More

    ಮನೆ ಕಟ್ಟಿಕೊಳ್ಳುವುದೇ ಸವಾಲು

    ರಾಣೆಬೆನ್ನೂರ: ತಾಲೂಕಿನ ತುಂಗಭದ್ರಾ ಹಾಗೂ ಕುಮದ್ವತಿ ನದಿಯ ಪ್ರವಾಹದಿಂದ ಮನೆ, ಗುಡಿಸಲು ಕಳೆದುಕೊಂಡ ನಿರಾಶ್ರಿತರಿಗೆ ಇದೀಗ ಮರಳಿ ಮನೆ, ಗುಡಿಸಲು ನಿರ್ವಿುಸಿಕೊಳ್ಳುವುದೇ ಸವಾಲಾಗಿದೆ.

    ಬಹುತೇಕ ಕಡೆಗಳಲ್ಲಿ ನದಿಪಾತ್ರದಲ್ಲಿ ಕೂಲಿ-ನಾಲಿ ಮಾಡಿಕೊಂಡು ಜೀವನ ಸಾಗಿಸುವವರೇ ಹೆಚ್ಚಾಗಿ ಮನೆ, ಗುಡಿಸಲು ನಿರ್ವಿುಸಿಕೊಂಡು ಬದುಕು ಕಟ್ಟಿಕೊಂಡಿದ್ದರು. ಆದರೆ, ಎರಡು ನದಿಗಳ ಪ್ರವಾಹ ಬಡವರ ಬದುಕನ್ನೇ ಕಸಿದುಕೊಂಡಿದ್ದು, ತಾಲೂಕಿನಲ್ಲಿ 500ಕ್ಕೂ ಅಧಿಕ ಜನರನ್ನು ನಿರಾಶ್ರಿತರನ್ನಾಗಿಸಿದೆ.

    ಪ್ರವಾಹದಿಂದಾಗಿ ಮನೆ ಬಿಟ್ಟು ಹೋಗಿದ್ದ ನಿರಾಶ್ರಿತರು ಆಯಾ ಗ್ರಾಮಗಳಲ್ಲಿ ತೆರೆದಿದ್ದ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ಕಳೆದ ಮೂರ್ನಾಲ್ಕು ದಿನದಿಂದ ತಾಲೂಕಿನಲ್ಲಿ ಪ್ರವಾಹ ಇಳಿಮುಖವಾಗಿದೆ. ಆದ್ದರಿಂದ ತಾಲೂಕು ಆಡಳಿತ ಪರಿಹಾರ ಕೇಂದ್ರಗಳನ್ನು ಬಂದ್ ಮಾಡಿದ್ದು, ಜನತೆ ಮರಳಿ ತಮ್ಮ ತಮ್ಮ ಮನೆ, ಗುಡಿಸಲುಗಳತ್ತ ಮುಖ ಮಾಡಿದ್ದಾರೆ.

    ‘ನದಿ ನೀರಿನ ಸೆಳೆತ ಕಂಡು ಮನೆಯಲ್ಲೇ ಎಲ್ಲ ಸಾಮಾನು ಬಿಟ್ಟು ಓಡಿ ಹೋಗಿದ್ವಿ. ಈಗ ಬಂದ ನೋಡಿದ್ರ ಮನ್ಯಾಗ ಯಾವ ವಸ್ತುನೂ ಉಳಿದಿಲ್ಲ. ಅಡುಗೆ ದಿನಸಿ, ಸೀಮೆ ಎಣ್ಣೆ ಸ್ಟೌ, ಅಡುಗೆ ಪಾತ್ರೆ, ಕೊಡಪಾನ ಎಲ್ಲವೂ ನೀರಾಗ ತೇಲಿ ಹೋಗ್ಯಾವು. ಗುಡಿಸಲಿನ ನೆಲಹಾಸು ಇನ್ನೂ ಆರಿಲ್ಲ. ನಾವ್ ಹೇಗೆ ಜೀವನ ಮಾಡಬೇಕ್ರಿ…’ ಎಂದು ಕುಪ್ಪೇಲೂರ ಗ್ರಾಮದ ನಿರಾಶ್ರಿತೆ ಶಕುಂತಲಾ ಎಂಬುವರು ‘ವಿಜಯವಾಣಿ’ ಎದುರು ಅಳಲು ತೋಡಿಕೊಂಡರು. ಸರ್ಕಾರದಿಂದ ಪರಿಹಾರ ಕೊಡುವ ಮುನ್ನ ಅಡುಗೆ ಮಾಡಿಕೊಂಡು ಜೀವನ ನಡೆಸಲು ಸಾಮಗ್ರಿಗಳನ್ನು ನೀಡಿದರೆ ಪುಣ್ಯ ಬರುತ್ತದೆ ಎಂದು ಮನವಿ ಮಾಡಿದರು.

    ಮನೆ, ಬೆಳೆ ಕಳೆದುಕೊಂಡ ಜನ

    ತಾಲೂಕಿನ ಕುಪ್ಪೇಲೂರ, ನಂದಿಹಳ್ಳಿ, ಚಿಕ್ಕಮಾಗನೂರ, ಹಿರೇಮಾಗನೂರ, ಮಣಕೂರು, ಲಿಂಗದಹಳ್ಳಿ, ಹಿರೇಬಿದರಿ, ಹಳೇ ಚಂದಾಪುರ, ಹರನಗಿರಿ, ಹಳೇ ಮುಷ್ಟೂರು ಸೇರಿ 20ಕ್ಕೂ ಅಧಿಕ ಗ್ರಾಮಗಳು ಪ್ರವಾಹಕ್ಕೆ ಒಳಗಾಗಿದ್ದವು. ತಾಲೂಕಿನಲ್ಲಿ ಒಟ್ಟು 129 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಅದರಲ್ಲಿ 70 ಮನೆಗಳಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. 574 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಮೆಕ್ಕೆಜೋಳ, ಭತ್ತ ಸೇರಿ ಇತರ ಬೆಳೆ ಹಾಗೂ 175 ಹೆಕ್ಟೇರ್ ತೋಟಗಾರಿಕೆ ಬೆಳೆಗಳಾದ ಎಲೆ ಬಳ್ಳಿ, ಬಾಳೆ ಸೇರಿ ಇತರ ಬೆಳೆಗಳು ಸಂಪೂರ್ಣ ನೀರಿನಲ್ಲಿ ಕೊಚ್ಚಿ ಹೋಗಿದೆ. ಚಿಕ್ಕಲಿಂಗದಹಳ್ಳಿ, ಕುಪ್ಪೇಲೂರ, ಚಿಕ್ಕಮಾಗನೂರ, ಹಿರೇಮಾಗನೂರ ಸೇರಿ 3 ಸೇತುವೆಗಳು ಸಂಪೂರ್ಣ ಮುಳುಗಡೆಯಾಗಿ 10 ಗ್ರಾಮಗಳ ಸಂಪರ್ಕ ಕಡಿತಗೊಂಡಿತ್ತು. ಇದೀಗ ಪ್ರವಾಹ ತಗ್ಗಿದ ಹಿನ್ನೆಲೆಯಲ್ಲಿ ಗ್ರಾಮಗಳು ಸಹಜ ಸ್ಥಿತಿಗೆ ಬಂದಿವೆ.

    ನದಿ ನೀರು ಮನೆಯೊಳಗೆ ನುಗ್ಗಿದ ಪರಿಣಾಮ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಒಳಗಡೆಯಿರುವ ರಾಡಿಯನ್ನು ಹೊರಹಾಕುತ್ತಿದ್ದೇವೆ. ಆದರೆ, ಉಳಿದ ಮನೆ ಕೂಡ ಬೀಳುವ ಹಂತದಲ್ಲಿದ್ದು, ಜೀವ ಅಂಗೈಯಲ್ಲೇ ಹಿಡಿದುಕೊಂಡು ಸ್ವಚ್ಛ ಮಾಡುತ್ತಿದ್ದೇವೆ. ಸರ್ಕಾರದಿಂದ ಬೇಗ ಬೇರೆ ಮನೆ ವ್ಯವಸ್ಥೆ ಮಾಡಿಕೊಟ್ಟರೆ, ಅನುಕೂಲವಾಗುತ್ತದೆ.

    | ಮಂಜವ್ವ , ಕುಪ್ಪೇಲೂರ ನಿರಾಶ್ರಿತ

    ತಾಲೂಕಿನಲ್ಲಿ ಈಗಾಗಲೇ 70 ಮನೆಗಳಿಗೆ ಪರಿಹಾರ ನೀಡಲಾಗಿದೆ. ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿದ ಬಗ್ಗೆ ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ. ಅವರಿಗೂ ಪರಿಹಾರ ವಿತರಣೆ ಕುರಿತು ವರದಿ ಸಲ್ಲಿಸಲಾಗುವುದು. ಅವಶ್ಯವಿದ್ದ ನಿರಾಶ್ರಿತರಿಗೆ ಗ್ರಾಪಂನಿಂದ ಸೌಲಭ್ಯ ಒದಗಿಸುವ ವ್ಯವಸ್ಥೆ ಮಾಡಲಾಗಿದೆ.

    | ಶಂಕರ ಜಿ.ಎಸ್., ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts