಧಿಯಲ್ಲಿ ನಡೆಯದೇ ಇದ್ದರೆ ಇನ್ನೊಂದು ಬಾರಿ ಸ್ಪರ್ಧಿಸಲು ಸಲಹೆ ನೀಡಿದ್ದಾರೆ. ಅವರ ಅಭಿಪ್ರಾಯ ಪಡೆದು 2ನೇ ಅವಧಿಗೆ ಸ್ಪರ್ಧಿಸಲು ಆಸಕ್ತಿ ಹೊಂದಿದ್ದೇನೆ.

    ಎಚ್.ಬಿ. ಲಿಂಗಯ್ಯ, ಕಸಾಪ ಜಿಲ್ಲಾಧ್ಯಕ್ಷ

    ಹಿಂದಿನ 2 ಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದೆ. ಆದರೆ, ಎಲ್ಲ ಹಿರಿಯರು ಮುಂದಿನ ಬಾರಿ ಅವಕಾಶ ಕೊಡುವ ಭರವಸೆ ನೀಡಿದ್ದರಿಂದ ಸುಮ್ಮನಾಗಿದ್ದೆ. ಅಲ್ಲದೆ, ಈ ಬಾರಿ ಬಹುತೇಕರು ಬೆಂಬಲಿಸುವ ಭರವಸೆ ನೀಡಿದ್ದಾರೆ. ನಾನು ಕನ್ನಡ ಪ್ರಾಧ್ಯಾಪಕನಾಗಿದ್ದು, ಕನ್ನಡ ಪ್ರಾಧ್ಯಾಪಕರಿಗೆ ಕಸಾಪ ಅಧ್ಯಕ್ಷ ಸ್ಥಾನ ದೊರೆತರೆ ಇನ್ನಷ್ಟು ಕನ್ನಡ ಕಟ್ಟುವ ಕೆಲಸ ಮಾಡಲು ಸಾಧ್ಯವಾಗುತ್ತದೆ. ಇದಕ್ಕೆ ಎಲ್ಲರ ಬೆಂಬಲ ಪಡೆಯುವ ಪ್ರಯತ್ನ ನಡೆಸಿದ್ದೇನೆ.

    | ಡಾ. ಎಸ್.ಬಿ. ಚನ್ನಗೌಡ, ಕಸಾಪ ಅಧ್ಯಕ್ಷ ಸ್ಥಾನದ ಆಕಾಂಕ್ಷಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts